ಶಾಲಾ ಮಕ್ಕಳ ಪೋಷಕರಿಂದ 100 ರೂ ದೇಣಿಗೆ ಸಂಗ್ರಹ ರದ್ದು: ಶಿಕ್ಷಣ ಸಚಿವ ಸೂಚನೆ

By Govindaraj SFirst Published Oct 23, 2022, 7:15 AM IST
Highlights

ರಾಜಕೀಯ ಹಾಗೂ ಸಾರ್ವಜನಿಕ ವಲಯದಿಂದ ತೀವ್ರ ಆಕ್ರೋಶ ಕೇಳಿಬಂದ ಹಿನ್ನೆಲೆಯಲ್ಲಿ ಸರ್ಕಾರಿ ಶಾಲಾ ಮಕ್ಕಳ ಪೋಷಕರಿಂದ ಮಾಸಿಕ 100 ರು. ದೇಣಿಗೆ ಪಡೆಯುವ ಸುತ್ತೋಲೆಯನ್ನು ಶಿಕ್ಷಣ ಇಲಾಖೆ ವಾಪಸ್‌ ಪಡೆದಿದೆ. 

ಬೆಂಗಳೂರು (ಅ.23): ರಾಜಕೀಯ ಹಾಗೂ ಸಾರ್ವಜನಿಕ ವಲಯದಿಂದ ತೀವ್ರ ಆಕ್ರೋಶ ಕೇಳಿಬಂದ ಹಿನ್ನೆಲೆಯಲ್ಲಿ ಸರ್ಕಾರಿ ಶಾಲಾ ಮಕ್ಕಳ ಪೋಷಕರಿಂದ ಮಾಸಿಕ 100 ರು. ದೇಣಿಗೆ ಪಡೆಯುವ ಸುತ್ತೋಲೆಯನ್ನು ಶಿಕ್ಷಣ ಇಲಾಖೆ ವಾಪಸ್‌ ಪಡೆದಿದೆ. ಶಿಕ್ಷಣ ಇಲಾಖೆಯ ದೇಣಿಗೆ ಸುತ್ತೋಲೆಗೆ ಪೋಷಕರು, ಸಂಘ-ಸಂಸ್ಥೆಗಳು, ಶಿಕ್ಷಣ ತಜ್ಞರು, ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಹೀಗಾಗಿ ಸರ್ಕಾರವೂ ಮುಜುಗರಕ್ಕೆ ಒಳಗಾಗಿತ್ತು. ಇದರಿಂದ ಎಚ್ಚೆತ್ತು ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಅವರು ಸೂಚಿಸಿದ ಹಿನ್ನೆಲೆಯಲ್ಲಿ ಇಲಾಖೆ ಆಯುಕ್ತ ಡಾ.ವಿಶಾಲ್‌ ಸುತ್ತೋಲೆಯನ್ನು ವಾಪಸ್‌ ಪಡೆದಿದ್ದಾರೆ.

ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯ ಕಲ್ಪಿಸಲು ಪ್ರತಿ ವಿದ್ಯಾರ್ಥಿಯ ಪೋಷಕರಿಂದ ಪತ್ರಿ ತಿಂಗಳೂ 100 ರು. ದಾನ, ದೇಣಿಗೆ ಪಡೆಯಬೇಕು. ಇದನ್ನು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್‌ಡಿಸಿಎಂಸಿ) ಖಾತೆಗೆ ಸಂದಾಯ ಮಾಡಿಕೊಂಡು ಶಾಲೆಯ ಅಭಿವೃದ್ಧಿ ಮತ್ತು ಶೈಕ್ಷಣಿಕ ಚಟುವಟಿಕೆಗಳಿಗೆ ಬಳಸಿಕೊಳ್ಳಬಹುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿತ್ತು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು.

ಶಾಲಾ ಮಕ್ಕಳಿಂದ 100 ರು. ಸಂಗ್ರಹ, ಶಿಕ್ಷಣ ಇಲಾಖೆ ಸುತ್ತೋಲೆಗೆ ಹಲವರ ವಿರೋಧ

ದೇಣಿಗೆ ಸಂಗ್ರಹಿಸಲು ಸುತ್ತೋಲೆ ಹೊರಡಿಸಿರುವುದು ಸಂವಿಧಾನ ವಿರೋಧಿಯಾಗಿದೆ. ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯ ಸ್ಪಷ್ಟಉಲ್ಲಂಘನೆಯಾಗಿದೆ. ದೇಣಿಗೆ ನೀಡುವವರು ಮತ್ತು ನೀಡದವರನ್ನು ತಾರತಮ್ಯದಿಂದ ನೋಡಲಾಗುತ್ತದೆ. ಪ್ರತಿ ತಿಂಗಳೂ 100 ರು. ಕೊಡುತ್ತಾ ಬರುವುದು ಶುಲ್ಕ ನೀಡಿದಂತಾಗುತ್ತದೆ. ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿಯನ್ನು ಶಾಲೆಗಳ ಅಭಿವೃದ್ಧಿಗೆ ಬಳಸಬಹುದಲ್ಲವೇ ಎಂಬ ಸಲಹೆಗಳು ಸಂಘ-ಸಂಸ್ಥೆಗಳಿಂದ ವ್ಯಕ್ತವಾಗಿದ್ದವು.

ಸರ್ಕಾರ ಆದೇಶ ನೀಡಿಲ್ಲ: ಸರ್ಕಾರಿ ಶಾಲೆ ಖರ್ಚು ನಿರ್ವಹಣೆಗೆ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಪೋಷಕರಿಂದ ದೇಣಿಗೆ ಪಡೆಯುವ ಯಾವುದೇ ಆದೇಶವನ್ನು ತಮ್ಮ ಸರ್ಕಾರ ನೀಡಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಸ್ಪಷ್ಟಪಡಿಸಿದ್ದಾರೆ. ತುರುವೇಕೆರೆಯಲ್ಲಿ ಶಿಕ್ಷಣ ಇಲಾಖೆ ವತಿಯಿಂದ ನಡೆದ ರಾಷ್ಟ್ರೀಯ ಶಿಕ್ಷಣ ನೀತಿ 2020ರ ಶೈಕ್ಷಣಿಕ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಸಚಿವರು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದರು. ಸರ್ಕಾರಿ ಶಾಲೆಯಲ್ಲಿನ ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಸ್ವ ಇಚ್ಛೆಯಿಂದ ದೇಣಿಗೆ ನೀಡಬಹುದು ಅಥವಾ ದಾನಿಗಳಿಂದ ದೇಣಿಗೆ ಪಡೆಯಬಹುದು. ಯಾವುದೇ ಬಲವಂತ ಮಾಡುವಂತಿಲ್ಲ. ಸಾರ್ವಜನಿಕರು ನೀಡುವ ದೇಣಿಗೆಯನ್ನು ಶಾಲೆಯ ಅಭಿವೃದ್ಧಿಗೆ ಬಳಸಿಕೊಳ್ಳಲು ಯಾವುದೇ ಆಕ್ಷೇಪವಿಲ್ಲ ಎಂದೂ ಸಹ ಸಚಿವ ಬಿ.ಸಿ.ನಾಗೇಶ್‌ ಹೇಳಿದರು.

ಸಿದ್ದರಾಮಯ್ಯ ಗರಂ: ಸರ್ಕಾರಿ ಶಾಲಾ ಮಕ್ಕಳಿಂದ ಪ್ರತಿ ತಿಂಗಳು 100 ರು. ದೇಣಿಗೆ ಸಂಗ್ರಹಿಸುವ ಕುರಿತು ಶಿಕ್ಷಣ ಇಲಾಖೆ ಹೊರಡಿಸಿರುವ ಸುತ್ತೋಲೆಗೆ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ವೇದಿಕೆ ಮೇಲೆ ನಿಂತು ತೋರುವ ನಿಮ್ಮ ದಮ್‌, ತಾಕತ್ತು ವಿದ್ಯಾರ್ಥಿಗಳ ಯೋಜನೆಗಳಿಗೆ ಹಣ ಬಿಡುಗಡೆ ಮಾಡುವುದರಲ್ಲಿ ತೋರಿಸಿ’ ಎಂದು ಆಗ್ರಹಿಸಿದ್ದಾರೆ.

Mysur : ರಾಜ್ಯದಲ್ಲಿ ಶಾಲಾ ಶಿಕ್ಷಣ ದಿಕ್ಕು ತಪ್ಪುತ್ತಿದೆ

ಅಲ್ಲದೆ, ಸರ್ಕಾರಿ ಶಾಲಾ ಮಕ್ಕಳ ಪೋಷಕರಿಂದ ಹಣ ಸಂಗ್ರಹಿಸುವಂತೆ ಹೊರಡಿಸಿರುವ ಆದೇಶವನ್ನು ಕೂಡಲೇ ಹಿಂಪಡೆಯಬೇಕು. ಸ್ಥಗಿತಗೊಂಡಿರುವ ಎಲ್ಲಾ ಯೋಜನೆಗಳನ್ನು ಪುನರ್‌ ಆರಂಭಿಸಬೇಕು ಎಂದು ಒತ್ತಾಯಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಸರ್ಕಾರಿ ಶಾಲೆಯ ಬಡ ಮಕ್ಕಳ ಮೇಲೆ ರಾಜ್ಯ ಸರ್ಕಾರದ ಭ್ರಷ್ಟಕಣ್ಣು ಬಿದ್ದಿದೆ. ಕಮಿಷನ್‌ ಹೆಸರಿನಲ್ಲಿ ರಾಜ್ಯದ ಖಜಾನೆ ಲೂಟಿ ಆಯಿತು, ಈಗ ಬಡ ಮಕ್ಕಳ ಪೋಷಕರ ಜೇಬಿಗೂ ಕತ್ತರಿ ಹಾಕಲು ಹೊರಟಿದೆ. ಬಿಜೆಪಿ ಸರ್ಕಾರಕ್ಕೆ ಇಂತಹ ದೈನೇಸಿ ಸ್ಥಿತಿ ಬರಬಾರದಿತ್ತು’ ಎಂದು ಕಿಡಿ ಕಾರಿದರು.

click me!