
ಸಾಕ್ಷರತೆ (Literacy) ಅಭಿಯಾನದಡಿ ಹಿಂದೆ ರಾತ್ರಿ ಶಾಲೆ ಕಾನ್ಸೆಪ್ಟ್ ಜಾರಿಗೆ ಬಂದಿತ್ತು. ಹಗಲಿನಲ್ಲಿ ಕೆಲಸಕ್ಕೆ ಹೋಗುವ ಕೂಲಿ ಕಾರ್ಮಿಕರಿಂದ ಹಿಡಿದು, ಕೃಷಿಕರವರೆಗೆ ಪ್ರತಿಯೊಬ್ಬರಿಗೂ ಅಕ್ಷರ ಕಲಿಸುವ ಉದ್ದೇಶದಿಂದ ರಾತ್ರಿ ಶಾಲೆ ತೆರೆಯಲಾಗಿತ್ತು. ಹೊತ್ತು ಮುಳುಗ್ತಿದ್ದಂತೆ ಕೆಲ್ಸ ಮುಗಿಸಿ ಮನೆಗೆ ಬರುವ ಹಿರಿಯರು, ಸ್ಲೇಟ್ ಹಿಡಿದು ಶಾಲೆಗೆ ಬರ್ತಿದ್ದರು. ಅಕ್ಷರಗಳ ಜ್ಞಾನ ಪಡೆಯುತ್ತಿದ್ದರು. ಈಗ ಹಿರಿಯ ನಾಗರಿಕರಿಗೆ ರಾತ್ರಿ ಶಾಲೆಗಳಿಲ್ಲ. ಮಕ್ಕಳು ಮಾತ್ರ ವಿದ್ಯೆ ಕಲಿಯಲು ಶಾಲೆಗಳಿಗೆ ಹೋಗ್ತಿದ್ದಾರೆ. ಸ್ಕೂಲ್ ಅಂದಾಗ ನಮ್ಮ ಕಣ್ಮುಂದೆ ಬರೋದು ಪುಟಾಣಿ ಮಕ್ಕಳು ಮಾತ್ರ. ಆದ್ರೀಗ ನಾವು ಹೇಳ್ತಿರುವ ಶಾಲೆಯಲ್ಲಿ ನೀವು ಮಕ್ಕಳನ್ನಲ್ಲ ಅಜ್ಜಿಯಂದಿರನ್ನು ನೋಡ್ಬಹುದು. ಅಜ್ಜಿಯರಿಗಾಗಿಯೇ ವಿಶೇಷ ಶಾಲೆ ನಡೆಸಲಾಗ್ತಿದೆ. ಅಲ್ಲಿ ಏನೆಲ್ಲ ಇದೆ ಎಂಬ ಮಾಹಿತಿ ಇಲ್ಲಿದೆ.
ಮಹಾರಾಷ್ಟ್ರದ ಫಂಗೇನ್ ಗ್ರಾಮದಲ್ಲಿ ಈ ಶಾಲೆ ಇದೆ. ಅದಕ್ಕೆ 'ಆಜಿಬೈಚಿ ಶಾಲಾ' (Aajibaichi Shala) ಎಂದು ಹೆಸರಿಡಲಾಗಿದೆ. ವಯಸ್ಸಾದ ಮಹಿಳೆಯರಿಗಾಗಿಯೇ ನಡೆಸುತ್ತಿರುವ ಭಾರತದ ಮೊದಲ ಸ್ಕೂಲ್ ಇದು. 60 ರಿಂದ 90 ವರ್ಷ ವಯಸ್ಸಿನ ಅಜ್ಜಿಯರು ಇಲ್ಲಿ ಶಾಲೆಗೆ ಬರುತ್ತಾರೆ. ಗುಲಾಬಿ ಬಣ್ಣದ ಸೀರೆ ಧರಿಸಿ, ಸ್ಕೂಲ್ ಬ್ಯಾಗ್ ಹೊತ್ತುಕೊಂಡು ಅವರು ಶಾಲೆಗೆ ಬರ್ತಾರೆ. ಚಿಕ್ಕವರಿರುವಾಗ ಸ್ಕೂಲ್ ಗೆ ಹೋಗದೆ, ಚಿಕ್ಕ ವಯಸ್ಸಿನಲ್ಲಿಯೇ ಮದುವೆ ಆಗಿ, ಸಂಸಾರದ ಹೊಣೆ ಹೊತ್ತಿದ್ದವರು ಈಗ ಅಜ್ಜಿಯಂದಿರಾಗಿದ್ದಾರೆ. ಹಿಂದೆ ಪೆನ್ಸಿಲ್ ಹಿಡಿಯೋದು ಹೇಗೆ ಅನ್ನೋದು ಅವರಿಗೆ ತಿಳಿದಿರಲಿಲ್ಲ. ಈಗ ಸಹಿ ಮಾಡೋದು, ಮೊಮ್ಮಕ್ಕಳೊಂದಿಗೆ ಕವಿತೆಗಳನ್ನು ಹೇಳೋದು ಹೇಗೆ ಎಂಬುದು ತಿಳಿದಿದೆ.
ಕನ್ನಡ ಶಾಲೆ ಮುಚ್ಚಿದರೆ ಕನ್ನಡವನ್ನೇ ಕೊಂದಂತೆ.. ಹೇಗೆ ಅಂತ ಗೊತ್ತಾ? ಇಲ್ಲಿದೆ ಚಂದ್ರಶೇಖರ ದಾಮ್ಲೆ ಲೇಖನ
ಅಜ್ಜಿಯರು ಪ್ರತಿದಿನ ಸಂಜೆ 4 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಶಾಲೆಗೆ ಹೋಗುತ್ತಾರೆ. ಮಾರ್ಚ್ 8, 2016 ರಂದು ಈ ಸ್ಕೂಲ್ ಶುರುವಾಗಿದೆ. ಅದು ಅಂತರರಾಷ್ಟ್ರೀಯ ಮಹಿಳಾ ದಿನವಾಗಿದ್ದು, ಗ್ರಾಮದ 28 ಅಜ್ಜಿಯರಿಗೆ ಶಿಕ್ಷಣ ಕಲಿಸುವ ಉದ್ದೇಶದಿಂದ ಈ ಶಾಲೆ ಶುರುವಾಯ್ತು. ಶೇಕಡಾ 100 ರಷ್ಟು ಸಾಕ್ಷರರನ್ನಾಗಿ ಮಾಡುವುದು ಇದರ ಗುರಿಯಾಗಿತ್ತು. ಮೋತಿಲಾಲ್ ದಲಾಲ್ ಚಾರಿಟಬಲ್ ಟ್ರಸ್ಟ್ ಸಹಾಯದಿಂದ ಶ್ರೀ ಯೋಗೇಂದ್ರ ಅವರು ಅಜ್ಜಿಯರಿಗಾಗಿ ಈ ಶಾಲೆಯನ್ನು ಪ್ರಾರಂಭಿಸಿದ್ದರು. ವೃದ್ಧ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದು ಶಾಲೆ ಉದ್ದೇಶವಾಗಿದೆ. ಕಲಿಕೆಗೆ ಯಾವುದೇ ವಯಸ್ಸಿನ ಮಿತಿಯಿಲ್ಲ ಎಂಬುದನ್ನು ಈ ಶಾಲೆ ಸಾಭೀತುಪಡಿಸಿದೆ. ಇಲ್ಲಿ, ಪ್ರತಿಯೊಬ್ಬ ಮಹಿಳೆ ಗಿಡ ನೆಟ್ಟು ಅದನ್ನು ನೋಡಿಕೊಳ್ಳುತ್ತಾರೆ. ಶಿಕ್ಷಣದ ಜೊತೆಗೆ ಪ್ರಕೃತಿಯೊಂದಿಗೆ ಸಂಪರ್ಕ ಬೆಳೆಸಿಕೊಂಡಿದ್ದಾರೆ.
ಕೆನರಾ ಬ್ಯಾಂಕ್‌ನಿಂದ ಉಚಿತ ಕಂಪ್ಯೂಟರ್ ತರಬೇತಿ: ಅರ್ಹತೆ, ವಯೋಮಿತಿ ಮಾಹಿತಿ ಇಲ್ಲಿದೆ
ಈ ಗ್ರಾಮದಲ್ಲಿರುವ ಪುರುಷರು ಅಕ್ಷರಸ್ಥರು. ಆದ್ರೆ ಮಹಿಳೆಯರಿಗೆ ಅಕ್ಷರ ಬರ್ತಿರಲಿಲ್ಲ. ಬ್ಯಾಂಕ್ ಗಳಲ್ಲಿ ಅವರನ್ನು ಪ್ರತ್ಯೇಕಗೊಳಿಸಲಾಗ್ತಿತ್ತು. ಹೆಬ್ಬೆಟ್ಟು ಒತ್ತುವುದು ಅವರಿಗೂ ಮುಜುಗರ ತಂದಿತ್ತು. ಆದ್ರೀಗ ಎಲ್ಲ ಅಜ್ಜಿಯರು ಸಹಿ ಮಾಡಬಲ್ಲವರಾಗಿದ್ದಾರೆ. ಅಕ್ಷರದ ಜ್ಞಾನ ಹೊಂದಿದ್ದಾರೆ. ಸಾಕ್ಷರರಾದ ಖುಷಿ ಅವರಲ್ಲಿದೆ. ಮೊಮ್ಮಕ್ಕಳ ಜೊತೆ ಅಭ್ಯಾಸ ಮಾಡುವ ಅಜ್ಜಿಯರು, ಶಾಲೆ ಜೀವನವನ್ನು ಎಂಜಾಯ್ ಮಾಡ್ತಿದ್ದಾರೆ. ಖುಷಿ ಖುಷಿಯಾಗಿ ಶಾಲೆಗೆ ಬರುವ ಅವರು, ಓದು, ಮನೆ ಕೆಲ್ಸ ಎರಡನ್ನೂ ಒಟ್ಟಿಗೆ ನಿಭಾಯಿಸಬಹುದು ಎಂಬುದನ್ನು ಸಾಭೀತುಪಡಿಸಿದ್ದಾರೆ. ಈ ವಯಸ್ಸಿನಲ್ಲಿ ಕಲಿಕೆ ಅಗತ್ಯವಿದೆಯ ಅಂತ ಹಿಂಜರಿಯುವವರಿಗೆ ಸ್ಪೂರ್ತಿಯಾಗಿದ್ದಾರೆ. ಮನಸ್ಸಿದ್ರೆ ಯಾವ ವಯಸ್ಸಿನಲ್ಲಿಯೂ ವಿದ್ಯೆ ಕಲಿಯಬಹುದು ಎಂಬುದನ್ನು ಸಾಭೀತುಪಡಿಸಿದ್ದಾರೆ.