ಅ.25ರಿಂದ 1-5ನೇ ಕ್ಲಾಸ್‌ ಶುರು: ಹೀಗಿವೆ ಷರತ್ತುಗಳು!

By Kannadaprabha News  |  First Published Oct 19, 2021, 7:36 AM IST

* ಶಾಲೆಗಳಲ್ಲಿ ಭೌತಿಕ ತರಗತಿ ಆರಂಭಿಸಲು ಸರ್ಕಾರದ ಒಪ್ಪಿಗೆ

* ಹಾಜರಿ ಕಡ್ಡಾಯವಲ್ಲ, ಪೋಷಕರ ಸಮ್ಮತಿ ಪತ್ರ ತರಬೇಕು

* ಹೆಚ್ಚು ಮಕ್ಕಳಿರುವಲ್ಲಿ ಶೇ.50 ಮಕ್ಕಳಿಗೆ ಮಾತ್ರ ಕ್ಲಾಸ್‌

* ದಿನ ಬಿಟ್ಟು ದಿನ ಅರ್ಧದಷ್ಟು ಮಕ್ಕಳಿಗೆ ತರಗತಿ


ಬೆಂಗಳೂರು(ಅ.19): ರಾಜ್ಯದಲ್ಲಿ 1ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ಅಕ್ಟೋಬರ್‌ 25ರಿಂದ ಶಾಲೆಗಳಲ್ಲಿ(School) ಭೌತಿಕ ತರಗತಿ ಆರಂಭಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಪ್ರತಿ ತರಗತಿ ಕೊಠಡಿ ಸಾಮರ್ಥ್ಯದ ಶೇ.50ರಷ್ಟು ಹಾಜರಾತಿ, ಹಾಜರಾತಿಗೆ ಪೋಷಕರ ಒಪ್ಪಿಗೆ ಪತ್ರ ಕಡ್ಡಾಯ ಸೇರಿದಂತೆ ಕೆಲ ಸೂಚನೆಗಳೊಂದಿಗೆ ಶಾಲೆ ಆರಂಭಕ್ಕೆ ಅಧಿಕೃತ ಆದೇಶ ಮಾಡಿದೆ.

ಈಜುಕೊಳ(Swimming Pool) ಆರಂಭಕ್ಕೆ ಅನುಮತಿ ಸೇರಿದಂತೆ ಇನ್ನಷ್ಟು ಚಟುವಟಿಕೆಗಳನ್ನು ಅನ್‌ಲಾಕ್‌(Unlock) ಮಾಡಿ ಸೋಮವಾರ ಆದೇಶ ಮಾಡಿರುವ ಸರ್ಕಾರ ಇದೇ ವೇಳೆ ಕೋವಿಡ್‌ ತಾಂತ್ರಿಕ ಸಲಹಾ ಸಮಿತಿಯ ಒಪ್ಪಿಗೆ ಮೇರೆಗೆ 1ರಿಂದ 5ನೇ ತರಗತಿಗಳನ್ನು ಆರಂಭಿಸಲು ಅವಕಾಶ ಕಲ್ಪಿಸಿದೆ. ಇದರೊಂದಿಗೆ ಒಂದು ವರ್ಷದ ಎಂಟು ತಿಂಗಳ ಬಳಿಕ ಈ ತರಗತಿಗಳು ಪುನಾರಂಭಗೊಳ್ಳಲಿವೆ. ತನ್ಮೂಲಕ ಪೂರ್ವ ಪ್ರಾಥಮಿಕ (ಎಲ್‌ಕೆಜಿ-ಯುಕೆಜಿ) ಹೊರತುಪಡಿಸಿ ಉಳಿದೆಲ್ಲಾ ತರಗತಿ ಮಕ್ಕಳಿಗೆ ಶಾಲೆ ಆರಂಭವಾದಂತಾಗುತ್ತದೆ.

Tap to resize

Latest Videos

ಈಗಾಗಲೇ ಎರಡೂ ಡೋಸ್‌ ಕೋವಿಡ್‌ ಲಸಿಕೆ ಪಡೆದಿರುವ ಶಿಕ್ಷಕರು, ಸಿಬ್ಬಂದಿಗೆ ಮಾತ್ರ ಈ ಐದೂ ತರಗತಿಗಳ ಪ್ರವೇಶಕ್ಕೆ ಅನುಮತಿ ಇರುತ್ತದೆ. 50ವರ್ಷ ಮೇಲ್ಪಟ್ಟಶಿಕ್ಷಕರು ಮಾಸ್ಕ್‌ ಜತೆಗೆ ಫೇಸ್‌ಶೀಲ್ಡ್‌ ಧರಿಸಬೇಕು. ಪ್ರತಿ ತರಗತಿ ಕೊಠಡಿಯಲ್ಲಿ ಒಟ್ಟು ಸಾಮರ್ಥ್ಯದ ಶೇ.50ರಷ್ಟುಮಕ್ಕಳ ಹಾಜರಾತಿಗೆ ಮಾತ್ರ ಅವಕಾಶ ನೀಡಬೇಕು. ಇವುಗಳ ಜತೆಗೆ ಕಡ್ಡಾಯ ಮಾಸ್ಕ್‌ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ನಿತ್ಯ ಮಕ್ಕಳ ಆರೋಗ್ಯ ತಪಾಸಣೆ ಸೇರಿದಂತೆ ಎಲ್ಲ ಕೋವಿಡ್‌ ನಿಯಂತ್ರಣ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಿ 1ರಿಂದ 5ನೇ ತರಗತಿಗಳನ್ನು ಆರಂಭಿಸಬೇಕು. ಮಕ್ಕಳ ತರಗತಿ ಹಾಜರಾತಿಗೆ ಪೋಷಕರಿಂದ ಒಪ್ಪಿಗೆ ಪತ್ರ ಕಡ್ಡಾಯ. ಪ್ರತಿ ದಿನ ಮಕ್ಕಳು ಶಾಲೆಗೆ ಬರುತ್ತಿದ್ದಂತೆ ಪ್ರವೇಶ ದ್ವಾರದಲ್ಲೇ ಕೈಗಳಿಗೆ ಸ್ಯಾನಿಟೈಸರ್‌ ಹಾಕುವುದು, ಅವರ ದೇಹದ ಉಷ್ಣಾಂಶ ತಪಾಸಣೆ ಸೇರಿದಂತೆ ಕೋವಿಡ್‌ ಲಕ್ಷಣಗಳ ಬಗ್ಗೆ ಪರಿಶೀಲನೆ ನಡೆಸಬೇಕು. ತರಗತಿ, ಶಾಲಾ ಆವರಣ ಹಾಗೂ ಹೊರಗೆ ಎಲ್ಲು ಕೂಡ ಮಕ್ಕಳು ಗುಂಪುಗೂಡಬಾರದು. ಶಿಕ್ಷಣ ಇಲಾಖೆಯು ಈ ತರಗತಿಗಳ ಆರಂಭಕ್ಕೆ ವಿವರವಾದ ಮಾರ್ಗಸೂಚಿ ಪ್ರಕಟಿಸಬೇಕು ಎಂದು ಸರ್ಕಾರ ಆದೇಶಿಸಿದೆ.

ಇನ್ನೆರಡು ದಿನದಲ್ಲಿ ಮಾರ್ಗಸೂಚಿ-ಸಚಿವ ನಾಗೇಶ್‌:

ಸರ್ಕಾರದ ಆದೇಶದಂತೆ ಅ.25ರಿಂದ 1ರಿಂದ 5ನೇ ತರಗತಿ ಮಕ್ಕಳಿಗೆ ಎಲ್ಲ ಅಗತ್ಯ ಸಿದ್ಧತೆ ಮತ್ತು ಸುರಕ್ಷಾ ಕ್ರಮಗಳೊಂದಿಗೆ ಭೌತಿಕ ತರಗತಿಗಳನ್ನು ಆರಂಭಿಸಲಾಗುವುದು. ಈ ಸಂಬಂಧ ಇನ್ನೆರಡು ದಿನಗಳಲ್ಲಿ ವಿವರವಾದ ಮಾರ್ಗಸೂಚಿಯನ್ನು ಪ್ರಕಟಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌(BC Nagesh) ತಿಳಿಸಿದ್ದಾರೆ.

ಸರ್ಕಾರದ ಆದೇಶದ ಬೆನ್ನಲ್ಲೇ ವಿಧಾನಸೌಧದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿದ ಅವರು, ಈಗಾಗಲೇ ಶಾಲೆ ಆರಂಭವಾಗಿರುವ 6ರಿಂದ 12ನೇ ತರಗತಿ ಮಕ್ಕಳಿಗೆ ಇರುವಂತೆಯೇ 1ರಿಂದ 5ನೇ ತರಗತಿ ಮಕ್ಕಳಿಗೂ ಹಾಜರಾತಿ ಕಡ್ಡಾಯ ಇರುವುದಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಂಡು ತರಗತಿ ನಡೆಸಲು ಸಾಧ್ಯವಾಗುವಷ್ಟುಕಡಿಮೆ ಸಂಖ್ಯೆಯ ಮಕ್ಕಳಿರುವೆಡೆ ಪೂರ್ಣ ಹಾಜರಾತಿಯೊಂದಿಗೆ ಶಾಲೆ ನಡೆಸಬಹುದು. ಏಕೆಂದರೆ ಒಂದು ಶಾಲೆಯಲ್ಲಿ ಕೇವಲ 15 ಮಕ್ಕಳಿದ್ದರೆ ಅದರಲ್ಲಿ ಅರ್ಧ ಮಕ್ಕಳಿಗೆ ಶಾಲೆ ನಡೆಸಲಾಗುವುದಿಲ್ಲ. ಹೆಚ್ಚಿನ ಮಕ್ಕಳಿದ್ದು ಸಾಕಷ್ಟುತರಗತಿ ಕೊಠಡಿಗಳು ಇಲ್ಲದ ಪಕ್ಷದಲ್ಲಿ ಶೇ.50ರಷ್ಟುಮಕ್ಕಳಿಗೆ ಒಂದು ದಿನ ಉಳಿದ ಮಕ್ಕಳಿಗೆ ಮರುದಿನ ಹೀಗೆ ಪಾಳಿ ಪದ್ಧತಿಯಲ್ಲಿ ತರಗತಿ ನಡೆಸಲಾಗುವುದು.

ಅ.25ರಿಂದ ಮೊದಲ ಒಂದು ವಾರ ನಿತ್ಯ ಅರ್ಧ ದಿನ ಮಾತ್ರ ತರಗತಿಗಳನ್ನು ನಡೆಸಲಾಗುವುದು. ನವೆಂಬರ್‌ ಮೊದಲ ವಾರದಿಂದ ಪೂರ್ಣ ದಿನ ತರಗತಿಗಳನ್ನು ಆರಂಭಿಸಲಾಗುವುದು. ಮಕ್ಕಳನ್ನು ಶಾಲೆಗೆ ಕಳಿಸಲು ಪೋಷಕರ ಒಪ್ಪಿಗೆ ಕಡ್ಡಾಯ. ಜತೆಗೆ ಪೋಷಕರು ಎರಡು ಡೋಸ್‌ ಲಸಿಕೆ ಪಡೆದಿರಬೇಕು. ಈ ಎಲ್ಲದರ ಬಗ್ಗೆ ವಿವರವಾದ ಮಾರ್ಗಸೂಚಿ ಇನ್ನೆರಡು ದಿನಗಳಲ್ಲಿ ಇಲಾಖೆಯಿಂದ ಹೊರಬೀಳಲಿದೆ ಎಂದರು.

ನಾಡಿದ್ದಿಂದ ಬಿಸಿಯೂಟ ಆರಂಭ

ಈಗಾಗಲೇ ಆರಂಭಗೊಂಡಿರುವ 6ರಿಂದ 10ನೇ ತರಗತಿ ಮಕ್ಕಳಿಗೆ ಅ.21ರಿಂದ ಬಿಸಿಯೂಟ ಯೋಜನೆ ಪುನಾರಂಭಗೊಳ್ಳಲಿದೆ. ಆದರೆ, 1ರಿಂದ 5ನೇ ತರಗತಿ ಮಕ್ಕಳಿಗೆ ನವೆಂಬರ್‌ನಿಂದ ಬಿಸಿಯೂಟ ನೀಡಲಾಗುವುದು. ತರಗತಿಗೆ ಹಾಜರಾಗದ ಮಕ್ಕಳಿಗೆ ಪ್ರಸ್ತುತ ಇರುವಂತೆ ಅವರ ಮನೆಗೇ ಆಹಾರ ಧಾನ್ಯ ನೀಡಲಾಗುವುದು ಎಂದು ಸಚಿವ ನಾಗೇಶ್‌ ತಿಳಿಸಿದರು.

ಶಾಲೆ ಆರಂಭಕ್ಕೆ ಷರತ್ತುಗಳು

-ಎರಡೂ ಡೋಸ್‌ ಕೋವಿಡ್‌ ಲಸಿಕೆ ಪಡೆದಿರುವ ಶಿಕ್ಷಕರು, ಸಿಬ್ಬಂದಿಗೆ ಮಾತ್ರ ಶಾಲೆಗೆ ಪ್ರವೇಶ

- 50ವರ್ಷ ಮೇಲ್ಪಟ್ಟಶಿಕ್ಷಕರು ಮಾಸ್ಕ್‌ ಜತೆಗೆ ಫೇಸ್‌ಶೀಲ್ಡ್‌ ಧರಿಸಬೇಕು

- ಪ್ರತಿ ಕೊಠಡಿಯಲ್ಲಿ ಅರ್ಧದಷ್ಟುಮಕ್ಕಳು ಮಾತ್ರ ಕೂರಲು ಅವಕಾಶ

- ಮಾಸ್ಕ್‌, ಸಾಮಾಜಿಕ ಅಂತರ ಕಡ್ಡಾಯ

-ನಿತ್ಯ ಮಕ್ಕಳ ದೇಹದ ಉಷ್ಣಾಂಶ ತಪಾಸಣೆ, ಸ್ಯಾನಿಟೈಸರ್‌ ನೀಡಿಕೆ

-ಶಾಲೆಗಳಲ್ಲಿ ಮಕ್ಕಳು ಗುಂಪುಗೂಡದಂತೆ ಕ್ರಮ

click me!