ವಿಜಯಪುರ: ಗ್ರಾಮೀಣ ಭಾಗದಲ್ಲಿ ಬಂದ್‌ ಆಯ್ತಾ ಬಿಸಿಯೂಟ..?

By Girish GoudarFirst Published Jul 8, 2022, 11:00 PM IST
Highlights

*   ಮಧ್ಯಾಹ್ನ ಕಟಿ ರೊಟ್ಟಿ, ಕಾರ-ಎಣ್ಣೆ ತಿನ್ತಿರೋ ಸರ್ಕಾರಿ ಶಾಲೆ ಮಕ್ಕಳು 
*  ಏಷ್ಯಾನೆಟ್‌ ಸುವರ್ಣ ನ್ಯೂಸ್‌ ವರದಿಯನ್ನ ಟ್ವಿಟ್‌ ಮಾಡಿದ ಎಂ.ಬಿ. ಪಾಟೀಲ್‌
*   ಕಟ್ಟಿಗೆ ಆಯ್ದು ತಂದು ಬಿಸಿಯೂಟ ತಯಾರಿಕೆ
 

ವರದಿ: ಷಡಕ್ಷರಿ ಕಂಪೂನವರ್‌, ಏಷ್ಯಾನೆಟ್‌ ಸುವರ್ಣ ನ್ಯೂಸ್, ವಿಜಯಪುರ

ವಿಜಯಪುರ(ಜು.08):  ವಿಜಯಪುರ ನಗರ, ಗ್ರಾಮೀಣ ಭಾಗದಲ್ಲಿ ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟ ಬಂದ್‌ ಆಯ್ತಾ ಎನ್ನುವ ಅನುಮಾನ ಶುರುವಾಗಿದೆ. ಯಾಕಂದ್ರೆ ವಿಜಯಪುರ ಗ್ರಾಮೀಣ ವಲಯ ಭಾಗದ ತಿಕೋಟ-ಬಬಲೇಶ್ವರ ಸೇರಿದಂತೆ ನಗರ ವಲಯದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳು ಮನೆಗಳಿಂದ ಬುತ್ತಿಕಟ್ಟಿ ಕೊಂಡು ಬಂದು ಊಟ ಮಾಡ್ತಿದ್ದಾರೆ. ಈ ಬಗ್ಗೆ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ದೃಶ್ಯಾವಳಿ ಸಹಿತ ಎಕ್ಸಕ್ಲೂಸಿವ್‌ ವರದಿ ಪ್ರಸಾರ ಮಾಡಿದೆ.

ಮನೆಗಳಿಂದ ಬುತ್ತಿ ತಂದು ಮಕ್ಕಳ ಭೋಜನ

ನಗರ, ಗ್ರಾಮೀಣ ವಲಯದ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ರೆಡಿಯಾಗ್ತಿಲ್ಲ. ಶಾಲೆಗೆ ಬರುವ ಮಕ್ಕಳು ಕಳೆದ ಒಂದು ವಾರದಿಂದ ಬುತ್ತಿಕಟ್ಟಿಕೊಂಡು ಬರ್ತಿದ್ದಾರೆ. ಕಟ್ಟಿಕೊಂಡು ಬಂದ ಬುತ್ತಿಯನ್ನೆ ಮಧ್ಯಾಹ್ನದ ಬಿಸಿಯೂಟದ ಸಮಯದಲ್ಲಿ ಊಟ ಮಾಡ್ತಿದ್ದಾರೆ.

VIJAYAPURA: ಕೋವಿಡ್ ನಂತರ ತಾಳಿಕೋಟೆಯ ಶ್ರೀ ಖಾಸ್ಗತೇಶ್ವರ ಅಜ್ಜನ ಜಾತ್ರೆಗೆ ಅದ್ಧೂರಿ ಸಿದ್ಧತೆ!

ಕಟಿ ರೊಟ್ಟಿ, ಕಾರ ಎಣ್ಣೆ ತಿನ್ತಿರೋ ವಿದ್ಯಾರ್ಥಿಗಳು

ಇನ್ನು ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರಿ ಶಾಲೆಗೆ ಬರ್ತಿರೋ ಮಕ್ಕಳು ಬುತ್ತಿಯಲ್ಲಿ ಹಿಂದಿನ ರಾತ್ರಿ ಮನೆಯಲ್ಲಿ ಮಾಡಿದ ಕಟಕಲು ಜೋಳದ ರೊಟ್ಟಿ, ಕಾರ ಎಣ್ಣೆ ಕಟ್ಟಿಕೊಂಡು ಬರ್ತಿದ್ದಾರೆ. ರೊಟ್ಟಿ-ಹಿಂಡಿ-ಕಾರ-ಉಪ್ಪಿನಕಾಯಿ ಮೇಲೆ ಮಧ್ಯಾಹ್ನದ ಊಟ ಮುಗಿಸ್ತಿದ್ದಾರೆ. ಇನ್ನು ಕೆಲ ಮಕ್ಕಳು ಅವಲಕ್ಕಿ ಕಟ್ಟಿಕೊಂಡು ಬಂದು ಅರೆ ಹೊಟ್ಟೆಯಲ್ಲೆ ಶಾಲೆ ಕಲಿಯುತ್ತಿದ್ದಾರೆ. ಕೆಲ ಮಕ್ಕಳು ಬುತ್ತಿ ಕಟ್ಟಿಕೊಂಡು ಬರದೇ ಬಿಸಿಯೂಟ ಇಲ್ಲಾ ಅಂತಾ ಮದ್ಯಾಹ್ನ ವಾಪಾಸ್‌ ಮನೆಗೆ ಹೋಗ್ತಿದ್ದಾರೆ. ನಮ್ಮ ವಿಜಯಪುರ ಪ್ರತಿನಿಧಿ ಷಡಕ್ಷರಿ ನಡೆಸಿದ ರಿಯಾಲಿಟಿ ಚೆಕ್‌ ನಲ್ಲಿಯೂ ಮಕ್ಕಳು ತಮ್ಮ ಗೋಳು ಹೇಳಿಕೊಂಡಿದ್ದಾರೆ..

ಗ್ಯಾಸ್‌ ಸಪ್ಲೈ ಬಂದ್‌ ಆಗಿರೋದೆ ಯಡವಟ್ಟಿಗೆ ಕಾರಣ

ಕಳೆದ ಒಂದು ವಾರದಿಂದ ನಗರ ಗ್ರಾಮೀಣ ವಲಯದ ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟ ಬಂದ್‌ ಆಗಿದೆ. ಕಾರಣ ಏನು ಅಂದ್ರೆ ಹಲವು ದಿನಗಳಿಂದ ಅಡುಗೆ ಸಿಲೆಂಡರ್‌ ಸಪ್ಲೈ ನಿಂತು ಹೋಗಿದೆ. ವಿಜಯಪುರ ನಗರದ ಶಿಕಾರಖಾನೆಯ ವೆಂಕಟೇಶ್ವರ ಗ್ಯಾಸ್‌ ಎಜೆನ್ಸಿ ಅಕ್ಷರದಾಸೋಹ ಯೋಜನೆಯಲ್ಲಿ ಗ್ಯಾಸ್‌ ಸಪ್ಲೈ ಮಾಡುತ್ತಿದ್ದರು. ಆದ್ರೆ ಕಳೆದ ವರ್ಷ ಮಾರ್ಚ್‌ ನಿಂದ ವೆಂಕಟೇಶ್ವರ ಏಜೆನ್ಸಿಗೆ ನೀಡಬೇಕಿದ್ದ 20 ಲಕ್ಷ ರೂಪಾಯಿ ಭಾಕಿಯನ್ನೆ ಅಕ್ಷರ ದಾಸೋಹ ಅಧಿಕಾರಿಗಳ ಪಾವತಿ ಮಾಡಿಲ್ಲ. ಆರ್ಥಿಕ ಸಂಕಷ್ಟ ಅನುಭವಿಸುತ್ತಿರೋ ಗ್ಯಾಸ್‌ ಏಜೆನ್ಸಿ ಇನ್ಮುಂದೆ ಉದ್ರಿ ವ್ಯವಹಾರ ಆಗೋಲ್ಲ ಎಂದಿದೆ. ಅಲ್ಲದೆ ಗ್ಯಾಸ್‌ ಸಿಲೆಂಡರ್‌ ಸಪ್ಲೈ ಬಂದ್‌ ಮಾಡಿದೆ..

ಅಕ್ಷರ ದಾಸೋಹ ಅಧಿಕಾರಿಗಳ ಯಡವಟ್ಟು

ಇಷ್ಟೇ ಅವಾಂತರಗಳಿಗೆ ಅಕ್ಷರ ದಾಸೋಹ ಅಧಿಕಾರಿಗಳ ಯಡವಟ್ಟು ಕಾರಣ ಎನ್ನಲಾಗ್ತಿದೆ. 2 ಸಾವಿರ ಗ್ಯಾಸ್‌ ಸಿಲೆಂಡರ್‌ ಪುರೈಕೆಯ 20 ಲಕ್ಷ ರೂ ಭಾಕಿಯನ್ನ ಮೊದಲೇ ಕಟ್ಟಿದ್ದರೆ ಶಾಲಾ ಮಕ್ಕಳಿಗೆ ಈ ಸಂಕಷ್ಟವೇ ಇರ್ತಿರಲಿಲ್ಲ. ಬಿಸಿಯೂಟವು ಬಂದ್‌ ಆಗ್ತಿರಲಿಲ್ಲ. ಆದ್ರೆ ಅಧಿಕಾರಿಗಳು ಭಾಕಿ ಉಳಿಸಿಕೊಂಡು ಕುಂತಿರೋದೆ ಇದಕ್ಕೆಲ್ಲ ಕಾರಣ ಎನ್ನಲಾಗ್ತಿದೆ..

ಶಾಲಾ ಮುಖ್ಯೋಪಾಧ್ಯಾಯರ ಮೇಲೆ ಒತ್ತಡ

ಅಕ್ಷರ ದಾಸೋಹ ಅಧಿಕಾರಿಗಳು ತಮ್ಮ ತಪ್ಪುಗಳನ್ನ ಮುಚ್ಚಿಟ್ಟಿಕೊಂಡು ಶಾಲಾ ಮುಖ್ಯೋಪಾಧ್ಯಾಯರು, ಮುಖ್ಯ ಶಿಕ್ಷಕರ ಮೇಲೆ ಯಾವುದೇ ಕಾರಣಕ್ಕು ಬಿಸಿಯೂಟ ನಿಲ್ಲಬಾರದು ಅಂತಾ ಒತ್ತಡ ಹಾಕ್ತಿದ್ದಾರೆ ಎನ್ನಲಾಗಿದೆ. ಶಾಲಾ ಅನುಧಾನದಲ್ಲಿ ಅಡುಗೆ ಸಾಮಾನುಗಳನ್ನ ತಂದು ಬಿಸಿಯೂಟ ನೀಡ್ಬೇಕು ಎಂದು ಹೇಳ್ತಿದ್ದಾರಂತೆ. ಆದ್ರೆ ಬಹುತೇಕ ಶಾಲೆಗಳಲ್ಲಿ ಶಾಲಾ ಅನುದಾನವೇ ಖಾಲಿಯಾಗಿದೆ ಹೇಗೆ ಮ್ಯಾನೇಜ್‌ ಮಾಡೋಣ ಹೇಳಿ ಎನ್ತಿದ್ದಾರೆ ಮುಖ್ಯ ಶಿಕ್ಷಕರು. ಮನೆ ನಡೆಸೋದಕ್ಕೆ ಸಂಬಳ ಸಾಕಾಗ್ತಿಲ್ಲ, ಶಾಲೆಯಲ್ಲಿ ಗ್ಯಾಸ್‌, ಬೆಳೆ, ಅಡುಗೆ ಸಾಮಾನು ತರೋದು ಹೇಗೆ ಹೇಳಿ ಎಂದು ಅಳಲು ತೋಡಿಕೊಳ್ತಿದ್ದಾರೆ.

ಮನೆಯ ಗ್ಯಾಸ್‌ ತಂದು ಶಾಲೆಯಲ್ಲಿ ಬಿಸಿಯೂಟ

ಸಣ್ಣ ಪುಟ್ಟ ಶಾಲೆಗಳ ಮುಖ್ಯ ಶಿಕ್ಷಕರು ಹೇಗಾದ್ರು ಮಾಡಿ ಬಿಸಿಯೂಟ ನೀಡಲೇ ಬೇಕು ಎಂದು ತಮ್ಮ ಮನೆಗಳಲ್ಲಿನ ಅಡುಗೆ ಗ್ಯಾಸ್‌ ಸಿಲೆಂಡರ್‌ ಗಳನ್ನ ತಂದು ಬಿಸಿಯೂಟ ತಯಾರಿಸುತ್ತಿದ್ದಾರೆ. ಆದ್ರೆ ಅತಿ ಹೆಚ್ಚಿನ ಮಕ್ಕಳ ಸಂಖ್ಯೆ ಇರುವ ಶಾಲೆಗಳ ಮುಖ್ಯ ಶಿಕ್ಷಕರು ಗ್ಯಾಸ್‌ ಎಲ್ಲಿಂದ ತರ್ಬೇಕು ಅನ್ನೋ ಗೊಂದಲದಲ್ಲಿದ್ದಾರೆ.

India@75: ಬ್ರಿಟಿಷರ ವಿರುದ್ಧ ಗುಪ್ತ ಸೈನ್ಯ ಕಟ್ಟಿದ್ದ ವಿಜಯಪುರದ ಕರಿಭಂಟನಾಳ ಸ್ವಾಮೀಜಿ

ಕಟ್ಟಿಗೆ ಆಯ್ದು ತಂದು ಬಿಸಿಯೂಟ ತಯಾರಿಕೆ

ಇನ್ನು ಬಿಸಿಯೂಟದ ಬಗ್ಗೆ ಅಕ್ಷರ ದಾಸೋಹ ಅಧಿಕಾರಿಗಳು ಮುಖ್ಯ ಶಿಕ್ಷಕರ ಮೇಲೆ ಒತ್ತಡದ ಮೇಲೆ ಒತ್ತಡ ಹಾಕ್ತಿರೋದ್ರಿಂದ ಕೆಲ ಶಾಲೆಗಳಲ್ಲಿ ಕಟ್ಟಿಗೆಗಳನ್ನ ಆಯ್ದು ತಂದು ಬಿಸಿಯೂಟ ತಯಾರಿಸುತ್ತಿದ್ದಾರೆ ಎನ್ನುವ ಮಾಹಿತಿಗಳು ಸಿಗ್ತಿವೆ. ಗ್ಯಾಸ್‌ ಸಪ್ಲೈ ಬಂದ್‌ ಆಗಿರೋ ಕಾರಣ ಕಟ್ಟಿಗಳನ್ನ ಆಯ್ದು ತಂದು ಬಿಸಿಯೂಟ ತಯಾರಿಸಬೇಕಾದ ಅನಿವಾರ್ಯತೆ ಬಂದಿದೆ..

ಸುವರ್ಣ ನ್ಯೂಸ್‌ ವರದಿ ಟ್ವೀಟ್‌ ಮಾಡಿದ ಎಂ.ಬಿ. ಪಾಟೀಲ್

ಬಬಲೇಶ್ವರ ಶಾಸಕ ಎಂ.ಬಿ. ಪಾಟೀಲ್‌ ಬಿಸಿಯೂಟ ಬಂದ್‌ ಆಗಿರುವ ಬಗ್ಗೆ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ನಲ್ಲಿ ಪ್ರಸಾರವಾದ ವರದಿಯನ್ನ ಟ್ವಿಟ್‌ ಮಾಡಿದ್ದಾರೆ. ಬಿಸಿಯೂಟ ಬಂದ್‌ ಆಗಿರೋದಕ್ಕೆ ಕಳವಳ ವ್ಯಕ್ತ ಪಡೆಸಿದ್ದಾರೆ. ಈ ಅವ್ಯವಸ್ಥೆಯನ್ನ ಸುಧಾರಿಸಿ ತಕ್ಷಣವೇ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ, ಶಿಕ್ಷಣ ಇಲಾಖೆ ಸಚಿವರಿಗೆ ಆಗ್ರಹಿಸಿದ್ದಾರೆ. ಕಳೆದ ವಾರದಿಂದ ಬಿಸಿಯೂಟ ಬಂದ್‌ ಆಗಿರೋದು ಯಾಕೆ ಎನ್ನುವ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
 

click me!