ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಕ್ಕೆ ಮುಂದಿನ ಶೈಕ್ಷಣಿಕದಿಂದ ಪ್ರವೇಶ ವೈದ್ಯ ಪರಿಷತ್ ಸಮ್ಮತಿ
ಬೆಂಗಳೂರು/ಚಿಕ್ಕಮಗಳೂರು(ಆ.05): ಚಿಕ್ಕಮಗಳೂರಿನ ನೂತನ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಮುಂದಿನ ಶೈಕ್ಷಣಿಕ ವರ್ಷದಿಂದ 150 ಎಂಬಿಬಿಎಸ್ ಸೀಟ್‌ಗಳೊಂದಿಗೆ ಪ್ರವೇಶಾತಿ ಆರಂಭಿಸಲು ರಾಷ್ಟ್ರೀಯ ವೈದ್ಯಕೀಯ ಪರಿಷತ್ ಅನುಮತಿ ನೀಡಿದೆ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ನೂತನವಾಗಿ ಸ್ಥಾಪಿಸಲಾಗಿರುವ ಚಿಕ್ಕಮಗಳೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮೂಲಭೂತ ಸೌಕರ್ಯ, ಪ್ರಯೋಗಾಲಯ, ಗ್ರಂಥಾಲಯ, ವಸತಿ ನಿಲಯ, ಆಸ್ಪತ್ರೆ, ಅಧ್ಯಾಪಕರ ಲಭ್ಯತೆ ಮತ್ತು ಅವರ ಅನುಭವ, ಜರ್ನಲ್‌ಗಳಲ್ಲಿನ ಸಂಶೋಧನಾ ವರದಿ ಪ್ರಕಟಣೆ, ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್ ಸಿಬ್ಬಂದಿಯ ಲಭ್ಯತೆ ಮುಂತಾದವುಗಳನ್ನು ಪರಿಶೀಲಿಸಿ ಈ ಅನುಮತಿ ನೀಡಲಾಗಿದೆ ಎಂದು ವೈದ್ಯಕೀಯ ಪರಿಷತ್ ತಿಳಿಸಿದೆ.
ರಾಷ್ಟ್ರೀಯ ವೈದ್ಯಕೀಯ ಪರಿಷತ್ ಮಾರ್ಗಸೂಚಿಯ ಪ್ರಕಾರ, ಅಗತ್ಯವಾದ ಎಲ್ಲ ಸೌಕರ್ಯ, ಸಿಬ್ಬಂದಿಯನ್ನು ಸಂಸ್ಥೆ ಹೊಂದಿರಬೇಕು. ವೈದ್ಯಕೀಯ ಮೌಲ್ಯಮಾಪನ ಮತ್ತು ರೇಟಿಂಗ್ ಮಂಡಳಿಯ ಅಧಿಕೃತ ಅನುಮತಿ ಸಿಗುವ ತನಕ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಬಾರದು ಮುಂತಾದ ಷರತ್ತುಗಳನ್ನು ವಿಧಿಸಲಾಗಿದೆ.
ಯಾದಗಿರಿಯಲ್ಲಿ ಮೆಡಿಕಲ್ ಕಾಲೇಜು ಆರಂಭಕ್ಕೆ ಅನುಮತಿ: ಭರದಿಂದ ಸಾಗಿದ ಕಟ್ಟಡ ನಿರ್ಮಾಣ ಕಾರ್ಯ
ಕಳೆದ ವಾರವಷ್ಟೇ ಹಾವೇರಿ ಮತ್ತು ಯಾದಗಿರಿಯ ನೂತನ ಸರ್ಕಾರಿ ವೈದ್ಯಕೀಯ ಕಾಲೇಜ್‌ಗಳಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿತ್ತು.
ಸುಧಾಕರ್ ಹರ್ಷ:
ಚಿಕ್ಕಮಗಳೂರಿನಲ್ಲಿ ವೈದ್ಯಕೀಯ ಕಾಲೇಜ್ ದಾಖಲಾತಿಗೆ ಅನುಮತಿ ಸಿಕ್ಕಿರುವುದಕ್ಕೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹರ್ಷ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಸಚಿವನಾಗಿ ಅಧಿಕಾರ ಸ್ವೀಕರಿಸಿ ಒಂದು ವರ್ಷವಾದ ದಿನದಂದೇ ಈ ಸುದ್ದಿ ಬಂದಿರುವುದು ಸಂತಸ ತಂದಿದೆ. ವೈದ್ಯಕೀಯ ಶಿಕ್ಷಣ ಸಚಿವನಾಗಿ ಕಳೆದ ಮೂರು ವರ್ಷದಲ್ಲಿ ರಾಜ್ಯಕ್ಕೆ ನಾಲ್ಕು ವೈದ್ಯಕೀಯ ಕಾಲೇಜ್, 700 ಹೆಚ್ಚುವರಿ ಎಂಬಿಬಿಎಸ್ ಸೀಟ್ ಕಲ್ಪಿಸಿರುವುದು ಹೆಮ್ಮೆ ಮತ್ತು ತೃಪ್ತಿ ತಂದಿದೆ. ರಾಜ್ಯದ ವೈದ್ಯಕೀಯ ಶಿಕ್ಷಣ ಕ್ಷೇತ್ರವನ್ನು ಬಲಪಡಿಸುವ ನಿಟ್ಟಿನಲ್ಲಿ ನನ್ನ ಪ್ರಯತ್ನಗಳಿಗೆ ಬಲ ನೀಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ನಿಕಟ ಪೂರ್ವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನಾಡಿನ ಜನತೆಯ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದ್ದಾರೆ.