ಕಲಬುರಗಿ: ಎಂಬಿಬಿಎಸ್‌ನಲ್ಲಿ ಐಸ್‌ಕ್ರೀಂ ಮಾರುವ ಮಗನ ಚಿನ್ನದ ಬೇಟೆ..!

By Kannadaprabha News  |  First Published Jun 1, 2022, 11:40 AM IST

*   ರಾಂಪೂರೆ ವೈದ್ಯ ವಿದ್ಯಾಲಯದ ಪದವಿ ಘಟಿಕೋತ್ಸವ 
*   ಕಲಬುರಗಿ ಮಹಾದೇವಪ್ಪ ರಾಂಪೂರೆ ವೈದ್ಯ ವಿದ್ಯಾಲಯದ ಘಟಿಕೋತ್ಸವ
*   ಚಿನ್ನದ ಬೇಟೆಯಾಡಿರೋ ಶಿವಸಾಗರ್‌ ಜಾಟ್‌ಗೆ ಎಂಎಸ್‌ ಮಾಡುವ ಇರಾದೆ
 


ಕಲಬುರಗಿ(ಜೂ.01): ಇಲ್ಲಿನ ಹೈಕಶಿ ಸಂಸ್ಥೆಯ ರಾಂಪೂರೆ ವೈದ್ಯ ವಿದ್ಯಾಲಯದ ಪದವಿ ಘಟಿಕೋತ್ಸವದಲ್ಲಿ ಐಸ್‌ಕ್ರೀಂ ಮಾರುವ ವರ್ತಕನ ಮಗನೋರ್ವ ಚಿನ್ನದ ಪದಕಗಳನ್ನು ಅತೀ ಹೆಚ್ಚು ಪಡೆಯುವ ಮೂಲಕ ಸರ್ವರ ಗಮನ ಸೆಳೆದಿದ್ದಾನೆ. ಇಲ್ಲಿನ ಸೂಪರ್‌ ಮಾರ್ಕೆಟ್‌ನಲ್ಲಿ ಕಳೆದ 4 ದಶಕದಿಂದ ಐಸ್‌ಕ್ರೀಂ ಮಾರುವ ನಂದಲಾಲ್‌ ಜಾಟ್‌ ಇವರ ಪುತ್ರ ಶಿವಸಾಗರ್‌ ಜಾಟ್‌ ಈತನೇ ಚಿನ್ನದ ಹುಡಗನಾಗಿ ಸೇರಿದ್ದವರ ಗಮನ ಸೆಳೆದ.

ಶರೀರ ವಿಜ್ಞಾನ, ಔಷಧಿ ವಿಜ್ಞಾನ, ಸೂಕ್ಷ್ಮಜೀವ ವಿಜ್ಞಾನ ಹೀಗೆ ವೈದ್ಯಕೀಯ ಲೋಕದ ಹತ್ತು ಹಲವು ವಿಷಯಗಳಲ್ಲೆಲ್ಲಾ ಹೆಚ್ಚಿನ ಅಂಕ ಪಡೆದ ಈತ ಅತೀ ಹೆಚ್ಚಿನ 7 ಚಿನ್ನದ ಪದಕಗಳನ್ನು ಬಾಚಿಕೊಂಡಾತ. ಹೀಗೆ ಚಿನ್ನದ ಬೇಟೆಗಾರನಾಗಿ ಹೊಹೊಮ್ಮಿರುವ ಶಿವಸಾಗರ್‌ ಜಾಟ್‌ ಮುಂದೆ ಎಂಎಸ್‌ ಪದವಿ ಓದುವ ತವಕಲ್ಲಿದ್ದಾನೆ. ಈತನಿಗೆ ಪದವೀ ಪ್ರದಾನ ಸಮಾರಂಭದಲ್ಲಿ ಅತಿಥಿಗಳು ಚಿನ್ನದ ಪದಕಗಳ ಸರವನ್ನೇ ಹಾಕಿ ಅಭಿನಂದಿಸಿದರು. ಸೇರಿದ್ದ ಸಭಿಕರು ಬಾರಿ ಕರತಾಡನದ ಮೂಲಕ ಶಿವಸಾಗರನ ಸಾಧನೆಗೆ ಶುಭ ಕೋರಿದರು. ಇವರ ತಂದೆ ಐಸ್‌ಕ್ರೀಂ ಮಾರುತ್ತಲೇ ಮಗನಿಗೆ ಅತ್ಯುನ್ನತ ಓದನ್ನು ಓದಿಸಿದ್ದರು. ಹೀಗಾಗಿ ಇದೇ ತನ್ನ ಸಾಧನೆಗೆ ಕಾರಣವಾಯ್ತು ಎಂದು ಶಿವಸಾಗರ ಜಾಟ್‌ ಹೇಳಿದ್ದಾನೆ. ಕೋವಿಡ್‌ ಕಾಲದಲ್ಲಿಯೂ ತಾನು ಬಸವೇಶ್ವರ ಆಸ್ಪತ್ರೆಯಲ್ಲಿ ಅನೇಕ ಸೇವಾ ಕೆಲಸಗಳಲ್ಲಿ ತೊಡಗಿದ್ದಾಗಿಯೂ ಈತ ಸ್ಮರಿಸಿದ್ದಾನೆ.

Tap to resize

Latest Videos

ಬಾಗಲಕೋಟೆ ತೋವಿವಿ ಘಟಿಕೋತ್ಸವ: 16 ಗೋಲ್ಡ್​ ಮೆಡಲ್‌ಗೆ ಮುತ್ತಿಟ್ಟ ರೈತನ ಮಗಳು..!

ಇದೇ ಘಟಿಕೋತ್ಸವದಲ್ಲಿ ಮೇಘಾ ಪಾಟೀಲ್‌, ಸಿಂಧುಜಾ ದೇವಪಾಲ್‌ ತಲಾ 3 ಚಿನ್ನದ ಪದಕ, ಮಾರಿಯಾ ಸುಲ್ತಾನಾ ಎರಡು ಚಿನ್ನದ ಪದಕ ಪಡೆದು ಸಾಧನೆ ಮಾಡಿದ್ದಾರೆ. 150 ವಿದ್ಯಾರ್ಥಿಗಳು ಎಂಬಿಬಿಎಸ್‌ ಪದವೀಧರರಾಗಿ ಪ್ರತಿಜ್ಞೆ ಸ್ವೀಕರಿಸಿದರು. ಕಾಲೇಜಿನ ಡೀನ್‌ ಡಾ. ಎಸ್‌. ಎಂ. ಪಾಟೀಲ್‌ ಪ್ರತಿಜ್ಞಾ ವಿಧಿ ಬೋಧಿಸಿದರು. ಹೈಕಶಿ ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ ಬಿಲಗುಂದಿ, ಉಪಾಧ್ಯಕ್ಷ ಶರಣಬಸಪ್ಪ ಹರವಾಳ್‌, ಡಾ. ಜಗನ್ನಾಥ ವಿಜಾಪುರ, ಡಾ. ಶರಣಗೌಡ ಪಾಟೀಲ್‌, ಡಾ. ಮಲ್ಲಿಕಾರ್ಜುನ ತೆಗ್ನೂರ್‌, ಡಾ. ಮಹಾನಂದಾ ಮೇಳಕುಂದಿ ಇತರರು ಇದ್ದರು.

ಘಟಿಕೋತ್ಸವ ಭಾಷಣ ಮಾಡಿದ ನಾಗಪುರ ದತ್ತಾ ಮೇಘ ವೈದ್ಯ ವಿಜ್ಞಾನ ವಿದ್ಯಾಲಯದ ಕುಲಪತಿ ಡಾ. ವೇದಪ್ರಕಾಶ ಮಿಶಾ ಮಾತನಾಡುತ್ತ ಪದವಿ ಪ್ರದಾನ ಘಟಿಕೋತ್ಸವ ಇದು, ಆದರೆ ಬದುಕಲ್ಲಿ ಕಲಿಕೆ ನಿರಂತರ ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು. ದೇಶದ ಅಭ್ಯುದಯಕ್ಕಾಗಿ ತಾವೆಲ್ಲರೂ ಉಪನಿಷತ್ತಿನ ನೀತಿಗಳಂತೆ ತಂದೆ- ತಾಯಿ, ಗುರುಗಳು, ಹಿರಿರನ್ನು ಗೌರವಿಸಿರಿ, ಅತ್ಯುತ್ತಮವಾದ ಕೊಡುಗೆಗಳನ್ನು ಮನುಕುಲಕ್ಕೆ, ಸಮಾಜಕ್ಕೆ ನೀಡಿರೆಂದರು.
ಕೋವಿಡ್‌ 2 ವರ್ಷದಿಂದಾಗಿ ಪದವಿ ಘಟಿಕೋತ್ಸವ ಆಗಿರಲಿಲ್ಲ. ಹೀಗಾಗಿ ಇದೀಗ ಪದವಿ ಪ್ರದಾನ ಸಮಾರಂಭ ನಡೆಯುತ್ತಿರೋದನ್ನ ಕಂಡು ವಿದ್ಯಾರ್ಥಿಗಳು ತುಂಬ ಲವಲವಿಕೆಯಲ್ಲಿದ್ದರು. ಖುಷಿಯಲ್ಲಿದ್ದು ತಮ್ಮ ಪದವಿ ಪ್ರಮಾಣ ಪತ್ರ ಪಡೆಯೋ ಸರತಿಗಾಗಿ ಕಾಯುತ್ತ ತುದಿಗಾಲಲ್ಲಿ ನಿಂತಿರೋದು ಅಲ್ಲಿ ಕಂಡು ಬಂತು.
 

click me!