ಬದಲಾದ NMKRV ಕಾಲೇಜು ಹೆಸರು, ಗಂಡು ಮಕ್ಕಳಿಗೂ ಶಿಕ್ಷಣ ನೀಡುವತ್ತ ಹೊಸ ಹೆಜ್ಜೆ

Published : Jun 12, 2025, 04:53 PM ISTUpdated : Jun 12, 2025, 05:11 PM IST
nmkrv bengaluru

ಸಾರಾಂಶ

NMKRV ಮಹಿಳಾ ಕಾಲೇಜು ಈಗ NMKRV ಕಾಲೇಜು ಎಂದು ಮರುನಾಮಕರಣಗೊಂಡು, 2025-26ರಿಂದ ಸಹ-ಶಿಕ್ಷಣ ಸಂಸ್ಥೆಯಾಗಿ ಪರಿವರ್ತನೆಗೊಳ್ಳಲಿದೆ. ಕಾಲೇಜಿನಲ್ಲಿ ಈಗಾಗಲೇ 60 ಹುಡುಗರನ್ನು ದಾಖಲಿಸಲಾಗಿದ್ದು, ಮುಂದಿನ ವರ್ಷಗಳಲ್ಲಿ ಹುಡುಗರಿಗೆ ಮೀಸಲಾದ ಸೀಟುಗಳ ಸಂಖ್ಯೆ ಹೆಚ್ಚಾಗಲಿದೆ.

ಬೆಂಗಳೂರು: NMKRV ಮಹಿಳಾ ಕಾಲೇಜು ಈಗ “NMKRV ಕಾಲೇಜು” ಎಂದು ತನ್ನ ಹೆಸರು ಬದಲಾವಣೆ ಮಾಡಿ ರೂಪಾಂತರಗೊಂಡಿದೆ. ಮಹಿಳಾ ಎಂಬ ಪದವನ್ನು ತೆಗೆದು ಹಾಕಿದ್ದು ಗಂಡು ಮಕ್ಕಳಿಗೂ ಶಿಕ್ಷಣ ನೀಡಲು ಮುಂದಾಗಿದೆ. ಮೌಂಟ್ ಕಾರ್ಮೆಲ್ ಕಾಲೇಜು ತನ್ನ ಪದವಿಪೂರ್ವ ಕೋರ್ಸ್‌ಗಳಿಗೆ ಹುಡುಗರನ್ನು ಸೇರಿಸಿಕೊಳ್ಳಲು ಆರಂಭಿಸಿದ ಒಂದು ವರ್ಷದ ನಂತರ, ಜಯನಗರದಲ್ಲಿರುವ ಈ ಖ್ಯಾತ ಕಾಲೇಜು ಕೂಡ 2025–26 ಶೈಕ್ಷಣಿಕ ವರ್ಷದಿಂದ ಸಹ-ಶಿಕ್ಷಣ ಸಂಸ್ಥೆಯಾಗಿ ಪರಿವರ್ತನೆಯಾಗಿದೆ. ಮೊದಲ ಬಾರಿಗೆ ಹುಡುಗರಿಗೆ ವಿದ್ಯಾರ್ಥಿ ಬಲದ 10% ಸೀಟುಗಳನ್ನು ಮೀಸಲಿಡಲಾಗಿದೆ. ಈಗಾಗಲೇ 60 ಹುಡುಗರನ್ನು ದಾಖಲಿಸಲಾಗಿದ್ದು, ಈ ವರ್ಷದ ಅರ್ಜಿ ಸಂಖ್ಯೆ ನಿರೀಕ್ಷೆಗೂ ಮೀರುವಂತೆ ಬಂದಿದೆ. ಮುಂದಿನ ವರ್ಷಗಳಲ್ಲಿ ಹುಡುಗರಿಗೆ ಮೀಸಲಾದ ಸೀಟುಗಳ ಪ್ರಮಾಣ ಹೆಚ್ಚಿಸಲಾಗುವುದು ಎಂದು ತಿಳಿದುಬಂದಿದೆ.

ಕಾಲಕ್ಕೆ ತಕ್ಕಂತೆ ಬದಲಾಗುತ್ತಿರುವಂಥ College

ಕೆಲವು ಕೋರ್ಸ್‌ಗಳಿಗೆ ವಿದ್ಯಾರ್ಥಿಗಳ ಪ್ರವೇಶವಿಲ್ಲದಿರುವುದು ಹಾಗೂ ಹುಡುಗಿಯರಿಗೆ ಮಾತ್ರ ಮೀಸಲಾಗಿರುವ ಕಾಲೇಜುಗಳ ಜನಪ್ರಿಯತೆ ಕುಗ್ಗುತ್ತಿರುವುದು ಸಹ-ಶಿಕ್ಷಣದತ್ತ ಸಾಗಲು ಪ್ರೇರಣೆಯಾಯಿತು. ಇತ್ತೀಚಿನ ವಿದ್ಯಾರ್ಥಿಗಳು ಸಹ-ಶಿಕ್ಷಣದ ಸನ್ನಿವೇಶವನ್ನು ಹೆಚ್ಚು ಇಚ್ಛಿಸುತ್ತಿದ್ದಾರೆ. ಈ ಕಾರಣದಿಂದಲೇ ನಮ್ಮ ಕಾಲೇಜು ಸಹ-ಶಿಕ್ಷಣಕ್ಕೆ ಬದಲಾಯಿಸಲು ನಿರ್ಧರಿಸಿದ್ದೇವೆ ಎಂದು ಪ್ರಾಂಶುಪಾಲರಾದ ಸ್ನೇಹಲತಾ ಜಿ ನಾಡಿಗೇರ್ ತಿಳಿಸಿದರು.

ಪ್ರಸ್ತುತ ಕಾಲೇಜಿನಲ್ಲಿ 14 ಕೋರ್ಸ್‌ಗಳಲ್ಲಿ ಸುಮಾರು 2,000 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯ ಹಾಗೂ ಉನ್ನತ ಶಿಕ್ಷಣ ಇಲಾಖೆಯಿಂದ ಸಹ-ಶಿಕ್ಷಣ ಸಂಸ್ಥೆಯಾಗಿ ಮಾನ್ಯತೆ ಪಡೆದ ನಂತರ ನಾವು ಹೊಸ ಹೆಸರಿನಲ್ಲಿ, ‘NMKRV ಕಾಲೇಜು’ ಎಂದು ಮರುನಾಮಕರಣ ಮಾಡಿದ್ದೇವೆ. ಈ ಬದಲಾವಣೆಯ ಕುರಿತು ಸ್ಥಳೀಯ ಮಟ್ಟದಲ್ಲಿ ಜನರಿಗೆ ಮಾಹಿತಿ ನೀಡುತ್ತಿದ್ದೇವೆ ಮತ್ತು ವೆಬ್‌ಸೈಟ್ ನವೀಕರಣ ಸೇರಿದಂತೆ ಸಂಪೂರ್ಣ ಪ್ರಮಾಣದಲ್ಲಿ ತಯಾರಿ ನಡೆಸುತ್ತಿದ್ದೇವೆ ಎಂದು ಅವರು ತಿಳಿಸಿದರು.

ವ್ಯವಸ್ಥಾಪಕ ಟ್ರಸ್ಟ್‌ನ ಅಧ್ಯಕ್ಷ ಎಂ.ಪಿ. ಶ್ಯಾಮ್ ಮಾಹಿತಿ ನೀಡಿ, ನಾವು ಕಾಲಚಲನೆಯಂತೆ ನಮ್ಮ ಸಂಸ್ಥೆಗಳನ್ನು ಬದಲಾಯಿಸಿಕೊಂಡು ಬರುತ್ತಿದ್ದೇವೆ. ಹುಡುಗಿಯರಿಗೆ ಮೀಸಲಾಗಿರುವ ಶಿಕ್ಷಣ ಸಂಸ್ಥೆಗಳ ಸಂಖ್ಯೆ ಇಳಿಯುತ್ತಿದೆ. ಈಗಾಗಲೇ 2018 ರಲ್ಲಿ ಜೂನಿಯರ್ ಕಾಲೇಜನ್ನು ಸಹ-ಶಿಕ್ಷಣ ಸಂಸ್ಥೆಯಾಗಿ ಪರಿವರ್ತಿಸಿದಾಗ ಉತ್ತಮ ಪ್ರತಿಕ್ರಿಯೆ ದೊರೆತಿತ್ತು. ಆ ಅನುಭವದ ಆಧಾರದ ಮೇಲೆ ಪದವಿ ಮಟ್ಟದ ಕಾಲೇಜಿಗೂ ಸಹ-ಶಿಕ್ಷಣ ವ್ಯವಸ್ಥೆ ತರಲಾಗಿದೆ.

ಸ್ಥಾಪನೆಯ ಮೂಲ ಉದ್ದೇಶ

NMKRV (ನಾಗರತ್ನಮ್ಮ ಮೇದಾ ಕಸ್ತೂರಿರಂಗ ರಾಷ್ಟ್ರೀಯ ವಿದ್ಯಾಲಯ) ಕಾಲೇಜು 1973 ರಲ್ಲಿ ಸ್ಥಾಪನೆಯಾಯಿತು. “ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವುದು ಎಂದರೆ ಒಂದು ಸಂಪೂರ್ಣ ಕುಟುಂಬವನ್ನು ಶಿಕ್ಷಣದ ಬೆಳಕಿಗೆ ತರಿಸುವಂತದ್ದು” ಎಂಬ ನಂಬಿಕೆಯೊಂದಿಗೆ, ಮೇದಾ ಕಸ್ತೂರಿರಂಗ ಸೆಟ್ಟಿ ಮತ್ತು ನಾಗರತ್ನಮ್ಮ ಮೇದಾ ಕಸ್ತೂರಿರಂಗ ಸೆಟ್ಟಿ ಅವರು ಈ ಕಾಲೇಜನ್ನು ಆರಂಭಿಸಿದರು. ಈ ಕಾಲೇಜು ಮಹಿಳಾ ಅಧ್ಯಯನ ವಿಭಾಗ ಪ್ರಾರಂಭಿಸಿದ ಮೊದಲ ಕಾಲೇಜುಗಳಲ್ಲಿ ಒಂದಾಗಿತ್ತು ಮತ್ತು ಬೆಂಗಳೂರಿನ ಶೈಕ್ಷಣಿಕ ವಲಯದಲ್ಲಿ ತನ್ನದೇ ಆದ ಪ್ರಮುಖ ಸ್ಥಾನ ಪಡೆದಿತ್ತು.

ಹಳೆಯ ವಿದ್ಯಾರ್ಥಿನಿ ಹಾಗೂ ಪ್ರಸ್ತುತ ಅಧ್ಯಾಪಕಿಯಾಗಿರುವ ಶಿಲ್ಪಾ ಪಿ ಮಾತನಾಡುತ್ತಾ, “ಅವಕಾಶಗಳಿಲ್ಲದ ಕಾಲದಲ್ಲಿ ಹೆಣ್ಣುಮಕ್ಕಳಿಗೆ ಉನ್ನತ ಶಿಕ್ಷಣ ನೀಡುವುದು ಸಂಸ್ಥಾಪಕರ ಧ್ಯೇಯವಾಗಿತ್ತು. ಆ ಸಮಯದಲ್ಲಿ, ಈ ಭಾಗದಲ್ಲಿ ಹೆಣ್ಣುಮಕ್ಕಳಿಗೆ ಮುಕ್ತವಾಗಿ ಕಲಿಯಲು ಬೇರೆ ಯಾವುದೇ ಸಂಸ್ಥೆಗಳು ಇರಲಿಲ್ಲ. ಅವರು ಆರಂಭಿಸಿದ ಈ ಪ್ರಯತ್ನ ಇಂದು ಸಹಜ ಬದಲಾವಣೆಯೊಂದಿಗೆ ಮುಂದುವರೆದಿದೆ. ಇದೇ ರೀತಿಯಲ್ಲಿ, NMKRV ಕಾಲೇಜು ತನ್ನ ಪರಂಪರೆಯೊಂದಿಗೆ ಕಾಲಕ್ಕೆ ತಕ್ಕ ಬದಲಾವಣೆಗಳನ್ನು ಅಳವಡಿಸಿಕೊಳ್ಳುತ್ತಾ, ಇನ್ನೂ ಹೆಚ್ಚು ವಿದ್ಯಾರ್ಥಿಗಳಿಗೆ ಶಿಕ್ಷಣದ ಅವಕಾಶ ಕಲ್ಪಿಸುತ್ತಿದೆ.

PREV
Read more Articles on
click me!

Recommended Stories

SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ
ಖಾಸಗಿ ಶಾಲೆಗಳಿಗೆ ಸೆಡ್ಡು, ಮುಂದಿನ ವರ್ಷದಿಂದ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆ ಕಾರ್ಯಾರಂಭ