ವಿಪರೀತ ಮಳೆಯ ಕಾರಣ ಕೋಲಾರ ಜಿಲ್ಲೆಯಲ್ಲಿ ಬಹುತೇಕ ಕೆರೆಗಳು ಭರ್ತಿಯಾಗಿ ಕೋಡಿ ಹರಿಯುತ್ತಿದೆ. ಮಳೆಯ ಎಫೆಕ್ಟ್ ಸರ್ಕಾರಿ ಶಾಲೆಯ ಮಕ್ಕಳಿಗೂ ತಟ್ಟಿದೆ. ಮಕ್ಕಳು ನೀರಿನಲ್ಲೇ ಕುಳಿತು ಪಾಠ ಕೇಳುವ ಸ್ಥಿತಿ ನಿರ್ಮಾಣವಾಗಿದೆ.
ವರದಿ : ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್
ಕೋಲಾರ (ಆ.3): ಕೋಲಾರ ಜಿಲ್ಲೆಯಲ್ಲಿ ಕಳೆದ ವರ್ಷದಂತೆ ಈ ಬಾರಿಯೂ ನಿರೀಕ್ಷೆಗೂ ಮೀರಿ ಮಳೆ ಸುರಿಯುತ್ತಿದೆ. ಜಿಲ್ಲೆಯ ಬಹುತೇಕ ಕೆರೆಗಳು ಭರ್ತಿಯಾಗಿ ಕೋಡಿ ಹರಿಯುತ್ತಿದೆ, ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಮೇಲೆ ಕೆರೆಯ ನೀರು ಹರಿಯುವ ಮೂಲಕ ಸಂಪರ್ಕವೂ ಕಡಿವಾಗಿದ್ದು,ಗ್ರಾಮಸ್ಥರು ಹಾಗೂ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಈ ಬಾರಿಯ ಮಳೆ ಕೇವಲ ವಾಹನ ಸವಾರರಿಗೆ ಹಾಗೂ ರೈತರಿಗೆ ಮಾತ್ರ ತೊಂದರೆ ನೀಡಿಲ್ಲ. ಬದಲಿಗೆ ಮಳೆಯ ಎಫೆಕ್ಟ್ ಸರ್ಕಾರಿ ಶಾಲೆಯ ಮಕ್ಕಳಿಗೂ ತಟ್ಟಿದೆ. ಸತತವಾಗಿ ನಾಲ್ಕು ರಾತ್ರಿಗಳು ಧಾರಾಕಾರವಾಗಿ ಮಳೆ ಸುರಿದ ಪರಿಣಾಮ ಸರ್ಕಾರಿ ಶಾಲೆಯ ಕೊಠಡಿ ಒಳಗೆ ನೀರು ತುಂಬಿ ಮಕ್ಕಳು ನೀರಿನಲ್ಲೇ ಕುಳಿತು ಪಾಠ ಕೇಳುವ ಸ್ಥಿತಿ ನಿರ್ಮಾಣವಾಗಿದೆ. ಕೋಲಾರ ನಗರಲ್ಲಿರುವ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ನೀರು ತುಂಬಿಕೊಂಡು ಪಕ್ಕದಲ್ಲೇ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಗಳಿಗೆ ನುಗ್ಗಿದೆ. ಪರಿಣಾಮ ಶಾಲೆಯಲ್ಲಿದ್ದ ಪಠ್ಯಪುಸ್ತಕಗಳು ಎಲ್ಲವೂ ನೀರಿನಲ್ಲಿ ನೆನೆದು ಹೋಗಿದ್ದು,ಯಾವ ಸಮಯದಲ್ಲಿ ಬೇಕಾದ್ರೂ ಮೇಲ್ಚಾವಣಿ ಕುಸಿದು ಬೀಳುವ ಆತಂಕದಲ್ಲಿದೆ.ಶಾಲೆಯಲ್ಲಿ 60 ಕ್ಕೂ ಹೆಚ್ಚು ಮಕ್ಕಳಿದ್ದು ಇರುವ ಆರು ಕೊಠಡಿಗಳ ಪೈಕಿ ಎರಡು ಕೊಠಡಿಗಳು ಮಾತ್ರ ಉತ್ತಮ ಗುಣಮಟ್ಟದಲ್ಲಿದೆ.ಸದ್ಯ ಶಾಲೆಯ ಮಕ್ಕಳು, ಶಿಕ್ಷಕರು ಹಾಗೂ ಪೋಷಕರು ಆತಂಕದಲ್ಲಿದ್ದು, ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಭಯಪಡ್ತಿದ್ದಾರೆ.
ಕೋಲಾರ ಹೊರಹೊಲಯದಲ್ಲಿರುವ ಕೋಲಾರಮ್ಮ ಕೆರೆ ಭರ್ತಿಯಾಗಿ ಹರಿಯುತ್ತಿರೋದ್ರಿಂದ ಕೋಡಿ ಕಣ್ಣೂರು ಹಾಗೂ ಗದ್ದೆ ಕಣ್ಣೂರು ಮಾರ್ಗದ ರಸ್ತೆಗಳು ಸಂಪೂರ್ಣ ಜಾಲವೃತವಾಗಿದ್ದು ವಾಹನ ಸವಾರರು ಪಡಬಾರದು ಪಾಡು ಪಡ್ತಿದ್ದಾರೆ. ಬೇರೆ ಯಾವುದೇ ಪರ್ಯಾಯ ಮಾರ್ಗವಿಲ್ಲದ ಕಾರಣ ಜಾಲವೃತವಾಗಿರುವ ರಸ್ತೆಯ ಮೇಲೆ ವಾಹನಗಳು ಸಂಚಾರ ಮಾಡಿರುವ ಪರಿಣಾಮ ಇಂಜಿನ್ ಗಳಿಗೆ ನೀರು ನುಗ್ಗಿ ವಾಹನಗಳು ಕೆಟ್ಟು ಹೋಗಿರುವ ಘಟನೆಗಳು ನಡೆದಿದೆ.
ದೇವರನಾಡಲ್ಲಿ ಗಜೇಂದ್ರನ ಸಾಹಸ: ಉಕ್ಕಿ ಹರಿಯುವ ನದಿ ದಾಟಿದ ಆನೆ, ವಿಡಿಯೋ
ಇನ್ನು ಗದ್ದೆ ಕಣ್ಣೂರು ಭಾಗದಲ್ಲಿ ರಾಜಕಾಲುವೆ ಒತ್ತುವರಿ ಆಗಿರುವ ಪರಿಣಾಮ ನೀರು ಕಾಲುವೆಗೆ ಹೋಗುವ ಬದಲು ರೈತರ ಜಮೀನುಗಳಿಗೆ ನುಗ್ಗಿ ಅನಾಹುವ ಉಂಟುಮಾಡಿದೆ. ಈಗಾಗಲೇ ಪೈರು ಬಂದಿರುವ ರಾಗಿ,ತೊಗರಿ ಹೊಲಗಳಿಗೆ ಹಾಗೂ ಟೊಮೊಟೊ ತೋಟಗಳಿಗೆ ನುಗ್ಗಿ ಸಂಪೂರ್ಣ ಜಾಲವೃತವಾಗಿದೆ.
Karnataka Rain; ರಾಜ್ಯದಲ್ಲಿ ಇನ್ನೂ 5 ದಿನ ಮುಂದುವರೆಯಲಿದೆ ಮಳೆ!
ಇನ್ನು ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿದ ಪರಿಣಾಮ ನೂರಾರು ವರ್ಷ ಹಳೆಯ ಸೇತುವೆ ಕುಸಿದು ಬೀಳುವ ಆತಂಕ ಎದುರಾಗಿದೆ. ಕೋಲಾರ ಹೊರಹೊಲಯದ ಗಾಂಧಿ ನಗರ ಬಳಿ ಇರುವ ಸೇತುವೆ ಶಿಥಿಲವಸ್ಥೆಗೆ ತಲುಪಿದ್ದು,ಕೋಲಾರ ಕೆರೆಗೆ ಅಂಟಿಕೊಂಡಿದೆ. ಈಗಾಗಲೇ ಕೆರೆ ಕೊಡಿ ಹೊಡೆದು ನೀರು ರಭಸವಾಗಿ ಹರಿಯುತ್ತಿರುವ ಪರಿಣಾಮ ಸೇತುವೆಯ ಕೆಳಗೆ ನಿರ್ಮಾಣ ಮಾಡಿದ್ದ ತಡೆ ಗೋಡೆ ಕುಸಿದು ಬಿದ್ದು ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ. ಹಳೆಯ ಸೇತುವೆಯ ಪಕ್ಕದಲ್ಲೇ ಮತ್ತೊಂದು ಸೇತುವೆ ಇದ್ರು ಸಹ ಜನರು ಮಾತ್ರ ಹಳೆಯ ಸೇತುವೆಯ ಮೇಲೆ ಸಂಚರಿಸಿ ಜೀವದ ಜೊತೆ ಚೆಲ್ಲಾಟವಾಡ್ತಿದ್ದಾರೆ. ಜಿಲ್ಲಾಡಳಿತ ಹಾಗೂ ಪೊಲೀಸರು ಎಷ್ಟೇ ಮನವಿ ಮಾಡಿದ್ರು ಸಹ ಸಂಚಾರ ಮಾಡ್ತಿದ್ದು,ಡೋಂಟ್ ಕೇರ್ ಅಂತಿದ್ದಾರೆ. ಯಾವ ಸಮಯದಲ್ಲಿ ಬೇಕಾದ್ರೂ ಸೇತುವೆ ಕುಸಿದು ಬೀಳಬಹುದು ಎಂದು ಪೊಲೀಸರು ರಸ್ತೆಗೆ ಅಡ್ಡಲಾಗಿ ಬ್ಯಾರಿಕೆಡ್ ನಿರ್ಮಾಣ ಮಾಡಿದ್ರು ಸಹ ಜನರು ಮಾತು ಕೇಳ್ತಿಲ್ಲ.