Omicron Threat: ಶಾಲೆಗಳನ್ನು ಮುಚ್ಚುವುದಿಲ್ಲ: ಶಿಕ್ಷಣ ಸಚಿವ ನಾಗೇಶ್‌

By Kannadaprabha News  |  First Published Dec 10, 2021, 6:16 AM IST

*   1-10ನೇ ತರಗತಿ ವಿದ್ಯಾರ್ಥಿಗಳಲ್ಲಿ ಯಾರಿಗೂ ಸೋಂಕು ಬಂದಿಲ್ಲ
*   ಸೋಂಕಿತ ಮಕ್ಕಳೂ ಆರೋಗ್ಯವಾಗಿದ್ದಾರೆ, ಹೀಗಾಗಿ ಆತಂಕ ಬೇಡ
*   ವಸತಿ ಶಾಲೆಗಳಿಗೆ ಪ್ರತ್ಯೇಕ ಮಾರ್ಗಸೂಚಿ: ಸಿಎಂ
 


ಬೆಂಗಳೂರು(ಡಿ.10):  ರಾಜ್ಯದಲ್ಲಿ(Karnataka) ಸೋಂಕು ಕಡಿಮೆ ಇರುವುದರಿಂದ ಯಾವುದೇ ಶಾಲೆಗಳನ್ನು ಮುಚ್ಚುವುದಿಲ್ಲ. ಪೋಷಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌(BC Nagesh) ಹೇಳಿದ್ದಾರೆ. ಗುರುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ 1-10ನೇ ತರಗತಿಯಲ್ಲಿ ಸೋಂಕು ಕಂಡು ಬಂದಿಲ್ಲ. ಪಿಯು ಕಾಲೇಜಿನಲ್ಲಿ ಮಾತ್ರ ಸೋಂಕು ಕಂಡು ಬಂದಿದೆ. ಶಿಕ್ಷಕರು ಸೇರಿ ಒಟ್ಟು ಈವರೆಗೆ 171 ಮಂದಿಗೆ ಪಾಸಿಟಿವ್‌(Coronavirus) ಬಂದಿದ್ದು, ಈ ಪೈಕಿ 100 ಮಂದಿ ಗುಣಮುಖರಾಗಿದ್ದಾರೆ. ಕೋವಿಡ್‌(Covid19) ಬಂದ ಮಕ್ಕಳು(Children) ಆರೋಗ್ಯವಾಗಿದ್ದಾರೆ. ದ್ವಿತೀಯ ಪಿಯುಸಿ ಮಕ್ಕಳಿಗೆ ಅರ್ಧವಾರ್ಷಿಕ ಪರೀಕ್ಷೆ ನಡೆಯುತ್ತಿದೆ. ಕಳೆದ ಎರಡು ವರ್ಷ ಪರೀಕ್ಷೆಯಾಗಿಲ್ಲ. ಈಗ ಸುಸೂತ್ರವಾಗಿ ನಡೆಯುತ್ತಿದೆ. ಈ ಹಿಂದೆ ಇದ್ದ ಎಸ್‌ಓಪಿಯನ್ನೇ ಮುಂದುವರಿಸಲಾಗಿದೆ’ ಎಂದು ಹೇಳಿದರು.

ಏಳು ರೆಸಿಡೆನ್ಸಿಯಲ್‌ ಶಾಲೆಗಳಲ್ಲಿ(Residential School) ಕೋವಿಡ್‌ ಹೆಚ್ಚಾಗಿದ್ದು, ಅಲ್ಲಿ ಹೆಚ್ಚಿನ ಮಹತ್ವ ನೀಡಲಾಗಿದೆ. ಎಸ್‌ಓಪಿಯನ್ನು ಕಟ್ಟುನಿಟ್ಟಾಗಿ ಅನುಷ್ಠಾನ ಮಾಡಲು ಸೂಚಿಸಲಾಗಿದೆ. ಶಿಕ್ಷಣ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು ಸೇರಿ ಜಂಟಿ ಸಮಿತಿ ರಚಿಸಿ ಹಾಸ್ಟೆಲ್‌ ಮತ್ತು ಶಾಲೆಗಳಿಗೆ ತೆರಳಿ ತಪಾಸಣೆ ಮಾಡಲು ತಿಳಿಸಿದ್ದೇವೆ. ಬಿಇಓ ಮತ್ತು ಟಿಎಚ್‌ಓ ಸಮಿತಿ ನೇತೃತ್ವದಲ್ಲಿ ತಪಾಸಣೆ ಮಾಡಲು ಸೂಚಿಸಲಾಗಿದೆ ಎಂದು ತಿಳಿಸಿದರು.

Tap to resize

Latest Videos

undefined

Inauguration of RV University: ವಿವಿಗಳು ಸಂಶೋಧನೆಗೆ ಆದ್ಯತೆ ನೀಡಬೇಕು: ಸಿಎಂ ಬೊಮ್ಮಾಯಿ

ಹಾಸ್ಟೆಲ್‌ನಲ್ಲಿ(Hostel) ಒಟ್ಟಿಗೆ ಊಟಕ್ಕೆ ಹೋಗದಂತೆ ಮತ್ತು ಮಲಗುವಾಗಲೂ ಸಾಧ್ಯವಾದಷ್ಟುದೂರ ಮಲಗುವಂತೆ ಸೂಚಿಸಲಾಗಿದೆ. ಪೋಷಕರು ಎರಡು ಡೋಸ್‌ ವ್ಯಾಕ್ಸಿನ್‌(Vaccine) ಪಡೆಯುವುದು ಕಡ್ಡಾಯ ಮಾಡಿಲ್ಲ. ಹೀಗಾಗಿ ಪೋಷಕರು ಎರಡು ಡೋಸ್‌ ಪಡೆದಿಲ್ಲವೆಂದು ಮಕ್ಕಳಿಗೆ ಯಾವುದೇ ನಿರ್ಬಂಧ ವಿಧಿಸಿಲ್ಲ. ಆದರೆ, ಎಲ್ಲಾ ಪೋಷಕರು ಎರಡು ಡೋಸ್‌ ಲಸಿಕೆ ಪಡೆಯುವುದು ಒಳ್ಳೆಯದು ಎಂದು ಮನವಿ ಮಾಡಿಕೊಳ್ಳಲಾಗಿದೆ ಎಂದರು.

ವಸತಿ ಶಾಲೆಗಳಿಗೆ ಪ್ರತ್ಯೇಕ ಮಾರ್ಗಸೂಚಿ: ಸಿಎಂ

ಬೆಂಗಳೂರು:  ವಸತಿ ನಿಲಯಗಳಲ್ಲಿ ಸೋಂಕು ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಹಾಸ್ಟೆಲ್‌ಗಳು ಮತ್ತು ಕ್ಲಸ್ಟರ್‌ಗಳಲ್ಲಿ ಕೋವಿಡ್‌ ನಿರ್ವಹಣೆಗೆ ಪ್ರತ್ಯೇಕ ಮಾರ್ಗಸೂಚಿಗಳನ್ನು(Separate Guidelines) ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಹೇಳಿದ್ದಾರೆ.

Karnataka Sign MoU With NSE Academy: ಹಣಕಾಸು ಶಿಕ್ಷಣಕ್ಕೆ ಹೊಸ ಕಿಂಡಿ

ಗುರುವಾರ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಹಾಸ್ಟೆಲ್‌ಗಳಲ್ಲಿ ಎರಡು ದಿನಕ್ಕೊಮ್ಮೆ ಸ್ಯಾನಿಟೈಸ್‌ ಮಾಡಬೇಕು. ವಿದ್ಯಾರ್ಥಿಗಳು ಒಟ್ಟಿಗೆ ಊಟ ಮಾಡುವುದನ್ನು ನಿಲ್ಲಿಸಿ ಹಂತ ಹಂತವಾಗಿ ಪಾಳಿಯಲ್ಲಿ ನೀಡುವ ವ್ಯವಸ್ಥೆ ಜಾರಿ ಮಾಡಲಾಗುವುದು. ಅಡುಗೆ ಸಿಬ್ಬಂದಿ, ವಾರ್ಡನ್‌ ಎರಡೂ ಡೋಸ್‌ ಲಸಿಕೆ ಕಡ್ಡಾಯ ಮಾಡಲಾಗುವುದು. ಐಸೋಲೇಷನ್‌ ಕೊಠಡಿ ಬಗ್ಗೆ ವಿಶೇಷ ಮಾರ್ಗಸೂಚಿಗಳನ್ನು ನೀಡಲಾಗುವುದು. ಬೆಂಗಳೂರು ಸೇರಿದಂತೆ ಇತರೆಡೆಗಳಲ್ಲಿ ಕ್ಲಸ್ಟರ್‌ ನಿರ್ವಹಣೆಗೂ ಪ್ರತ್ಯೇಕ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗುವುದು ಎಂದರು.

ಲಸಿಕೆ ಅಭಿಯಾನಗಳನ್ನು ಪುನಃ ಆಯೋಜಿಸಲು ಸಚಿವರು ಸಲಹೆ ನೀಡಿದ್ದಾರೆ. ಈ ಬಗ್ಗೆ ಶೀಘ್ರದಲ್ಲಿಯೇ ಕ್ರಮ ಕೈಗೊಳ್ಳಲಾಗುವುದು. ಗಡಿಭಾಗದಲ್ಲಿ ಈಗಾಗಲೇ ಕಟ್ಟೆಚ್ಚರ ವಹಿಸಲಾಗಿದ್ದು, ಮಾರ್ಗಸೂಚಿಗಳನ್ನು ಮುಂದುವರಿಸಲಾಗುವುದು. ಕೇರಳ ವಿದ್ಯಾರ್ಥಿಗಳಿಗೆ ಎರಡು ಡೋಸ್‌, ಆರ್‌ಟಿಪಿಸಿಆರ್‌ ಪರೀಕ್ಷೆ ಸೇರಿದಂತೆ ನಿಯಮಗಳ ಕಡ್ಡಾಯ ಪರಿಪಾಲನೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಶಾಲಾ-ಕಾಲೇಜಲ್ಲಿ ಮಾರ್ಗಸೂಚಿ ಪಾಲನೆ ಕಡ್ಡಾಯ

ದಾವಣಗೆರೆ(Davanagere): ಕೋವಿಡ್‌-19 ಸಾಂಕ್ರಾಮಿಕ ರೋಗ ಹರಡುವಿಕೆ ತಡೆಗೆ ಸರ್ಕಾರವು ಮಾರ್ಗಸೂಚಿಯನ್ನು ಪ್ರಕಟಿಸಿದ್ದು, ಜಿಲ್ಲೆಯ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲಾ-ಕಾಲೇಜುಗಳಲ್ಲಿ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಜಿ.ಬೀಳಗಿ ಸೂಚಿಸಿದ್ದಾರೆ.

ಸರ್ಕಾರದ ಮಾರ್ಗಸೂಚಿಯನ್ನು ಯಾವುದೇ ಶಾಲಾ-ಕಾಲೇಜಿನಲ್ಲಿ ಉಲ್ಲಂಘಿಸಿರುವುದು, ಪಾಲನೆ ಮಾಡದಿರುವುದು ಕಂಡು ಬಂದರೆ ಅಂತಹ ಶಾಲಾ-ಕಾಲೇಜುಗಳ ವಿರುದ್ಧ ನಿಯಮಾನುಸಾರ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.
 

click me!