SSLC Results: ಕನ್ನಡಪ್ರಭ ಪತ್ರಿಕೆ ಹಂಚುವ ಹುಡುಗ ಟಾಪರ್‌..!

By Girish Goudar  |  First Published May 20, 2022, 11:39 AM IST

*   ಕುಕನೂರಿನ ಶ್ರೀ ಗವಿಸಿದ್ಧೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿ ಆಕಾಶ್‌ ಕಮ್ಮಾರ್‌ ಸಾಧನೆ
*  ಆಕಾಶ್‌ ಸಾಧನೆಗೆ ವ್ಯಾಪಕ ಪ್ರಶಂಸೆ
*  ನಿತ್ಯವೂ ಪತ್ರಿಕೆ ಹಾಕುವುದರ ಜತೆಗೆ ತಪ್ಪದೇ ಶಾಲೆಗೆ ಹೋಗಿದ ಆಕಾಶ್‌


ಸೋಮರಡ್ಡಿ ಅಳವಂಡಿ

ಕೊಪ್ಪಳ(ಮೇ.20):  ಜಿಲ್ಲೆಯ ಕುಕನೂರು ಪಟ್ಟಣದಲ್ಲಿ ನಿತ್ಯ ‘ಕನ್ನಡಪ್ರಭ’ ಸೇರಿದಂತೆ ವಿವಿಧ ದಿನಪತ್ರಿಕೆಯನ್ನು ಮನೆ ಮನೆಗೆ ಸೈಕಲ್‌ನಲ್ಲಿ ಹಂಚುತ್ತಿದ್ದ ಬಾಲಕ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಶಾಲೆಗೆ ಟಾಪರ್‌ ಆಗಿದ್ದಾನೆ.

Latest Videos

undefined

ಕುಕನೂರಿನ ಶ್ರೀ ಗವಿಸಿದ್ಧೇಶ್ವರ ಪ್ರೌಢಶಾಲೆಯಲ್ಲಿ ಓದುತ್ತಿದ್ದ ಆಕಾಶ್‌ ಶೇಖಪ್ಪ ಕಮ್ಮಾರ್‌ ಎನ್ನುವ ವಿದ್ಯಾರ್ಥಿ ಈ ಸಾಧನೆ ಮಾಡಿದ್ದು, ವ್ಯಾಪಕ ಪ್ರಶಂಸೆಗೆ ಪಾತ್ರನಾಗಿದ್ದಾನೆ. ನಿತ್ಯವೂ ಟ್ಯೂಷನ್‌ ಸೇರಿದಂತೆ ಮೊದಲಾದ ಸೌಲಭ್ಯ ಪಡೆದರೂ ಪಾಸಾಗುವುದು ದುಸ್ತರ. ಆದರೆ, ಕುಟುಂಬ ನಿರ್ವಹಣೆಗಾಗಿ ನಿತ್ಯವೂ ಬೆಳಗಿನ ಜಾವ ಎರಡು ಗಂಟೆ ಪತ್ರಿಕೆ ಹಾಕಿ, ಶಾಲೆಗೆ ಟಾಪರ್‌ ಆಗಿದ್ದು ಛಲದಂಕ ಮಲ್ಲ ಎಂಬುದನ್ನು ಸಾಬೀತುಪಡಿಸಿದ್ದಾನೆ. 625 ಅಂಕಗಳಿಗೆ 553 ಅಂಕಗಳೊಂದಿಗೆ ಶೇ. 88.48ರಷ್ಟುಫಲಿತಾಂಶ ಪಡೆದಿದ್ದಾನೆ. ಅಲ್ಲದೇ ಶ್ರೀ ಗವಿಸಿದ್ಧೇಶ್ವರ ಪ್ರೌಢಶಾಲೆಯಲ್ಲಿಯೇ ಟಾಪರ್‌ ವಿದ್ಯಾರ್ಥಿಯಾಗಿ ಹೊರಹೊಮ್ಮಿದ್ದಾನೆ.

ಎಸ್ಸೆಸ್ಸೆಲ್ಸಿ ಪರೀಕ್ಷೆ: ತಾಯಿ, ಮಗಳು ಪಾಸ್‌..!

ಅತಿ ಸಂತೋಷವಾಗಿದೆ:

ನನಗೆ ಅತೀವ ಸಂತೋಷವಾಗಿದೆ. ನಾನು ಇಷ್ಟೊಂದು ದೊಡ್ಡ ಸಾಧನೆ ಮಾಡುತ್ತೇನೆ ಎಂದುಕೊಂಡಿರಲಿಲ್ಲ. ಪತ್ರಿಕೆಯನ್ನು ಹಂಚುವ ಕಾರ್ಯದೊಂದಿಗೆ ಅಭ್ಯಾಸಕ್ಕೂ ಒತ್ತು ನೀಡಿದೆ. ಅಲ್ಲದೇ ನಿತ್ಯವೂ ಪತ್ರಿಕೆ ಹಾಕುವುದರ ಜತೆಗೆ ತಪ್ಪದೇ ಶಾಲೆಗೆ ಹೋಗಿದ್ದೇನೆ. ಶಾಲೆಯ ಟಾಪರ್‌ ಆಗಿರುವುದು ಖುಷಿಯಾಗುತ್ತಿದೆ.

ಮನೆಯಲ್ಲಿ ಬಡತನ ಇರುವುದರಿಂದ ಅನಿವಾರ್ಯವಾಗಿ ಪತ್ರಿಕೆ ಹಂಚುವ ಕೆಲಸ ಮಾಡುತ್ತಿದ್ದೇನೆ. ಫಲಿತಾಂಶ ಬರುವ ದಿನವೂ ನಾನು ಬೆಳಗ್ಗೆ ಪತ್ರಿಕೆ ಹಾಕಿದ್ದೇನೆ. ನಾಳೆಯೂ ಹಾಕುತ್ತೇನೆ. ಮನೆಯಲ್ಲಿ ಆರ್ಥಿಕ ತೊಂದರೆ ಇರುವುದರಿಂದ ನನ್ನಿಂದಲೂ ಒಂದಿಷ್ಟುಸಹಾಯ ಆಗಲಿ ಮತ್ತು ನನ್ನ ಓದಿಗೂ ಅನುಕೂಲವಾಗುತ್ತದೆ ಎಂದು ಪತ್ರಿಕೆಯನ್ನು ಹಾಕುವ ಕೆಲಸ ಆರಿಸಿಕೊಂಡಿದ್ದೇನೆ. ಬೆಳಗ್ಗೆ ನಿತ್ಯವೂ 5 ರಿಂದ 7 ಗಂಟೆಯವರೆಗೂ ಪತ್ರಿಕೆಯನ್ನು ಮನೆ ಮನೆಗೆ ತಲುಪಿಸುತ್ತೇನೆ. ಇದಾದ ನಂತರ ಮನೆಗೆ ಹೋಗಿ ಸಣ್ಣಪುಟ್ಟ ಕೆಲಸಗಳನ್ನು ಮಾಡಿ ಅಲ್ಲಿಂದ ಶಾಲೆ ಹೋಗುತ್ತಿದ್ದೆ. ಮನೆಯವರಿಗೂ ಸಹಾಯ ಮಾಡಿಕೊಳ್ಳುತ್ತಲೇ ಓದಿದ್ದೇನೆ. ಉತ್ತಮ ಫಲಿತಾಂಶ ಬಂದಿರುವುದು ಖುಷಿಯಾಗಿದೆ ಎನ್ನುತ್ತಾನೆ.

SSLC Results 2022: ಗ್ರೇಸ್‌ ಅಂಕ ಪಡೆದು 40,000 ಎಸ್ಸೆಸ್ಸೆಲ್ಸಿ ಮಕ್ಕಳು ಪಾಸ್‌..!

ಫಲಿತಾಂಶದಿಂದಾಗಿ ಮನೆಯವರೆಲ್ಲರೂ ಖುಷಿಯಾಗಿದ್ದಾರೆ. ಮುಂದೆ ಓದಿ, ಐಎಎಸ್‌ ಆಗುವ ಗುರಿ ಹೊಂದಿದ್ದೇನೆ. ಎಸ್‌ಎಸ್‌ಎಲ್‌ಸಿ ನಂತರ ಪಿಯುಸಿಯಲ್ಲಿ ವಿಜ್ಞಾನ ವಿಭಾಗದಲ್ಲಿ ಸೇರಿಕೊಳ್ಳುತ್ತೇನೆ. ಯಾವ ಕಾಲೇಜು ಏನು ಎನ್ನುವ ಕುರಿತು ಈಗಲೇ ಯೋಚನೆ ಮಾಡಿಲ್ಲ. ಎಲ್ಲಿ ಸಿಗುತ್ತದೆಯೋ ಅಲ್ಲಿ ಓದುತ್ತೇನೆ ಎಂದನು.

ವಿದ್ಯಾರ್ಥಿ ಜಾಣನಾಗಿದ್ದ ಮತ್ತು ಶ್ರದ್ಧೆಯಿಂದ ಓದುತ್ತಿದ್ದ. ಮನೆಯಲ್ಲಿ ಬಡತನ ಇದ್ದರೂ ಬೆಳಗ್ಗೆ ಪತ್ರಿಕೆಯನ್ನು ಹಂಚಿ ನಿತ್ಯವೂ ತಪ್ಪದೇ ಶಾಲೆ ಬರುತ್ತಿದ್ದ. ಶಾಲೆಗೆ ಟಾಪರ್‌ ಆಗಿರುವುದು ನಮಗೂ ಸಂತೋಷವಾಗಿದೆ ಅಂತ ಕುಕನೂರು ಶ್ರೀ ಗವಿಸಿದ್ಧೇಶ್ವರ ಪ್ರೌಢಶಾಲೆ ಶಿಕ್ಷಕ ಬಸವರಾಜ ಲಕ್ಷಾಣಿ ತಿಳಿಸಿದ್ದಾರೆ. 

ಮಗನ ಸಾಧನೆ ಕಂಡು ಖುಷಿಯಾಗುತ್ತದೆ. ಮನೆಯಲ್ಲಿ ಕೆಲಸವನ್ನು ಮಾಡಿಕೊಂಡು, ಪತ್ರಿಕೆಯನ್ನು ಹಂಚಿಕೆ ಮಾಡುತ್ತಲೇ ಈ ಸಾಧನೆ ಮಾಡಿದ್ದಾನೆ ಅಂತ ವಿದ್ಯಾರ್ಥಿಯ ತಂದೆ ಶೇಖಪ್ಪ ಕಮ್ಮಾರ ಹೇಳಿದ್ದಾರೆ.  
 

click me!