* ಏಷ್ಯಾ ನೆಟ್ ಸುವರ್ಣ ನ್ಯೂಸ್ ವರದಿಗೆ ಎಚ್ಚೆತ್ತ ಶಿಕ್ಷಣ ಇಲಾಖೆ
* ಏಪ್ರಿಲ್ ತಿಂಗಳಿನಿಂದ ಕೊರೋನಾ ಸಾವನ್ನಪ್ಪಿದ ಶಿಕ್ಷಕರು ಹಾಗೂ ಉಪನ್ಯಾಸಕರ ಮಾಹಿತಿ ಕೇಳಿದ ಸಚಿವ ಸುರೇಶ್ ಕುಮಾರ್
* ಮೃತ ಶಿಕ್ಷಕರ ವಯಸ್ಸೆಷ್ಟು? ಆಸ್ಪತ್ರೆಗೆ ದಾಖಲಾದ ವಿವರವನ್ನು ನೀಡುವಂತೆ ಸೂಚನೆ
ಬೆಂಗಳೂರು, (ಮೇ.16): ಕೋವಿಡ್ ಕರ್ತವ್ಯದಲ್ಲಿ ಹಾಗೂ ಉಪಚುನಾವಣೆಯಲ್ಲಿ ನಿರತರಾಗಿ ಮೃತಪಟ್ಟ ಶಿಕ್ಷಕರ - ಉಪನ್ಯಾಸಕರ ವಿವರ ಕೂಡಲೇ ಸಲ್ಲಿಸಲು ಸಚಿವ ಸುರೇಶ್ ಕುಮಾರ್ ನಿರ್ದೇಶನ ನೀಡಿದ್ದಾರೆ.
ಕೋವಿಡ್ ಕಾರ್ಯದಲ್ಲಿ ನಿರತರಾದ ಹಾಗೂ ಉಪಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸಿದ ಹಲವು ಶಿಕ್ಷಕರು ಹಾಗೂ ಪದವಿಪೂರ್ವ ಉಪನ್ಯಾಸಕರು ಸಾವನ್ನಪ್ಪಿದ್ದಾರೆ. ಈ ಬಗ್ಗೆ ಏಷ್ಯಾ ನೆಟ್ ಸುವರ್ಣ ನ್ಯೂಸ್ ವರದಿ ಮಾಡಿತ್ತು.
ಮಾಧ್ಯಮಗಳಲ್ಲಿ ಪ್ರಸಾರವಾದ ಈ ವರದಿಯನ್ನು ಗಂಭೀರವಾಗಿ ಪರಿಗಣಿಸಿರುವ ಸಚಿವ ಸುರೇಶ್ ಕುಮಾರ್, ಈ ಕುರಿತು ಕೂಡಲೇ ಶಿಕ್ಷಕವಾರು ವರದಿಯನ್ನು ಮಂಡಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕಳೆದ 1 ವರ್ಷದಲ್ಲಿ ಕೊರೊನಾ ಸೋಂಕಿಗೆ 268 ಸರ್ಕಾರಿ ಶಿಕ್ಷಕರು ಬಲಿ
ಕಳೆದ ಏಪ್ರಿಲ್ 2021ರಿಂದ ಇಲ್ಲಿಯವರೆಗೆ ಕೋವಿಡ್ ಕಾರಣದಿಂದ ಮೃತಪಟ್ಟ ಶಿಕ್ಷಕರು ಹಾಗೂ ಉಪನ್ಯಾಸಕರು ಎಷ್ಟು? ಅವರ ವಯೋಮಾನ ಸಹಿತವಾಗಿ ಮೃತಪಟ್ಟ ಖಚಿತ ಕಾರಣಗಳೊಂದಿಗೆ ಆದಷ್ಟು ಬೇಗ ವರದಿ ನೀಡುವಂತೆ ಶಿಕ್ಷಣ ಇಲಾಖೆಯ ಆಯುಕ್ತರು ಹಾಗೂ ಪದವಿಪೂರ್ವ ಶಿಕ್ಷಣ ನಿರ್ದೇಶಕರಿಗೆ ಸುರೇಶ್ ಕುಮಾರ್ ನಿರ್ದೇಶನ ನೀಡಿದ್ದಾರೆ.
ಈವರೆಗೆ ರಾಜ್ಯದಲ್ಲಿ 600ಕ್ಕಿಂತ ಹೆಚ್ಚು ಶಿಕ್ಷಕರು ಕೊರೋನಾಗೆ ಬಲಿಯಾಗಿದ್ದು ಅದರಲ್ಲಿ ಸುಮಾರು 35 ಮಂದಿ ಬೈಎಲೆಕ್ಷನ್ ವೇಳೆ ಕರ್ತವ್ಯ ನಿರ್ವಹಿದ್ದರು ಎಂದು ತಿಳಿದುಬಂದಿದೆ.