ಸರ್ಕಾರಿ ಆಂಗ್ಲ ಶಾಲೇಲಿ ಕಲಿತ 30,000 ಮಕ್ಕಳು ಅತಂತ್ರ! ಬಿಇಒ, ಡಿಡಿಪಿಐ ಯಾರಿಂದಲೂ ಸ್ಪಷ್ಟ ಉತ್ತರವಿಲ್ಲ! ಯಾರನ್ನು ಕೇಳುವುದು?

Kannadaprabha News   | Kannada Prabha
Published : Jun 14, 2026, 08:32 AM IST
Karnataka Government English Medium School Students Face Uncertain Future

ಸಾರಾಂಶ

2018-19ರಲ್ಲಿ ಆರಂಭವಾದ 1001 ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ 7ನೇ ತರಗತಿ ಪೂರೈಸಿದ ಸುಮಾರು 30 ಸಾವಿರ ವಿದ್ಯಾರ್ಥಿಗಳ ಭವಿಷ್ಯ ಅತಂತ್ರ. ಸರ್ಕಾರವು 8ನೇ ತರಗತಿಗೆ ಆಂಗ್ಲ ಮಾಧ್ಯಮ ಪ್ರೌಢಶಾಲೆ ಆರಂಭಿಸದ ಕಾರಣ, ಎಲ್ಲಿಗೆ ಪ್ರವೇಶ ಪಡೆಯಬೇಕೆಂಬ ಗೊಂದಲದಲ್ಲಿ ವಿದ್ಯಾರ್ಥಿಗಳು ಮತ್ತು ಪಾಲಕರಿದ್ದಾರೆ.

ಚಂದ್ರು ಕೊಂಚಿಗೇರಿ

ಹೂವಿನಹಡಗಲಿ (ಜೂ.14): ಬಡವರು ಮತ್ತು ರೈತರ ಮಕ್ಕಳೂ ಆಂಗ್ಲ ಮಾಧ್ಯಮದಲ್ಲಿ ಓದಬೇಕು ಎನ್ನುವ ಮಹತ್ವಾಕಾಂಕ್ಷೆಯಿಂದ 2018-19ನೇ ಸಾಲಿನಲ್ಲಿ 1001 ಕನ್ನಡ ಶಾಲೆಗಳಲ್ಲಿ ಆರಂಭಿಸಿದ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಓದಿದ ಸುಮಾರು 30 ಸಾವಿರ ವಿದ್ಯಾರ್ಥಿಗಳು ಮುಂದಿನ ದಾರಿ ಗೊತ್ತಾಗದೇ ಅತಂತ್ರರಾಗಿದ್ದಾರೆ!

ಕಾರಣ, 1 ರಿಂದ 7ನೇ ತರಗತಿಯ ವರೆಗೆ ಇವರು ಆಂಗ್ಲ ಮಾಧ್ಯಮದಲ್ಲಿ ಓದಿದ್ದಾರೆ. 8ನೇ ತರಗತಿಗೆ ಯಾವ ಶಾಲೆ ಮತ್ತು ಯಾವ ಮಾಧ್ಯಮದಲ್ಲಿ ಓದಬೇಕು ಎನ್ನುವ ಗೊಂದಲ ಅವರನ್ನು ಕಾಡುತ್ತಿದೆ.

1001 ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ತೆರೆದ ಸರ್ಕಾರ (ಆರಂಭದಲ್ಲಿ ಕೆಪಿಎಸ್‌, ಈಗ ಪಿಎಂಶ್ರೀ) ,7 ವರ್ಷ ಗತಿಸಿದರೂ ಆಂಗ್ಲ ಮಾಧ್ಯಮ ಹೈಸ್ಕೂಲು ಆರಂಬಿಸಿಲ್ಲ. ಈಗ ಆ ಮಕ್ಕಳು ಯಾವ ಶಾಲೆಗೆ ಪ್ರವೇಶ ಪಡೆಯಬೇಕು? ಸರ್ಕಾರಿ ಹೈಸ್ಕೂಲು ಇಲ್ಲ, ಖಾಸಗಿ ಹೈಸ್ಕೂಲು ಸೇರುವ ಶಕ್ತಿ ಬಹುತೇಕರಿಗೆ ಇಲ್ಲ.

1001 ಆಂಗ್ಲ ಮಾಧ್ಯಮ ಶಾಲೆ:

ಬಾಗಲಕೋಟೆ-28, ಬಳ್ಳಾರಿ-43, ಬೆಳಗಾವಿ-74, ಬೆಂಗಳೂರು-144, ಬೀದರ್‌-26, ಚಾಮರಾಜನಗರ-17, ಚಿಕ್ಕಬಳ್ಳಾಪುರ-20, ಚಿಕ್ಕಮಗಳೂರು-21, ಚಿತ್ರದುರ್ಗ-24, ದಕ್ಷಿಣ ಕನ್ನಡ-48, ದಾವಣಗೆರೆ-31, ಧಾರವಾಡ-28, ಗದಗ-17, ಹಾಸನ-38, ಹಾವೇರಿ-25, ಕಲಬುರಗಿ-39, ಕೊಡಗು-8, ಕೋಲಾರ-24, ಕೊಪ್ಪಳ-20, ಮಂಡ್ಯ-32, ಮೈಸೂರು-46, ರಾಯಚೂರು-33, ರಾಮನಗರ-24, ಶಿವಮೊಗ್ಗ-30, ತುಮಕೂರು-49, ಉಡುಪಿ-24, ಉತ್ತರ ಕನ್ನಡ-27, ವಿಜಯಪುರ-38, ಯಾದಗಿರಿ-23 ಸೇರಿದಂತೆ ಒಟ್ಟು ರಾಜ್ಯದಲ್ಲಿ 1001 ಆಂಗ್ಲ ಮಾಧ್ಯಮ ಶಾಲೆಗಳಿವೆ.

ಈ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಈಗಾಗಲೇ 30 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು 7ನೇ ತರಗತಿ ಉತ್ತೀರ್ಣರಾಗಿದ್ದಾರೆ. ಆದರೆ ಸರ್ಕಾರ ಇವರಿಗೆ 8ನೇ ತರಗತಿ ಪ್ರವೇಶ ಪಡೆಯುವ ಯಾವ ಸಿದ್ಧತೆಯೂ ನಡೆದಿಲ್ಲ. ಜತೆಗೆ ಆಂಗ್ಲ ಮಾಧ್ಯಮ ಪುಸ್ತಕಗಳ ಬೇಡಿಕೆಯನ್ನು ಸರ್ಕಾರ ಇನ್ನು ಪಡೆದಿಲ್ಲ. ಇದರಿಂದ ಈ ಮಕ್ಕಳ ಶೈಕ್ಷಣಿಕ ಬೆಳವಣಿಗೆ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಎಲ್ಲ ಕಡೆಗೂ ಶಾಲೆಗಳಲ್ಲಿ ದಾಖಲಾತಿ ಆರಂಭವಾಗಿದೆ. ಜೂನ್‌ ಅರ್ಧ ತಿಂಗಳು ಕಳೆದರೂ ಸರ್ಕಾರ ಮಾತ್ರ ಇತ್ತ ಸೂಕ್ತ ನಿರ್ಧಾರ ಕೈಗೊಂಡಿಲ್ಲ.

ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನಲ್ಲಿ ಹಿರೇಹಡಗಲಿ, ಮಾಗಳ, ಮಿನಿ ವಿಧಾನಸೌಧ ಹಡಗಲಿ ಹಾಗೂ ಹ್ಯಾರಡ ಗ್ರಾಮಗಳಲ್ಲಿ 7ನೇ ತರಗತಿ ಆಂಗ್ಲ ಮಾಧ್ಯಮದಲ್ಲಿ ಅಭ್ಯಾಸ ಮಾಡಿ 8ನೇ ತರಗತಿಗೆ ಪ್ರವೇಶಕ್ಕೆ ವಿದ್ಯಾರ್ಥಿಗಳು ಮತ್ತು ಪಾಲಕರು ಗೊಂದಲದಲ್ಲಿ ಇರುವುದು ಕಂಡು ಬಂತು.

ಬಿಇಒ, ಡಿಡಿಪಿಐ ಯಾರಿಂದಲೂ ಸ್ಪಷ್ಟ ಉತ್ತರವಿಲ್ಲ. ಯಾರನ್ನು ಕೇಳುವುದು?

2026-27ನೇ ಸಾಲಿಗೆ ಹಿರಿಯ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ 8ನೇ ತರಗತಿ ಆಂಗ್ಲ ಮಾಧ್ಯಮ ವಿಭಾಗವನ್ನು ಪ್ರಾರಂಭಿಸುವ ಕುರಿತು ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎನ್ನುತ್ತಾರೆ ಹೂವಿನಹಡಗಲಿ ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಾ ಕೆ.

ಈಗಾಗಲೇ ನಮ್ಮ ಮಕ್ಕಳು 1ರಿಂದ 7ನೇ ತರಗತಿ ವರೆಗೂ ಆಂಗ್ಲ ಮಾಧ್ಯಮದಲ್ಲಿ ಅಭ್ಯಾಸ ಮಾಡಿದ್ದಾರೆ. ಆದರೆ ಸರ್ಕಾರ ಈ ವರೆಗೂ 8ನೇ ತರಗತಿ ಆಂಗ್ಲ ಮಾಧ್ಯಮ ಶಾಲೆ ಕುರಿತು ಕ್ರಮ ಕೈಗೊಂಡಿಲ್ಲ. ಯಾವ ಶಾಲೆಯಲ್ಲಿ ದಾಖಲು ಮಾಡಬೇಕೆಂಬ ಗೊಂದಲದಲ್ಲಿದ್ದೇವೆ ಎನ್ನುತ್ತಾರೆ ಹೂವಿನಹಡಗಲಿ ಪಾಲಕರು.

PREV
Read more Articles on
click me!

Recommended Stories

ಕೇಂದ್ರ ಸರ್ಕಾರ ನೀಡುವ ವಿದ್ಯಾರ್ಥಿ ವೇತನಕ್ಕೆ ಮಂಡ್ಯದ ಮೂವರು ವಿದ್ಯಾರ್ಥಿಗಳು ಆಯ್ಕೆ
ಕಾಪು ವಿದ್ಯಾರ್ಥಿಗಳಿಂದ ‘ಡ್ಯುಯಲ್ ಆಕ್ಸಿಸ್ ಸೋಲಾರ್ ಟ್ರಾಕಿಂಗ್ ಸಿಸ್ಟಮ್’ ವಿನ್ಯಾಸ