ಬ್ರಿಟನ್‌ ವೈರಸ್‌ ವರದಿ ನೋಡಿ ಶಾಲೆ ಆರಂಭದ ಬಗ್ಗೆ ನಿರ್ಧಾರ: ಸುಧಕಾರ್‌

By Kannadaprabha News  |  First Published Dec 27, 2020, 8:53 AM IST

ಜೆನೆಟಿಕ್‌ ವರದಿ ಬಂದ ಬಳಿಕ ಸಚಿವ ಸುರೇಶ್‌ ನಿರ್ಧರಿಸ್ತಾರೆ| ಈಗಾಗಲೇ ಸರ್ಕಾರ ಜ.1ರಿಂದ ಶಾಲೆ, ಕಾಲೇಜುಗಳ ಆರಂಭಕ್ಕೆ ನಿರ್ಧಾರ| ಐದಾರು ಜನರಿಗಷ್ಟೆ ಪಾಸಿಟಿವ್‌ ಬಂದರೆ ಭಯ ಪಡಬೇಕಾಗಿಲ್ಲ: ಸುಧಾಕರ್‌| 


ಬೆಂಗಳೂರು(ಡಿ.27):  ರೂಪಾಂತರಿ ಕೋವಿಡ್‌ ವೈರಸ್‌ ಪತ್ತೆಗೆ ನಡೆದಿರುವ ವಂಶವಾಹಿ ಪರೀಕ್ಷಾ ವರದಿ ಬಂದ ಬಳಿಕ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಜ.1ರಿಂದ ಶಾಲೆ, ಪಿಯು ಕಾಲೇಜು ಆಂಭಿಸುವ ನಿರ್ಧಾರವನ್ನು ಪರಾಮರ್ಶಿಸಬೇಕೆ ಬೇಡವೇ ಎಂದು ತೀರ್ಮಾನಿಸುತ್ತಾರೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್‌ ತಿಳಿಸಿದ್ದಾರೆ. 

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಸರ್ಕಾರ ಜ.1ರಿಂದ ಶಾಲೆ, ಕಾಲೇಜುಗಳ ಆರಂಭಕ್ಕೆ ನಿರ್ಧರಿಸಿದೆ. ಇದುವರೆಗೂ ಈ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ. ಭಾನುವಾರ ರೂಪಾಂತರಿ ಕೋವಿಡ್‌ ವೈರಸ್‌ ಪತ್ತೆ ಪರೀಕ್ಷಾ ವರದಿ ಬರಲಿದೆ. ವರದಿ ಬಂದ ಬಳಿಕ ಸಚಿವ ಸುರೇಶ್‌ ಕುಮಾರ್‌ ಅವರು ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ಸದಸ್ಯರೊಂದಿಗೆ ಸಭೆ ನಡೆಸಿ ನಿಗದಿಯಂತೆ ಶಾಲೆ ಕಾಲೇಜು ಆರಂಭಿಸುವುದಾ, ಇಲ್ಲಾ ಹಿಂದಿನ ನಿರ್ಧಾರವನ್ನು ಪರಾಮರ್ಶಿಸಬೇಕಾ ಎಂಬ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.

Latest Videos

undefined

ಕರ್ನಾಟಕದಲ್ಲಿ ತರಗತಿಗಳು ಪ್ರಾರಂಭ:; ಮಾರ್ಗಸೂಚಿ ಬಿಡುಗಡೆ ಮಾಡಿದ ಶಿಕ್ಷಣ ಇಲಾಖೆ

ವರದಿಯಲ್ಲಿ ರಾಜ್ಯದ ಎಷ್ಟು ಜನರಿಗೆ ಹೊಸ ವೈರಾಣು ಪತ್ತೆಯಾಗಲಿದೆ. ಅದರ ಗಂಭೀರತೆ ಎಷ್ಟು ಎಲ್ಲವನ್ನೂ ನೋಡಿಕೊಂಡು ಮುಂದಿನ ತೀರ್ಮಾನ ಕೈಗೊಳ್ಳಬೇಕಾಗುತ್ತದೆ. ಐದಾರು ಜನರಿಗಷ್ಟೆ ಪಾಸಿಟಿವ್‌ ಬಂದರೆ ಭಯ ಪಡಬೇಕಾಗಿಲ್ಲ. ಅವರನ್ನು ಈಗಾಗಲೇ ಆಸ್ಪತ್ರೆಯಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ನಿಗಾ ವಹಿಸಲಾಗಿದೆ. ಜೊತೆಗೆ ಸೋಂಕಿತರೊಂದಿಗಿನ ಸಂಪರ್ಕಿತರನ್ನು ಕಟ್ಟುನಿಟ್ಟಾಗಿ ಕ್ವಾರಂಟೈನ್‌ ಮಾಡಿದರೆ ಹೊಸ ವೈರಸ್‌ ಹರಡುವ ಭೀತಿ ಇರುವುದಿಲ್ಲ. ಇದರಿಂದ ಶಾಲೆ, ಕಾಲೇಜುಗಳನ್ನು ಆರಂಭಿಸಿ ತರಗತಿ ಹಾಗೂ ವಿದ್ಯಾಗಮ ಕಾರ್ಯಕ್ರಮವನ್ನು ನಡೆಸಬಹುದು. ಮಕ್ಕಳ ಹಿತದೃಷ್ಟಿಯಿಂದ ಅಗತ್ಯ ಸಲಹೆಗಳನ್ನು ನಮ್ಮ ಇಲಾಖೆಯಿಂದಲೂ ನೀಡಲಾಗುವುದು. ಎಲ್ಲವನ್ನೂ ಪರಾಮರ್ಶಿಸಿ ಶಿಕ್ಷಣ ಸಚಿವರು ನಿರ್ಧಾರ ಕೈಗೊಳ್ಳುತ್ತಾರೆ ಎಂದರು.
 

click me!