ಮಲ್ಲೇಶ್ವರಂ ನಲ್ಲಿರುವ ಪದವಿ ಪೂರ್ವ ಶಿಕ್ಷಣ ಇಲಾಖೆ ಕಚೇರಿಯಲ್ಲಿ ಶನಿವಾರ ಬೆಳಿಗ್ಗೆ 11.30ಕ್ಕೆ ಸಚಿವ ನಾಗೇಶ್ ಅವರು ಪತ್ರಿಕಾಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದ್ದಾರೆ. ಈ ಬಾರಿ ದ್ವಿತೀಯ ಪಿಯುಸಿ 61.88% ಫಲಿತಾಂಶ ಬಂದಿದೆ.
ಬೆಂಗಳೂರು (ಜೂನ್.18): ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಫಲಿತಾಂಶವನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಪ್ರಕಟಿಸಿದ್ದಾರೆ. ಈ ಬಾರಿ ದ್ವಿತೀಯ ಪಿಯುಸಿ 61.88% ಫಲಿತಾಂಶ ಬಂದಿದೆ. ಕಳೆದ ಬಾರಿಗಿಂತ ಈ ಬಾರಿ 0.6 ಫಲಿತಾಂಶ ಏರಿಕೆ ಆಗಿದೆ. ಈ ಬಾರಿ ಕೂಡ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.
ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯು ಶೇ.88.02 ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದೆ. ಶೇ.86.38 ಮೂಲಕ ಉಡುಪಿ ಎರಡನೇ ಸ್ಥಾನ ಪಡೆದರೆ ಶೇ.77.14 ಪಡೆಯುವ ಮೂಲಕ ವಿಜಯಪುರ ಮೂರನೇ ಸ್ಥಾನ ಪಡೆದುಕೊಂಡಿದೆ. ಇನ್ನು ಚಿತ್ರದುರ್ಗ ಶೇ. 49.31% ಮೂಲಕ ಕೊನೆಯ ಸ್ಥಾನ ಪಡೆದುಕೊಂಡಿದೆ.
ಇನ್ನು ಈ ಬಾರಿ 5,99,794 ಹೊಸಬರು ಪರೀಕ್ಷೆ ತೆಗೆದುಕೊಂಡಿದ್ದರು. ಇದ್ರಲ್ಲಿ 4,02,697 ವಿದ್ಯಾರ್ಥಿ ಪಾಸ್ ಆಗಿದ್ದಾರೆ. ರಿಪೀಟರ್ಸ್ 61838 ರಲ್ಲಿ 14403 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಖಾಸಗಿ ಅಭ್ಯರ್ಥಿಗಳು 21931 ಮಂದಿ ಪರೀಕ್ಷೆ ಬರೆದಿದ್ದರು. ಇದರಲ್ಲಿ 5866 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ ಎಂದು ಬಿಸಿ ನಾಗೇಶ್ ತಿಳಿಸಿದ್ದಾರೆ.
ಈ ಬಾರಿಯೂ ವಿಜ್ ವಿಭಾಗದಲ್ಲಿ ಹೆಚ್ಚು ಫಲಿತಾಂಶ ಬಂದಿದ್ದು, ವಿಜ್ಞಾನ ವಿಭಾಗ 72.53% , ವಾಣಿಜ್ಯ ವಿಭಾಗ 64.97%, ಕಲಾ ವಿಭಾಗದಲ್ಲಿ 58.71 % ಫಲಿತಾಂಶ ಬಂದಿದೆ.
ಮಲ್ಲೇಶ್ವರಂ ನಲ್ಲಿರುವ ಪದವಿ ಪೂರ್ವ ಶಿಕ್ಷಣ ಇಲಾಖೆ (department of pre university education) ಕಚೇರಿಯಲ್ಲಿ ಶನಿವಾರ ಬೆಳಿಗ್ಗೆ 11.30ಕ್ಕೆ ಸಚಿವ ನಾಗೇಶ್ ಅವರು ಪತ್ರಿಕಾಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದ್ದು, ಅಧಿಕೃತ ವೆಬ್‌ಸೈಟ್ www.karresults.nic.in ಪಿಯುಸಿ ಫಲಿತಾಂಶವು 12 ಗಂಟೆಗೆ ದೊರೆಯಲಿದೆ. ವಿದ್ಯಾರ್ಥಿಗಳ ನೊಂದಾಯಿತ ಮೊಬೈಲ್ ಸಂಖ್ಯೆಗೆ ಕೂಡ ಫಲಿತಾಂಶ ಕಳುಹಿಸಲಾಗುವುದು ಎಂದು ಇಲಾಖೆ ತಿಳಿಸಿದೆ.
2nd PUC Result 2022; ವೆಬ್‌ಸೈಟ್ ನಲ್ಲಿ 12 ಗಂಟೆಗೆ ಫಲಿತಾಂಶ ಪ್ರಕಟ, ನೋಡುವುದು ಹೇಗೆ?
ಪಿಯುಸಿ ಪರೀಕ್ಷಾ ಫಲಿತಾಂಶ ವೀಕ್ಷಿಸುವುದು ಹೇಗೆ?
ಅಭ್ಯರ್ಥಿಗಳು ಮೊದಲಿಗೆ www.karresults.nic.inಗೆ ಭೇಟಿ ನೀಡಿ
ಪರದೆಯಲ್ಲಿ ಕಾಣುವ PUC Results to be announced ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ
ನಂತರ ನಿಮ್ಮ ನೊಂದಣಿ ಸಂಖ್ಯೆಯನ್ನು ಎಂಟ್ರಿ ಮಾಡಿ ಸಬ್ಮಿಟ್ ಬಟನ್ ಅನ್ನು ಕ್ಲಿಕ್ ಮಾಡಿದರೇ ಫಲಿತಾಂಶ ಲಭ್ಯವಾಗಲಿದೆ.
ಬಳಿಕ ನಿಮ್ಮ ಅಂಕಪಟ್ಟಿಯನ್ನು ಡೌನ್ಲೋಡ್ ಮಾಡಿಕೊಳ್ಳಿ
ಇದಲ್ಲದೆ ವಿದ್ಯಾರ್ಥಿಗಳು ನೋಂದಾಯಿಸಿರುವ ಮೊಬೈಲ್ ಸಂಖ್ಯೆಗೆ ಕೂಡ ಫಲಿತಾಂಶ ಬರಲಿದೆ.
ಈ ಬಾರಿ ಪಿಯುಸಿ ಪರೀಕ್ಷೆ ಸಮಯದಲ್ಲಿ ಹಿಜಾಬ್ ಗಲಾಟೆ ದೇಶಮಟ್ಟದಲ್ಲಿ ದೊಡ್ಡ ಸುದ್ದಿಯಾಗಿತ್ತು. ವಿದ್ಯಾರ್ಥಿಗಳು ಹಿಜಾಬ್ ಧರಿಸದೇ ಆಡಳಿತ ಮಂಡಳಿಗಳು ನಿಗದಿ ಮಾಡಿರುವ ಸಮವಸ್ತ್ರ ಧರಿಸಿ ಪರೀಕ್ಷೆಗೆ ಹಾಜರಾಗುವಂತೆ ಹೈಕೋರ್ಚ್ ನೀಡಿದ್ದ ಆದೇಶದ ನಡುವೆಯೇ ಏ.22 ರಿಂದ ಮೇ 18ರ ವರೆಗೆ ಪರೀಕ್ಷೆಗಳು ನಡೆದಿದ್ದವು. ಕೆಲ ವಿದ್ಯಾರ್ಥಿಗಳು ಹೈಕೋರ್ಚ್ ನೀಡಿದ್ದ ಆದೇಶವನ್ನು ದಿಕ್ಕರಿಸಿ ಪರೀಕ್ಷೆಗೆ ಹಾಜರಾಗಿರಲಿಲ್ಲ. 1076 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದ್ದು 6,84,255 ವಿದ್ಯಾರ್ಥಿಗಳು ಹಾಜರಾಗಿದ್ದರು.
2021-22ನೇ ಸಾಲಿನಲ್ಲಿ, ರಾಜ್ಯಾದಂತ ಒಟ್ಟು 1076 ಪರೀಕ್ಷಾ ಕೇಂದ್ರಗಳಲ್ಲಿ ಈ ಬಾರಿ ಪರೀಕ್ಷೆ ನಡೆಸಲಾಗಿತ್ತು. ಈ ಬಾರಿ ಒಟ್ಟು 6,84,255 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಇದರಲ್ಲಿ 3,46,936 ಬಾಲಕರು ಹಾಗೂ 3,37,319 ಬಾಲಕಿಯರು ಪರೀಕ್ಷೆ ಬರೆದಿದ್ದಾರೆ. ಇದರಲ್ಲಿ 6,00,519 ರೆಗ್ಯುಲರ್ ವಿದ್ಯಾರ್ಥಿಗಳಿದ್ದರೆ, 61,808 ಪುನರಾವರ್ತಿತ ವಿದ್ಯಾರ್ಥಿಗಳಿದ್ದಾರೆ.