* ಪದವಿ, ಪಿಜಿ ಪದವಿಗಳ ಅಂತಿಮ ಸೆಮಿಸ್ಟರ್ಗಳಿಗೆ ಸಪ್ಟೆಂಬರ್ 15ರಿಂದ ಆರಂಭ
* 2021-22ರ ಶೈಕ್ಷಣಿಕ ತರಗತಿಗಳು ಅಕ್ಟೋಬರ್ 1ರಿಂದ ಪ್ರಾರಂಭ
* ಪದವಿಯ 2 ಮತ್ತು 4, ಪಿಜಿಯ 2ನೇ ಸೆಮಿಸ್ಟರ್ ಪರೀಕ್ಷೆಗಳು ರದ್ದು
ಧಾರವಾಡ(ಜು.22): ಕೋವಿಡ್ 2ನೇ ಅಲೆ ಹಾಗೂ ಸಾರಿಗೆ ಬಸ್ ಮುಷ್ಕರದಿಂದ ಮುಂದೂಲ್ಪಟ್ಟ 2020- 21ನೇ ಸಾಲಿನ ಸ್ನಾತಕ ಹಾಗೂ ಸ್ನಾತಕೋತ್ತರ ಪರೀಕ್ಷೆಗಳನ್ನು ‘ಕರ್ನಾಟಕ ವಿಶ್ವವಿದ್ಯಾಲಯ’ ಯುಜಿಸಿ ಮಾರ್ಗಸೂಚಿ ಮತ್ತು ಉನ್ನತ ಶಿಕ್ಷಣ ಇಲಾಖೆ ನಿರ್ದಶನಗಳ ಅನ್ವಯ ಎರಡು ಹಂತದಲ್ಲಿ ಸಪ್ಟೆಂಬರ್ ಅಂತ್ಯದೊಳಗೆ ಪೂರ್ತಿಗೊಳಿಸಲು ತೀರ್ಮಾನಿಸಿದೆ.
ಈ ಕುರಿತು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕುಲಪತಿ ಡಾ. ಕೆ.ಬಿ. ಗುಡಸಿ, ಕೋವಿಡ್ ನಿಯಮಾವಳಿ ಪಾಲಿಸಿ ಆಗಸ್ಟ್ 16ರಂದು ಸ್ನಾತಕ, ಸ್ನಾತಕೋತ್ತರ ಮತ್ತು ಡಿಪ್ಲೋಮಾ ಪದವಿಗಳ ಬೆಸ (1,3,5) ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸಲಾಗುವುದು. ಸ್ನಾತಕ, ಸ್ನಾತಕೋತ್ತರ ಪದವಿಗಳ ಅಂತಿಮ (6 ಮತ್ತು 8ನೇ ಸೆಮಿಸ್ಟರ್) ಸೆಮಿಸ್ಟರ್ ಪರೀಕ್ಷೆಗಳು ಸಪ್ಟೆಂಬರ್ 15ರಿಂದ ನಡೆಯಲಿವೆ ಎಂದರು.
ಇನ್ನು, ಸ್ನಾತಕ ಹಂತದಲ್ಲಿ 2, 4 ಮತ್ತು ಸ್ನಾತಕೋತ್ತರ ಹಂತದಲ್ಲಿ 2ನೇ ಸೆಮಿಸ್ಟರ್ ಪರೀಕ್ಷೆಗಳನ್ನು ರದ್ದುಪಡಿಸಲಾಗಿದ್ದು ಅವುಗಳಿಗೆ ಕೇವಲ ಆಂತರಿಕ ಅಂಕ ಮತ್ತು ಹಿಂದಿನ ಸೆಮಿಸ್ಟರ್‌ಗಳ ಅಂಕಗಳ ಆಧಾರದ ಮೇಲೆ ಫಲಿತಾಂಶ ಘೋಷಿಸಲು ವಿವಿ ನಿರ್ಧರಿಸಿದೆ. ಅಲ್ಲದೇ, 2021-22 ಶೈಕ್ಷಣಿಕ ಸಾಲಿನ ಎಲ್ಲ ತರಗತಿಗಳು ಬರುವ ಅಕ್ಟೋಬರ್ 1ರಿಂದ ಪ್ರಾರಂಭವಾಗಲಿವೆ. ಅಲ್ಲದೇ, ಈ ಮೊದಲು ನಿರ್ಧರಿಸಿದಂತೆ ಬಹು ಆಯ್ಕೆ ಪ್ರಶ್ನೆಗಳ ಪರೀಕ್ಷಾ ವಿಧಾನ ಕೈಬಿಟ್ಟು ಹಿಂದಿನಂತೆ ವಿವರಣಾತ್ಮಕ ಉತ್ತರ ಬರೆಯುವ ವಿಧಾನದಲ್ಲಿಯೇ ಇರಲಿವೆ ಎಂದು ಡಾ. ಗುಡಸಿ ಸ್ಪಷ್ಟಪಡಿಸಿದರು.
ಆ.2ರಿಂದ ಗುಲ್ಬರ್ಗ ವಿಶ್ವವಿದ್ಯಾಲಯ ಪರೀಕ್ಷೆ
26ರಿಂದ ಕಾಲೇಜು ಆರಂಭ:
ಕೋವಿಡ್ ಸೋಂಕಿನ ಪ್ರಮಾಣ ಕಡಿಮೆಯಾದ ಕಾರಣ ಜುಲೈ 26ರಿಂದ ಕವಿವಿ ಆವರಣ ಸೇರಿದಂತೆ ಎಲ್ಲ ಪದವಿ ಕಾಲೇಜುಗಳಲ್ಲಿ ಬೋಧಕ ತರಗತಿಗಳು ಆರಂಭವಾಗಲಿವೆ. ಈಗಾಗಲೇ ಆನ್‌ಲೈನ್ ಮೂಲಕ ಪಠ್ಯಕ್ರಮವನ್ನು ಪ್ರಾಧ್ಯಾಪಕರು ಮಾಡಿದ್ದು ಅಪೂರ್ಣಗೊಂಡಿದ್ದರೆ ಆಫ್‌ಲೈನ್ ತರಗತಿಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದರು.
ಶೇ. 99ರಷ್ಟು ಲಸಿಕೆ..
ಕವಿವಿ ವ್ಯಾಪ್ತಿಯಲ್ಲಿನ 263 ಕಾಲೇಜುಗಳ ಶಿಕ್ಷಕ- ಶಿಕ್ಷಕೇತರ ಸಿಬ್ಬಂದಿ ಸೇರಿದಂತೆ 108915 ವಿದ್ಯಾರ್ಥಿಗಳಿದ್ದಾರೆ. ಈ ಪೈಕಿ 108148 ವಿದ್ಯಾರ್ಥಿಗಳು ಈಗಾಗಲೇ ಮೊದಲ ಡೋಸ್ ಕೋವಿಡ್ ಲಸಿಕೆ ಪಡೆದಿದ್ದಾರೆ. ಇಡೀ ರಾಜ್ಯದಲ್ಲಿಯೇ ಬೇರೆ ವಿವಿಗಳಿಗೆ ಹೋಲಿಸಿದರೆ ಶೇ. 99ರಷ್ಟು ಲಸಿಕೆ ಹಾಕಿದ ಹೆಮ್ಮೆ ವಿವಿಗೆ ಇದೆ ಎಂದರು. ಕುಲಸಚಿವರಾದ ಡಾ. ಹನುಮಂತಪ್ಪ ಕೆ.ಟಿ., ಡಾ. ಎಚ್. ನಾಗರಾಜ ಇದ್ದರು.
ಆನ್‌ಲೈನ್ ಘಟಿಕೋತ್ಸವ:
ಕೋವಿಡ್ ಹಿನ್ನೆಲೆಯಲ್ಲಿ 70 ಹಾಗೂ 71ನೇ ಘಟಿಕೋತ್ಸವ ಮಾಡಲು ಸಾಧ್ಯವಾಗಿಲ್ಲ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಆನ್‌ಲೈನ್ ಘಟಿಕೋತ್ಸವ ಮಾಡಲು ರಾಜ್ಯಪಾಲರಿಗೆ ಒಪ್ಪಿಗೆ ಕೇಳಲಾಗಿದೆ. ಅದಕ್ಕಾಗಿ ಸಿದ್ಧತೆ ಸಹ ಮಾಡಿಕೊಳ್ಳಲಾಗಿದೆ. ರಾಜ್ಯಪಾಲರಿಂದ ಒಪ್ಪಿಗೆ ಸಿಗುವ ಸಾಧ್ಯತೆಗಳಿದ್ದು ಆನಲೈನ್ ಮೂಲಕ ಘಟಿಕೋತ್ಸವ ಮಾಡಿ ಶೀಘ್ರ ವಿದ್ಯಾರ್ಥಿಗಳಿಗೆ ಪೋಸ್ಟ್ ಮೂಲಕ ಚಿನ್ನದ ಪದಕ, ಪದವಿ ಪ್ರಮಾಣ ಪತ್ರ ಹಾಗೂ ಪಿಎಚ್‌ಡಿಗಳನ್ನು ಪ್ರದಾನ ಮಾಡಲಾಗುವುದು ಎಂದು ಡಾ.ಗುಡಸಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.