
ಕೃಷ್ಣ ಲಮಾಣಿ
ಹೊಸಪೇಟೆ (ಏ.09): ‘ಮುಂದೆ ಐಎಎಸ್ ಮಾಡಬೇಕೆಂಬ ಅಚಲ ಗುರಿಯೊಂದಿಗೆ ಓದಿದ್ದಕ್ಕೆ ಉತ್ತಮ ಫಲಿತಾಂಶ ಬಂದಿದೆ. ನನಗೆ ಪ್ರೋತ್ಸಾಹ ದೊರೆತರೆ, ಖಂಡಿತ ಐಎಎಸ್ ಅಧಿಕಾರಿಯಾಗುವೆ’ ಎಂದು ಕಲಾ ವಿಭಾಗದಲ್ಲಿ (600ಕ್ಕೆ 597 ಅಂಕಗಳು) ರಾಜ್ಯಕ್ಕೆ ಟಾಪರ್ ಆದ ಲಾರಿ ಚಾಲಕನ ಪುತ್ರಿ ಎಲ್.ಆರ್. ಸಂಜನಾಬಾಯಿಯ ಆತ್ಮವಿಶ್ವಾಸದ ನುಡಿಗಳಿವು. ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಡಣಾಪುರ ಗ್ರಾಪಂ ವ್ಯಾಪ್ತಿಯ ಗುಂಡಾ ಸ್ಟೇಶನ್ ವಾಸಿ ಎಲ್.ಕೆ. ರಾಮ ನಾಯ್ಕ ಮತ್ತು ಎಲ್. ಕಾವೇರಿ ಬಾಯಿ ದಂಪತಿ ಪುತ್ರಿ ಸಂಜನಾಬಾಯಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಿದ್ದಾರೆ. ಕೊಟ್ಟೂರಿನ ಇಂದು ಪಿಯು ಕಾಲೇಜಿನ ವಿದ್ಯಾರ್ಥಿನಿ.
ಲಾರಿ ಚಾಲಕನ ಮಗಳು: ಈಕೆಯ ತಂದೆ ರಾಮಾ ನಾಯ್ಕ ಲಾರಿ ಚಾಲಕರಾಗಿದ್ದು, ಕಿತ್ತು ತಿನ್ನುವ ಬಡತನದಲ್ಲೆ ಮಗಳನ್ನು ಹಾಸ್ಟೆಲ್‌ನಲ್ಲಿಟ್ಟು ಓದಿಸಿದ್ದಾರೆ. ರಾಮಾ ನಾಯ್ಕ ಹಾಗೂ ಕಾವೇರಿ ಬಾಯಿ ದಂಪತಿಗೆ ಇಬ್ಬರು ಪುತ್ರಿಯರು ಮತ್ತು ಓರ್ವ ಪುತ್ರನಿದ್ದು, ಈ ಕುಟುಂಬಕ್ಕೆ ಜನತಾ ಮನೆಯೇ ಆಸರೆಯಾಗಿದೆ. ಆಸ್ತಿ ಇಲ್ಲದೆ ರಟ್ಟೆ ಬಲದ ಮೇಲೆಯೇ ಮಗಳನ್ನು ಪಿಯುಸಿ ಓದಿಸಿದ್ದಾರೆ. ತಂದೆಯ ಬಡತನ ಓದಿಗೆ ಅಡ್ಡಿಯಾಗದಂತೆ ಕಠಿಣ ಪರಿಶ್ರಮದಿಂದ ಓದಿರುವ ಸಂಜನಾಯಿ, ಈಗ ಇಡೀ ರಾಜ್ಯಕ್ಕೆ ಟಾಪರ್ ಆಗಿದ್ದು, ರಾಮನಾಯ್ಕರ ಖುಷಿಗೆ ಪಾರವೇ ಇಲ್ಲದಂತಾಗಿದೆ.
ನಾನು ಐಎಎಸ್ ಮಾಡುವ ಇರಾದೆ ಹೊಂದಿರುವೆ. ಕಾಲೇಜು ಮತ್ತು ವಸತಿ ನಿಲಯದಲ್ಲಿ ಸಂಜೆ 5.30ರಿಂದ ರಾತ್ರಿ 11ರವರೆಗೆ ಓದುತ್ತಿದ್ದೆ. ಮತ್ತೆ ಬೆಳಗ್ಗೆ 4.30ರಿಂದ 7ರವರೆಗೆ ಓದುತ್ತಿದ್ದೆ. ಓದೇ ನನ್ನ ಹವ್ಯಾಸ ಆಗಿದೆ. ಮುಂದೆ ಪದವಿ ಮಾಡಿ, ಐಎಎಸ್ ಮಾಡುವ ಗುರಿ ಹೊಂದಿರುವೆ.
-ಸಂಜನಾಬಾಯಿ, ಪಿಯು ಟಾಪರ್ ಇಂದು ಪಿಯು ಕಾಲೇಜು, ಕೊಟ್ಟೂರು.
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ ಈ ವರ್ಷ 73.45%, ಉಡುಪಿ ಫಸ್ಟ್, ದಕ್ಷಿಣ ಕನ್ನಡ ಸೆಕೆಂಡ್!
ಎಷ್ಟೇ ಕಷ್ಟ ಆಗಲಿ. ನಾನು ನನ್ನ ಮಗಳಿಗೆ ಐಎಎಸ್ ಮಾಡಿಸಿ, ಜಿಲ್ಲಾಧಿಕಾರಿ ಮಾಡಿಸುವೆ. ಮಗಳ ಕನಸು ಈಡೇರಿಸುವುದೇ ನನ್ನ ಕಾಯಕವಾಗಿದೆ.
-ರಾಮಾನಾಯ್ಕ, ಸಂಜನಾಬಾಯಿಯ ತಂದೆ.