ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವಿದ್ಯಾರ್ಥಿಗಳಿಗೆ ಪದವಿಪೂರ್ವ ಸಾಮಾನ್ಯ ಪ್ರವೇಶ ಪರೀಕ್ಷೆ KCET 2022ಕ್ಕೆ ಅರ್ಜಿ ಸಲ್ಲಿಸಲು ಮತ್ತೊಂದು ಅವಕಾಶ ನೀಡಲು ನಿರ್ಧರಿಸಿದೆ. ಎರಡು ದಿನಗಳ ಕಾಲ ವಿಂಡೋ ಓಪನ್ ಮಾಡಲಿದೆ
ಬೆಂಗಳೂರು (ಮೇ.29): ಕರ್ನಾಟಕ ಪರೀಕ್ಷಾ ಪ್ರಾಧಿಕಾರ ( Karnataka Examinations Authority - KEA) ವಿದ್ಯಾರ್ಥಿಗಳಿಗೆ ಪದವಿಪೂರ್ವ ಸಾಮಾನ್ಯ ಪ್ರವೇಶ ಪರೀಕ್ಷೆ (ಯುಜಿಸಿಇಟಿ) ಅಥವಾ KCET 2022ಕ್ಕೆ ಅರ್ಜಿ ಸಲ್ಲಿಸಲು ಮತ್ತೊಂದು ಅವಕಾಶ ನೀಡಲು ನಿರ್ಧರಿಸಿದೆ. ಈ ಮೊದಲು KCET 2022 ಅರ್ಜಿ ಪ್ರಕ್ರಿಯೆಯನ್ನು ಮೇ 12, 2022 ರಂದು ಮುಕ್ತಾಯಗೊಳಿಸಲಾಗಿತ್ತು.
ಈ ಹಿಂದೆ ಪರೀಕ್ಷೆಗೆ ಅರ್ಜಿ ಸಲ್ಲಿಸದೇ ಇರುವವರು KCET 2022 ಅರ್ಜಿ ನಮೂನೆಗಳನ್ನು ಸಲ್ಲಿಸಲು ಮೇ 29 ಮತ್ತು 30 ರಂದು kea.kar.nic.in ಅಥವಾ cetonline.karnataka.gov.in/kea ಗೆ ಭೇಟಿ ನೀಡಬಹುದು. ಶುಲ್ಕ ಪಾವತಿಸಿದ ನಂತರ, ತಮ್ಮ ಅರ್ಜಿಯಲ್ಲೇನಾದರೂ ಮಾಹಿತಿಯನ್ನು ಪರಿಷ್ಕರಿಸುವುದಿದ್ದರೆ ಅಂಥವರಿಗೇ ಮೇ 2ರಿಂದ 6ವರೆಗೆ ಕಾಲಾವಕಾಶ ನೀಡಲಾಗಿತ್ತು. ಇದೀಗ ಮತ್ತೆ ವಿಂಡೋ ತೆರೆಯಲಾಗಿದ್ದು, ಅಭ್ಯರ್ಥಿಗಳು ಪರಿಷ್ಕರಿಸುವುದಿದ್ದರೆ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು.
ಈ ಹಿಂದೆ ಘೋಷಿಸಲಾದ ಪರೀಕ್ಷಾ ವೇಳಾಪಟ್ಟಿಯಂತೆ, ಕೆಸಿಇಟಿ ಹಾಲ್ ಟಿಕೆಟ್‌ಗಳನ್ನು ಮೇ 30 ರಂದು ಬೆಳಿಗ್ಗೆ 11 ಗಂಟೆಗೆ ಬಿಡುಗಡೆ ಮಾಡಲಾಗುತ್ತದೆ. ವಿದ್ಯಾರ್ಥಿಗಳು ಮತ್ತು ಪೋಷಕರ ಕೋರಿಕೆಯ ಮೇರೆಗೆ ಅಪ್ಲಿಕೇಶನ್ ವಿಂಡೋವನ್ನು ಪುನಃ ತೆರೆಯಲಾಗಿದೆ ಎಂದು ಕೆಇಎ ತಿಳಿಸಿದೆ. ಸೋಮವಾರ ರಾತ್ರಿ 8 ಗಂಟೆಯವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಈಗಾಗಲೇ ಹೆಸರು ನೋಂದಾಯಿಸಿದ ಮತ್ತು ಅರ್ಜಿ ಶುಲ್ಕವನ್ನು ಪಾವತಿಸದ , ಜೊತೆಗೆ ಅರ್ಜಿ ನಮೂನೆಯನ್ನು ಪೂರ್ಣಗೊಳಿಸದಿರುವವರು ಲಾಗಿನ್ ಮಾಡಿ ಪೂರ್ಣಗೊಳಿಸಬಹುದು. ಜೊತೆಗೆ ಪ್ರಾಯೋಗಿಕ ಅರ್ಜಿಯನ್ನು ಭರ್ತಿ ಮಾಡಿದ ಆದರೆ ನಿಜವಾದ ಅರ್ಜಿ ಪ್ರಕ್ರಿಯೆಯಲ್ಲಿ ಭಾಗವಹಿಸದಿರುವವರು ಕೂಡ ಅರ್ಜಿ ಭರ್ತಿ ಮಾಡಬಹುದು ಎಂದಿದೆ.
KCET ಪದವಿಪೂರ್ವ ಎಂಜಿನಿಯರಿಂಗ್, ಫಾರ್ಮಸಿ ಮತ್ತು ಇತರ ಕೆಲವು ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ ರಾಜ್ಯ ಮಟ್ಟದ ಪ್ರವೇಶ ಪರೀಕ್ಷೆಯಾಗಿದೆ. ಇನ್ನು ವೃತ್ತಿಶಿಕ್ಷಣಕ್ಕೆ (Vocational Education) ಪ್ರವೇಶಾವಕಾಶ ಕಲ್ಪಿಸುವ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು (Common Entrance Test - CET) ಈ ಬಾರಿ ಜೂನ್ 16, 17 ಮತ್ತು 18ರಂದು ನಡೆಸಲು ಉದ್ದೇಶಿಸಲಾಗಿದೆ. ಜೂನ್ 18 ರಂದು ಕನ್ನಡ ಪರೀಕ್ಷೆ ನಡೆಯಲಿದೆ.
ಜೂನ್ 16ರಂದು ಬೆಳಿಗ್ಗೆ ಜೀವಶಾಸ್ತ್ರ, ಮಧ್ಯಾಹ್ನ ಗಣಿತ, 17ರಂದು ಬೆಳಿಗ್ಗೆ ಭೌತಶಾಸ್ತ್ರ ಮತ್ತು ಮಧ್ಯಾಹ್ನ ರಸಾಯನಶಾಸ್ತ್ರ ಹಾಗೂ 18ರಂದು ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಸಿಇಟಿ ನಡೆಸಲು ಉದ್ದೇಶಿಸಲಾಗಿದೆ.