
ಮಂಗಳೂರು (ಸೆ.04): ಬೆಳ್ತಂಗಡಿ ತಾಲೂಕಿನ ಅಂಡಿಂಜೆ ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಆಂಗ್ಲ ಭಾಷೆ ಕಬ್ಬಿಣದ ಕಡಲೆ ಕಾಯಿ ಅಲ್ಲವೇ ಅಲ್ಲ. ಅಪ್ಪಟ ಹಳ್ಳಿ ಮಕ್ಕಳೇ ತುಂಬಿರುವ ಈ ಶಾಲೆಯಲ್ಲಿ ಎಲ್‌ಕೆಜಿಯಿಂದ ಎಂಟನೇ ತರಗತಿ ವರೆಗೆ ಮಕ್ಕಳಿದ್ದಾರೆ. ಬಹುತೇಕ ಎಲ್ಲ ಮಕ್ಕಳೂ ಇಂಗ್ಲಿಷ್‌ನಲ್ಲಿ ಸಿದ್ಧಹಸ್ತರು. ಮಕ್ಕಳ ಈ ಸಾಧನೆಯ ಹಿಂದಿನ ರೂವಾರಿ ಕವನ್ ಕುಮಾರ್ ಮೇಷ್ಟ್ರು. ಅರ್ಥಾತ್ ಮಕ್ಕಳ ನೆಚ್ಚಿನ ಇಂಗ್ಲಿಷ್ ಮೇಷ್ಟ್ರು.
ಬೆಳಗ್ಗೆಯೇ ಸ್ಪೋಕನ್ ಕ್ಲಾಸ್
ಕವನ್ ಕುಮಾರ್ ಇಂಗ್ಲಿಷ್ ಬೋಧಕರಾಗಿ 10 ವರ್ಷ ಹಿಂದೆ ನೇಮಕಗೊಂಡಿದ್ದಾರೆ. ಇಂಗ್ಲಿಷ್ ಮಾತ್ರವಲ್ಲ ಅನಿವಾರ್ಯವಾದರೆ ಸಮಾಜ, ವಿಜ್ಞಾನ ಪಾಠವೂ ಮಾಡುತ್ತಾರೆ. ಆದರೆ ಇವರ ಫೋಕಸ್ ಇರುವುದು ಇಂಗ್ಲಿಷ್ ಕಲಿಕೆ, ಸ್ಪೋಕನ್ ಬಗ್ಗೆ.
ಕಳೆದ ಆರು ವರ್ಷಗಳಿಂದ ಬೆಳಗ್ಗೆ 8.30ರಿಂದ 9.45ರ ವರೆಗೆ ಒಂದೂಕಾಲು ಗಂಟೆ ಕಾಲ ಮಕ್ಕಳಿಗೆ ನಿತ್ಯವೂ ಸ್ಪೋಕನ್ ಇಂಗ್ಲಿಷ್ ತರಗತಿ ನಡೆಸುತ್ತಾರೆ. 3 ಮತ್ತು 4ನೇ ತರಗತಿ ಮಕ್ಕಳಿಗೆ ಇಂಗ್ಲಿಷ್‌ನ ಮೂಲ ಕಲಿಸುತ್ತಾರೆ, 6ರಿಂದ 8ನೇ ತರಗತಿ ಮಕ್ಕಳಿಗೆ ಸುಧಾರಿತ ಭಾಗ ಅಂದರೆ ಸ್ನೇಹಿತರ ಜೊತೆ ಇಂಗ್ಲಿಷ್ ಮಾತನಾಡುವುದನ್ನು ಹೇಳಿಕೊಡುತ್ತಾರೆ. ಇದಕ್ಕೆ ಪೂರಕವಾಗಿ ಶನಿವಾರ ಅಪರಾಹ್ನ ಶಾಲೆಯಲ್ಲಿ ಇಂಗ್ಲಿಷ್‌ನಲ್ಲೇ ಭಾಷಣ, ಕ್ವಿಜ್ ಸ್ಪರ್ಧೆಗಳಿರುತ್ತವೆ, ಅದಕ್ಕೆ ಬಹುಮಾನವೂ ಇರುತ್ತದೆ. ತರಗತಿಯಲ್ಲಿ ಪಿಪಿಟಿ ಮಾದರಿ ಬಳಸಿ ಪಾಠ ಮಾಡುತ್ತಾರೆ, ಮಾತ್ರವಲ್ಲ ಸ್ಮಾರ್ಟ್ ತರಗತಿ ಕೂಡ ನಡೆಸುತ್ತಾರೆ.
ಕ್ರೀಡೆಯಲ್ಲೂ ಸೈ
ಕವನ್ ಕುಮಾರ್ ಮೇಷ್ಟ್ರು ಕೇವಲ ಇಂಗ್ಲಿಷ್ ಕಲಿಸುವುದು ಮಾತ್ರವಲ್ಲ ಕ್ರೀಡೆಯಲ್ಲೂ ಮಕ್ಕಳನ್ನು ತಯಾರು ಮಾಡುತ್ತಿದ್ದರು. ಇವರು ಸರ್ಕಾರಿ ನೌಕರರ ಕಬಡ್ಡಿ ಕ್ರೀಡೆಯಲ್ಲಿ ರಾಜ್ಯ ಹಾಗೂ ರಾಷ್ಟ್ರವನ್ನು ಪ್ರತಿನಿಧಿಸಿದ್ದರು.
ಪ್ರಸಕ್ತ ಎಸ್ಐಆರ್ ಗಣತಿ ಕಾರ್ಯ ನಡೆಯುತ್ತಿದ್ದರೂ ಇವರು ಒಂದು ದಿನವೂ ತರಗತಿಗೆ ಮಾತ್ರ ತಪ್ಪಿಸುವುದಿಲ್ಲ. ಬೆಳಗ್ಗಿನಿಂದ ಸಂಜೆ ವರೆಗೆ ತರಗತಿ ನಡೆಸಿಯೇ 5 ಗಂಟೆ ಬಳಿಕ ಗಣತಿಗೆ ತೆರಳುತ್ತಾರೆ.
ಇಲ್ಲಿ 8ನೇ ತರಗತಿ ಪೂರೈಸಿ ಹೈಸ್ಕೂಲ್‌ಗೆ ತೆರಳುವ ಮಕ್ಕಳಲ್ಲಿ ಬಹುತೇಕ ಮಂದಿ ಪಿಯುಸಿಯಲ್ಲಿ ಕಲೆಗಿಂತ ಜಾಸ್ತಿ ವಿಜ್ಞಾನ ವಿಭಾಗ ಆಯ್ಕೆ ಮಾಡುವ ಉತ್ಸಾಹ ತೋರಿಸುತ್ತಿದ್ದಾರೆ. ಹೆಚ್ಚಿನ ಮಕ್ಕಳು ಸ್ಕಾಲರ್‌ಶಿಪ್ ಕೂಡ ಪಡೆಯುತ್ತಿದ್ದಾರೆ.
-ಕವನ್ ಕುಮಾರ್, ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕ