ವಸತಿ ಶಾಲೆಯಲ್ಲಿ ಕೊರೋನಾ ಸ್ಫೋಟ: ಪೋಷಕರಲ್ಲಿ ಹೆಚ್ಚಾದ ಆತಂಕ..!

By Kannadaprabha NewsFirst Published Mar 29, 2021, 1:01 PM IST
Highlights

ಮತ್ತೆ 14 ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು| ಗದಗ ಜಿಲ್ಲೆಯ ರೋಣ ಪಟ್ಟಣದ ಅಟಲ ಬಿಹಾರಿ ವಾಜಪೇಯಿ ಮಾದರಿ ವಸತಿ ಶಾಲೆ| ಕಳೆದ ಮೂರು ದಿನಗಳಿಂದ ವಸತಿ ಶಾಲೆಯಲ್ಲಿ 18 ವಿದ್ಯಾರ್ಥಿಗಳು, ಓರ್ವ ಅಡುಗೆ ಸಿಬ್ಬಂದಿ ಸೇರಿ ಒಟ್ಟು 19 ಜನರಲ್ಲಿ ಕಾಣಿಸಿಕೊಂಡ ಕೋವಿಡ್‌ ಸೋಂಕು| ಸ್ಥಳಕ್ಕೆ ಬಾರದ ಅಧಿಕಾರಿಗಳು| 

ರೋಣ(ಮಾ.29): ಪಟ್ಟಣದ ಅಟಲ ಬಿಹಾರಿ ವಾಜಪೇಯಿ ಮಾದರಿ ವಸತಿ ಶಾಲೆಯಲ್ಲಿ ಭಾನುವಾರ ಮತ್ತೆ 14 ವಿದ್ಯಾರ್ಥಿಗಳಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು, ಕಳೆದ 3 ದಿನಗಳಲ್ಲಿ ಒಟ್ಟು 19 ಕೊರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾದಂತಾಗಿದೆ.

ವಸತಿ ಶಾಲೆಯ 18 ವಿದ್ಯಾರ್ಥಿಗಳು, ಓರ್ವ ಅಡುಗೆ ಸಿಬ್ಬಂದಿಗೆ ಕೊರೋನಾ ದೃಢವಾಗಿದೆ. ಶುಕ್ರವಾರ ಓರ್ವ ವಿದ್ಯಾರ್ಥಿನಿಗೆ ಸೋಂಕು ದೃಢಪಟ್ಟಿತ್ತು. ಆನಂತರ ವಿದ್ಯಾರ್ಥಿನಿಯರ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿದಾಗ, ಶನಿವಾರ ಮೂವರು ವಿದ್ಯಾರ್ಥಿನಿಯರು, ಓರ್ವ ಅಡುಗೆ ಮಹಿಳಾ ಸಿಬ್ಬಂದಿಗೆ ಕೊರೋನಾ ಸೋಂಕು ದೃಢಪಟ್ಟಿತು.

ಇದರಿಂದ ಎಚ್ಚೆತ್ತುಕೊಂಡ ತಾಲೂಕು ಆರೋಗ್ಯ ಇಲಾಖೆ, ಪಟ್ಟಣದ ಅಟಲ… ಬಿಹಾರಿ ವಾಜಪೇಯಿ ಮಾದರಿ ವಸತಿ ಶಾಲೆಯಲ್ಲಿ ಶನಿವಾರ ಬೀಡುಬಿಟ್ಟು, ಶಾಲೆಯಲ್ಲಿ ಹಾಜರಿದ್ದ 7ನೇ ತರಗತಿಯಿಂದ 11 ತರಗತಿಯ ಒಟ್ಟು 206 ವಿದ್ಯಾರ್ಥಿಗಳು, 16 ಬೋಧಕ ವರ್ಗ, 10 ಅಡುಗೆ ಸಿಬ್ಬಂದಿ ಆರೋಗ್ಯ ತಪಾಸಣೆ ಮತ್ತು ಗಂಟಲು ದ್ರವ ಮಾದರಿ ಸಂಗ್ರಹಿಸಿ ಟೆಸ್ವ್‌ಗೆ ಕಳುಹಿಸಿತ್ತು. ಒಟ್ಟು 19 ಜನರಲ್ಲಿ ಸೋಂಕು ದೃಢಪಟ್ಟಿದೆ.

ಪುರಸಭೆಯಿಂದ ಶನಿವಾರ, ಭಾನುವಾರ ಬೆಳಗ್ಗೆ, ಮಧ್ಯಾಹ್ನ, ಸಂಜೆ ಶಾಲಾ ಕೊಠಡಿ, ವಿದ್ಯಾರ್ಥಿಗಳ ವಸತಿ ಕೋಣೆ, ಸಿಬ್ಬಂದಿ ಕೊಠಡಿ, ಶಾಲಾ ಆವರಣವನ್ನು ಸ್ಯಾನಿಟೈಸ್‌ ಮಾಡಲಾಯಿತು. ವಸತಿ ಶಾಲೆಗೆ ತಹಸೀಲ್ದಾರ್‌ ಜೆ.ಬಿ. ಜಕ್ಕನಗೌಡ್ರ ಭೇಟಿ ನೀಡಿ, ವೈದ್ಯರಿಂದ ಮಾಹಿತಿ ಪಡೆದರು.

ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಕೊರೋನಾ: ಆತಂಕದಲ್ಲಿ ಪೋಷಕರು

ಮಕ್ಕಳ ಕರೆದೊಯ್ದ ಪಾಲಕರು:

ತಮ್ಮ ಮಕ್ಕಳಿಗೂ ಸೋಂಕು ಹರಡುವ ಭೀತಿಯಲ್ಲಿ ಉಳಿದ ಮಕ್ಕಳನ್ನು ಮನೆಗೆ ಕಳುಹಿಸಲು ಪಾಲಕರು ಒತ್ತಾಯ ಮಾಡುತ್ತಿದ್ದಾರೆ. ಆರೋಗ್ಯ ಇಲಾಖೆ, ಶಿಕ್ಷಕರ ವಿರೋಧದ ಮಧ್ಯೆಯೂ ಗಲಾಟೆ ಮಾಡಿದ ಪಾಲಕರು ಕೆಲವು ವಿದ್ಯಾರ್ಥಿಗಳನ್ನು ಬಲವಂತದಿಂದ ತಮ್ಮೊಂದಿಗೆ ಕರೆದುಕೊಂಡು ಹೋದರು. ಆದರೆ, ನೆಗೆಟಿವ್‌ ವರದಿ ಬಂದ ವಿದ್ಯಾರ್ಥಿಗಳನ್ನು ಮಾತ್ರ ಕಳುಹಿಸಲಾಗಿದೆ.

ಮಕ್ಕಳ ಆಕ್ರಂದನ:

ಭಾನುವಾರ ತಮ್ಮ 14 ಸಹಪಾಠಿಗಳಲ್ಲಿ ಕೊರೋನಾ ಸೋಂಕು ದೃಢಪಡುತ್ತಿದ್ದಂತೆ, ಭಯಗೊಂಡ ಇನ್ನುಳಿದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕೆಲಗಂಟೆಗಳ ಕಾಲ ಏರು ಧ್ವನಿಯಲ್ಲಿ ಅಳತೊಡಗಿದ್ದರಿಂದ ಆಕ್ರಂದನ ಮುಗಿಲು ಮುಟ್ಟಿತ್ತು.

ಮತ್ತೆ 25 ವಿದ್ಯಾರ್ಥಿಗಳ ಗಂಟಲು ದ್ರವ ಸಂಗ್ರಹ

ಭಾನುವಾರ ಒಟ್ಟು 14 ವಿದ್ಯಾರ್ಥಿಗಳಲ್ಲಿ ಕೊರೋನಾ ದೃಢಪಡುತ್ತಿದ್ದಂತೆಯೇ, ಆರೋಗ್ಯ ಇಲಾಖೆ ಮತ್ತೆ 25 ವಿದ್ಯಾರ್ಥಿಗಳ ಗಂಟಲು ದ್ರವ ಮಾದರಿ ಸಂಗ್ರಹಿಸಿ, ಟೆಸ್ಟ್‌ಗೆ ಕಳುಹಿಸಿದೆ. ವರದಿ ಸೋಮವಾರ ಬರಲಿದೆ. ವಿದ್ಯಾರ್ಥಿಗಳು, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ ವರದಿ ಬರುವವರೆಗೂ ಎಲ್ಲರನ್ನೂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

ಕೊರೋನಾ : ಕೂಡಲೇ ನಡೆಯಲಿದ್ಯಾ ಈ ತರಗತಿಗಳ ಪರೀಕ್ಷೆ

ಸ್ಥಳಕ್ಕೆ ಬಾರದ ಅಧಿಕಾರಿಗಳು:

ಕಳೆದ ಮೂರು ದಿನಗಳಿಂದ ವಸತಿ ಶಾಲೆಯಲ್ಲಿ 18 ವಿದ್ಯಾರ್ಥಿಗಳು, ಓರ್ವ ಅಡುಗೆ ಸಿಬ್ಬಂದಿ ಸೇರಿ ಒಟ್ಟು 19 ಜನರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡು, ವಿದ್ಯಾರ್ಥಿಗಳು, ಪಾಲಕರು, ಶಿಕ್ಷಕರರು ತೀವ್ರ ಆತಂಕಕ್ಕೀಡಾಗಿದ್ದಾರೆ. ಇಷ್ಟೆಲ್ಲ ಬೆಳವಣಿಗೆಗಳು ನಡೆದಿದ್ದರೂ ಸ್ಥಳಕ್ಕೆ ಬಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಸಹಾಯಕ ನಿರ್ದೇಶಕರು, ತಾಲೂಕು ವಿಸ್ತರಣಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಇಷ್ಟೊಂದು ವಿದ್ಯಾರ್ಥಿಗಳಲ್ಲಿ ಕೊರೋನಾ ಕಾಣಿಸಿಕೊಂಡಿರುವುದು ಆಶ್ಚರ್ಯಕರ. ವಸತಿ ಶಾಲೆಯಲ್ಲಿನ ಸಮಸ್ಯೆ ಕುರಿತು ಮತ್ತು ವಿದ್ಯಾರ್ಥಿಗಳನ್ನು ಈಗಿದ್ದ ಕಟ್ಟಡದಿಂದ ಬೇರೆಡೆ ಸ್ಥಳಾಂತರಕ್ಕೆ ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿದೆ. ಬೇರೆಡೆ ಸ್ಥಳ ಗುರುತಿಸಿರುವುದಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಸಹಾಯಕ ನಿರ್ದೇಶಕರು ತಿಳಿಸಿದ್ದು, ಜಿಲ್ಲಾಧಿಕಾರಿ ನಿರ್ದೇಶನಕ್ಕೆ ಕಾಯುತ್ತಿದ್ದೇವೆ. ನಾವು ಏನೇ ಕ್ರಮಕೈಗೊಳ್ಳಲು ಆರೋಗ್ಯ ಇಲಾಖೆ ಸೂಚನೆ, ಸಲಹೆ ಅತಿ ಮುಖ್ಯವಾಗಿದೆ. ಆರೋಗ್ಯ ಇಲಾಖೆ ಸೂಚನೆಯಂತೆ ಕ್ರಮ ಕೈಗೊಳ್ಳಲಾಗುವುದು ಎಂದು ರೋಣ ತಹಸೀಲ್ದಾರ್‌ ಜೆ.ಬಿ. ಜಕ್ಕನಗೌಡ್ರ ಹೇಳಿದ್ದಾರೆ.

ಒಂದೇ ಶಾಲೆಯಲ್ಲಿ ಕಳೆದ 3 ದಿನಗಳಲ್ಲೇ ಇಷ್ಟೊಂದು ಪ್ರಕರಣಗಳು ಕಾಣಿಸಿಕೊಳ್ಳಲು, ವಿದ್ಯಾರ್ಥಿಗಳು ವಾಸಿಸುವ ಕೋಣೆ ಮತ್ತು ತರಗತಿ ಕೊಠಡಿಗಳು ಇಕ್ಕಟ್ಟಾಗಿರುವುದು, ಕೋವಿಡ್‌ ನಿಯಮಗಳು ಪಾಲನೆಯಾಗದೇ ಇರುವುದೇ ಕಾರಣ ಎಂದು ತಾಲೂಕು ವೈದ್ಯಾಧಿಕಾರಿ ಡಾ. ಬಿ.ಎಸ್‌. ಭಜಂತ್ರಿ ತಿಳಿಸಿದ್ದಾರೆ.
 

click me!