ಸಿಇಟಿ ದಿನವೇ ಸಿಎಂ ಪ್ರಮಾಣ ವಚನ: ವಿದ್ಯಾರ್ಥಿಗಳಿಗೆ ಟ್ರಾಫಿಕ್‌ ಸಮಸ್ಯೆ ಆತಂಕ

By Kannadaprabha News  |  First Published May 19, 2023, 6:46 AM IST

ಪ್ರಮಾಣ ವಚನ ಸಮಾರಂಭ ನಡೆಯಲಿರುವ ಕಂಠೀರವ ಕ್ರೀಡಾಂಗಣದ ಸುತ್ತಮುತ್ತಲ ಕೆಲ ಕಾಲೇಜುಗಳನ್ನು ಪರೀಕ್ಷಾ ಕೇಂದ್ರಗಳಾಗಿ ಗುರುತಿಸಲಾಗಿದೆ. ಹಾಗಾಗಿ ಈ ವಿದ್ಯಾರ್ಥಿಗಳು ಭಾರೀ ಸಂಚಾರ ದಟ್ಟಣೆ ಸಮಸ್ಯೆಯಿಂದ ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರಕ್ಕೆ ತೆರಳು ಸಾಧ್ಯವಾಗದಿರಬಹುದು ಎಂಬ ಆತಂಕಕ್ಕೀಡಾಗಿದ್ದಾರೆ.


ಬೆಂಗಳೂರು(ಮೇ.19): ಎಂಜಿನಿಯರಿಂಗ್‌ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಮೇ 20 ಮತ್ತು 21ರಂದು ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಕಲ ಸಿದ್ಧತೆ ಮಾಡಿಕೊಂಡಿದೆ. ಆದರೆ, ಭಾನುವಾರ ಮಧ್ಯಾಹ್ನ 12.30ಕ್ಕೆ ಬೆಂಗಳೂರಿನಲ್ಲಿ ರಾಜ್ಯದ ನೂತನ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ಏರ್ಪಡಿಸಿರುವುದರಿಂದ ಪರೀಕ್ಷಾರ್ಥಿಗಳಿಗೆ ಟ್ರಾಫಿಕ್‌ ಸಮಸ್ಯೆಯಾಗುವ ಆತಂಕ ಎದುರಾಗಿದೆ.

ಮೇ 20ರ ಬೆಳಗ್ಗೆ 10.30ಕ್ಕೆ ಸಿಟಿಇ ಪರೀಕ್ಷೆಗಳು ಆರಂಭವಾಗಲಿವೆ. ಮೊದಲ ದಿನ ಗಣಿತ ಮತ್ತು ಜೀವಶಾಸ್ತ್ರದ ಪರೀಕ್ಷೆ ಇದೆ. ಇದೇ ದಿನ ಮಧ್ಯಾಹ್ನ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಸಮಾರಂಭಕ್ಕೆ ಬೆಳಗ್ಗೆಯಿಂದಲೇ ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಮೂಲೆ ಮೂಲೆಗಳಿಂದ ಪಕ್ಷದ ಕಾರ್ಯಕರ್ತರು, ಜನರು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸುವ ಹಿನ್ನೆಲೆಯಲ್ಲಿ ತುಮಕೂರು ರಸ್ತೆ, ಮೈಸೂರು ರಸ್ತೆ, ಬಳ್ಳಾರಿ ರಸ್ತೆ ಸೇರಿದಂತೆ ನಗರದ ಬಹುತೇಕ ಎಲ್ಲ ಭಾಗಗಳ ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ಸುಗಮ ಸಂಚಾರಕ್ಕೆ ಸಮಸ್ಯೆಯಾಗುವ ಸಾಧ್ಯತೆ ಇದೆ.

Tap to resize

Latest Videos

ಪಿಯುಸಿ ಪೂರಕ ಪರೀಕ್ಷೆ ತೆಗೆದುಕೊಳ್ಳೋರೂ ಸಿಇಟಿ ಬರೆಯಬಹುದು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ

ಈ ಬಾರಿಯ ಸಿಇಟಿಗೆ 2.61 ಲಕ್ಷ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ರಾಜ್ಯಾದ್ಯಂತ 562 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಈ ಪೈಕಿ ಬೆಂಗಳೂರಿನಲ್ಲೇ 121 ಕೇಂದ್ರಗಳಿದ್ದು ನಗರದ ಹೃದಯ ಭಾಗದ ವಿವಿಧ ಕಾಲೇಜುಗಳನ್ನು ಪರೀಕ್ಷಾ ಕೇಂದ್ರಗಳಾಗಿ ಗುರುತಿಸಲಾಗಿದೆ. ಸುಮಾರು 85 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಬೆಂಗಳೂರಿನಲ್ಲೇ ಪರೀಕ್ಷೆ ಬರೆಯಲಿದ್ದಾರೆ. ಪ್ರಮಾಣ ವಚನ ಸಮಾರಂಭ ನಡೆಯಲಿರುವ ಕಂಠೀರವ ಕ್ರೀಡಾಂಗಣದ ಸುತ್ತಮುತ್ತಲ ಕೆಲ ಕಾಲೇಜುಗಳನ್ನು ಪರೀಕ್ಷಾ ಕೇಂದ್ರಗಳಾಗಿ ಗುರುತಿಸಲಾಗಿದೆ. ಹಾಗಾಗಿ ಈ ವಿದ್ಯಾರ್ಥಿಗಳು ಭಾರೀ ಸಂಚಾರ ದಟ್ಟಣೆ ಸಮಸ್ಯೆಯಿಂದ ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರಕ್ಕೆ ತೆರಳು ಸಾಧ್ಯವಾಗದಿರಬಹುದು ಎಂಬ ಆತಂಕಕ್ಕೀಡಾಗಿದ್ದಾರೆ.

ಪೊಲೀಸರಿಗೆ ಪ್ರಾಧಿಕಾರ ಪತ್ರ

ಈ ಮಧ್ಯೆ, ಪ್ರಮಾಣ ವಚನ ಸಮಾರಂಭದಿಂದ ಸಿಇಟಿ ವಿದ್ಯಾರ್ಥಿಗಳಿಗೆ ಸಂಚಾರ ದಟ್ಟಣೆಯ ಸಮಸ್ಯೆಯಾಗಲಿದೆಯಾ ಎಂಬ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳು ಬೆಂಗಳೂರು ನಗರ ಸಂಚಾರ ಪೊಲೀಸರಿಗೆ ಪತ್ರ ಬರೆದು ಸಲಹೆ ಕೇಳಿದೆ. ಸಮಾರಂಭಕ್ಕೆ ಎಷ್ಟುಜನ ಬರಬಹುದು. ಯಾವ್ಯಾವ ಭಾಗದಲ್ಲಿ ಸಮಸ್ಯೆ ಆಗಬಹುದು ಎಂಬ ಮಾಹಿತಿಯನ್ನು ಪೊಲೀಸರು ನೀಡಿದರೆ ಇದನ್ನು ಸರ್ಕಾರದ ಗಮನಕ್ಕೆ ತಂದು ವಿದ್ಯಾರ್ಥಿಗಳಿಗೆ ಸಮಸ್ಯೆಯಾಗದಂತೆ ಯಾವ ಕ್ರಮ ಕೈಗೊಳ್ಳಬೇಕೆಂದು ನಿರ್ಧರಿಸಲು ಸಾಧ್ಯವಾಗುತ್ತದೆ. ಈ ಬಗ್ಗೆ ಪೊಲೀಸರು ಶುಕ್ರವಾರ ಮಾಹಿತಿ ನೀಡುವ ಸಾಧ್ಯತೆ ಇದೆ. ಬಳಿಕ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

click me!