ಕೈಗಾರಿಕಾಭಿವೃದ್ಧಿಗೆ ಪೂರಕವಾದ ರಾಷ್ಟ್ರೀಯ ಶಿಕ್ಷಣ ನೀತಿ ಈ ವರ್ಷದಿಂದಲೇ ಜಾರಿ; ಡಿಸಿಎಂ

Suvarna News   | Asianet News
Published : May 31, 2021, 03:45 PM IST
ಕೈಗಾರಿಕಾಭಿವೃದ್ಧಿಗೆ ಪೂರಕವಾದ ರಾಷ್ಟ್ರೀಯ ಶಿಕ್ಷಣ ನೀತಿ ಈ ವರ್ಷದಿಂದಲೇ ಜಾರಿ; ಡಿಸಿಎಂ

ಸಾರಾಂಶ

ಕೋವಿಡ್‌ ಸವಾಲಿನ ನಡುವೆಯೂ ಈ ವರ್ಷದಿಂದಲೇ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಕೈಗಾರಿಕಾಭಿವೃದ್ಧಿಗೆ ಬಹಳಷ್ಟು ಪೂರಕವಾದ ಶಿಕ್ಷಣ ನೀತಿ ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಹೇಳಿಕೆ

 ಬೆಂಗಳೂರು (ಮೇ.31): ಕೋವಿಡ್‌ ಸವಾಲಿನ ನಡುವೆಯೂ ಈ ವರ್ಷದಿಂದಲೇ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡಲಾಗುತ್ತಿದ್ದು, ಕೈಗಾರಿಕಾಭಿವೃದ್ಧಿಗೆ ಬಹಳಷ್ಟು ಪೂರಕವಾಗಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಹೇಳಿದರು. 

ತುಮಕೂರಿನ ಸಿದ್ಧಾರ್ಥ ಉನ್ನತ ಶಿಕ್ಷಣ ಅಕಾಡೆಮಿ ಸೋಮವಾರ ಹಮ್ಮಿಕೊಂಡಿದ್ದ ʼಶಿಕ್ಷಣ ಮತ್ತು ಕೈಗಾರಿಕೆʼ ಕುರಿತ ಅಂತಾರಾಷ್ಟ್ರೀಯ ಮಟ್ಟದ ವರ್ಚುಯಲ್‌ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ದೇಶದ ಶೈಕ್ಷಣಿಕ ವ್ಯವಸ್ಥೆ, ವಿದ್ಯಾರ್ಥಿಗಳು ಮತ್ತು ಪೋಷಕರು ಎದುರಿಸುವ ಎಲ್ಲ ಸಮಸ್ಯೆಗಳಿಗೆ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಉತ್ತರವಿದೆ ಎಂದರು. 

ನೂತನ ನೀತಿಯ ಪ್ರಕಾರ ಇಡೀ ಸಮಾಜವನ್ನು ಶಿಕ್ಷಣ ಸಂಸ್ಥೆಗಳು ಮುನ್ನಡೆಸುತ್ತವೆ ಹಾಗೂ ಅದೇ ಸಂಸ್ಥೆಗಳನ್ನು ಕೈಗಾರಿಕೆಗಳು ಹಿಂಬಾಲಿಸಬೇಕಾಗುತ್ತದೆ. ಏಕೆಂದರೆ, ಕೈಗಾರಿಕೆಗಳಿಗೆ ಅತ್ಯಗತ್ಯವಾದ ಕುಶಲತೆಯುಳ್ಳ ಮಾನವ ಸಂಪನ್ಮೂಲವು ಶಿಕ್ಷಣ ಸಂಸ್ಥೆಗಳಿಂದಲೇ ಬರಬೇಕಾಗುತ್ತದೆ ಎಂದು ಡಿಸಿಎಂ ಪ್ರತಿಪಾದಿಸಿದರು. 

ಕರ್ನಾಟದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ: ಟಾಸ್ಕ್ ಫೋರ್ಸ್ ವರದಿಯ ಮುಖ್ಯಾಂಶಗಳು ...

ಇದೇ ನಿಟ್ಟಿನಲ್ಲಿ, ಈಗಾಗಲೇ ಶಿಕ್ಷಣ ನೀತಿ ಜಾರಿಗೆ ಎಲ್ಲ ಸಿದ್ಧತೆಗಳನ್ನು ಮಾಡಿಟ್ಟುಕೊಳ್ಳಲಾಗಿದ್ದು, ಕೋವಿಡ್‌ ಕಾರಣದಿಂದ ಕೊಂಚ ವಿಳಂಬವಾಗಿದೆ. ಗುಣಮಟ್ಟದ ಬೋಧನೆ ಮತ್ತು ಗುಣಮಟ್ಟದ ಕಲಿಕೆಗೆ ನೀತಿ ಪೂರಕ ಹಾಗೂ ಬಹು ವಿಷಯಗಳ ಕಲಿಕೆಗೆ ಮುಕ್ತ ಅವಕಾಶ ನೀಡುತ್ತದೆ ಎಂದು ಅವರು ಹೇಳಿದರು. 

ಮೂಲಸೌಕರ್ಯ ಒಡಂಬಡಿಕೆಗೆ ಅವಕಾಶ: 

ಶೈಕ್ಷಣಿಕ ಸಂಸ್ಥೆಗಳು ಜಾಗತಿಕ ಗುಣಮಟ್ಟದ ಮೂಲಸೌಕರ್ಯಗಳನ್ನು ಹೊಂದಿರಬೇಕು ಎಂಬುದೇನೋ ನಿಜ. ಆದರೆ, ಈ ಬಗ್ಗೆ ಸರಕಾರ ಉದಾರವಾಗಿದೆ. ಎಲ್ಲ ಸೌಲಭ್ಯಗಳನ್ನು ಶಿಕ್ಷಣ ಸಂಸ್ಥೆಗಳೇ ಮಾಡಿಕೊಳ್ಳಬೇಕೆಂದು ತಾಕೀತು ಮಾಡಲಾಗುತ್ತಿಲ್ಲ. ಬದಲಿಗೆ ಸೌಕರ್ಯಗಳನ್ನು ಅಭಿವೃದ್ಧಿ ಮಾಡಿಕೊಳ್ಳಲು ಕೈಗಾರಿಕಾ ಸಂಸ್ಥೆಗಳು ಅಥವಾ ಯಾವುದೇ ಜಾಗತಿಕ ಶಿಕ್ಷಣ ಸಂಸ್ಥೆ ಜತೆ ಒಡಂಬಡಿಕೆ ಮಾಡಿಕೊಳ್ಳಲು ಸರಕಾರ ಮುಕ್ತ ಅವಕಾಶ ನೀಡಿದೆ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು. 

ಒಂದು ವರ್ಷ ಇಂಟರ್ನ್‌ಶಿಪ್;‌ 

ಕೈಗಾರಿಕೆಗಳಿಗೆ ಗುಣಮಟ್ಟದ ಮಾನವ ಸಂಪನ್ಮೂಲ ಸಿಗಬೇಕೆಂಬ ಕಾರಣಕ್ಕೆ ತಾಂತ್ರಿಕ ಮತ್ತು ವೃತ್ತಿಪರ ಕೋರ್ಸ್‌ಗಳಲ್ಲಿ ಓದುವ ವಿದ್ಯಾರ್ಥಿಗಳ ಇಂಟರ್ನ್‌ಶಿಪ್ ಅವಧಿಯನ್ನು ಒಂದು ವರ್ಷದ ಅವಧಿಗೆ ವಿಸ್ತರಿಸಲಾಗಿದೆ. ಇದಕ್ಕೆ ನ್ಯಾಸ್ಕಾಂ ಸೇರಿದಂತೆ ಎಲ್ಲ ಕೈಗಾರಿಕಾ ಪ್ರಾತಿನಿಧಿಕ ಸಂಸ್ಥೆಗಳು ಸಹಕಾರ ನೀಡಲು ಮುಂದೆ ಬಂದಿವೆ ಎಂದು ಡಿಸಿಎಂ ನುಡಿದರು. 

ಡಿಪ್ಲೊಮಾ ಪಠ್ಯ ಪರಿಷ್ಕರಣೆ: 

ಎಐಸಿಟಿ ಮಾನದಂಡದ ಪ್ರಕಾರ ಈಗಾಗಲೇ ಐಟಿಐ, ಜಿಟಿಟಿಸಿ, ಡಿಪ್ಲೊಮಾ ಪಠ್ಯವನ್ನು ಸಂಪೂರ್ಣವಾಗಿ ಪರಿಷ್ಕರಣೆ ಮಾಡಲಾಗಿದೆ. ಈಗಾಗಲೇ ಹೊಸ ಪಠ್ಯದಲ್ಲಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆಂದು ಡಿಸಿಎಂ ಹೇಳಿದರು. 

ಸಿದ್ಧಾರ್ಥ ಉನ್ನತ ಶಿಕ್ಷಣ ಅಕಾಡೆಮಿಯ ಕುಲಪತಿ ಡಾ.ಜಿ.ಪರಮೇಶ್ವರ, ಉಪ ಕುಲಪತಿ ಡಾ.ಬಾಲಶೆಟ್ಟಿ, ಸಿದ್ಧಾರ್ಥ ತಾಂತ್ರಿಕ ಸಂಸ್ಥೆಯ ಪ್ರಾಂಶುಪಾಲ ಡಾ.ಎಂ.ಎಸ್.ರವಿಪ್ರಕಾಶ್‌ ಮುಂತಾದವರು ಸಮಾವೇಶದಲ್ಲಿ ಭಾಗಿಯಾಗಿದ್ದರು

PREV
click me!

Recommended Stories

1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ, ಇಂಗ್ಲೀಷ್ ಶಾಲೆಗಳ ಪೋಷಕರಿಂದ ಸಡಿಲಿಕೆಗೆ ಮನವಿ
SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ