SSLC Exam-2: ಶೇ.27.67 ಮಕ್ಕಳು ಪಾಸ್‌, ನಾಲ್ವರು ವಿದ್ಯಾರ್ಥಿಗಳಿಗೆ 625ರಲ್ಲಿ 625 ಅಂಕ

Kannadaprabha News   | Kannada Prabha
Published : Jun 14, 2025, 06:31 AM IST
Karnataka SSLC Exam 2 Result 2025 Out

ಸಾರಾಂಶ

ಇತ್ತೀಚೆಗೆ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆ-2ರ ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು, ಪರೀಕ್ಷೆ ಬರೆದ 3,15,564 ವಿದ್ಯಾರ್ಥಿಗಳ ಪೈಕಿ 87,330 ಮಂದಿ ಉತ್ತೀರ್ಣರಾಗುವ ಮೂಲಕ ಶೇ.27.67ರಷ್ಟು ಫಲಿತಾಂಶ ದಾಖಲಾಗಿದೆ.

ಬೆಂಗಳೂರು (ಜೂ.14): ಇತ್ತೀಚೆಗೆ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆ-2ರ ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು, ಪರೀಕ್ಷೆ ಬರೆದ 3,15,564 ವಿದ್ಯಾರ್ಥಿಗಳ ಪೈಕಿ 87,330 ಮಂದಿ ಉತ್ತೀರ್ಣರಾಗುವ ಮೂಲಕ ಶೇ.27.67ರಷ್ಟು ಫಲಿತಾಂಶ ದಾಖಲಾಗಿದೆ. ಕಳೆದ ಬಾರಿಯ ಪರೀಕ್ಷೆ 2 ಫಲಿತಾಂಶಕ್ಕೆ (ಶೇ.31.2) ಹೋಲಿಸಿದರೆ ಶೇ.4.35ರಷ್ಟು ಕುಸಿತವಾಗಿದೆ. ಫಲಿತಾಂಶ ಉತ್ತಮಗೊಳಿಸಿಕೊಳ್ಳಲು ಮತ್ತೆ ಪರೀಕ್ಷೆ ಬರೆದಿದ್ದ ನಾಲ್ವರು ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದಿದ್ದಾರೆ. ಎಸ್ಸೆಸ್ಸೆಲ್ಸಿ ಪರೀಕ್ಷೆ-1 ಮತ್ತು 2 ಎರಡೂ ಪರೀಕ್ಷೆಗಳ ಸಂಯೋಜಿತ ಒಟ್ಟಾರೆ ಫಲಿತಾಂಶ ಶೇ.71.43ರಷ್ಟಾಗಿದೆ. ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು https://karresults.nic.in ನಲ್ಲಿ ವೀಕ್ಷಿಸಬಹುದು ಎಂದು ತಿಳಿಸಲಾಗಿದೆ.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಯಾವುದೇ ಮುನ್ಸೂಚನೆ ಇಲ್ಲದೆ ಫಲಿತಾಂಶವನ್ನು ಪತ್ರಿಕಾ ಪ್ರಕಟಣೆ ಮೂಲಕ ಬಿಡುಗಡೆ ಮಾಡಿದೆ. ಪರೀಕ್ಷೆ 1ರಲ್ಲಿ ಪಡೆದಿದ್ದ ಫಲಿತಾಂಶ ಉತ್ತಮಪಡಿಸಿಕೊಳ್ಳಲು ಮತ್ತೆ ಪರೀಕ್ಷೆ ಬರೆದಿದ್ದ 11,818 ಮಂದಿಯಲ್ಲಿ 6635(ಶೇ.56.14) ವಿದ್ಯಾರ್ಥಿಗಳ ಫಲಿತಾಂಶ ಹೆಚ್ಚಾಗಿದೆ. ಸರ್ಕಾರಿ ಶಾಲಾ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಪಾಸಾಗಿದ್ದಾರೆ. 1,25,205 ಮಂದಿ ಸರ್ಕಾರಿ ಶಾಲಾ ಮಕ್ಕಳಲ್ಲಿ 45,893(ಶೇ.36.65) ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಅನುದಾನಿತ ಶಾಲೆಗಳ 84,120 ವಿದ್ಯಾರ್ಥಿಗಳಲ್ಲಿ 16,611(ಶೇ.19.75), ಅನುದಾನರಹಿತ ಶಾಲೆಗಳ 69,030 ವಿದ್ಯಾರ್ಥಿಗಳಲ್ಲಿ 22,093 (ಶೇ.32) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಎಂದಿನಂತೆ ಹೆಣ್ಣುಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಅಂದರೆ ಶೇ.35.43 ರಷ್ಟು ಮಂದಿ ಪಾಸಾಗಿದ್ದಾರೆ. ಗಂಡುಮಕ್ಕಳ ಫಲಿತಾಂಶ ಶೇ.27.11 ರಷ್ಟಿದೆ. ನಗರ ವಿದ್ಯಾರ್ಥಿಗಳು ಶೇ.29.65 ರಷ್ಟು, ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಶೇ.30.91 ರಷ್ಟು ಮಂದಿ ಪಾಸಾಗಿದ್ದಾರೆ.

ನಾಲ್ವರಿಗೆ 625 ಅಂಕ: ಎಸ್ಸೆಸ್ಸೆಲ್ಸಿ ಪರೀಕ್ಷೆ-1ರಲ್ಲಿ ಕೆಲವೇ ಅಂಕಗಳಿಂದ ಶೇ.100ರಷ್ಟು ಫಲಿತಾಂಶ ಪಡೆಯುವಲ್ಲಿ ವಂಚಿತರಾಗಿದ್ದ ನಾಲ್ವರು ವಿದ್ಯಾರ್ಥಿಗಳು ಪರೀಕ್ಷೆ 2ನಲ್ಲಿ 625ಕ್ಕೆ 625 ಅಂಕ ಪಡೆದುಕೊಂಡಿದ್ದಾರೆ. ವಿಜಯನಗರ ಜಿಲ್ಲೆ ಹಗರನೂರಿನ ಜ್ಞಾನ ಸಿರಿ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಲಕ್ಷ್ಮಿ ಬಿ.ಬಿದರಹಳ್ಳಿ, ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ಹಾಲಾಡಿ ಸರ್ಕಾರಿ ಪ್ರೌಢ ಶಾಲೆಯ ಎಸ್‌.ಶ್ರೀರಾಮ ಶೆಟ್ಟಿ, ಶಿವಮೊಗ್ಗ ಜಿಲ್ಲೆ ಶರಾವತಿ ನಗರದ ಆದಿಚುಂಚನಗಿರಿ ಪ್ರೌಢಶಾಲೆಯ ಸಂಜನಾ ಎಸ್‌. ಮತ್ತು ತುಮಕೂರು ಜಿಲ್ಲೆಯ ಪಂಚನಾಥರಾಯರಪಾಳ್ಯದ ಡಾನ್‌ ಬಾಸ್ಕೊ ಪ್ರೌಢ ಶಾಲೆಯ ಶಿವೇಂದು ಶ್ರೀಕರ್‌ ತಲಾ 625 ಅಂಕಗಳನ್ನು ಪಡೆದಿದ್ದಾರೆ. ಈ ವಿದ್ಯಾರ್ಥಿಗಳು ಪರೀಕ್ಷೆ 1ರಲ್ಲಿ ಕ್ರಮವಾಗಿ 621, 619, 624 ಮತ್ತು 623 ಅಂಕ ಗಳಿಸಿದ್ದರು.

ಸ್ಕ್ಯಾನ್‌ ಪ್ರತಿ, ಮರು ಮೌಲ್ಯಮಾಪನಕ್ಕೆ ಅರ್ಜಿ: ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿ ಪಡೆಯಲು ಶುಕ್ರವಾರದಿಂದಲೇ ಅರ್ಜಿ ಸಲ್ಲಿಸಬಹುದಾಗಿದ್ದು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಜೂ.17 ಹಾಗೂ ಸ್ಕ್ಯಾನ್ ಪ್ರತಿಯನ್ನು ಡೌನ್‌ಲೋಡ್ ಮಾಡಿಕೊಳ್ಳಲು ಜೂ.18ರವರೆಗೆ ಅವಕಾಶ ಕಲ್ಪಿಸಲಾಗಿದೆ. ಉತ್ತರ ಪತ್ರಿಕೆಗಳ ಮರು ಎಣಿಕೆ ಮತ್ತು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಜೂ.16ರಿಂದ 19ರವರೆಗೆ ಅವಕಾಶ ನೀಡಲಾಗಿದೆ. ವಿದ್ಯಾರ್ಥಿಗಳು ಬ್ಯಾಂಕ್ ಮೂಲಕ ಚಲನ್ ಡೌನ್‌ಲೋಡ್ ಮಾಡಿಕೊಂಡು ಜೂ.16ರಿಂದ 20ರವರೆಗೆ ಹಣ ಪಾವತಿಸಬಹುದಾಗಿದೆ.

ಸಿಎಂ ಭಯಕ್ಕೆ ಗ್ರೇಸ್‌ ಅಂಕದ ಮಾಹಿತಿ ಮುಚ್ಚಿಟ್ರಾ ಸಚಿವರು?: ಎಸ್ಸೆಸ್ಸೆಲ್ಸಿ ಪರೀಕ್ಷೆ 2ರ ಫಲಿತಾಂಶ ಪ್ರಕಟಗೊಂಡರೂ ಪರೀಕ್ಷೆ 1ರಲ್ಲಿ ಈ ಬಾರಿ ಎಷ್ಟು ವಿದ್ಯಾರ್ಥಿಗಳಿಗೆ ಶೇ.10ರಷ್ಟು ಗ್ರೇಸ್‌ ಅಂಕ ನೀಡಿ ಪಾಸು ಮಾಡಲಾಗಿದೆ ಎನ್ನುವ ಮಾಹಿತಿಯನ್ನು ಮಾತ್ರ ಮಂಡಳಿ ಅಧಿಕಾರಿಗಳು ಬಹಿರಂಗಪಡಿಸುತ್ತಿಲ್ಲ. ಮಾಧ್ಯಮಗಳು ಈ ಬಗ್ಗೆ ಎಷ್ಟೇ ಪ್ರಶ್ನಿಸಿದರೂ ಮುಚ್ಚಿಡುತ್ತಲೇ ಬರುತ್ತಿರುವ ಅಧಿಕಾರಿಗಳ ನಡೆ ಹಲವು ಅನುಮಾನಗಳಿಗೆ ಕಾರಣವಾಗಿದೆ.

2023-24ನೇ ಸಾಲಿನಲ್ಲಿ 1.70 ಲಕ್ಷ ವಿದ್ಯಾರ್ಥಿಗಳನ್ನು ಶೇ.20ರಷ್ಟು ಗ್ರೇಸ್‌ ಅಂಕ ನೀಡಿ ಪಾಸು ಮಾಡಲಾಗಿತ್ತು. ಶೇ.10ರಷ್ಟು ಗ್ರೇಸ್‌ ಅಂಕ ನೀಡಲು ಇದ್ದ ಅವಕಾಶವನ್ನು ಏಕಾಏಕಿ ಶೇ.20ಕ್ಕೆ ಹೆಚ್ಚಿಸುವ ಮಂಡಳಿಗೆ ಒಪ್ಪಿಗೆ ನೀಡಿದ್ದ ಶಿಕ್ಷಣ ಸಚಿವ ಮಧು ಬಂಗಾರಪ್ಪ ನಂತರ ಮುಖ್ಯಮಂತ್ರಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೇ ಕಾರಣಕ್ಕೆ 2024-25ರಲ್ಲಿ ಮಾತ್ರ ಎಷ್ಟು ಮಕ್ಕಳನ್ನು ಗ್ರೇಸ್‌ ಅಂಕ ನೀಡಿ ಪಾಸು ಮಾಡಲಾಗಿದೆ ಎನ್ನುವುದನ್ನು ಬಹಿರಂಗಪಡಿಸದಂತೆ ಮಂಡಳಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಉನ್ನತ ಮೂಲಗಳು ಹೇಳುತ್ತಿವೆ.

PREV
Read more Articles on
click me!

Recommended Stories

SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ
ಖಾಸಗಿ ಶಾಲೆಗಳಿಗೆ ಸೆಡ್ಡು, ಮುಂದಿನ ವರ್ಷದಿಂದ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆ ಕಾರ್ಯಾರಂಭ