ಮಕ್ಕಳನ್ನು ಆಕರ್ಷಣೆ ಮಾಡುವಂತಿರುವ ಅಂಗನವಾಡಿ ಕೇಂದ್ರದತ್ತ ಧಾವಿಸ್ತಿರೋ ಮಕ್ಕಳು
ವರದಿ: ಕಿರಣ್.ಎಲ್. ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ(ಜೂ.08): ಇತ್ತೀಚೆಗಂತೂ ಖಾಸಗಿ ಶಾಲೆಗಳ ಪ್ಲೇ ಹೋಂ, ಶಾಲೆಗಳಿಗೆ ಮಾರು ಹೋಗಿರುವ ಪೋಷಕರೇ ಹೆಚ್ಚು. ಹಾಗಾಗಿ ಸರ್ಕಾರಿ ಅಂಗನವಾಡಿಗಳಿಗೆ ತಮ್ಮ ಮಕ್ಕಳನ್ನು ಕಳಿಸೋಕೆ ಹಿಂದೇಟು ಹಾಕ್ತಾರೆ. ಅಂತೋರ ಮುಂದೆ ಇಲ್ಲೊಂದು ಮಾದರಿ ಅಂಗನವಾಡಿ ಖಾಸಗಿ ಶಾಲೆಗಳನ್ನ ಮೀರಿಸುವಂತಿದೆ. ಅಷ್ಟಕ್ಕೂ ಯಾವುದಪ್ಪ ಅದು ಅಂತೀರಾ, ಈ ಸ್ಟೋರಿ ನೋಡಿ..
undefined
ಹೀಗೆ ಶಿಸ್ತಾಗಿ ಕುಳಿತು ಆಹಾರ ಸೇವಿಸ್ತಿರುವ ಪುಟಾಣಿ ಮಕ್ಕಳು. ಆ ಮಕ್ಕಳನ್ನು ಆಕರ್ಷಿಸುತ್ತಿರುವ ಆಟಿಕೆ ಸಮಾನುಗಳು. ಈ ದೃಶ್ಯಗಳು ಕಂಡು ಬಂದಿದ್ದು ಕೋಟೆನಾಡು ಚಿತ್ರದುರ್ಗದ ಮಹಾತ್ಮಗಾಂಧಿನಗರ ಬಡಾವಣೆ ಬಳಿ ಇರುವ ಅಂಗನವಾಡಿಯಲ್ಲಿ. ಹೌದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧೀನದಲ್ಲಿ ನಡೆಯುತ್ತಿರುವ ಈ ಅಂಗನವಾಡಿಯು ಕೋಟೆನಾಡಿನ ಖಾಸಗಿ ಮಾಂಟೇಸರಿ ಶಾಲೆಗಳನ್ನು ಮೀರಿಸುವಂತಿದೆ. ಪಾಠ,ಪ್ರವಚನ ಅಭ್ಯಾಸದಲ್ಲಿ ಮುಂದಿದೆ. ಸ್ವಚ್ಛತೆ ಹಾಗು ಶಿಸ್ತಿನಲ್ಲಿ ಬಹಳ ಬೃಹತ್ ಶಿಕ್ಷಣ ಸಂಸ್ಥೆಗಳಿಗೂ ಕಡಿಮೆ ಇಲ್ಲದಂತಿದೆ. ಅಲ್ಲದೇ ಕಡಿಮೆ ಖರ್ಚಿನಲ್ಲಿ ಸರ್ಕಾರಿ ಅಂಗನವಾಡಿಗೆ ಮಕ್ಕಳನ್ನು ಆಕರ್ಷಿಸಲು ಆಸಕ್ತಿ ವಹಿಸಿರುವ ಇಲ್ಲಿನ ಶಿಕ್ಷಕಿ ಮಂಜುಳ ಸ್ಥಳಿಯ ಸಂಘ ಸಂಸ್ಥೆಗಳು ಹಾಗು ಸಮಾಜ ಸೇವಕರ ನೆರವಿನಿಂದ ಅಂಗನವಾಡಿಗೆ ಅಗತ್ಯ ಆಕರ್ಷಕ ಆಟಿಕೆಗಳು,ಸಮವಸ್ತ್ರ ಸೇರಿದಂತೆ ವಿವಿಧ ಸಾಮಗ್ರಿಗಳನ್ನು ಕೊಡುಗೆಯಾಗಿ ಸಂಗ್ರಹಿಸಿದ್ದಾರೆ.ಈ ಮೂಲಕ ಮಕ್ಕಳ ಧಾಖಲಾತಿ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಿಸಿದ್ದಾರೆ. ಹೀಗಾಗಿ ಈ ಸರ್ಕಾರಿ ಅಂಗನವಾಡಿ ಕೇಂದ್ರ ಇತರೆ ಅಂಗನವಾಡಿ ಕೇಂದ್ರಗಳಿಗೆ ಮಾದರಿ ಎನಿಸಿದೆ.
ಇನ್ನು ಆರಂಭದಲ್ಲಿ ಸರ್ಕಾರಿ ಅಂಗನವಾಡಿಗೆ ತಮ್ಮಮಕ್ಕಳನ್ನು ಧಾಖಲಿಸಲು ಪೋಷಕರು ಹಿಂದೇಟು ಹಾಕ್ತಿದ್ದರು. ಆದ್ರೆ, ಈ ಅಂಗನವಾಡಿಯಲ್ಲಿನ ಶಿಕ್ಷಣ, ಶಿಸ್ತು, ಸಮಯ ಪಾಲನೆ ಹಾಗು ಸುವ್ಯವಸ್ಥೆ ಕಂಡು ಆಕರ್ಷಿತರಾದ ಸುತ್ತಮುತ್ತಲಿನ ನಾಗರೀಕರು ತಮ್ಮ ಮಕ್ಕಳನ್ನು ಈ ಅಂಗನವಾಡಿಗೆ ದಾಖಲಿಸ್ತಿದ್ದಾರೆ. ವಿದ್ಯಾರ್ಥಿಗಳುಸಹ ಇದೇ ಅಂಗನವಾಡಿಗೆ ಹೋಗ್ತಿವಿ ಅಂತ ಪಟ್ಟು ಹಿಡಿದಿದ್ದೂ,ಇಲ್ಲಿನ ಆಹಾರ ವ್ಯವಸ್ಥೆಹಾಗು ಆಟಕ್ಕೆ ಆಕರ್ಷಿತರಾಗಿರೊ ಮಕ್ಕಳು ಒಂದು ದಿನವೂ ತಪ್ಪದೇ ಅಂಗನವಾಡಿಗೆ ಬರ್ತಾರೆ ಅಂತಾರೆ ಪೋಷಕರು.
ಒಟ್ಟಾರೆ ಗಾಂಧಿನಗರದ ಸರ್ಕಾರಿ ಅಂಗನವಾಡಿ ಖಾಸಗಿ ಪ್ಲೇಹೋಂಗಳನ್ನು ಮೀರಿಸುವಂತಿದೆ. ಹೀಗಾಗಿ ಅಂಗನವಾಡಿಗೆ ಬರುವ ವಿದ್ಯಾರ್ಥಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗಿದ್ದೂ, ಶಿಸ್ತು, ಸಮಯ ಪಾಲನೆ ಆಹಾರಪದ್ದತಿ ಹಾಗು ಸ್ವಚ್ಛತೆಯಲ್ಲಿ ಇಡೀ ಚಿತ್ರದುರ್ಗ ಜಿಲ್ಲೆಗೆ ಈ ಸರ್ಕಾರಿ ಅಂಗನವಾಡಿ ಕೇಂದ್ರ ಮಾದರಿ ಎನಿಸಿದೆ.