ಕಾಂಗ್ರೆಸ್‌ ಗ್ಯಾರಂಟಿ ಮೇಲೆ ಬಿಜೆಪಿ ಜೀವನ: ಸಚಿವ ಮಧು ಬಂಗಾರಪ್ಪ

By Kannadaprabha News  |  First Published Jul 23, 2023, 3:47 AM IST

ರಾಜ್ಯದಲ್ಲಿ 13,500 ಸಾಲಾ ಶಿಕ್ಷಕರ ನೇಮಕಾತಿಯನ್ನು ಶೀಘ್ರದಲ್ಲಿಯೇ ಮಾಡಲಾಗುವುದು. ನೇಮಕಾತಿ ವಿಚಾರ ಕೋರ್ಟ್‌ನಲ್ಲಿ ಇರುವುದರಿಂದ ಈ ಪ್ರಕ್ರಿಯೆ ವಿಳಂಬವಾಗುತ್ತಿದೆ. ಆದಷ್ಟುಶೀಘ್ರ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ: ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ


ಮಂಗಳೂರು(ಜು.23):  ಕಾಂಗ್ರೆಸ್‌ ಸರ್ಕಾರ ಜಾರಿಗೊಳಿಸಿದ ಗ್ಯಾರಂಟಿ ಮೇಲೆಯೇ ಬಿಜೆಪಿಗರು ಜೀವನ ನಡೆಯುತ್ತಿದೆ. ಬಿಜೆಪಿಗರು ಸುಮ್ಮನೆ ಗ್ಯಾರಂಟಿ ಬಗ್ಗೆ ಅಪಪ್ರಚಾರ ನಡೆಸುತ್ತಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲೂ ಜನತೆ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

ಮಂಗಳೂರಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ವೇಳೆ ಕಾಂಗ್ರೆಸ್‌ ಘೋಷಿಸಿದ ಗ್ಯಾರಂಟಿಯನ್ನು ವಿರೋಧಿಸುತ್ತಿದ್ದ ಬಿಜೆಪಿಗರು ಬಳಿಕ ಲೋಕಸಭಾ ಚುನಾವಣೆ ವರೆಗೆ ಮಾತ್ರ ಗ್ಯಾರಂಟಿ ಯೋಜನೆ ಇರುತ್ತದೆ ಎನ್ನುತ್ತಿದ್ದಾರೆ. ಆದರೆ ಯಾವುದೇ ಪಕ್ಷ ಯೋಜನೆಯನ್ನು ಘೋಷಿಸಿದ ಕೂಡಲೇ ಅದನ್ನು ಅನುಷ್ಠಾನಕ್ಕೆ ತರಲು ಸಮಯ ಬೇಕಾಗುತ್ತದೆ. ನಮ್ಮ ಸರ್ಕಾರ ಬಂದು 60 ದಿನ ಆಗಿದೆ ಅಷ್ಟೆ. ಈಗಲೇ ಬಿಜೆಪಿ ಗ್ಯಾರಂಟಿ ಯೋಜನೆಯನ್ನು ವಿರೋಧಿಸುವ ನೀಚ ಬುದ್ಧಿ ಮಾಡುತ್ತಿದೆ ಎಂದು ಆರೋಪಿಸಿದರು.

Tap to resize

Latest Videos

undefined

ಪಿಯು ಮೌಲ್ಯಮಾಪಕರ ಬಾಕಿ ಶೀಘ್ರ ಬಿಡುಗಡೆ: ಸಚಿವ ಮಧು ಬಂಗಾರಪ್ಪ

ಶೀಘ್ರ ಶಾಲಾ ಶಿಕ್ಷಕರ ನೇಮಕ:

ರಾಜ್ಯದಲ್ಲಿ 13,500 ಸಾಲಾ ಶಿಕ್ಷಕರ ನೇಮಕಾತಿಯನ್ನು ಶೀಘ್ರದಲ್ಲಿಯೇ ಮಾಡಲಾಗುವುದು. ನೇಮಕಾತಿ ವಿಚಾರ ಕೋರ್ಟ್‌ನಲ್ಲಿ ಇರುವುದರಿಂದ ಈ ಪ್ರಕ್ರಿಯೆ ವಿಳಂಬವಾಗುತ್ತಿದೆ. ಆದಷ್ಟುಶೀಘ್ರ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದರು.
ರಾಜ್ಯದ ಶಿಕ್ಷಣದ ಇತಿಹಾಸದಲ್ಲಿಯೇ ಈ ಬಾರಿ 25 ಸಾವಿರ ಮಂದಿ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್‌ ಮೂಲಕ ನಡೆಯುತ್ತಿದ್ದು, ಜು.31ಕ್ಕೆ ಇದು ಪೂರ್ಣಗೊಳ್ಳಲಿದೆ. ರಾಜ್ಯದಲ್ಲಿ 50 ಸಾವಿರ ಶಿಕ್ಷಕರ ಕೊರತೆಯಿದ್ದು, ಈಗಾಗಲೇ 33 ಸಾವಿರ ಅತಿಥಿ ಶಿಕ್ಷಕರನ್ನು ತೆಗೆದುಕೊಂಡಿದ್ದೇವೆ. ಈಗ ವರ್ಗಾವಣೆಯ ಬಳಿಕ ಖಾಲಿಯಾಗುವ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಂಡು ಈ ಬಾರಿ ಕಾರ್ಯ ನಿರ್ವಹಣೆ ಮಾಡುತ್ತೇವೆ. ಆದರೆ ಶೀಘ್ರದಲ್ಲಿಯೇ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡರೆ ಶಿಕ್ಷಕರ ಕೊರತೆ ಸಮಸ್ಯೆ ಸ್ವಲ್ಪಮಟ್ಟಿಗೆ ನಿವಾರಣೆಯಾಗುತ್ತದೆ ಎಂದರು.

ಸರ್ಕಾರಿ ಶಾಲೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ಹಾಗೂ ನವೋದಯ ಶಾಲೆಗಳ ಹೆಚ್ಚಳಕ್ಕೆ ಮುಂದಿನ ವರ್ಷದಿಂದ ಕ್ರಮ ವಹಿಸಲಾಗುವುದು. ಕೆಪಿಎಸ್‌ ಹಾಗೂ ನವೋದಯ ಶಾಲೆಗಳನ್ನು ಹೆಚ್ಚಿಸಲು ದೊಡ್ಡ ಮಟ್ಟದ ಅನುದಾನ ಬೇಕಾಗಿದೆ. ಹಾಗಾಗಿ ಮುಂದಿನ ವರ್ಷದಿಂದ ಸೂಕ್ತ ಗುರಿಯೊಂದಿಗೆ ಈ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದರು.

ಶಾಲಾ ಮಕ್ಕಳಿಗೆ ಫೋಷಣೆಗಾಗಿ 1ರಿಂದ 8ನೆ ತರಗತಿವರೆಗೆ ವಾರದಲ್ಲಿ ಒಂದು ದಿನ ನೀಡಲಾಗುತ್ತಿದ್ದ ಮೊಟ್ಟೆ, ಚಿಕ್ಕಿ ಅಥವಾ ಬಾಳೆಹಣ್ಣನ್ನು ವಾರದಲ್ಲಿ ಎರಡು ದಿನಗಳಿಗೆ ಹೆಚ್ಚಿಸಲಾಗಿದೆ ಎಂದರು.

ಆ.2ರಂದು ಎಸ್‌ಇಪಿ ಸಭೆ:

ಈಗಾಗಲೇ ರಾಜ್ಯದ ಶಿಕ್ಷಣ ನೀತಿ(ಎಸ್‌ಇಪಿ)ವಿಚಾರದಲ್ಲಿ ಮುಖ್ಯಮಂತ್ರಿಗಳ ವಿಶೇಷ ಸಭೆಯನ್ನು ಆ.2ರಂದು ನಿರ್ಧಾರ ಮಾಡಲಾಗಿದೆ. ಇಲ್ಲಿನ ಶಿಕ್ಷಕರ ಕ್ಷೇತ್ರದ ತಜ್ಞರು ಸೇರಿದಂತೆ ಉನ್ನತ ಶಿಕ್ಷಣ ಸಚಿವ ಡಾ.ಸುಧಾಕರ್‌ ಹಾಗೂ ನಾನು ಭಾಗಿಯಾಗುತ್ತೇನೆ. ಇದು ಎಸ್‌ಇಪಿ ಕುರಿತಾದ ಮೊದಲ ಪ್ರಾಥಮಿಕ ಸಭೆಯಾಗಲಿದೆ. ಇಲ್ಲಿ ಈ ಕುರಿತು ಮುಖ್ಯವಾದ ರೂಪುರೇಷೆಗಳನ್ನು ಮಾಡಲಾಗುತ್ತದೆ. ಪಠ್ಯಪುಸ್ತಕದ ರಚನೆ ಸೇರಿದಂತೆ ಕೆಪಿಎಸ್‌ಇ, ನವೋದಯ ಶಾಲೆಗಳ ನಿರ್ಮಾಣದ ಕುರಿತು ಕೂಡ ಪ್ರಮುಖ ವಿಚಾರಗಳು ಇಲ್ಲಿ ನಿರ್ಧಾರವಾಗಲಿದೆ. ಏಳೆಂಟು ತಿಂಗಳ ಒಳಗಡೆ ಈ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣ ಮಾಡುತ್ತೇವೆ. ಮುಂದಿನ ಸಾಲಿನಿಂದ ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ) ಜಾರಿಯಲ್ಲಿ ಇರುವುದಿಲ್ಲ ಎಂದರು.

ನುಡಿದಂತೆ ನಡೆಯುತ್ತಿದೆ ಕಾಂಗ್ರೆಸ್‌ ಪಕ್ಷ: ಸಚಿವ ಮಧು ಬಂಗಾರಪ್ಪ

ವಿಧಾನ ಪರಿಷತ್‌ ಸದಸ್ಯ, ದ.ಕ.ಜಿಲ್ಲಾ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಹರೀಶ್‌ ಕುಮಾರ್‌, ಪ್ರಮುಖರಾದ ಶುಭೋದಯ ಆಳ್ವ, ನೀರಜ್‌ ಪಾಲ್‌, ಸುಹಾನ್‌ ಆಳ್ವ, ಸಲೀಂ ಇದ್ದರು.

ಬಿಲ್ಲವ ಸಮುದಾಯಕ್ಕೆ ಪ್ರಾತಿನಿಧ್ಯ ವಿಚಾರದಲ್ಲಿ ವಿಧಾನ ಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್‌ ಅಸಮಾಧಾನ ಬಗ್ಗೆ ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಅವರು ಹಿರಿಯರು, ಅವರ ಮಾತುಗಳಲ್ಲಿ ಏನಾದರೂ ಇದ್ದರೆ ಗಮನಿಸಬೇಕು. ಅವರ ಮಾತಿಗೆ ನಾನು ಪ್ರತಿಕ್ರಿಯಿಸುವುದು ಸರಿಯಲ್ಲ. ಅದು ಪಕ್ಷದ ವೇದಿಕೆಗಳಲ್ಲಿ ಚರ್ಚೆಯಾಗಬೇಕಾದ ವಿಚಾರ. ಅವರು ಮಾತಿನಲ್ಲಿ ಏನಾದರೂ ಇದ್ದರೆ ಅದರ ಬಗ್ಗೆ ಚರ್ಚೆಯಾಗಲಿ, ಅವರ ಮಾತಿನಲ್ಲಿ ಸರಿ ಇದ್ದರೆ ಪಕ್ಷದ ವೇದಿಕೆಯಲ್ಲಿ ಮಾತನಾಡುತ್ತೇನೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.

click me!