ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಆ.26): ಕೊರೊನಾ ಸಮಯದಲ್ಲಿ "ಮಿಸ್ ಕಾಲ್ ಕೊಡಿ ಪಾಠ ಕೇಳಿ" ಅಭಿಯಾನದ ಮೂಲಕ ರಾಜ್ಯದಲ್ಲಿಯೇ ಮನೆ ಮಾತಾಗಿದ್ದ ಶಿಕ್ಷಕನಿಗೆ ರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಗರಿ. ಕುಗ್ರಾಮದಲ್ಲಿ ಇರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕನಿಗೆ ರಾಷ್ಟ್ರ ಮಟ್ಟದ ಪ್ರಶಸ್ತಿ ಸಿಕ್ಕಿರೋದಕ್ಕೆ ಇಡೀ ರಾಜ್ಯವೇ ಹೆಮ್ಮೆಪಡ್ತಿದೆ. ಅಷ್ಟಕ್ಕೂ ಆ ಶಾಲೆಯಲ್ಲಿ ಶಿಕ್ಷಕ ಟಿ.ಪಿ ಉಮೇಶ್ ಮಾಡಿರೋ ಉತ್ತಮ ಕಾರ್ಯಗಳಾದ್ರು ಏನು ಅಂತೀರಾ? ಈ ಸ್ಟೋರಿ ನೋಡಿ!
13 ವರ್ಷಗಳಿಂದ ಒಂದೇ ಒಂದು ರಜೆ ಪಡೆದಿಲ್ಲ ತಮಿಳುನಾಡಿನ ಸರ್ಕಾರಿ ಶಾಲೆಯ ಈ ಶಿಕ್ಷಕಿ
ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೋ ಮಹೇಶ್ವರಃ, ಗುರು ಸಾಕ್ಷಾತ್ ಪರಬ್ರಹ್ಮ, ತಸ್ಮೈಶ್ರೀ ಗುರುವೇ ನಮಃ, ಗುರುವಿನ ಗುಲಾಮ ನಾಗುವ ತನಕ ದೊರೆಯದಣ್ಣ ಮುಕುತಿ. ಈ ರೀತಿಯ ಗಾದೆ ಮಾತುಗಳನ್ನು ಯಾರು ತಾನೆ ಕೇಳಿರಲ್ಲ ಹೇಳಿ, ಎಲ್ಲರೂ ಕೇಳಿಯೇ ಇರ್ತಾರೆ. ಆದ್ರೆ ಇತ್ತೀಚಿನ ದಿನಮಾನಗಳಲ್ಲಿ ಸರ್ಕಾರಿ ಶಾಲೆಗಳು ಅಂದ್ರೆ ಸಾಕು ಮೂಗು ಮುರಿಯುವವರೇ ಹೆಚ್ಚಾಗಿದ್ದಾರೆ. ಇಂತವರಿಗೆಲ್ಲಾ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಕುಗ್ರಾಮ ವಾಗಿರುವ ಅಮೃತಾಪುರದ ಸರ್ಕಾರಿ ಕಿರಿಯ ಪ್ರಾಥಮಿಕ ಶಿಕ್ಷಕ ಟಿ.ಪಿ ಉಮೇಶ್ ರಾಷ್ಟ್ರೀಯ ಅತ್ಯುತ್ತಮ ಶಿಕ್ಷಕನ ಪ್ರಶಸ್ತಿಗೆ ಭಾಜನರಾಗುವ ಮೂಲಕ ಮಾದರಿ ಆಗಿದ್ದಾರೆ.
ಸುಮಾರು 19 ವರ್ಷಗಳ ಕಾಲ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸಲು ಸರ್ಕಾರ ನನಗೆ ಅವಕಾಶವನ್ನು ಕಲ್ಪಿಸಿದೆ. ಅದಕ್ಕಾಗಿಯೇ ನಾವು ಶಾಲೆಯನ್ನು ಅಭಿವೃದ್ಧಿ ಪಡಿಸಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ರಾಷ್ಟ್ರೀಯ ಪ್ರಶಸ್ತಿ ಸಿಕ್ಕಿರೋದು ನನಗೆ ಸಲ್ಲುವುದಿಲ್ಲ. ನನಗೆ ಅನ್ನದಾತರು ಆಗಿರುವ ನನ್ನ ಮುದ್ದಾದ ಶಾಲೆಯ ಮಕ್ಕಳಿಗೆ ಅರ್ಪಣೆ ಮಾಡ್ತೀನಿ. ಸರ್ಕಾರವನ್ನೇ ನಂಬಿಕೊಂಡು ನಾವು ಶಾಲೆಯಲ್ಲಿ ಕೆಲಸ ಮಾಡಬಾರದು. ಆ ಶಾಲೆಯಲ್ಲಿ ಅಭಿವೃದ್ಧಿ ಪಡಿಸೋದಕ್ಕೆ ಆಧುನಿಕ ತಂತ್ರಜ್ಞಾನದಿಂದ ಮಕ್ಕಳು ಕಲಿಯಲಿಕ್ಕೆ ಎಲ್ಲಾ ರೀತಿಯ ವ್ಯವಸ್ಥೆಯಲ್ಲಿ ಕಲ್ಪಿಸಬೇಕು. ಅದನ್ನು ನಾನು ಸೇವೆ ಸಲ್ಲಿಸಿದ ಎಲ್ಲಾ ಸರ್ಕಾರಿ ಶಾಲೆಯಲ್ಲಿ ಮಾಡಿಕೊಂಡು ಬರ್ತಿದ್ದೀನಿ. ನನ್ನ ಶಾಲೆ ನನಗೆ ಕೆಲಸ ಕೊಟ್ಟಿದೆ, ಆ ಶಾಲೆಯನ್ನು ಉಳಿಸಬೇಕು. ನನ್ನ ಗ್ರಾಮದ ಮಕ್ಕಳು ನಮ್ಮ ಶಾಲೆಗೆ ಬರಬೇಕು ಎಂದು ಎಲ್ಲಾ ಶಿಕ್ಷಕರು ಕೆಲಸ ಮಾಡಿದ್ರೆ, ಎಲ್ಲಾ ಸರ್ಕಾರಿ ಶಾಲೆಗಳು ಬೆಳವಣಿಗೆ ಆಗುತ್ತವೆ ಅಂತಾರೆ ಶಿಕ್ಷಕ ಉಮೇಶ್.
ರಾಷ್ಟ್ರೀಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಶಿಕ್ಷಕ
ಶಿಕ್ಷಕ ಉಮೇಶ್ ಗೆ ರಾಷ್ಟ್ರೀಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಲಭಿಸಲಿದೆ ಎಂದು ವಿಷಯ ತಿಳಿದ ಕೂಡಲೇ ರಾಜ್ಯದ ಮೂಲೆ ಮೂಲೆಗಳಿಂದ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ. ಅದ್ರಲ್ಲೂ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ(Basavaraj Bommai) ಹಾಗೂ ಶಿಕ್ಷಣ ಸಚಿವ ಬಿ.ಸಿ ನಾಗೇಶ್(B.C.Nagesh) ಕರೆ ಮಾಡಿ ಶುಭಾಶಯ ತಿಳಿಸಿದ್ದು, ಶಿಕ್ಷಕ ಉಮೇಶ್(Umesh) ಗೆ ಇನ್ನಷ್ಟು ಜವಾಬ್ದಾರಿ ಹೆಚ್ಚಿಸಿದೆ. ವಿಷಯ ತಿಳಿದ ಕೂಡಲೇ ಅಮೃತಾಪುರ ಶಾಲೆ(Amritpura School)ಗೆ ಆಗಮಿಸಿದ ಹೊಳಲ್ಕೆರೆ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಿಕ್ಷಕ ಉಮೇಶ್ ಗೆ ಸನ್ಮಾನ ಮಾಡಿ ಸಿಹಿ ಹಂಚಿ ಸಂಭ್ರಮಿಸುವ ಮೂಲಕ ನಮ್ಮ ಶಿಕ್ಷಕರು ನಮ್ಮ ಹೆಮ್ಮೆ ಎಂದರು. ಜೊತೆಗೆ ಉಮೇಶ್ ನಂತಹ ಶಿಕ್ಷಕರ ಸರ್ಕಾರಿ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವುದ್ರಿಂದಲೇ ಇಂದಿಗೂ ನಮ್ಮ ಶಾಲೆಗಳು ಹೆಚ್ಚೆಚ್ಚು ಸಾಧನೆ ಮಾಡುವತ್ತ ದಾಪುಗಾಲು ಇಟ್ಟಿವೆ. ಉಮೇಶ್ ಅವರು ಶಾಲೆಯಲ್ಲಿ ಮಕ್ಕಳ ಶಿಕ್ಷಣ ಅಭಿವೃದ್ಧಿಗಾಗಿ ಅನೇಕ ವಿನೂತನ ಕಾರ್ಯಕ್ರಮಗಳನ್ನು ಚಾಲನೆಗೆ ತಂದಿದ್ದು ಅವರ ಸೇವೆ ಅವಿಸ್ಮರಣೀಯ. ಇನ್ನೂ ಹೆಚ್ಚೆಚ್ಚು ಪ್ರಶಸ್ತಿಗಳು ಅವರ ಮುಡಿಗೇರಲಿ ಎಂದು ಅಭಿನಂದಿಸಿದರು.
ಹೆಂಡ್ತಿ ಬಳಿ ಸಾಲ ಮಾಡಿ ಸರಕಾರಿ ಶಾಲೆಯನ್ನು ಹೈಟೆಕ್ ಮಾಡಿದ ಶಿಕ್ಷಕ
ಒಟ್ಟಾರೆ ಸರ್ಕಾರಿ ಶಾಲೆಗಳಲ್ಲಿ ತಮ್ಮ ಮಕ್ಕಳು ಓದಿದ್ರೆ ಡೆವಲಪ್ಮೆಂಟ್ ಆಗೋದೆ ಇಲ್ಲ ಅವರು ದಡ್ಡರಾಗ್ತಾರೆ ಎಂದು ಕಪೋಲಕಲ್ಪಿರಾಗಿ ಯೋಚಿಸ್ತಿರೋ ಪೋಷಕರು ದಯಮಾಡಿ ಈ ಶಾಲೆಗೆ ಒಮ್ಮೆ ಭೇಟಿ ನೀಡಬೇಕಿದೆ. ಇದೇ ರೀತಿ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಯ ಶಿಕ್ಷಕರು, ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಧಾರೆ ಎರೆಯುವ ಮೂಲಕ ಸರ್ಕಾರಿ ಶಾಲೆಗಳ ಉಳುವಿಗಾಗಿ ಪ್ರಯತ್ನ ಪಟ್ರೆ ಮುಂದೊಂದು ದಿನ ಎಲ್ಲಾ ಮಕ್ಕಳು ಸರ್ಕಾರಿ ಶಾಲೆಗಳಲ್ಲಿಯೇ ಬಂದು ವಿಧ್ಯಾಭ್ಯಾಸ ಮಾಡೋದ್ರಲ್ಲಿ ಯಾವುದೇ ಅನುಮಾನವಿಲ್ಲ.