* ಕಾರ್ಕಳ ಜರಿಗುಡ್ಡೆಯ ಶೌಕತ್‌ಗೆ 7ನೇ ಪ್ರಯತ್ನದಲ್ಲಿ ಯಶಸ್ಸು
* ಕಷ್ಟದ ಸಂದರ್ಭದಲ್ಲಿಯೂ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ ಹೆತ್ತವರೇ ನನಗೆ ಪ್ರೇರಣೆ
* ಕಂದಾಯ, ಲೆಕ್ಕ ಪರಿಶೋಧನೆ ವಿಭಾಗದಲ್ಲಿ ಆಯ್ಕೆಯಾಗುವ ಸಾಧ್ಯತೆ
ಕಾರ್ಕಳ(ಜೂ.01): ಕೇಂದ್ರೀಯ ಲೋಕಸೇವಾ ಆಯೋಗ ನಡೆಸಿದ ಪರೀಕ್ಷೆಯಲ್ಲಿ ಇಲ್ಲಿನ ಜರಿಗುಡ್ಡೆ ನಿವಾಸಿ, ಟ್ಯಾಕ್ಸಿ ಚಾಲಕನ ಪುತ್ರ ಮೊಹಮ್ಮದ್ ಶೌಕತ್ ಅಝೀಂ 914 ಅಂಕ ಪಡೆದು 545ನೇ ರ್‍ಯಾಂಕ್ ಗಳಿಸಿ ಸಾಧನೆ ಮಾಡಿದ್ದಾರೆ.
ಕಾರ್ಕಳದ ಎಸ್‌ವಿಟಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಶೌಕತ್, ಕೆ.ಎಂ.ಇ.ಎಸ್. ಕಾಲೇಜಿನಲ್ಲಿ ಪ್ರೌಢ ಮತ್ತು ಪದವಿಪೂರ್ವ ಶಿಕ್ಷಣ ಪಡೆದಿದ್ದಾರೆ. ನಂತರ ಮೂಡುಬಿದಿರೆ ಸಮೀಪದ ಮಿಜಾರಿನಲ್ಲಿ ಮೈಟ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್‌ನಲ್ಲಿ ಎಂಜಿನಿಯರಿಂಗ್ ಪದವಿ ಪೂರೈಸಿದ್ದಾರೆ. ಬಳಿಕ ಯುಪಿಎಸ್‌ಸಿ ಪರೀಕ್ಷೆ ಬರೆಯಬೇಕೆಂಬ ಹಂಬಲದಲ್ಲಿದ್ದಾಗ ಕರ್ನಾಟಕ ಸರ್ಕಾರ ವತಿಯಿಂದ ಯುಪಿಎಸ್‌ಸಿ ಪರೀಕ್ಷೆ ತರಬೇತಿಗೆ ಆಯ್ಕೆಯಾಗಿ ಪ್ರೋತ್ಸಾಹಧನದೊಂದಿಗೆ ತರಬೇತಿ ಪಡೆದರು.
undefined
Vijayapura: ಎರಡು ಬಾರಿ ಯುಪಿಎಸ್ಸಿ ಪರೀಕ್ಷೆ ಬರೆದ ಗುಮ್ಮಟನಗರಿ ಯುವತಿ!
ಪ್ರಥಮ ಬಾರಿಗೆ 2016ರಲ್ಲಿ ಯುಪಿಎಸ್‌ಸಿ ಪರೀಕ್ಷೆ ಎದುರಿಸಿದ ಅವರು, ಸತತ ಏಳನೇ ಪ್ರಯತ್ನದಲ್ಲಿ ಉತ್ತಮ ರ್‍ಯಾಂಕ್ ನೊಂದಿಗೆ ಯಶಸ್ಸು ಸಾಧಿಸಿದ್ದಾರೆ.
2021ರ ಲೋಕಸೇವಾ ಆಯೋಗವು ದೇಶಾದ್ಯಂತ 685 ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಅದರಲ್ಲಿ 545ನೇ ರ್‍ಯಾಂಕ್ ನೊಂದಿಗೆ ಕರ್ನಾಟಕದಲ್ಲಿ ಆಯ್ಕೆಯಾದವರಲ್ಲಿ ಇವರೂ ಒಬ್ಬರು. ಮೊಹಮ್ಮದ್ ಶೌಕತ್ ಅಝೀಂ ಬಡ ಕುಟುಂಬದಲ್ಲಿ ಜನಿಸಿದ್ದು, ಅವರ ತಂದೆ ಶೇಕ್ ಅಬ್ದುಲ್ ವೃತ್ತಿಯಲ್ಲಿ ವಾಹನ ಚಾಲಕರಾಗಿದ್ದಾರೆ. ತಾಯಿ ಮೈಮುನಾ ಗೃಹಿಣಿ.
ಕಷ್ಟದ ಸಂದರ್ಭದಲ್ಲಿಯೂ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ ಹೆತ್ತವರೇ ನನಗೆ ಪ್ರೇರಣೆ. ಪ್ರತಿನಿತ್ಯ ಐದು ಗಂಟೆ ಸತತ ಪರೀಕ್ಷಾ ಪೂರ್ವ ತಯಾರಿ ನಡೆಸುತ್ತಿದ್ದೆ. ಕೇವಲ ಓದು ಮಾತ್ರವಲ್ಲ, ಅದರ ಜೊತೆಗೆ ಸಾಮಾಜಿಕ ಜ್ಞಾನ ನನಗೆ ಸಹಕಾರಿಯಾಯಿತು. ಕಂದಾಯ, ಲೆಕ್ಕ ಪರಿಶೋಧನೆ ವಿಭಾಗದಲ್ಲಿ ಆಯ್ಕೆಯಾಗುವ ಸಾಧ್ಯತೆಯಿದೆ. ಎರಡು ತಿಂಗಳಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಅಂತ ಮೊಹಮ್ಮದ್ ಶೌಕತ್ ಅಝೀಂ ತಿಳಿಸಿದ್ದಾರೆ.