10 ರಿಂದ 12ನೇ ತರಗತಿವರೆಗೆ ಮಾತ್ರ ತರಗತಿ ಆರಂಭ

By Kannadaprabha NewsFirst Published Oct 2, 2020, 10:23 AM IST
Highlights

ಸದ್ಯ ಶಾಲೆ ಆರಂಭಿಸುವ ಬಗ್ಗೆ ಯಾವುದೇ ರೀತಿಯ ಒಮ್ಮತದ ನಿರ್ಧಾರ ಕೈಗೊಂಡಿಲ್ಲ.  ಆದರೆ 10 ರಿಂದ 12ನೇ ತರಗತಿವರೆಗೆ ಆರಂಭ ಮಾಡುವ ಬಗ್ಗೆ ಚರ್ಚೆ ನಡೆದಿದೆ

ಬೆಂಗಳೂರು (ಅ.02): ‘ಶಾಲೆ ಆರಂಭಿಸುವುದಾದರೆ ಕೋವಿಡ್‌ ನಿಯಂತ್ರಣ ಕ್ರಮಗಳನ್ನು ಅನುಸರಿಸುವಷ್ಟುಪ್ರೌಢತೆ ಇರುವ 10 ರಿಂದ 12ನೇ ತರಗತಿ ವರೆಗಿನ ಮಕ್ಕಳಿಗೆ ಮಾತ್ರ ಮೊದಲು ಆರಂಭಿಸಿ. ಪರಿಣಾಮಗಳನ್ನು ನೋಡಿಕೊಂಡು ಮಿಕ್ಕ ತರಗತಿಗಳನ್ನು ಹಂತ ಹಂತವಾಗಿ ಆರಂಭಿಸುವ ಬಗ್ಗೆ ನಿರ್ಧರಿಸಿ. ಶಾಲೆಗಳಲ್ಲಿ ನಿರಂತರ ನೀರಿನ ವ್ಯವಸ್ಥೆ, ಕೈತೊಳೆಯಲು ಸಾಬೂನು, ನಿತ್ಯ ತರಗತಿಗಳ ಸ್ಯಾನಿಟೈಸಿಂಗ್‌ ಮಾಡಲು ಕ್ರಮ ವಹಿಸಿ...’

ಇವು, ಶಾಲಾ ಕಾಲೇಜು ಆರಂಭಿಸುವ ಸಂಬಂಧ ಪ್ರಾಥಮಿಕ ಹಾಗೂ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಅವರು ಪ್ರಾಥಮಿಕ, ಪ್ರೌಢ ಶಾಲಾ ಶಿಕ್ಷಕರು ಮತ್ತು ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಪ್ರತಿನಿಧಿಗಳೊಂದಿಗೆ ನಡೆಸಿದ ಆನ್‌ಲೈನ್‌ ಸಂವಾದದಲ್ಲಿ ದೊರಕಿರುವ ಪ್ರಮುಖ ಸಲಹೆಗಳು.

ಈ ಸಂವಾದದ ವೇಳೆ ಪ್ರಾಸ್ತವಾಗಿಕವಾಗಿ ಮಾತನಾಡಿದ ಸಚಿವರು, ಕೇಂದ್ರ ಸರ್ಕಾರ ಅ.15 ರಿಂದ ಶಾಲಾ ಕಾಲೇಜುಗಳನ್ನು ಆರಂಭಿಸಲು ಅನುಮತಿ ನೀಡಿದ್ದರೂ ಆ ಬಗ್ಗೆ ಅಂತಿಮ ನಿರ್ಧಾರವನ್ನು ರಾಜ್ಯ ಸರ್ಕಾರಗಳ ವಿವೇಚನೆಗೇ ಬಿಟ್ಟಿದೆ. ರಾಜ್ಯ ಸರ್ಕಾರಕ್ಕೂ ತರಾತುರಿಯಲ್ಲಿ ಶಾಲಾ ಕಾಲೇಜು ಆರಂಭಿಸುವ ಯಾವುದೇ ಧಾವಂತವಿಲ್ಲ. ಆದರೆ, ಈಗಾಗಲೇ ಪ್ರಸಕ್ತ ಶೈಕ್ಷಣಿಕ ವರ್ಷದ ಅರ್ಧ ಸಮಯ ಕಳೆದು ಹೋಗಿದೆ. ಕೋವಿಡ್‌ ಯಾವಾಗ ನಿಯಂತ್ರಣಕ್ಕೆ ಬರುತ್ತದೆ, ವ್ಯಾಕ್ಸಿನ್‌ ಯಾವಾಗ ಸಿಗುತ್ತದೆ ಎಂಬ ಬಗ್ಗೆ ಸದ್ಯದ ಸ್ಥಿತಿಯಲ್ಲಿ ಯಾವುದೇ ಸ್ಪಷ್ಟಚಿತ್ರಣವಿಲ್ಲ.

ಕರ್ನಾಟಕ ಶಾಲೆ, ಶಿಕ್ಷಕರಿಗೆ ಮಧ್ಯಂತರ ರಜೆ ರದ್ದು .

ಮತ್ತೊಂದೆಡೆ ಮಕ್ಕಳನ್ನು ನಿರಂತರ ಕಲಿಕೆಯಲ್ಲಿಡಲು ವಿದ್ಯಾಗಮ, ಯೂಟ್ಯೂಬ್‌, ಆನ್‌ಲೈನ್‌, ಚಂದನ ಚಾನಲ್‌ನ ಸೇತುಬಂಧ ತರಗತಿಗಳನ್ನು ನಡೆಸಲಾಗುತ್ತಿದ್ದರೂ ಇವ್ಯಾವುವೂ ಪೂರ್ಣ ಕಲಿಕೆಗೆ ಪರ್ಯಾಯವಲ್ಲ, ಪೂರಕವೂ ಅಲ್ಲ. ಬೇರೆ ಬೇರೆ ಕಾರಣಗಳಿಂದ ಗ್ರಾಮೀಣ ಭಾಗದ ಮಕ್ಕಳಿಗೆ ಇವು ಪರಿಪೂರ್ಣವಾಗಿ ತಲುಪುತ್ತಿಲ್ಲ.

ಶಾಲೆ ಆರಂಭಿಸುವುದು ತಡವಾಗುತ್ತಿರುವುದರಿಂದ ಗ್ರಾಮೀಣ ಭಾಗದಲ್ಲಿ ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿ ಹೆಚ್ಚುತ್ತಿದೆ. ಕೆಲವೆಡೆ ಮಕ್ಕಳು ಇಸ್ಪೀಟ್‌ ಆಟಗಳನ್ನಾಡಿಕೊಂಡು ಕಾಲ ಕಳೆಯುತ್ತಿರುವುದನ್ನು ನಾನು ಕಣ್ಣಾರೆ ನೋಡಿದ್ದೇನೆ. ಮಕ್ಕಳು ಇಂತಹ ಸಾಮಾಜಿಕ ಪಿಡುಗುಗಳಿಂದಾಗಿ ಶಾಲೆಯಿಂದ ವಿಮುಖವಾಗುವ ಸಂದರ್ಭಗಳೂ ಎದುರಾಗಬಹುದು. ಹಾಗಾಗಿ ಶಾಲೆಗಳನ್ನು ಆರಂಭಿಸುವ ಬಗ್ಗೆ ಎಲ್ಲರೊಂದಿಗೂ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕಿದೆ ಎಂದರು.

ಇದಕ್ಕೆ ಸಭೆಯಲ್ಲಿ ಭಾಗವಹಿಸಿದ್ದ ಶಿಕ್ಷಕ, ಉಪನ್ಯಾಸಕ ಸಂಘಗಳ ಪ್ರತಿನಿಧಿಗಳು, ಸರ್ಕಾರ ಶಾಲೆ ಆರಂಭಿಸುವುದಾದರೆ ಮೊದಲು 10ರಿಂದ 12ನೇ ತರಗತಿ ವರೆಗಿನ ಮಕ್ಕಳಿಗೆ ಮಾತ್ರ ತರಗತಿ ಆರಂಭಿಸಿ. ಅವರಿಗೆ ತಿಳಿಸಿ ಹೇಳಿದರೆ ಮಾಸ್ಕ್‌ ಹಾಕುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಕೋವಿಡ್‌ ಮಾರ್ಗಸೂಚಿಗಳನ್ನು ಅನುಸರಿಸುವ ಪ್ರೌಢತೆ ಇರುತ್ತದೆ.

ಪ್ರಸ್ತುತ ಗ್ರಾಮಗಳ ದೇವಾಲಯಗಳು, ಮರದ ಕೆಳಗೆ ನಡೆಸುತ್ತಿರುವ ವಿದ್ಯಾಗಮ ಕಾರ್ಯಕ್ರಮವನ್ನು ಸಾರ್ವಜನಿಕ ಸ್ಥಳದ ಬದಲು ಶಾಲೆಗಳ ಆವರಣದಲ್ಲೇ ನಡೆಸುವುದರಿಂದ ಮಕ್ಕಳ ಆರೋಗ್ಯ ದೃಷ್ಟಿಯಿಂದ ಮತ್ತಷ್ಟುಸುರಕ್ಷತೆ ಇರುತ್ತದೆ ಎಂಬುದು ಸೇರಿದಂತೆ ಹಲವು ಸಲಹೆಗಳನ್ನು ನೀಡಿದರು.

click me!