ಕರ್ನಾಟಕದಲ್ಲಿ ಡಿಪ್ಲೋಮಾಕ್ಕೆ ಹೊಸ  8 ಕೋರ್ಸ್ ಸೇರ್ಪಡೆ, ಯಾವವು?

By Suvarna News  |  First Published Aug 12, 2021, 11:45 PM IST

* ತಾಂತ್ರಿಕ ಪಠ್ಯಕ್ರಮದಲ್ಲಿ ಜಾಗತಿಕ ದೃಷ್ಟಿಕೋನ
*  8 ಹೊಸ ಡಿಪ್ಲೊಮಾ ಕೋರ್ಸುಗಳಿಗೆ ಚಾಲನೆ ಕೊಟ್ಟ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ
*  ಸ್ಪರ್ಧಾತ್ಮಕ ಜಗತ್ತಿಗೆ ಅನುಗುಣವಾಗಿ ಕೋರ್ಸ್


ಬೆಂಗಳೂರು(ಆ.12)  ಉದ್ಯೋಗ ಮಾರುಕಟ್ಟೆ ಹಾಗೂ ಕೈಗಾರಿಕೆಗಳ ಬೇಡಿಕೆಗಳಿಗೆ ತಕ್ಕಂತೆ ಮಾನವ ಸಂಪನ್ಮೂಲವನ್ನು ಒದಗಿಸುವ ಉದ್ದೇಶದಿಂದ ಎಂಟು ಹೊಸ ಡಿಪ್ಲೊಮಾ ಕೋರ್ಸುಗಳಿಗೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಚಾಲನೆ ನೀಡಿದರು. 

ವಿಧಾನಸೌಧದಲ್ಲಿಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ನೂತನ ಕೋರ್ಸುಗಳಿಗೆ ಹಸಿರು ನಿಶಾನೆ ತೋರಿದ ನಂತರ ಮಾತನಾಡಿದ ಅವರು, “ರಾಜ್ಯದಲ್ಲಿ ಹೆಚ್ಚೆಚ್ಚು ಉದ್ಯೋಗಾವಕಾಶ ಸೃಷ್ಟಿಸುವುದು, ಕೈಗಾರಿಕೆಗಳಿಗೆ ಉತ್ಕೃಷ್ಟ ಮಾನವ ಸಂಪನ್ಮೂಲ ಒದಗಿಸುವುದೇ ಹೊಸ ಕೋರ್ಸುಗಳ ಗುರಿ” ಎಂದರು. 

Tap to resize

Latest Videos

ಪ್ರತಿಭಾವಂತ ವಿದ್ಯಾರ್ಥಿನಿಗೆ ದಾನಿಗಳ ನೆರವು ಬೇಕಿದೆ

ಡಿಪ್ಲೊಮಾದಲ್ಲಿ ಸದ್ಯ 33 ಕೋರ್ಸ್ʼಗಳು ಇವೆ. ಇವುಗಳಲ್ಲಿ ಹಳೆಯ, ಅಪ್ರಸ್ತುತ ಕೋರ್ಸುಗಳನ್ನು ಕೈಬಿಡಲಾಗಿದೆ. ಈಗಾಗಲೇ ಹೊಸ ಪಠ್ಯವನ್ನು ಅಳವಡಿಸಲಾಗಿದೆ. ಈಗ 21ನೇ ಶತಮಾನದ ಬೇಡಿಕೆ ಪೂರೈಸುವ ನಿಟ್ಟಿನಲ್ಲಿ ಎಂಟು ಹೊಸ ಕೋರ್ಸ್ʼಗಳನ್ನೂ ಈ ವರ್ಷದಿಂದಲೇ ಆರಂಭಿಸಲಾಗುತ್ತಿದೆ ಎಂದು ಹೇಳಿದರು. 

ಹೊಸ ಕೊರ್ಸ್ʼಗಳು ಯಾವುವು?  ಆಲ್ಟರ್ನೇಟಿವ್ ಎನರ್ಜಿ ಟೆಕ್ನಾಲಜೀಸ್‌ (Alternative Energy Technologies), ಸೈಬರ್ ಭದ್ರತೆ (Cyber security), ಆಹಾರ ಸಂಸ್ಕರಣೆ ಮತ್ತು ಸಂರಕ್ಷಣೆ (Food Processing and Preservation),  ಪ್ರವಾಸೋದ್ಯಮ (Travel & Tourism ), ಕ್ಲೌಡ್ ಕಂಪ್ಯೂಟಿಂಗ್ (Cloud Computing), ಆಟೋಮೇಷನ್ ಮತ್ತು ರೋಬೋಟಿಕ್ಸ್ (Automation and Robotics), ನಿರ್ದೇಶನ ಮತ್ತು ಚಿತ್ರಕಥೆ ರಚನೆ, ಟೀವಿ ಕಾರ್ಯಕ್ರಮಗಳ ನಿರ್ಮಾಣ (Direction screen play writing and TV production) ಹಾಗೂ ಸೈಬರ್ ಭೌತಿಕ ವ್ಯವಸ್ಥೆ ಮತ್ತು ಭದ್ರತೆ (Cyber physical system and security)  ಈ ಕೋರ್ಸುಗಳನ್ನು ಹೊಸದಾಗಿ ಆರಂಭ ಮಾಡಲಾಗುತ್ತಿದೆ ಎಂದು ಡಾ.ಅಶ್ವತ್ಥನಾರಾಯಣ ತಿಳಿಸಿದರು. 

ಈ ನೂತನ ಕೋರ್ಸುಗಳನ್ನು ಗೌರಿಬಿದನೂರು, ಶಿರಾಳಕೊಪ್ಪ, ಕೂಡ್ಲಿಗಿ, ರಬಕವಿ ಬನಹಟ್ಟಿ, ಔರಾದ್ ಹಾಗೂ ಬೆಂಗಳೂರಿನ ಎಸ್.ಜೆ.ಪಾಲಿಟೆಕ್ನಿಕ್, ಚನ್ನಗಿರಿ, ಕೊಪ್ಪ, ಹೊನ್ನಾಳಿ, ಕಾಪು ಕಾಲೇಜುಗಳಲ್ಲಿ ಆರಂಭಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು. 

ನೂತನ ಕೋರ್ಸುಗಳನ್ನು ತಾಂತ್ರಿಕ ಶಿಕ್ಷಣ ಇಲಾಖೆಯ ಹೊಸ  ಪಠ್ಯಕ್ರಮದ ಪ್ರಕಾರ ಬೋಧನೆ ಮಾಡಲಾಗುವುದು ಹಾಗೂ ಈ ಪಠ್ಯಕ್ರಮವು ರಾಷ್ಟ್ರೀಯ ಕೌಶಲ್ಯ ಅರ್ಹತಾ ಚೌಕಟ್ಟು ಪ್ರಕಾರ ಸಿದ್ಧಪಡಿಸಲಾಗಿದೆ. ಜಾಗತಿಕ ಮಟ್ಟದಲ್ಲಿ ಉದ್ಯೋಗ ಪಡೆಯಲು ಅನುಕೂಲವಾಗಲಿದೆ. ಡಿಪ್ಲೋಮಾ ಪಠ್ಯಕ್ರಮಗಳನ್ನು ಉದ್ಯಮಿಗಳು, ಶಿಕ್ಷಣ ತಜ್ಞರು ಮತ್ತು ಹಳೆಯ ವಿದ್ಯಾರ್ಥಿಗಳೊಂದಿಗೆ ವ್ಯಾಪಕ ಸಮಾಲೋಚನೆಯ ನಂತರ ಅಭಿವೃದ್ಧಿಗೊಳಿಸಲಾಗಿದೆ ಎಂದು ಅವರು ತಿಳಿಸಿದರು. 

ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ನೂತನ ಕೋರ್ಸುಗಳಿಗೆ ನೇರ ಪ್ರವೇಶಾತಿ ಸಿಗಲಿದ್ದು, ಮೂರನೇ ವರ್ಷದ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಇದೊಂದು ರೀತಿಯಲ್ಲಿ ವಿಶೇಷ ಕಲಿಕಾ ವಿಷಯವಾಗಿರುತ್ತದೆ. ಅಲ್ಲದೆ, ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಎರಡು ವರ್ಷದ ಡಿಪ್ಲೋಮಾ ನಂತರ ಮೂರನೇ ವರ್ಷದಲ್ಲಿ ಹೊಸ ರಾಷ್ಟೀಯ ಶಿಕ್ಷಣ ನೀತಿ ಅನುಸಾರ ತಮ್ಮ ಇಚ್ಛಗೆ ಅನುಗುಣವಾಗಿ ಓದಲು ಡಾಟಾ ಸೈನ್ಸ್, ಎಐ-ಎಂಎಲ್, ಪವರ್ ಎಂಜಿನಿಯರಿಂಗ್, ನವೀಕರಿಸಬಹುದಾದ ಇಂಧನ, ಇಂಡಸ್ಟ್ರಿಯಲ್ ಆಟೋಮ್ಯಾಷನ್ ಹಾಗೂ ಕೈಗಾರಿಕಾ ವಿದ್ಯುತ್ ಎಂಜಿನಿಯರಿಂಗ್, ಸುಸ್ಥಿರ ನಿರ್ಮಿತ ಪರಿಸರ, ಮೂಲಭೂತ ಎಂಜಿನಿಯರಿಂಗ್ ಸೇರಿ ಇನ್ನೂ ಹಲವಾರು ವಿಷಯಗಳನ್ನು ಆಯ್ಕೆಯ ಅನುಸಾರ ಅಧ್ಯಯನ ಮಾಡಬಹುದಾಗಿದೆ ಎಂದು ಅವರು ತಿಳಿಸಿದರು. 

ವಿದ್ಯಾರ್ಥಿಗಳ ದಾಖಲಾತಿಗೆ ಚಾಲನೆ:  ಇದೇ ಸಂದರ್ಭದಲ್ಲಿ ಸಚಿವರು ರಾಜ್ಯದಲ್ಲಿರುವ ಒಟ್ಟು 87 ಸರಕಾರಿ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಪ್ರವೇಶ ಪ್ರಕ್ರಿಯೆಗೆ ಚಾಲನೆ ನೀಡಿದರು. ಇವುಗಳ ಪೈಕಿ 26 ಸರಕಾರಿ ಕಾಲೇಜುಗಳಲ್ಲಿ ಮೆರಿಟ್ ಮೇಲೆ ಪ್ರವೇಶ ನೀಡಲಾಗುವುದು. ಉಳಿದ ಕಾಲೇಜುಗಳಲ್ಲಿ ಮೊದಲು ಬಂದವರಿಗೆ ಮೊದಲ ಆದ್ಯತೆ ಕೊಡಲಾಗುವುದು ಎಂದು ಅವರು ಹೇಳಿದರು. 

ಇದೇ ವೇಳೆ ಅವರು ಸರಕಾರಿ ಪಾಲಿಟೆಕ್ನಿಕ್ ಗಳಿಗೆ ಹೊಸ ಲೊಗೊ ಬಿಡುಗಡೆ ಮಾಡಿದರು. ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕುಮಾರ ನಾಯಕ್, ಕಾಲೇಜು-ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತ ಪಿ.ಪ್ರದೀಪ್, ನಿರ್ದೇಶಕ ಮಂಜುನಾಥ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

click me!