ಬಂಡೀಪುರ ಸುತ್ತಮುತ್ತಲಿನ 140 ಗ್ರಾಮಗಳ ಶಾಲಾ ಮಕ್ಕಳಿಗೆ ಉಚಿತ ಸಫಾರಿ ಹಾಗೂ ಕಾರ್ಯಾಗಾರ, 10 ಸಾವಿರಕ್ಕೂ ಹೆಚ್ಚು ಶಾಲಾ ಮಕ್ಕಳಿಗೆ ವನ್ಯಜೀವಿ ಸಂರಕ್ಷಣೆ ಜಾಗೃತಿಗಾಗಿ ವಿವಿಧ ಕಾರ್ಯಕ್ರಮ ವನ್ನೊಳಗೊಂಡ ಬಂಡೀಪುರ ಯುವ ಮಿತ್ರ
ವರದಿ-ಪುಟ್ಟರಾಜು. ಆರ್. ಸಿ. ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ
ಚಾಮರಾಜನಗರ(ಜ.03): ಅದು ರಾಜ್ಯದಲ್ಲೇ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ರಾಷ್ಟ್ರೀಯ ಉದ್ಯಾನವನ. ಇದೀಗ ಈ ರಾಷ್ಟ್ರೀಯ ಉದ್ಯಾನವನಕ್ಕೆ 50 ರ ಸಂಭ್ರಮ. ಈ ಕಾರಣಕ್ಕಾಗಿಯೇ ಕೇಂದ್ರ ಸರ್ಕಾರದ ಮಹತ್ವದ ಕಾರ್ಯಾಗಾರಗಳು ನಡೀತಿವೆ. ಜೊತೆಗೆ ಹೊಸ ಯೋಜನೆಗಳು ಅನುಷ್ಠಾನಗೊಳ್ಳುತ್ತವೆ. ಮಕ್ಕಳಲ್ಲಿ ವನ್ಯ ಪ್ರಾಣಿಗಳ ಬಗ್ಗೆ ಅರಿವು ಮೂಡಿಸಲು ಯುವಮಿತ್ರ ಯೋಜನೆ ಜಾರಿಗೆ ತಂದಿದ್ದಾರೆ. ಈ ಕುರಿತ ಯೋಜನೆಯ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ ನೋಡಿ..
undefined
ಇದು ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನ. ಅರಣ್ಯ ಇಲಾಖೆ ಜಾರಿಗೆ ತಂದಿರುವ "ಬಂಡೀಪುರ ಯುವಮಿತ್ರ" ಯೋಜನೆಗೆ ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್ ಚಾಲನೆ ನೀಡಿದ್ರು. ಬಂಡಿಪುರ ರಾಷ್ಟ್ರೀಯ ಉದ್ಯಾನವಾಗಿ 50 ವರ್ಷ ಕಳೆಯಿತು. ಇದನ್ನು ಸಾರ್ಥಕಗೊಳಿಸಲು ಬಂಡಿಪುರ ಅರಣ್ಯಾಧಿಕಾರಿಗಳು ಸರ್ಕಾರಿ ಶಾಲಾ ಮಕ್ಕಳಿಗೆ ಅರಣ್ಯ ಪರಿಚಯಿಸಲು ಸಫಾರಿ ವ್ಯವಸ್ಥೆ ಮಾಡಿದಾರೆ. ಮೊದಲ ಹಂತದಲ್ಲಿ ಬಂಡೀಪುರ ಸುತ್ತಮುತ್ತ ಇರುವ 140 ಗ್ರಾಮಗಳ ಶಾಲೆಗಳ ಮಕ್ಕಳಿಗೆ ಉಚಿತವಾಗಿ ಸಫಾರಿ ವ್ಯವಸ್ಥೆ ಕಲ್ಪಿಸಿ, ನಂತರ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಶಾಲಾ ವನ್ಯಜೀವಿ ಸಂರಕ್ಷಣೆ ಹಾಗೂ ಮಕ್ಕಳಿಗೆ ಕಾಡಿನ ಬಗ್ಗೆ ಅರಿವು, ಬಂಡೀಪುರದ ಮಹತ್ವ, ಮಾನವ ಮತ್ತು ಕಾಡು ಪ್ರಾಣಿಗಳ ಸಂಘರ್ಷಗಳ ಬಗ್ಗೆ ಮಾಹಿತಿ ಹಾಗೂ ಅರಣ್ಯ ಸಂಬಂಧಿತ ವಿಚಾರಗಳನ್ನು ಮಕ್ಕಳಿಗೆ ತಿಳಿಹೇಳುವ ಕೆಲಸ ಮಾಡಲಾಗ್ತಿದೆ. ವರ್ಷ ವಿಡೀ ಸಫಾರಿ ಕಾರ್ಯಾಗಾರ ಇನ್ನಿತರ ಕಾರ್ಯಕ್ರಮಗಳನ್ನೊಳಗೊಂಡ ಬಂಡಿಪುರ ಯುವಮಿತ್ರ ಯೋಜನೆ ಜಾರಿಗೆ ತಂದಿದ್ದು ವಿಧ್ಯಾರ್ಥಿಗಳ ಸಫಾರಿಗಾಗಿಯೇ ಎರಡು ವಾಹನಗಳನ್ನು ಮೀಸಲಿಡಲಾಗಿದ್ದು ಭಾರತದಲ್ಲಿಯೇ ಇದೇ ಮೊದಲ ಬಾರಿಗೆ ಇಂತಹ ಯೋಜನೆ ಜಾರಿಗೆ ತಂದಿರುವ ಹೆಗ್ಗಳಿಕೆಗೆ ಬಂಡೀಪುರದ ಅರಣ್ಯ ಅಧಿಕಾರಿಗಳು ಪಾತ್ರರಾಗಿದ್ದಾರೆ.
Chamarajanagar: ಜಿಲ್ಲೆಯಲ್ಲಿ ಸಂಚಲನ ತಂದ ಸೋಮಣ್ಣ; ದೂರವಾಗುತ್ತಿರುವ ಧ್ರುವನಾರಾಯಣ!
ಇನ್ನು ಸೋಮವಾರದಿಂದ ಶುಕ್ರವಾರದವರೆಗೂ ಸಫಾರಿ ನಡೆಸಲಾಗುತ್ತದೆ. ಒಂದು ದಿನ ಒಂದು ಶಾಲೆಯ ಮಕ್ಕಳಿಗೆ ಆದ್ಯತೆ ನೀಡಲಾಗುತ್ತದೆ. ಇಂದು ಗುಂಡ್ಲುಪೇಟೆಯ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲಾ ಮಕ್ಕಳು ಸಫಾರಿ ಮಾಡಿದ್ರು. ಇನ್ನು ಬಂಡಿಪುರ ಯುವಮಿತ್ರ ಯೋಜನೆ ಆರಂಭ ದಿನಕ್ಕೆ ಸಾಕ್ಷಿಯಾದ ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದ್ರು. ಚಾಮರಾಜನಗರ ಜಿಲ್ಲೆಯಲ್ಲಿದ್ದರೂ ಪರಿಸರ ವೈವಿಧ್ಯದ ಮಾಹಿತಿ ಇರಲಿಲ್ಲ. ಶಿಕ್ಷಕರು ಹಾಗೂ ಅರಣ್ಯಾಧಿಕಾರಿಗಳ ಮುತುವರ್ಜಿಯಿಂದ ಕಾಡು ನೋಡುವಂತಾಯಿತು. ಇಲ್ಲಿನ ಮರ-ಗಿಡ, ಪಕ್ಷಿ ಪ್ರಾಣಿಗಳು ನಮ್ಮನ್ನ ಬೇರೆ ಲೋಕಕ್ಕೆ ಕರೆದೊಯ್ದವು. ಪರಿಸರ ಉಳಿಸಬೇಕು ಅದಕ್ಕಾಗಿ ಸ್ವಲ್ಪವಾದರೂ ಶ್ರಮಿಸಬೇಕು ಎಂಬ ಮಾಹಿತಿಯನ್ನ ಈ ದಿನ ಕಲಿಸಿದೆ ಎಂದು ತಮ್ಮ ಅನುಭವ ಹಂಚಿಕೊಂಡರು ವಿದ್ಯಾರ್ಥಿಗಳು.
ಒಟ್ಟಾರೆ ಅರಣ್ಯ ಇಲಾಖೆ ಇಂತಹದೊಂದು ಮಹತ್ವದ ಯೋಜನೆ ಜಾರಿಗೆ ತಂದಿರುವುದು ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ. ಈ ಬಂಡೀಪುರ ಯುವ ಮಿತ್ರ ಯೋಜನೆಯಿಂದ ಮಕ್ಕಳು ಪರಿಸರ ಅರಣ್ಯದ ಬಗ್ಗೆ ಮತ್ತಷ್ಟು ಕಾಳಜಿ ಬೆಳಸಿಕೊಳ್ಳಲಿ. ಅದರ ಜೊತೆಗೆ ರಾಜ್ಯದ ಎಲ್ಲಾ ಮಕ್ಕಳಿಗೂ ಕೂಡ ಕಾಡು ನೋಡುವ ಭಾಗ್ಯ ಸಿಗಲಿ ಅಂತಾ ಹಾರೈಸೋಣ.