* ಪೋಷಕರ ವಾರ್ಷಿಕ ಆದಾಯ 8 ಲಕ್ಷಕ್ಕಿಂತ ಕಡಿಮೆ ಇರುವ ವಿದ್ಯಾರ್ಥಿಗಳಿಗೆ ಈ ಕೋರ್ಸ್ ಮುಕ್ತವಾಗಿದೆ.
* ಉದ್ಯಮ-ಸಿದ್ಧ ತಾಂತ್ರಿಕ ಕೌಶಲ್ಯಗಳೊಂದಿಗೆ ಸಜ್ಜುಗೊಳಿಸಲು ಈ ಕೋರ್ಸ್ ಅನ್ನು ಉಚಿತವಾಗಿ ನೀಡಲಾಗುತ್ತಿದೆ.
* ಪರೀಕ್ಷೆಗಳಲ್ಲಿ ಕನಿಷ್ಠ ಶೇಕಡಾ 60 ರಷ್ಟು ಅಂಕ ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು
ಐಐಟಿ ಮದ್ರಾಸ್ ಹಾಗೂ ಸೋನಿ ಇಂಡಿಯಾ ಜಂಟಿ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಟೆಕ್ ಕೌಶಲ್ಯ ಕೋರ್ಸ್ ನೀಡಲು ಮುಂದಾಗಿವೆ. ಸೋನಿ ಇಂಡಿಯಾ ಫಿನಿಶಿಂಗ್ ಸ್ಕೂಲ್ ಸ್ಕಿಲ್ ಡೆವಲಪ್‌ಮೆಂಟ್ ಟ್ರೈನಿಂಗ್ ಪ್ರೊಗ್ರಾಂ (Sony India Finishing School Skill Development Training Program) ಅನ್ನು ಸಂಪೂರ್ಣವಾಗಿ ಉಚಿತವಾಗಿ ನೀಡಲಾಗುತ್ತಿದೆ. 2020-2021, 2021-22 ರಲ್ಲಿ ಉತ್ತೀರ್ಣರಾದ ಮತ್ತು ಅವರ ಪೋಷಕರ ವಾರ್ಷಿಕ ಆದಾಯ 8 ಲಕ್ಷಕ್ಕಿಂತ ಕಡಿಮೆ ಇರುವ ವಿದ್ಯಾರ್ಥಿಗಳಿಗೆ ಈ ಕೋರ್ಸ್ ಮುಕ್ತವಾಗಿದೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್ (ಐಐಟಿ ಮದ್ರಾಸ್) ಪ್ರವರ್ತಕ್ ಟೆಕ್ನಾಲಜೀಸ್ ಫೌಂಡೇಶನ್, ಸೋನಿ ಇಂಡಿಯಾ ಸಾಫ್ಟ್‌ವೇರ್ ಸೆಂಟರ್ ಪ್ರೈ.ಲಿಮಿಟೆಡ್ ಜೊತೆ ಪಾಲುದಾರಿಕೆ ಹೊಂದಿದೆ. ಆರ್ಥಿಕವಾಗಿ ಹಿಂದುಳಿದ ಹಿನ್ನೆಲೆಯ ವಿದ್ಯಾರ್ಥಿಗಳನ್ನು ಉದ್ಯಮ-ಸಿದ್ಧ ತಾಂತ್ರಿಕ ಕೌಶಲ್ಯಗಳೊಂದಿಗೆ ಸಜ್ಜುಗೊಳಿಸಲು ಈ ಕೋರ್ಸ್ ಅನ್ನು ಸಂಪೂರ್ಣ ಉಚಿತವಾಗಿ ನೀಡಲಾಗುತ್ತಿದೆ. ‘ಸೋನಿ ಇಂಡಿಯಾ ಫಿನಿಶಿಂಗ್ ಸ್ಕೂಲ್ ಸ್ಕಿಲ್ ಡೆವಲಪ್‌ಮೆಂಟ್ ಟ್ರೈನಿಂಗ್ ಪ್ರೋಗ್ರಾಂ’ ಎಂದು ಕರೆಯಲಾಗಿದ್ದು, ಇದು ವ್ಯಾಪಾರ ಸಂವಹನ ಕೌಶಲ್ಯಗಳ ಜೊತೆಗೆ ಕೃತಕ ಬುದ್ಧಿಮತ್ತೆ / ಯಂತ್ರ ಕಲಿಕೆ (AI/ML), ಸೈಬರ್ ಭದ್ರತೆ ಮತ್ತು ಕಂಪ್ಯೂಟರ್ ಗ್ರಾಫಿಕ್ಸ್‌ನಂತಹ ಆಯ್ದ ಕ್ಷೇತ್ರಗಳಲ್ಲಿ ತರಬೇತಿಯನ್ನು ನೀಡುತ್ತದೆ. ಆಸಕ್ತರು https://sonyfs.pravartak.org.in/ ಇಲ್ಲಿಗೆ ಅರ್ಜಿ ಸಲ್ಲಿಸಬಹುದು.
“ಈ ಕಾರ್ಯಕ್ರಮವು ಪದವೀಧರ ವಿದ್ಯಾರ್ಥಿಗಳು ಮತ್ತು ಉದ್ಯಮದ ಅವಶ್ಯಕತೆಗಳ ನಡುವೆ ಇರುವ ಜ್ಞಾನ ಮತ್ತು ಕೌಶಲ್ಯದ ಅಂತರವನ್ನು ಕಡಿಮೆ ಮಾಡಲು ಉದ್ದೇಶಿಸಲಾಗಿದೆ. ಈ ಉಪಕ್ರಮದಿಂದ ಅನೇಕ ವಿದ್ಯಾರ್ಥಿಗಳು, ವಿಶೇಷವಾಗಿ ಭಾರತದ ನಗರೇತರ ಭಾಗಗಳಿಂದ ಪ್ರಯೋಜನ ಪಡೆಯುತ್ತಾರೆ ಎಂದು ಐಐಟಿ ಮದ್ರಾಸ್‌ನ ನಿರ್ದೇಶಕ ಪ್ರೊಫೆಸರ್ ವಿ.ಕಾಮಕೋಟಿ ಹೇಳಿದ್ದಾರೆ. ಸೋನಿ ಇಂಡಿಯಾ ಸಾಫ್ಟ್‌ವೇರ್ ಸೆಂಟರ್ ಈ ಕೋರ್ಸ್‌ನ ಟಾಪ್ 15 ಸಾಧಕರಿಗೆ ಉದ್ಯೋಗವನ್ನು ವಿಸ್ತರಿಸುತ್ತದೆ. ಪ್ರವರ್ತಕ್ ಟೆಕ್ನಾಲಜೀಸ್ ಫೌಂಡೇಶನ್ ಉಳಿದ ವಿದ್ಯಾರ್ಥಿಗಳಿಗೆ ಐಐಟಿಎಂ ಪಿಟಿಎಫ್ ಪ್ಲೇಸ್‌ಮೆಂಟ್ ಸೆಲ್ ಮೂಲಕ ಸಂದರ್ಶನಗಳನ್ನು ಏರ್ಪಡಿಸುವ ಮೂಲಕ ಇತರ ಕಂಪನಿಗಳಲ್ಲಿ ಉದ್ಯೋಗಾವಕಾಶದೊಂದಿಗೆ ಸಹಾಯ ಮಾಡುತ್ತದೆ.
ಅತಿ ಕಿರಿಯ ಆಪ್ ಡೆವಲಪರ್: ಗಿನ್ನೆಸ್ ದಾಖಲೆ ಬರೆದ ಹರಿಯಾಣದ ಹುಡುಗ!
ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆಯು 2020-2021 ಹಾಗೂ 2021-2022 ರಲ್ಲಿ ಎಲ್ಲಾ ಪರೀಕ್ಷೆಗಳಲ್ಲಿ ಕನಿಷ್ಠ ಶೇಕಡಾ 60 ರಷ್ಟು ಅಂಕ ಪಡೆದು ಉತ್ತೀರ್ಣರಾದ ಮತ್ತು ಅವರ ಪೋಷಕರ ವಾರ್ಷಿಕ ಆದಾಯ 8 ಲಕ್ಷಕ್ಕಿಂತ ಕಡಿಮೆ ಇರುವ ಎಂಜಿನಿಯರಿಂಗ್ ಪದವೀಧರರ ಶೈಕ್ಷಣಿಕ ಕಾರ್ಯಕ್ಷಮತೆಯನ್ನು ಆಧರಿಸಿದೆ. ಲಿಖಿತ ಪ್ರವೇಶ ಪರೀಕ್ಷೆ ಮೂಲಕ ವಿದ್ಯಾರ್ಥಿಗಳನ್ನ ಆಯ್ಕೆ ಮಾಡಿಕೊಳ್ಳಲಾಗುವುದು. ನಂತರ ಸಂದರ್ಶನವನ್ನು ನಡೆಸಲಾಗುವುದು. ಹೆಚ್ಚಿನ ಅಂಕಗಳೊಂದಿಗೆ ಮೌಲ್ಯಮಾಪನವನ್ನು ಯಶಸ್ವಿಯಾಗಿ ತೆರವುಗೊಳಿಸುವ ವಿದ್ಯಾರ್ಥಿಗಳು ತರಬೇತಿ ಕಾರ್ಯಕ್ರಮದ ಅಡಿಯಲ್ಲಿ ಒದಗಿಸಲಾದ ಸ್ಟೈಫಂಡ್ ಪಡೆಯಲು ಅರ್ಹರಾಗಿರುತ್ತಾರೆ.
1.3 ಕೋಟಿ ರೂ. ಸ್ಕಾಲರ್‌ಶಿಪ್ ಪಡೆದ ಹೈದ್ರಾಬಾದ್‌ನ ಹುಡುಗ
ಅಂದಹಾಗೇ ಈ ಕೋರ್ಸ್ ಅವಧಿಯು ಸುಮಾರು 6 ತಿಂಗಳು.. ಇದು ಪೂರ್ಣ ಸಮಯದ ಕೋರ್ಸ್ ಆಗಿದ್ದು, ಐಐಟಿಎಂ ಪ್ರವರ್ತಕ್ ಟೆಕ್ನಾಲಜೀಸ್ ಫೌಂಡೇಶನ್ ಒದಗಿಸುವ ತರಗತಿಗಳಲ್ಲಿ ಭೌತಿಕ ಕ್ರಮದಲ್ಲಿ ನಡೆಸಲಾಗುತ್ತದೆ. ತರಬೇತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ನೀಡುವುದಾಗಿ IIT ಮದ್ರಾಸ್ ಹಾಗೂ ಸೋನಿ ಇಂಡಿಯಾ ತಿಳಿಸಿದೆ. ಸೋನಿಯ ಇಂಡಿಯಾ ಮತ್ತು ಐಐಟಿ ಮದ್ರಾಸ್ ಜಂಟಿ ಸಹಯೋಗದಲ್ಲಿ ಆಯೋಜಿಸಲಾಗಿರುವ ಈ ಕೌಶಲ್ಯ ಅಭಿವೃದ್ಧಿಪಡಿಸುವ ಕೋರ್ಸು ವಿದ್ಯಾರ್ಥಿಗಳಿಗೆ ಹೆಚ್ಚಿನ ನೆರವು ತಂದುಕೊಡಲಿದೆ. ಈ ಕೋರ್ಸು ಪೂರ್ತಿಗೊಳಿಸುವ ವಿದ್ಯಾರ್ಥಿಗಳಿಗೆ ತಮ್ಮ ವೃತ್ತಿ ಜೀವನದಲ್ಲಿ ಇನ್ನಷ್ಟು ಹೊಸ ಅವಕಾಶಗಳನ್ನು ಪಡೆದುಕೊಳ್ಳಲು ಸಾಧ್ಯವಾಗಬಹುದು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇದೊಂದು ಅತ್ಯುತ್ತಮ ಕೋರ್ಸ್ ಆಗಿದೆ ಎಂದು ಹೇಳಬಹುದು. ಅರ್ಹ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಬಹುದು.