* ಪಠ್ಯಪುಸ್ತಕ ಪರಿಷ್ಕರಣೆ ರಾಜಕೀಯ ಸಂಘರ್ಷ ಅಲ್ಲ
* ನಾವೆಲ್ಲ ಸೇರಿ ಶಿಕ್ಷಣ ಹಾಳು ಮಾಡುತ್ತಿದ್ದೇವೆ
* ಪಠ್ಯಪುಸ್ತಕದಲ್ಲಿ ಕೇಸರಿಕರಣ ನುಸುಳುತ್ತಿರುವುದು ಅಪಾಯಕಾರಿ
ಮೈಸೂರು(ಮೇ.22): ಪಠ್ಯಪುಸ್ತಕ ಪರಿಷ್ಕರಣೆ ರಾಜಕೀಯ ಸಂಘರ್ಷ ಅಲ್ಲ. ನಾವೆಲ್ಲ ಸೇರಿ ಶಿಕ್ಷಣ ಹಾಳು ಮಾಡುತ್ತಿದ್ದೇವೆ ಎಂದು ವಿಧಾನ ಪರಿಷತ್ತು ಸದಸ್ಯ ಹಾಗೂ ಮಾಜಿ ಸಚಿವ ಎಚ್. ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೋಹಿತ್ ಚಕ್ರತೀರ್ಥ ಯಾರಪ್ಪ? ಸಂಘ ಪರಿವಾರದ ಕಾರ್ಯಕರ್ತ. ಶಿಕ್ಷಣ ತಜ್ಞರಲ್ಲದೆ ಇರುವವರು ಪಠ್ಯ ಪುಸ್ತಕ ತಯಾರಿಯ (Text Book Revision Committee) ಅಧ್ಯಕ್ಷರಾಗಿರೋದು ದುರಂತ ಎಂದು ಕಿಡಿಕಾರಿದರು.
ಪಠ್ಯಪುಸ್ತಕದಲ್ಲಿ ಕೇಸರಿಕರಣ ನುಸುಳುತ್ತಿರುವುದು ಅಪಾಯಕಾರಿ. ಧರ್ಮದ ಆಧಾರಿತ ಪಠ್ಯ ಯಾವುದೇ ಕಾರಣಕ್ಕೂ ಬೇಡ. ಯಜ್ಞ ಕುಂಡ ಯಾವ ಕಡೆ ಇರಬೇಕು ಎಂದು ಪಠ್ಯ ಬೋಧಿಸುವುದು ಯಾರಿಗೆ ಬೇಕು? ನಾರಾಯಣ ಗುರು ಸಾಮಾಜಿಕ ಕ್ರಾಂತಿಯ ಹರಿಕಾರ ಅವರ ಪಠ್ಯ ತೆಗೆಯುವುದು ತಪ್ಪು ಎಂದು ಅವರು ಖಂಡಿಸಿದರು.
ಟಿಪ್ಪು ಈ ನಾಡಿನ ಮಣ್ಣಿನ ಮಗ : ಹೆಚ್. ವಿಶ್ವನಾಥ್ ಗುಣಗಾನ
ಹೆಡ್ಗೆವರ್ ಯಾರು ಎಂಬುದೆ ನಮಗೆ ಗೊತ್ತಿಲ್ಲ. ಬಾಯಿಗೆ ಬಂದಂಗೆ ಯಾರು ಯಾರೋದು ಪಾಠ ಸೇರಿಸಿದರೆ ಹೇಗೆ? ಹೆಡ್ಗೆವರ್‌ಗೂ ಟಿಪ್ಪುಗೆ ಹೋಲಿಕೆ ಮಾಡುತ್ತೀರಾ ನೀವು? ಇದು ಸರಿನಾ? ಟಿಪ್ಪು ಬ್ರಿಟಿಷರ ವಿರುದ್ಧ ಹೋರಾಡಿದ ವೀರ ಚರಿತೆ ಗೊತ್ತಿಲ್ವಾ? ಹೆಡ್ಗೆವರ್ ಏನು ಮಾಡಿದರು ಎಂಬುದು ಎಲ್ಲರಿಗೂ ಗೊತ್ತಿದೆ? ಬ್ರಿಟಿಷರ ಮುಂದೆ ಮಂಡಿಯೂರಿದ್ದು ಯಾರು? ಟಿಪ್ಪು ಬ್ರಿಟಿಷರ ವಿರುದ್ಧ ಹೋರಾಡಿದ ಎಂದು ಅವರು ಹೇಳಿದರು.