NEP: ಈಗಿರುವ ಸಂಪನ್ಮೂಲದಲ್ಲೇ ಎನ್‌ಇಪಿ ಅವಳಡಿಕೆ: ಸಚಿವ ಅಶ್ವತ್ಥನಾರಾಯಣ

By Girish Goudar  |  First Published May 20, 2022, 5:25 AM IST

*  ಶೈಕ್ಷಣಿಕ ಸಮಾವೇಶ
*  ಗುಣಮಟ್ಟದ ಶಿಕ್ಷಣದಿಂದ ಸದೃಶ ಸಮಾಜ ನಿರ್ಮಾಣಕ್ಕೆ ಚಾಲನೆ
*  ಬೆಂಗಳೂರು ತಂತ್ರಜ್ಞಾನ ಸಮಾವೇಶಕ್ಕೆ ಆಗಮಿಸುವಂತೆ ಪ್ರತಿನಿಧಿಗಳಿಗೆ ಆಹ್ವಾನ


ಲಂಡನ್‌(ಮೇ.20): ರಾಷ್ಟ್ರೀಯ ಶಿಕ್ಷಣ ನೀತಿಯನ್ನು (ಎನ್‌ಇಪಿ) ಪರಿಣಾಮಕಾರಿಯಾಗಿ ಅಳವಡಿಸಲು ಈಗಿರುವ ಸಂಪನ್ಮೂಲವನ್ನೇ ಪುನರ್‌ ಸಂಯೋಜನೆ ಮಾಡುವ ಮೂಲಕ ಹಾಗೂ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಳ್ಳುವ ಮೂಲಕ ಬೋಧನೆ-ಕಲಿಕೆಯ ಗುಣಮಟ್ಟವನ್ನು ಹೆಚ್ಚಿಸಲು ಸಾಧ್ಯವಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್‌.ಅಶ್ವತ್ಥನಾರಾಯಣ ಪ್ರತಿಪಾದಿಸಿದ್ದಾರೆ.

ಗುರುವಾರ ಲಂಡನ್ನಿನ ಥೇಮ್ಸ್‌ ನದಿ ದಂಡೆಯಲ್ಲಿರುವ ಪಾರ್ಕ್ ಪ್ಲಾಜಾ ಲಂಡನ್‌ ರಿವರ್‌ ಬ್ಯಾಂಕ್‌ ಹೋಟೆಲ್‌ನಲ್ಲಿ ನಡೆದ ಕಾಮನ್‌ವೆಲ್ತ್‌ ಶೈಕ್ಷಣಿಕ ಸಮಾವೇಶದಲ್ಲಿ ಮಾತನಾಡಿದ ಅವರು ಕರ್ನಾಟಕದ ಉನ್ನತ ಶಿಕ್ಷಣ ವ್ಯವಸ್ಥೆಯು ರಾಷ್ಟ್ರೀಯ ಶಿಕ್ಷಣ ನೀತಿ ಅಳವಡಿಕೆಯಲ್ಲಿ ಹೇಗೆ ಇಡೀ ಭಾರತದಲ್ಲಿ ಮುಂಚೂಣಿಯಲ್ಲಿದೆ ಎಂಬುದನ್ನು ವಿವಿಧ ದೇಶಗಳ ಶೈಕ್ಷಣಿಕ ಹಿತಾಸಕ್ತಿದಾರರ ಮುಂದೆ ವಿವರಿಸಿದರು.

Tap to resize

Latest Videos

NEP ಯಿಂದ ಗುಣಮಟ್ಟದ ಶಿಕ್ಷಣ: ಅಶ್ವತ್ಥ್ ನಾರಾಯಣ್

ಗುಣಮಟ್ಟದ ಶಿಕ್ಷಣವನ್ನು ಎಲ್ಲರಿಗೂ ಲಭ್ಯವಾಗಿಸುವ ಮೂಲಕ ಸದೃಢ ಸಮಾಜ ನಿರ್ಮಿಸಲು ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಹಲವಾರು ಉಪಕ್ರಮಗಳಿಗೆ ಚಾಲನೆ ಕೊಡಲಾಗಿದೆ. ಆಧುನಿಕ ವಿದ್ಯಮಾನಗಳಿಗೆ ತೆರೆದುಕೊಂಡ ಹಾಗೂ ಅದೇ ವೇಳೆ ಭಾರತೀಯ ಪರಂಪರೆಯಲ್ಲಿ ಬೇರುಬಿಟ್ಟಶಿಕ್ಷಣವನ್ನು ಯುವ ಜನಾಂಗಕ್ಕೆ ಕೊಡಬೇಕೆನ್ನುವುದು ಎನ್‌ಇಪಿ ಆಶಯವಾಗಿದೆ. ಇದು ವಿದ್ಯಾರ್ಥಿಗಳಲ್ಲಿ ನಮ್ಮ ಸಂಸ್ಕೃತಿಯ ಬಗ್ಗೆ ಹೆಮ್ಮೆಯಿರುವ ವಿಶ್ವಾತ್ಮಕ ದೃಷ್ಟಿಯ ಭವಿಷ್ಯದ ಪೀಳಿಗೆಯನ್ನು ಸೃಷ್ಟಿಸಲಿದೆ ಎಂದು ಹೇಳಿದರು.

ವಿದ್ಯಾರ್ಥಿ ಹಂತದಲ್ಲೇ ಕೌಶಲಗಳ ಕಲಿಕೆ, ಉದ್ಯಮಶೀಲತೆ, ಪ್ರಾಯೋಗಿಕ ಕಲಿಕೆ ಇತ್ಯಾದಿಗಳು ಒತ್ತು ಕೊಡಲಾಗುತ್ತಿದೆ. ಸಂಶೋಧಕರು, ಉದ್ದಿಮೆಗಳು ಹಾಗೂ ಶಿಕ್ಷಣ ಸಂಸ್ಥೆಗಳು ಒಟ್ಟಾಗಿ ಕಲೆತು ಪರಸ್ಪರರ ಅಗತ್ಯಗಳಿಗೆ ಅನುಗುಣವಾದ ವಿದ್ಯಾರ್ಥಿ ಕೇಂದ್ರಿತ ಶಿಕ್ಷಣ ಕ್ರಮವನ್ನು ರೂಪಿಸಲು ಗಮನ ಕೇಂದ್ರೀಕರಿಸಲಾಗಿದೆ. ಸ್ಥಳೀಯ ಭಾಷೆಗಳಿಗೆ ಪ್ರಾಮುಖ್ಯ ಕೊಡುವುದರಿಂದ ಹಿಡಿದು ಜಾಗತಿಕ ಸ್ಪರ್ಧಾತ್ಮಕತೆಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವವರೆಗೆ ಎಲ್ಲಾ ಅಂಶಗಳನ್ನೂ ಪರಿಗಣಿಸಿ ಹೊಸ ಶಿಕ್ಷಣ ಕ್ರಮವನ್ನು ಕಟ್ಟಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

ಯುನೈಟೆಡ್‌ ಕಿಂಗ್ಡಂ (ಯುಕೆ), ಆಸ್ಪ್ರೇಲಿಯಾ, ನ್ಯೂಜಿಲ್ಯಾಂಡ್‌ ಸೇರಿದಂತೆ ವಿವಿಧ ಕಾಮನ್‌ವೆಲ್ತ್‌ ದೇಶಗಳ 200ಕ್ಕೂ ಹೆಚ್ಚು ಶಿಕ್ಷಣ ತಜ್ಞರು, ಶೈಕ್ಷಣಿಕ ಸಂಸ್ಥೆಗಳ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದೇ ವೇಳೆ ಅಶ್ವತ್ಥನಾರಾಯಣ ಅವರು ಬರುವ ನವೆಂಬರ್‌ ತಿಂಗಳಲ್ಲಿ ನಡೆಯುವ ಬೆಂಗಳೂರು ತಂತ್ರಜ್ಞಾನ ಸಮಾವೇಶಕ್ಕೆ ಆಗಮಿಸುವಂತೆ ಪ್ರತಿನಿಧಿಗಳಿಗೆ ಆಹ್ವಾನ ನೀಡಿದರು.
 

click me!