ಪ್ರತಿ ಜಿಲ್ಲೆಯಲ್ಲೂ ಅತ್ಯುತ್ತಮ ಇಂಜಿನಿಯರಿಂಗ್ ಕಾಲೇಜ್ `ಸೂಪರ್-30'

By Suvarna NewsFirst Published Oct 22, 2021, 9:09 PM IST
Highlights

* ಜಿಲ್ಲೆಗೊಂದು `ಮಾದರಿ ಎಂಜಿನಿಯರಿಂಗ್ ಕಾಲೇಜು’ ಹೊಂದುವ ಮಹತ್ವಾಕಾಂಕ್ಷೆ 
* `ಸೂಪರ್-30’ ಯೋಜನೆ ಜಾರಿಗೆ ಸದ್ಯದಲ್ಲೇ ಸಮಿತಿ ರಚನೆ 
* ಜಿಲ್ಲಾ ಮಟ್ಟದಲ್ಲಿಯೇ ಅತ್ಯುತ್ತಮ ಇಂಜಿನಿಯರಿಂಗ್ ಶಿಕ್ಷಣ
* ಸರ್ಕಾರಿ ಕಾಲೇಜುಗಳನ್ನೇ ಆಯ್ಕೆ ಮಾಡಿಕೊಳ್ಳಲು ಮೊದಲ ಆದ್ಯತೆ

ಬೆಂಗಳೂರು(ಅ. 22) ರಾಜ್ಯದ(Karnataka) ಪ್ರತಿ ಜಿಲ್ಲೆಯಲ್ಲೂ ತಲಾ ಒಂದು ಮಾದರಿ ಇಂಜಿನಿಯರಿಂಗ್ ಕಾಲೇಜ್(Engineering college) ಅನ್ನು ಉತ್ಕೃಷ್ಟ ಗುಣಮಟ್ಟದಲ್ಲಿ  ಅಭಿವೃದ್ಧಿಪಡಿಸಲು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ (VTU)ಪ್ರೊ.ಕರಿಸಿದ್ದಪ್ಪ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಈ ಸಂಬಂಧವಾಗಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ (Dr. CN Ashwath Narayan) ಅಧ್ಯಕ್ಷತೆಯಲ್ಲಿ ಶುಕ್ರವಾರ ಪೂರ್ವಭಾವಿ ಸಭೆ ನಡೆಯಿತು. `ಸೂಪರ್-30 ಎಂಜಿನಿಯರಿಂಗ್ ಕಾಲೇಜು’ ಎನ್ನುವ ಈ ವಿಶಿಷ್ಟ ಪರಿಕಲ್ಪನೆಯ ಯೋಜನೆಗೆ, ಈಗಾಗಲೇ ಅಸ್ತಿತ್ವದಲ್ಲಿದ್ದು ಶೈಕ್ಷಣಿಕವಾಗಿ ಸಾಧಾರಣ ಸಾಧನೆ ಮಾಡುತ್ತಿರುವ ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು. ಅದರಲ್ಲೂ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಿಗೆ ಆದ್ಯತೆ ಕೊಡಲಾಗುವುದು. ಇಲ್ಲವಾದ ಕಡೆ ಮಾತ್ರ ಖಾಸಗಿ ಕಾಲೇಜುಗಳನ್ನು ಆರಿಸಿಕೊಳ್ಳಲಾಗುವುದು. ಬೆಂಗಳೂರು ನಗರದಲ್ಲಿರುವ ಇಂಜಿನಿಯರಿಂಗ್ ಕಾಲೇಜುಗಳನ್ನು ಇದಕ್ಕೆ ಪರಿಗಣಿಸುವುದಿಲ್ಲ ಎಂದು ಅವರು ತಿಳಿಸಿದರು. 

ಇಂಜಿನಿಯರಿಂಗ್ ಮಾಡಬೇಕೆಂಬ ಆಸೆಯುಳ್ಳ ವಿದ್ಯಾರ್ಥಿಗಳು ತಮ್ಮ ಜಿಲ್ಲೆಗಳಲ್ಲೇ ಉತ್ಕೃಷ್ಟ ಗುಣಮಟ್ಟದ ಶಿಕ್ಷಣ ಪಡೆಯುವಂತಾಗಬೇಕು. ಈ ಮೂಲಕ ಶಿಕ್ಷಣವು ದುಬಾರಿಯಾಗುವುದನ್ನು ಮತ್ತು ಉನ್ನತ ಶಿಕ್ಷಣಕ್ಕಾಗಿ ನಗರಗಳ ಕೆಲವೇ ಕಾಲೇಜುಗಳತ್ತ ವಿದ್ಯಾರ್ಥಿಗಳು ವಲಸೆ ಬರುವುದನ್ನು ತಡೆಯುವ ಆಶಯ ಸರ್ಕಾರದ್ದಾಗಿದೆ ಎಂದು ಸಚಿವರು ಪ್ರತಿಪಾದಿಸಿದರು.

ಆಧುನಿಕ ಕೋರ್ಸ್ ಗಳಿಂದ ಅತ್ಯುತ್ತಮ ತರಬೇತಿ

`ಸೂಪರ್-30’ ಯೋಜನೆಯಡಿ ಆಯ್ಕೆಯಾಗುವ ಎಲ್ಲ ಕಾಲೇಜುಗಳಲ್ಲೂ ಉದ್ಯಮರಂಗದ ಬೇಡಿಕೆಗೆ ತಕ್ಕಂತೆ ಆರಂಭದಲ್ಲಿ ಕನಿಷ್ಠ ಒಂದು ವಿಭಾಗವನ್ನಾದರೂ (ಕಂಪ್ಯೂಟರ್ ಸೈನ್ಸ್ ಗೆ ಮೊದಲ ಆದ್ಯತೆ) ವಿಶ್ವ ದರ್ಜೆಯ ಗುಣಮಟ್ಟಕ್ಕೆ ತರಲಾಗುವುದು. ಈ ಉಪಕ್ರಮದಡಿ ಕಟ್ಟಡಗಳ ನಿರ್ಮಾಣಕ್ಕಾಗಲಿ, ಹೊಸ ಕಾಲೇಜುಗಳನ್ನು ತೆರೆಯುವುದಕ್ಕಾಗಲಿ ಅವಕಾಶವಿಲ್ಲ. ಕೇವಲ ಬೋಧನಾ ಗುಣಮಟ್ಟ ಸುಧಾರಣೆ, ಪ್ರಯೋಗಾಲಯಗಳ ಸ್ಥಾಪನೆ, ವಿದೇಶಿ ಶಿಕ್ಷಣ ಸಂಸ್ಥೆ ಹಾಗೂ ಉದ್ಯಮಗಳ ಸಹಭಾಗಿತ್ವಕ್ಕೆ ಮನ್ನಣೆ ಕೊಡಲಾಗುವುದು. ಮುಂದಿನ ಹಂತಗಳಲ್ಲಿ ಕಾಲೇಜುಗಳ ಉಳಿದ ವಿಭಾಗಗಳಿಗೂ ಇದನ್ನು ವಿಸ್ತರಿಸಲಾಗುವುದು ಎಂದು ಅಶ್ವತ್ಥನಾರಾಯಣ ನುಡಿದರು. 

ಯೋಜನೆಯ ಜಾರಿಗೆ ರಚಿಸಲಾಗುವ ಸಮಿತಿಯಲ್ಲಿ ಶಿಕ್ಷಣ ತಜ್ಞರು ಮತ್ತು ಉದ್ಯಮಿಗಳು ಇರುತ್ತಾರೆ. ಇದಕ್ಕಾಗುವ ವೆಚ್ಚವನ್ನು ಕಂಪನಿಗಳ ಸಿಎಸ್ಆರ್ ನಿಧಿ, ವಿಟಿಯು ಮತ್ತು ಸ್ವತಃ ಆಯ್ಕೆಯಾದ ಸಂಸ್ಥೆಗಳು ಸಮನಾಗಿ ಭರಿಸಲಿವೆ. ಇದರ ಜೊತೆಗೆ ಆಯಾ ಸಂಸ್ಥೆಗಳ ಹಳೆಯ ವಿದ್ಯಾರ್ಥಿಗಳ ಮೂಲಕ ದೇಣಿಗೆ ಸಂಗ್ರಹಿಸುವ ಚಿಂತನೆಯೂ ಇದೆ ಎಂದು ಅವರು ಮಾಹಿತಿ ನೀಡಿದರು. 

ಆಯ್ಕೆಯಾದ ಇಂಜಿನಿಯರಿಂಗ್ ಕಾಲೇಜುಗಳು ಸ್ಥಳೀಯ ಮಟ್ಟದಲ್ಲೇ ಇರುವ ಅತ್ಯುತ್ತಮ ಕೈಗಾರಿಕೆಗಳೊಂದಿಗೆ ಸಹಯೋಗ ಮಾಡಿಕೊಳ್ಳಲಿವೆ. ಅಲ್ಲದೆ, ಈ ಉದ್ದಿಮೆಗಳಿಗೇ ಕಾಲೇಜನ್ನು ಮುನ್ನಡೆಸುವ ಅವಕಾಶ ಕೊಡಲಾಗುತ್ತದೆ. ಬೇರೆ ಬೇರೆ ವಿಶ್ವವಿದ್ಯಾಲಯಗಳ ವ್ಯಾಪ್ತಿಯಲ್ಲಿರುವ ಅತ್ಯುತ್ತಮ ಬೋಧಕರನ್ನು ಕಾಲೇಜುಗಳು ಕರೆಸಿಕೊಳ್ಳಬಹುದು. ಈ ಮೂಲಕ ಖಾಸಗಿ ಸಹಭಾಗಿತ್ವದಲ್ಲಿ ಅತ್ಯುತ್ತಮ ಮಾದರಿ ಕಾಲೇಜುಗಳನ್ನು ಹೊಂದುವ ಗುರಿ ಇದೆ ಎಂದು ಅವರು ಹೇಳಿದರು. 

`ಸೂಪರ್-30’ ಯೋಜನೆಯ ರೂಪುರೇಷೆ ಇತ್ಯಾದಿಗಳನ್ನು ಸಿದ್ಧಪಡಿಸಲು ರಚಿಸಲು ಉದ್ದೇಶಿಸಿರುವ ಸಮಿತಿಯು ಶೀಘ್ರದಲ್ಲೇ ಅಸ್ತಿತ್ವಕ್ಕೆ ಬರಲಿದೆ. ಕಾಲೇಜುಗಳನ್ನು ಆಯ್ಕೆ ಮಾಡುವಲ್ಲಿ ಈ ಸಮಿತಿಯ ತೀರ್ಮಾನವೇ ಅಂತಿಮ ಎಂದು ಸಚಿವರು ಸ್ಪಷ್ಟಪಡಿಸಿದರು.

ಪೂರ್ವಭಾವಿ ಸಭೆಯಲ್ಲಿ ರಾಜ್ಯ ಸರ್ಕಾರದ ಸ್ಟಾರ್ಟ್ ಅಪ್ ವಿಷನ್ ಗ್ರೂಪ್ ನ ಮುಖ್ಯಸ್ಥ ಪ್ರಶಾಂತ್ ಪ್ರಕಾಶ್, ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕುಮಾರ್ ನಾಯಕ್, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತ ಪ್ರದೀಪ್ ಪಿ, ವಿಟಿಯು ಕುಲಪತಿ ಪ್ರೊ.ಕರಿಸಿದ್ದಪ್ಪ, ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಕಾರ್ಯನಿರ್ವಾಹಕ ನಿರ್ದೇಶಕ ಗೋಪಾಲ ಜೋಶಿ, ಐಟಿ, ಬಿಟಿ ಇಲಾಖೆ ನಿರ್ದೇಶಕಿ ಮೀನಾ ನಾಗರಾಜ್ ಉಪಸ್ಥಿತರಿದ್ದರು.

click me!