
ಬೀಡ್ (ಮಹಾರಾಷ್ಟ್ರ): ತಾಯಿಯ ಮಮತೆ ಮತ್ತು ಮಗಳ ಶಿಕ್ಷಣಕ್ಕಾಗಿ ಅವಳು ಪಡುವ ಶ್ರಮಕ್ಕೆ ಸಾಟಿಯಿಲ್ಲ ಎಂಬುದನ್ನು ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಮಹಿಳೆಯೊಬ್ಬರು ಸಾಬೀತುಪಡಿಸಿದ್ದಾರೆ. 47 ವರ್ಷದ ರಮಾಬಾಯಿ ರಣವೀರ್ ಎಂಬವರು ಸೀರೆಯುಟ್ಟು ಬರಿಗಾಲಿನಲ್ಲಿ ಓಡಿ ಮ್ಯಾರಾಥಾನ್ ಗೆಲ್ಲುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ.
ಮಹಾರಾಷ್ಟ್ರದ ಅಂಬಾಜೋಗೈನ ರಮಾಬಾಯಿ ಅವರಿಗೆ ತಮ್ಮ ಮಗಳ ಶಿಕ್ಷಣಕ್ಕೆ ಹಣದ ಅವಶ್ಯಕತೆಯಿತ್ತು. ಭಾರತೀಯ ಶಿಕ್ಷಣ ಪ್ರಸಾರಕ ಸಂಸ್ಥೆಯ ಖೋಲೇಶ್ವರ್ ಶಿಕ್ಷಣ ಸಂಕೀರ್ಣವು ಆಯೋಜಿಸಿದ್ದ 'ಅಮೃತ್ ದೌಡ್' ಮ್ಯಾರಾಥಾನ್‌ನಲ್ಲಿ ವಿಜೇತರಿಗೆ 3,000 ರೂ. ನಗದು ಬಹುಮಾನ ನೀಡುವುದಾಗಿ ಘೋಷಿಸಲಾಗಿತ್ತು. ಈ ಬಹುಮಾನದ ಹಣವನ್ನು ಹೇಗಾದರೂ ಮಾಡಿ ಗೆದ್ದು ಮಗಳ ಓದಿಗೆ ಬಳಸಬೇಕೆಂಬ ಛಲದೊಂದಿಗೆ ರಮಾಬಾಯಿ ಮ್ಯಾರಾಥಾನ್ ಕಣಕ್ಕಿಳಿದರು.
ಸ್ಪರ್ಧೆಯ ದಿನ ರಮಾಬಾಯಿ ಸಾಮಾನ್ಯ ಸೀರೆ ಮತ್ತು ಚಪ್ಪಲಿ ಧರಿಸಿ ಬಂದಿದ್ದರು. ಓಟದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಇತರ ಯುವತಿಯರು ಟ್ರ್ಯಾಕ್ ಸೂಟ್ ಮತ್ತು ಸ್ಪೋರ್ಟ್ಸ್ ಶೂ ಧರಿಸಿ ಸಜ್ಜಾಗಿದ್ದರು. ಓಟ ಆರಂಭವಾದ ಕೆಲವೇ ಸಮಯದಲ್ಲಿ ರಮಾಬಾಯಿ ಅವರ ಚಪ್ಪಲಿಗಳು ಜಾರತೊಡಗಿದವು. ಓಟಕ್ಕೆ ಅಡ್ಡಿಯಾಗುತ್ತಿದೆ ಎಂದು ಅರಿತ ಅವರು, ಕಿಂಚಿತ್ತೂ ಯೋಚಿಸದೆ ಚಪ್ಪಲಿಗಳನ್ನು ಕೈಯಲ್ಲಿ ಹಿಡಿದು ಬರಿಗಾಲಿನಲ್ಲೇ ಓಡಲು ಆರಂಭಿಸಿದರು.
ರಸ್ತೆಯ ಮೇಲಿನ ಕಲ್ಲುಗಳು, ಬಿಸಿಲು ಯಾವುದನ್ನೂ ಲೆಕ್ಕಿಸದೆ ರಮಾಬಾಯಿ ಗುರಿಯತ್ತ ಮಾತ್ರ ಗಮನ ಹರಿಸಿದ್ದರು. ಸೀರೆಯುಟ್ಟುಕೊಂಡೇ ವೇಗವಾಗಿ ಓಡಿದ ಅವರು, ಶೂ ಧರಿಸಿದ್ದ ನೂರಾರು ಯುವ ಸ್ಪರ್ಧಿಗಳನ್ನು ಹಿಂದಿಕ್ಕಿ ಮೊದಲಿಗರಾಗಿ ಗುರಿ ತಲುಪಿದರು. ಇವರ ಈ ಅದಮ್ಯ ಛಲವನ್ನು ಕಂಡು ಅಲ್ಲಿದ್ದ ಪ್ರೇಕ್ಷಕರು ಮತ್ತು ಸಂಘಟಕರು ಎದ್ದು ನಿಂತು ಚಪ್ಪಾಳೆ ತಟ್ಟಿ ಅಭಿನಂದಿಸಿದರು.
ಮ್ಯಾರಾಥಾನ್ ಗೆದ್ದ ರಮಾಬಾಯಿ ಅವರಿಗೆ 3,000 ರೂ. ನಗದು ಬಹುಮಾನ ನೀಡಲಾಯಿತು. ಈ ಹಣವನ್ನು ನನ್ನ ಮಗಳ ಶಿಕ್ಷಣದ ವೆಚ್ಚಕ್ಕಾಗಿ ಬಳಸುತ್ತೇನೆ ಎಂದು ಅವರು ಭಾವುಕರಾಗಿ ನುಡಿದರು. ಒಬ್ಬ ತಾಯಿ ತನ್ನ ಮಕ್ಕಳ ಭವಿಷ್ಯಕ್ಕಾಗಿ ಎಷ್ಟು ದೂರ ಬೇಕಾದರೂ ಓಡಬಲ್ಲಳು ಎಂಬುದಕ್ಕೆ ರಮಾಬಾಯಿ ಈಗ ದೇಶಕ್ಕೆ ಮಾದರಿಯಾಗಿದ್ದಾರೆ.