4,600 ಕೋಟಿ ವೆಚ್ಚದಲ್ಲಿ 150 ITI ಮೇಲ್ದರ್ಜೆಗೆ: ಅಶ್ವತ್ಥನಾರಾಯಣ

By Kannadaprabha News  |  First Published Oct 22, 2021, 8:35 AM IST

*   ಟಾಟಾ ಸಹಯೋಗ, 2 ವಾರದಲ್ಲಿ ಉದ್ಘಾಟನೆ
*  ವಿಷಯ ಪರಿಣತರನ್ನು ಈ ಐಟಿಐ ಕೇಂದ್ರಗಳಿಗೆ ನಿಯೋಜನೆ
*  ಐಟಿಐ ಬೋಧಕ ಸಿಬ್ಬಂದಿಗೆ ಹೊಸ ರೀತಿಯ ತರಬೇತಿ ಮಾರ್ಗದರ್ಶನ 
 


ಬೆಂಗಳೂರು(ಅ.22):  ರಾಜ್ಯದ(Karnataka) 150 ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು (ITI) ಟಾಟಾ ಕಂಪನಿ(Tata Company) ಸಹಯೋಗದಲ್ಲಿ 4,636 ಕೋಟಿ ರು. ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲಾಗಿದ್ದು, ಇನ್ನೆರಡು ವಾರದಲ್ಲಿ ಅವುಗಳೆಲ್ಲವೂ ಉದ್ಘಾಟನೆಯಾಗಲಿವೆ. ಈ ಕೇಂದ್ರಗಳಲ್ಲಿ ನ.1ರಿಂದ ಹಲವು ಹೊಸ ಕೋರ್ಸುಗಳೊಂದಿಗೆ ತರಬೇತಿ ಆರಂಭವಾಗಲಿದೆ ಎಂದು ಉನ್ನತ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ(CN Ashwathnarayan) ತಿಳಿಸಿದ್ದಾರೆ.

ನಗರದ(Bengaluru) ಪೀಣ್ಯದಲ್ಲಿ ಮೇಲ್ದರ್ಜೆಗೇರಿಸಿರುವ ಸರ್ಕಾರಿ ಐಟಿಐ ಕೇಂದ್ರವನ್ನು ಗುರುವಾರ ಪರಿಶೀಲಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉದ್ಯಮ ಕ್ಷೇತ್ರದ ಈಗಿನ ಬೇಡಿಕೆಗೆ ತಕ್ಕಂತೆ ಐಟಿಐಗೆ ಹೊಸ ಪಠ್ಯಕ್ರಮ ರೂಪಿಸಲಾಗಿದೆ. ಇದರಡಿ ಮೇಲ್ದರ್ಜೆಗೇರಿಸಿರುವ 150 ಐಟಿಐ ಕೇಂದ್ರಗಳಲ್ಲಿ ಹೊಸ ಕೋರ್ಸುಗಳಿಗೆ(New Courses) ಪ್ರವೇಶ ಪ್ರಕ್ರಿಯೆ ನಡೆಯುತ್ತಿದೆ. ಅಡ್ವಾನ್ಸ್ಡ್ ಐಟಿಐ, ಸಿಎನ್‌ಸಿ. ಮಷಿನಿಂಗ್‌, ಬೇಸಿಸ್‌ ಆಫ್‌ ಡಿಜೈನ್‌ ಅಂಡ್‌ ವಚ್ರ್ಯುಯಲ್‌ ವೆರಿಫಿಕೇಷನ್‌, ಇಂಡಸ್ಟ್ರಿಯಲ್‌ ರೊಬೊಟಿಸ್ ಅಂಡ್‌ ಡಿಜಿಟಲ್‌ ಮ್ಯಾನುಫ್ಯಾಕ್ಚರಿಂಗ್‌, ಮ್ಯಾನುಫ್ಯಾಕ್ಚರಿಂಗ್‌ ಪ್ರೊಸೆಸ್‌ ಕಂಟ್ರೋಲ್‌ ಅಂಡ್‌ ಆಟೋಮೇಷನ್‌ ಮತ್ತು ಮೆಕ್ಯಾನಿಕ್‌ ಎಲೆಕ್ಟ್ರಿಕ್‌ ವೆಹಿಕಲ್‌ ಎಂಬ ಹೊಸ ಕೋರ್ಸುಗಳು ಸೇರಿವೆ ಎಂದು ವಿವರಿಸಿದರು.

Tap to resize

Latest Videos

ITIಗೆ 6 ಹೊಸ ಕೋರ್ಸ್ ಸೇರ್ಪಡೆ: ಪ್ರಸಕ್ತ ಸಾಲಿನಿಂದಲೇ ಪ್ರವೇಶಾತಿ ಆರಂಭ

ಟಾಟಾ ಕಂಪನಿ ಮೂಲಕ ಮೊದಲ ಎರಡು ವರ್ಷ 300 ಹಾಗೂ ಮೂರನೇ ವರ್ಷ 150 ವಿಷಯ ಪರಿಣತರನ್ನು ಈ ಐಟಿಐ ಕೇಂದ್ರಗಳಿಗೆ ನಿಯೋಜಿಸಲಾಗುತ್ತದೆ. ಇದರಿಂದ ಜೂನಿಯರ್‌ ಟೆಲಿಕಾಂ ಆಫೀಸರ್‌ಗಳಿಗೆ (JTO) ಹಾಗೂ ಐಟಿಐ ಬೋಧಕ ಸಿಬ್ಬಂದಿಗೆ ಹೊಸ ರೀತಿಯ ತರಬೇತಿ ಮಾರ್ಗದರ್ಶನ ನೀಡಲು ಸಾಧ್ಯವಾಗುತ್ತದೆ. ಐಟಿಐಗಳಲ್ಲಿ ಜೆಟಿಒಗಳಿಗೆ ಹೊಸ ತಾಂತ್ರಿಕತೆಗಳಲ್ಲಿ ತರಬೇತಿ ನೀಡಲಾಗುತ್ತದೆ. ಇದರಿಂದ ಪ್ರತಿವರ್ಷ 20,000 ಜೆಟಿಒ ಗಳಿಗೆ ಅನುಕೂಲವಾಗುತ್ತದೆ. ಇದರ ಜೊತೆಗೆ ಐಟಿಐ, ಪಾಲಿಟೆಕ್ನಿಕ್‌(Polytechnic) ಮತ್ತು ಎಂಜಿನಿಯರಿಂಗ್‌(Engineering) ಕಾಲೇಜುಗಳ(College) ಸುಮಾರು 1 ಲಕ್ಷ ವಿದ್ಯಾರ್ಥಿಗಳಿಗೆ(Students) ಪ್ರತಿ ವರ್ಷ ಪ್ರಯೋಜನವಾಗುತ್ತದೆ ಎಂದು ಸಚಿವರು ಹೇಳಿದರು.

ಒಟ್ಟು 4,636 ಕೋಟಿ ರು.ಗಳ ಈ ಯೋಜನಾ ವೆಚ್ಚದ ಪೈಕಿ ರಾಜ್ಯ ಸರ್ಕಾರ(State Government) ಶೇ.12ರಷ್ಟು ಹಾಗೂ ಟಾಟಾ ಟೆಕ್ನಾಲಜೀಸ್‌ ಲಿಮಿಟೆಡ್‌(Tata Technologies Limited) ಶೇ.88ರಷ್ಟು ಅನುದಾನ(Grant) ಭರಿಸುತ್ತಿವೆ. ಜೊತೆಗೆ ರಾಜ್ಯ ಸರ್ಕಾರ ಭೌತಿಕ ಮೂಲ ಸೌಕರ್ಯಕ್ಕೆ 220 ಕೋಟಿ ರು. ವೆಚ್ಚ ಮಾಡುತ್ತಿದೆ. ತಾಂತ್ರಿಕ ಉನ್ನತೀಕರಣಕ್ಕಾಗಿ ಆಧುನಿಕ ಸಿಎನ್‌ಸಿ ಯಂತ್ರ, ಲೇಸರ್‌ ಕಟಿಂಗ್‌ ಯಂತ್ರ, ಆಡಿಟೀವ್‌ ಮ್ಯಾನುಫ್ಯಾಕ್ಟರಿಂಗ್‌, 3ಡಿ ಪ್ರಿಂಟಿಂಗ್‌ ಮಷೀನ್‌, ಕೈಗಾರಿಕಾ ರೊಬೋಟ್‌(Industrial Robot) ಸೇರಿದಂತೆ ವಿನೂತನ ತಂತ್ರಾಂಶಗಳನ್ನು ಐಟಿಐಗಳಿಗೆ ಸೇರ್ಪಡೆಯಾಗಲಿವೆ. ಯಂತ್ರೋಪಕರಣಗಳನ್ನು ಸುಸಜ್ಜಿತ ಸ್ಥಿತಿಯಲ್ಲಿ ಇರಿಸುವುದಕ್ಕಾಗಿ 5 ವರ್ಷಗಳ ನಿರ್ವಹಣಾ ಒಪ್ಪಂದವನ್ನು ಇದು ಒಳಗೊಂಡಿದೆ. ಅಗತ್ಯಬಿದ್ದರೆ ಇದನ್ನು ಇನ್ನೂ 5 ವರ್ಷಗಳಿಗೆ ಹೆಚ್ಚಿಸಲಾಗುತ್ತದೆ. ಹಾಗೆಯೇ ಈ 150 ಸಂಸ್ಥೆಗಳಿಗೆ ಅಳವಡಿಸಿರುವ 11 ದೀರ್ಘಾವಧಿ ತರಬೇತಿ ಹಾಗೂ 23 ಅಲ್ಪಾವಧಿ ತರಬೇತಿ ಕೋರ್ಸುಗಳನ್ನು ಕ್ರಮೇಣ ಎಲ್ಲ ಐಟಿಐಗಳಿಗೆ ವಿಸ್ತರಿಸುತ್ತೇವೆ ಎಂದರು. ಈ ವೇಳೆ ಉದ್ಯೋಗ ಮತ್ತು ತರಬೇತಿ ಇಲಾಖೆ ಆಯುಕ್ತ ಹರೀಶ ಕುಮಾರ ಮತ್ತಿತರರು ಇದ್ದರು.
 

click me!