ಕಾಲೇಜುಗಳು ತೆರೆದರೂ ವಿದ್ಯಾರ್ಥಿಗಳು ಬರುತ್ತಿಲ್ಲ

By Kannadaprabha NewsFirst Published Nov 19, 2020, 7:35 AM IST
Highlights

ರಾಜ್ಯಾದ್ಯಂತ ಪದವಿ, ಡಿಪ್ಲೊಮಾ ಅಂತಿಮ ವರ್ಷ ಮತ್ತು ಸ್ನಾತಕೋತ್ತರ ಪದವಿ ತರಗತಿಗಳು ಆರಂಭವಾಗಿದ್ದರೂ ಎರಡನೇ ದಿನವೂ ವಿದ್ಯಾರ್ಥಿಗಳು ಕಾಲೇಜಿಗೆ ಬಂದಿಲ್ಲ

 ಬೆಂಗಳೂರು (ನ.19):  ಎಂಟು ತಿಂಗಳ ಬಳಿಕ ರಾಜ್ಯಾದ್ಯಂತ ಪದವಿ, ಡಿಪ್ಲೊಮಾ ಅಂತಿಮ ವರ್ಷ ಮತ್ತು ಸ್ನಾತಕೋತ್ತರ ಪದವಿ ತರಗತಿಗಳು ಆರಂಭವಾಗಿದ್ದರೂ ಎರಡನೇ ದಿನವೂ ವಿದ್ಯಾರ್ಥಿಗಳು ಕಾಲೇಜಿನತ್ತ ಮುಖಮಾಡಲು ನಿರಾಸಕ್ತಿ ತೋರಿದರು.

ಪಾಲಕರಲ್ಲಿ ಇನ್ನೂ ಕಡಿಮೆಯಾಗದ ಕೊರೋನಾ ಆತಂಕ, ಕೋವಿಡ್‌-19 ಟೆಸ್ಟ್‌ ವರದಿ ಕಡ್ಡಾಯ ಮಾಡಿದ್ದು ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖಕ್ಕೆ ಮುಖ್ಯಕಾರಣವಾಗಿದೆ. ಬಹುತೇಕ ವಿದ್ಯಾರ್ಥಿಗಳು ಮಂಗಳವಾರವಷ್ಟೇ ಕೋವಿಡ್‌ ಪರೀಕ್ಷೆ ಮಾಡಿಸಿಕೊಂಡಿದ್ದು ಅದರ ವರದಿ ಬರಲು ಇನ್ನೂ ಒಂದೆರಡು ದಿನ ಬೇಕಿದೆ. ಹೀಗಾಗಿ ಕೆಲ ದಿನ ಪರಿಸ್ಥಿತಿ ಹೀಗೇ ಇರಲಿದೆ ಎಂದು ಉಪನ್ಯಾಸಕರು ಅಭಿಪ್ರಾಯಪಡುತ್ತಾರೆ. ಏತನ್ಮಧ್ಯೆ, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಲೇಜಿಗೆ ಆಗಮಿಸಲು ನಿರಾಸಕ್ತಿ ತೋರುತ್ತಿರುವ ಹಿನ್ನೆಲೆಯಲ್ಲಿ ಆನ್‌ಲೈನ್‌ ತರಗತಿಯನ್ನು ಯಥಾರೀತಿ ಮುಂದುವರಿಸಲಾಗಿದೆ.

ಕಾಲೇಜ್ ಆರಂಭದ ಬೆನ್ನಲ್ಲೇ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್...! ..

ಕೊಡಗಿನಲ್ಲಿ ಮೊದಲ ದಿನದಂತೆ 2ನೇ ದಿನವೂ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದರೆ, ಹಾವೇರಿ, ಬಳ್ಳಾರಿ, ಚಾಮರಾಜನಗರ ಜಿಲ್ಲೆಗಳ ನಗರಗಳ ಕಾಲೇಜುಗಳಲ್ಲಿ ಮಾತ್ರ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಮೊದಲ ದಿನಕ್ಕಿಂತ ಕೊಂಚ ಹೆಚ್ಚಿಗೆ ಇತ್ತು. ಆದರೆ, ಉಡುಪಿ, ದಕ್ಷಿಣ ಕನ್ನಡ, ಧಾರವಾಡ, ಗದಗ ಸೇರಿ ಹಲವೆಡೆ ಮಂಗಳವಾರಕ್ಕಿಂತಲೂ ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳು ತರಗತಿಗೆ ಹಾಜರಾಗಿದ್ದರು. ಮಂಡ್ಯ, ಮೈಸೂರು, ತುಮಕೂರು, ಚಿಕ್ಕಬಳ್ಳಾಪುರ, ಬಾಗಲಕೋಟೆ, ವಿಜಯಪುರದ ಕೆಲವೆಡೆ ಕಾಲೇಜು ಬಾಗಿಲು ತೆರೆದಿದ್ದರೂ ಗ್ರಾಮೀಣ ಪ್ರದೇಶದ ಕಾಲೇಜುಗಳಲ್ಲಿ ಒಬ್ಬನೇ ಒಬ್ಬ ವಿದ್ಯಾರ್ಥಿ ತರಗತಿಗೆ ಹಾಜರಾಗದೆ ಉಪನ್ಯಾಸಕರು ನಿರಾಸೆ ಅನುಭವಿಸಬೇಕಾಯಿತು. ಮೈಸೂರು ವಿವಿಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದ ಕಾರಣ ಇಡೀ ಗಂಗೋತ್ರಿ ಬಿಕೋ ಎನ್ನುತ್ತಿತ್ತು. ವಿದ್ಯಾರ್ಥಿಗಳಿಗಾಗಿ ಕಾಯುತ್ತಿದ್ದ ಉಪನ್ಯಾಸಕರು ಕೊನೆಗೆ ಸಂಜೆ 4 ಗಂಟೆ ನಂತರ ಮನೆಗೆ ತೆರಳಿದರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಇದೇ ಪರಿಸ್ಥಿತಿ ಇತ್ತು.

 ಅತಿಥಿ ಉಪನ್ಯಾಸಕರಿಲ್ಲದೆ ಸಮಸ್ಯೆ

ಹಾವೇರಿ: ಕಾಲೇಜು ಆರಂಭವಾಗಿದ್ದರೂ ಅತಿಥಿ ಉಪನ್ಯಾಸಕರಿಲ್ಲದೆ ಅನೇಕ ಕಡೆ ತರಗತಿ ನಡೆಸಲಾಗದ ಸ್ಥಿತಿ ಇದೆ. ಅನೇಕ ಸರ್ಕಾರಿ ಕಾಲೇಜುಗಳು ಅತಿಥಿ ಉಪನ್ಯಾಸಕರನ್ನೇ ನೆಚ್ಚಿಕೊಂಡಿದೆ. ಈಗ ಕಾಲೇಜು ಪುನಾರಂಭಗೊಂಡರೂ ಅತಿಥಿ ಉಪನ್ಯಾಸಕರನ್ನು ಸರ್ಕಾರ ನೇಮಿಸದ್ದರಿಂದ ಸಮಸ್ಯೆಯಾಗಿದೆ. ಹಾವೇರಿಯ ಮಹಿಳಾ ಪದವಿ ಕಾಲೇಜಿನಲ್ಲಿ ಒಬ್ಬರೂ ಕಾಯಂ ಉಪನ್ಯಾಸಕರಿಲ್ಲ. ಮಂಗಳವಾರದಿಂದ ತರಗತಿಗೆ ಅವಕಾಶ ನೀಡಲಾಗಿದ್ದರೂ ಬಿಕಾಂ ತರಗತಿ ನಡೆಸಲು ಅತಿಥಿ ಉಪನ್ಯಾಸಕರೇ ಇಲ್ಲ. ಇದೇ ರೀತಿ ರಾಜ್ಯದ ಹಲವು ಸರ್ಕಾರಿ ಪದವಿ ಕಾಲೇಜುಗಳ ಸ್ಥಿತಿ ಇದೆ.

click me!