
ಕರ್ನಾಟಕ ರಕ್ಷಣಾ ವೇದಿಕೆ ಎಂದರೆ ಮೊದಲಿಗೆ ಕೇಳಿ ಬರುವುದು ನಾರಾಯಣ ಗೌಡರ ಹೆಸರು. ಕನ್ನಡದ ಪರ ಎಲ್ಲಿಯೇ ಹೋರಾಟ ಆದರೂ ಮೊದಲು ಇವರ ಹೆಸರು ಕೇಳಿಬರುತ್ತದೆ. ಯಾವುದೇ ಮೂಲೆಯಲ್ಲಿ ಕನ್ನಡಿಗರಿಗೆ ಅನ್ಯಾಯ ಆಗುತ್ತಿದೆ ಎಂದಾದರೆ ಬೀದಿಗಿಳಿದು ಹೋರಾಟ ಮಾಡುವಲ್ಲಿ ಇವರದ್ದು ಎತ್ತಿದ ಕೈ. ಬೆಳಗಾವಿ ಅಷ್ಟೇ ಅಲ್ಲದೇ ಇಡೀ ಕರ್ನಾಟಕದಲ್ಲಿ ಎಂಇಎಸ್ ಇಲ್ಲದಂತೆ ಮಾಡುವವರೆಗೂ ಕರವೇ ಹೋರಾಟ ಬಿಡುವುದಿಲ್ಲ ಎಂದು ಕಳೆದ ತಿಂಗಳಷ್ಟೇ ಭಾರಿ ಎಚ್ಚರಿಕೆಯನ್ನೂ ಕೊಟ್ಟವರು ನಾರಾಯಣ ಗೌಡರು. ಕನ್ನಡವೇ ನನ್ನ ಉಸಿರು, ಅದರ ರಕ್ಷಣೆಗಾಗಿ ಏನು ಬೇಕಾದರೂ ಮಾಡಬಲ್ಲೆ ಎನ್ನುವ ನಾರಾಯಣ ಗೌಡರು ತಮ್ಮ ಮಕ್ಕಳನ್ನು ವಿದೇಶದಲ್ಲಿ ವ್ಯಾಸಂಗ ಮಾಡಿಸಿರುವುದಕ್ಕೆ ಮೊದಲಿನಿಂದಲೂ ಭಾರಿ ಟೀಕೆಗಳು ವ್ಯಕ್ತವಾಗುತ್ತಲೇ ಇದೆ. ಈ ಟೀಕೆಗಳಿಗೆ ಗೌಡರು ಹೇಳಿದ್ದೇನು? ತಮ್ಮ ಮೇಲೆ ಕಿಡಿ ಕಾರುವವರಿಗೆ ಅವರು ಕೊಟ್ಟಿರುವ ಪ್ರತಿಕ್ರಿಯೆ ಏನು?
ಕೀರ್ತಿ ಎಂಟರ್ಟೇನ್ಮೆಂಟ್ ಯೂಟ್ಯೂಬ್ ಚಾನೆಲ್ ಜೊತೆ ಮಾತನಾಡಿದ ನಾರಾಯಣ ಗೌಡರು, ಇದರ ಬಗ್ಗೆ ಮಾತನಾಡಿದ್ದಾರೆ. ಕನ್ನಡ ಕನ್ನಡ ಎನ್ನುವ ನಾರಾಯಣ ಗೌಡರು ಮಕ್ಕಳನ್ನು ಫಾರಿನ್ನಲ್ಲಿ ಓದಿಸ್ತಿದ್ದಾರೆ ಎಂದು ಹಲವರು ಆರೋಪಿಸ್ತಾರೆ, ಇದಕ್ಕೆ ಏನು ಹೇಳುತ್ತೀರಿ ಎಂದು ಕೀರ್ತಿ ಅವರು ಕೇಳಿದಾಗ ನಾರಾಯಣ ಗೌಡರು, 'ನಾನು ಕನ್ನಡದ ಪರ ಎಂದ ಮಾತ್ರಕ್ಕೆ ಇನ್ನೊಂದು ಭಾಷೆಯ ವಿರೋಧಿಯಲ್ಲ. ಕನ್ನಡ ನನ್ನ ಮಾತೃಭಾಷೆ. ಅದನ್ನು ಹೇಗೆ ಬಳಸಬೇಕು, ಎಲ್ಲಿ ಬಳಸಬೇಕು ಎನ್ನುವುದು ನನಗೆ ಚೆನ್ನಾಗಿ ಗೊತ್ತಿದೆ. ನನ್ನ ಮಕ್ಕಳಿಗೂ ಅಷ್ಟೇ. ಇವತ್ತಿಗೂ ಅಷ್ಟೇ. ಕುಳಿತುಕೊಂಡು ಎಲ್ಲಾ ಕವಿಗಳ ಪದ್ಯ ಹೇಳಿಕೊಟ್ಟುತ್ತೇನೆ. ಕನ್ನಡ ಆಗುಹೋಗು, ವಚನ, ಇತಿಹಾಸ ಎಲ್ಲವೂ ಅವರಿಗೆ ಚೆನ್ನಾಗಿ ಗೊತ್ತು. ಎಲ್ಲವನ್ನೂ ಈಗಲೂ ಅವರು ಹೇಳುತ್ತಾರೆ' ಎಂದಿದ್ದಾರೆ.
ರಷ್ಯನ್ ಚಾಯ್ವಾಲಿಗೆ ಭಾರೀ ಡಿಮಾಂಡ್: ಚಹಾ ಕುಡಿದ್ರೆ ಸೆಲ್ಫೀ ಫ್ರೀ...
'ನಾನು ಕನ್ನಡದ ಪರ ಹೋರಾಟ ಮಾಡುತ್ತೇನೆ ಎಂದು, ಮಕ್ಕಳು ಇಷ್ಟಪಟ್ಟು ವಿದೇಶದಲ್ಲಿ ವ್ಯಾಸಂಗ ಮಾಡೋದನ್ನು ತಪ್ಪು ಎನ್ನುತ್ತೀರಿ? ಯಾಕೆ ಅವರು ವಿದೇಶಕ್ಕೆ ಹೋಗಬಾರದಾ? ಕನ್ನಡದ ಹೋರಾಟಗಾರರ ಮಕ್ಕಳು ಬಟ್ಟೆ ಹರಿದುಕೊಂಡು ಬೀದಿಯಲ್ಲಿ ನಿಂತುಕೊಳ್ಳಬೇಕಾ? ಅವರು ಒಳ್ಳೆಯ ಊಟ ಮಾಡಬಾರದಾ? ಒಳ್ಳೆಯ ಮನೆಯಲ್ಲಿ ಇರಬಾರದಾ? ಒಳ್ಳೆಯ ವ್ಯಾಸಂಗ ಮಾಡಬಾರದಾ? ಅದ್ಯಾಕೆ ತಪ್ಪು ಎಂದು ನಿಮಗೆ ಅನ್ನಿಸತ್ತೆ? ಮಕ್ಕಳಿಗೆ ಕನ್ನಡ ಗೊತ್ತಿಲ್ಲ ಎಂದಾಗ ನನ್ನ ಮುಂದೆ ನೀವು ಆ ಪ್ರಶ್ನೆಗಳನ್ನು ಕೇಳಿ. ಕನ್ನಡದ ಬಗ್ಗೆ ಇಷ್ಟೆಲ್ಲಾ ಮಾತನಾಡ್ತೀರಾ, ನಿಮ್ಮ ಮಕ್ಕಳಿಗೆ ಇಂಗ್ಲಿಷ್ ಬಿಟ್ಟರೆ ಕನ್ನಡ ಗೊತ್ತಿಲ್ಲ ಎಂದು ಬೇಕಿದ್ರೆ ಪ್ರಶ್ನಿಸಿ. ಆಗ ನಾನು ಒಪ್ಪಿಕೊಳ್ಳುತ್ತೇನೆ' ಎಂದಿದ್ದಾರೆ.
'ನನ್ನ ಮಕ್ಕಳು ವಿದೇಶದಲ್ಲಿ ಓದ್ತಾರೆ ಎಂದು ಟೀಕೆ ಮಾಡುವವರಿಗಿಂತಲೂ ಚೆನ್ನಾಗಿ ನನ್ನ ಮಕ್ಕಳು ಕನ್ನಡ ಮಾತನಾಡುತ್ತಾರೆ. ವಚನ ಹೇಳ್ತಾರೆ, ಕನ್ನಡದ ಇತಿಹಾಸ ಗೊತ್ತಿದೆ. ಕವಿಗಳ ಪರಿಚಯ ಹೇಳ್ತಾರೆ. ಎಲ್ಲವನ್ನೂ ಕಲಿಸಿದ್ದೇನೆ' ಎಂದಿದ್ದಾರೆ. 'ಇಷ್ಟೇ ಅಲ್ಲದೇ, ಫಾರಿನ್ನಲ್ಲಿ ಓದಿಕೊಂಡು ಬಂದಿರುವ ನನ್ನ ಮಗಳು ಇಲ್ಲಿ ಉದ್ಯಮ ಕಟ್ಟಿದ್ದಾಳೆ. ನೂರು ಜನ ಕನ್ನಡಿಗರಿಗೆ ಕೆಲಸ ಕೊಟ್ಟಿದ್ದಾಳೆ. ಇನ್ನೇನು ಬೇಕು' ಎಂದು ಪ್ರಶ್ನಿಸಿದ್ದಾರೆ.
ದುಡಿವ ಹೆಣ್ಣುಮಕ್ಕಳಿಗೆ ಅಪ್ಪ-ಅಮ್ಮನೇ ವಿಲನ್? ಛಿದ್ರವಾಗ್ತಿದೆ ಮದುವೆಯ ಕನಸು...