ಈ ಲಂಚ ಹಗರಣ ಸಂಬಂಧ ಗುಜರಾತಿನ ಪಂಚಮಹಲ್ ಜಿಲ್ಲೆಯ ಗೋಧ್ರಾ ನಗರದ ಜಲರಾಮ್ ಶಾಲೆಯ ಪ್ರಾಂಶುಪಾಲ ಹಾಗೂ ಶಿಕ್ಷಕರು ಸೇರಿ ಐವರನ್ನು ಬಂಧಿಸಿದ್ದಾರೆ. ವಿದ್ಯಾರ್ಥಿಗಳ ಪೋಷಕರು ನೀಡಿದ್ದ 2.3 ಕೋಟಿ ರು. ಮೌಲ್ಯದ ಚೆಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ.
ಅಹಮದಾಬಾದ್ (ಜೂ.16): ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕಾಗಿ ನಡೆಸಲಾಗುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್)ನಲ್ಲಿ ಈ ಬಾರಿ ಮಹಾ ಅಕ್ರಮವಾಗಿದೆ ಎಂಬ ವಿವಾದಗಳ ಬೆನ್ನಲ್ಲೇ ಗುಜರಾತ್ ಪೊಲೀಸರು‘ಪರೀಕ್ಷೆ ಪಾಸ್‌ಗಾಗಿ ಲಂಚ’ ಹಗರಣವನ್ನು ಪತ್ತೆ ಹಚ್ಚಿದ್ದಾರೆ. ಆತಂಕಕಾರಿ ಸಂಗತಿ ಎಂದರೆ ಈ ಹಗರಣದಲ್ಲಿ ಕರ್ನಾಟಕದ ಕೆಲ ವಿದ್ಯಾರ್ಥಿಗಳೂ ಭಾಗಿಯಾಗಿರುವ ವಿಷಯ ಬೆಳಕಿಗೆ ಬಂದಿದೆ.
ಈ ಲಂಚ ಹಗರಣ ಸಂಬಂಧ ಗುಜರಾತಿನ ಪಂಚಮಹಲ್ ಜಿಲ್ಲೆಯ ಗೋಧ್ರಾ ನಗರದ ಜಲರಾಮ್ ಶಾಲೆಯ ಪ್ರಾಂಶುಪಾಲ ಹಾಗೂ ಶಿಕ್ಷಕರು ಸೇರಿ ಐವರನ್ನು ಬಂಧಿಸಿದ್ದಾರೆ. ವಿದ್ಯಾರ್ಥಿಗಳ ಪೋಷಕರು ನೀಡಿದ್ದ 2.3 ಕೋಟಿ ರು. ಮೌಲ್ಯದ ಚೆಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಜಲರಾಮ್ ಶಾಲೆಯ ಶಿಕ್ಷಕ ತುಷಾರ್ ಭಟ್, ರಾಯ್ ಓವರ್‌ಸೀಸ್ ಎಂಬ ಶೈಕ್ಷಣಿಕ ಸಲಹಾ ಸಂಸ್ಥೆಯನ್ನು ನಡೆಸುವ ಪರಶುರಾಮ್ ರಾಯ್ ಹಾಗೂ ಶಾಲೆಯ ಪ್ರಾಂಶುಪಾಲ ಪುರುಷೋತ್ತಮ ಶರ್ಮಾ ಅವರು ಬಂಧಿತರಲ್ಲಿ ಸೇರಿದ್ದಾರೆ.
undefined
ಪ್ರವಾಸೋದ್ಯಮಕ್ಕೆ ಹೊಸ ನೀತಿ, ಉದ್ದಿಮೆಗಳನ್ನು ಜಿಎಸ್‌ಟಿ ಕೊಲ್ಲುತ್ತಿದೆ: ಡಿಕೆಶಿ
ಈ ವಂಚನೆ ಹಗರಣದ ಕುರಿತು ಪಂಚಮಹಲ್ ಜಿಲ್ಲಾಧಿಕಾರಿಗಳಿಗೆ ಮಾಹಿತಿ ಲಭ್ಯವಾಗಿತ್ತು. ಕೂಡಲೇ ಜಿಲ್ಲಾ ಶಿಕ್ಷಣಾಧಿಕಾರಿಗಳು ಶಾಲೆಗೆ ತೆರಳಿ ಶಿಕ್ಷಕ ಭಟ್ ಅವರ ಫೋನ್ ಪರಿಶೀಲಿಸಿದ್ದಾರೆ. ಅದರಲ್ಲಿ 30 ವಿದ್ಯಾರ್ಥಿಗಳ ಪಟ್ಟಿಯೇ ಸಿಕ್ಕಿದೆ. ಅದರಲ್ಲಿ ಗುಜರಾತ್ ಹೊರತುಪಡಿಸಿ, ದೂರದ ಕರ್ನಾಟಕ, ಒಡಿಶಾ, ಜಾರ್ಖಂಡ್, ಮಧ್ಯಪ್ರದೇಶದ 16 ಹೆಸರು ಪತ್ತೆಯಾಗಿದೆ. ಬಂಧಿತ ಭಟ್ ಕಾರಿನಿಂದ 7 ಲಕ್ಷ ರು. ನಗದು ಜಪ್ತಿ ಮಾಡಲಾಗಿದೆ. ಬಳಿಕ ಶಿಕ್ಷಕ ಭಟ್ ಹಾಗೂ ಪ್ರಾಂಶುಪಾಲ ಪುರುಷೋತ್ತಮ ಅವರನ್ನು ಬಂಧಿಸಲಾಗಿದೆ. ಅವರು ನೀಡಿದ ಮಾಹಿತಿ ಮೇರೆಗೆ ರಾಯ್ ಅವರನ್ನು ಬಂಧಿಸಿದ್ದು, ಅವರಿಂದ 8 ಖಾಲಿ ಚೆಕ್‌ಗಳನ್ನು ಜಪ್ತಿ ಮಾಡಲಾಗಿದೆ.
ಇದಲ್ಲದೆ 2.30 ಕೋಟಿ ರು. ಮೌಲ್ಯದ ಚೆಕ್‌ಗಳನ್ನು ರಾಯ್ ಅವರಿಂದ ವಶಕ್ಕೆ ತೆಗೆದುಕೊಳ್ಳಲಾಗಿದೆ. ಈ ಪೈಕಿ ಬಹುತೇಕ ಚೆಕ್‌ಗಳು ಜಲರಾಮ್ ಶಾಲೆಯಲ್ಲಿ ನೀಟ್ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಪೋಷಕರು ನೀಡಿದವಾಗಿವೆ. ಪ್ರತಿ ವಿದ್ಯಾರ್ಥಿಯಿಂದ ಪರೀಕ್ಷೆ ಪಾಸ್ ಮಾಡಿಸಲು ತಲಾ 10 ಲಕ್ಷ ರು. ಲಂಚ ಪಡೆಯಲಾಗಿತ್ತು ಎಂದು ಪ್ರಕರಣ ಸಂಬಂಧ ಪೊಲೀಸರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.
ರೇಣುಕಾಸ್ವಾಮಿಗೆ ಕರೆಂಟ್ ಶಾಕ್ ಕೊಟ್ಟು ದರ್ಶನ್ ಗ್ಯಾಂಗ್ ಟಾರ್ಚರ್!
ಹಗರಣ ಹೇಗೆ?: ಶೈಕ್ಷಣಿಕ ಸಲಹಾ ಸಂಸ್ಥೆ ನಡೆಸುತ್ತಿದ್ದ ಪರಶುರಾಮ್ ರಾಯ್ ನೀಟ್ ಆಕಾಂಕ್ಷಿಗಳನ್ನು ಶಿಕ್ಷಕ ಭಟ್ ಅವರಿಗೆ ಪರಿಚಯಿಸುತ್ತಿದ್ದ. ಭೌತಶಾಸ್ತ್ರ ಶಿಕ್ಷಕರಾಗಿದ್ದ ಭಟ್ ಅವರು ನೀಟ್ ಪರೀಕ್ಷೆಗಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ)ಯಿಂದ ನೇಮಕಗೊಂಡಿದ್ದ ಉಪ ವರಿಷ್ಠಾಧಿಕಾರಿಯೂ ಆಗಿದ್ದರು. ಮೇ 5ರಂದು ಗೋಧ್ರಾದ ಜಲರಾಮ್ ಶಾಲೆಯಲ್ಲಿ ನೀಟ್ ನಡೆದಿತ್ತು. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ವಿದ್ಯಾರ್ಥಿಗಳು ಪರೀಕ್ಷೆಯ ವೇಳೆ ಉತ್ತರ ಪತ್ರಿಕೆಯಲ್ಲಿ ಏನೂ ಬರೆಯದೆ ಖಾಲಿ ಬಿಡುತ್ತಿದ್ದರು. ಬಳಿಕ ಶಿಕ್ಷಕರು ಅದಕ್ಕೆ ಸರಿ ಉತ್ತರವನ್ನು ಬರೆಯುತ್ತಿದ್ದರು. ಇದಕ್ಕಾಗಿ ಚೆಕ್ ಮೂಲಕ ಹಣ ಪಡೆಯಲಾಗಿತ್ತು.