
ಮೀರತ್: ಡಿಸೆಂಬರ್ 17 ರಂದು ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ಇಂಜಿನಿಯರಿಂಗ್ ಸೇವೆಗಳ ಪರೀಕ್ಷೆ (ESE) 2025ರ ಫಲಿತಾಂಶ ಪ್ರಕಟವಾದಾಗ, 112ನೇ ಅಖಿಲ ಭಾರತ ಶ್ರೇಣಿಯೊಂದಿಗೆ ಮನ್ವೇಂದ್ರ ಸಿಂಗ್ ಎಂಬ ಹೆಸರು ಹೊರಹೊಮ್ಮಿತು. ಮೊದಲ ಪ್ರಯತ್ನದಲ್ಲೇ ಭಾರತೀಯ ಇಂಜಿನಿಯರಿಂಗ್ ಸೇವೆಗಳಿಗೆ ಆಯ್ಕೆಯಾಗಿರುವ ಈ ಸಾಧನೆ, ಕೇವಲ ಶ್ರೇಣಿ ಅಥವಾ ಹುದ್ದೆಯಲ್ಲ ಅದು ದೈಹಿಕ ಸಾಮರ್ಥ್ಯವನ್ನು ಮೀರಿದ ಅಸಾಧಾರಣ ಹೋರಾಟದ ಸಂಕೇತವಾಗಿದೆ.
ಬುಲಂದ್‌ಶಹರ್ ಜಿಲ್ಲೆಯ ಆವಾಸ್ ವಿಕಾಸ್ ನಿವಾಸಿಯಾದ 24 ವರ್ಷದ ಮನ್ವೇಂದ್ರ, ಐಐಟಿ ಪದವೀಧರರಾಗಿದ್ದು, ಸೆರೆಬ್ರಲ್ ಪಾಲ್ಸಿ ಎಂಬ ನರವೈಜ್ಞಾನಿಕ ಕಾಯಿಲೆಯಿಂದ ಬಳಲುತ್ತಿದ್ದಾರೆ. ಚಲನೆ, ಸ್ನಾಯು ನಿಯಂತ್ರಣ ಮತ್ತು ಸಮನ್ವಯದ ಮೇಲೆ ಪರಿಣಾಮ ಬೀರುವ ಈ ಕಾಯಿಲೆ ಅವರಿಗೆ ಆರು ತಿಂಗಳ ವಯಸ್ಸಿನಲ್ಲೇ ಪತ್ತೆಯಾಯಿತು. ಎರಡು ವರ್ಷದಾಗುವ ವೇಳೆಗೆ ಕುತ್ತಿಗೆಯನ್ನು ಸರಿಯಾಗಿ ಹಿಡಿದಿಡಲೂ ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ಬೆಳೆಯುತ್ತಾ ಬಂದಂತೆ ದೇಹದ ಬಲಭಾಗದಲ್ಲಿ ಬಿಗಿತ ಹೆಚ್ಚುತ್ತಾ ಹೋಗಿತು. ದಿನನಿತ್ಯದ ಸಣ್ಣ-ಸಣ್ಣ ಕೆಲಸಗಳಿಗೂ ಅಪಾರ ಶ್ರಮ ಅಗತ್ಯವಾಯಿತು. ಪೆನ್ಸಿಲ್ ಹಿಡಿಯುವುದೇ ಕಷ್ಟವಾಗಿದ್ದ ಬಾಲಕನೊಬ್ಬ, ಇಂದು ಕೇಂದ್ರ ಸರ್ಕಾರದ ಉನ್ನತ ತಾಂತ್ರಿಕ ಸೇವೆಗಳಿಗೆ ಆಯ್ಕೆಯಾಗಿರುವವರೆಗೆ ತಲುಪಿದ ಪ್ರಯಾಣವು ಸಹನೆ, ಪರಿಶ್ರಮ ಮತ್ತು ಅಚಲ ಇಚ್ಛಾಶಕ್ತಿಯ ಕಥೆಯಾಗಿದೆ.
ಮನ್ವೇಂದ್ರ ಅವರ ತಾಯಿ ರೇಣು ಸಿಂಗ್, ಬುಲಂದ್‌ಶಹರ್‌ನ ಖಾಸಗಿ ಶಾಲೆಯ ಪ್ರಾಂಶುಪಾಲರಾಗಿದ್ದು, ತಮ್ಮ ಮಗನ ಜೀವನಯಾನವನ್ನು ಮೈಲಿಗಲ್ಲುಗಳಿಗಿಂತ ಹೆಚ್ಚು ನಿರಂತರ ಪರಿಶ್ರಮದ ಫಲವಾಗಿ ನೆನಪಿಸಿಕೊಳ್ಳುತ್ತಾರೆ. UPSC ಪರೀಕ್ಷೆ ತೇರ್ಗಡೆಯಾಗುವುದು ಬಹು ಹಂತಗಳ, ದೀರ್ಘ ಮತ್ತು ಕಠಿಣ ಪ್ರಕ್ರಿಯೆ. ಪೆನ್ಸಿಲ್ ಹಿಡಿಯುವುದನ್ನು ಕಲಿಯುವುದರಿಂದ ಹಿಡಿದು, ಸಂಕೀರ್ಣ ಶೈಕ್ಷಣಿಕ ಸವಾಲುಗಳನ್ನು ಎದುರಿಸುವವರೆಗೆ, ಮನ್ವೇಂದ್ರನ ಜೀವನ ಬಾಲ್ಯದಿಂದಲೇ ದೈಹಿಕ ಹಾಗೂ ಸಾಮಾಜಿಕ ಅಡೆತಡೆಗಳಿಂದ ತುಂಬಿತ್ತು ಎಂದು ಅವರು ಹೇಳುತ್ತಾರೆ.
ವೈದ್ಯರು ಮೊದಲೇ ಕುಟುಂಬಕ್ಕೆ, ಸೆರೆಬ್ರಲ್ ಪಾಲ್ಸಿಯು ಜೀವನಪೂರ್ತಿ ಅವರ ನಡಿಗೆ ಮತ್ತು ಸಮನ್ವಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಎಚ್ಚರಿಸಿದ್ದರು. ಚಿಕಿತ್ಸೆಗಾಗಿ ದೇಶದಾದ್ಯಂತ 50ಕ್ಕೂ ಹೆಚ್ಚು ಆಸ್ಪತ್ರೆಗಳು ಹಾಗೂ ವೈದ್ಯರನ್ನು ಅವರು ಭೇಟಿ ಮಾಡಿದರು. ಕೊನೆಗೆ ನವದೆಹಲಿಯ ಆಸ್ಪತ್ರೆಯಲ್ಲಿ ನಿರಂತರ ಚಿಕಿತ್ಸೆ ನೀಡಲಾಗಿದ್ದು, ಅದು ಅವರ ಸ್ಥಿತಿಯನ್ನು ಸ್ಥಿರಗೊಳಿಸಲು ನೆರವಾಯಿತು.
ವೈದ್ಯಕೀಯ ಚಿಕಿತ್ಸೆ ಅಗತ್ಯವಾಗಿತ್ತು, ಆದರೆ ಅದಕ್ಕಿಂತಲೂ ಮುಖ್ಯವಾದದ್ದು ಅವರ ಅಸಾಧಾರಣ ಇಚ್ಛಾಶಕ್ತಿ ಎಂದು ರೇಣು ಸಿಂಗ್ ತಿಳಿಸಿದ್ದಾರೆ. ಮನ್ವೇಂದ್ರ 17 ವರ್ಷದವನಾಗಿದ್ದಾಗ ಕುಟುಂಬಕ್ಕೆ ಮತ್ತೊಂದು ದೊಡ್ಡ ಆಘಾತ ಎದುರಾಯಿತು. ದೀರ್ಘಕಾಲದ ಅನಾರೋಗ್ಯದ ಬಳಿಕ ಅವರ ತಂದೆ ನಿಧನರಾದರು. ಈ ನಷ್ಟವು ಮನ್ವೇಂದ್ರನನ್ನು ಭಾವನಾತ್ಮಕವಾಗಿ ಆಳವಾಗಿ ಕಾಡಿತು. ಅವರು ತುಂಬಾ ಸೂಕ್ಷ್ಮ ಮನಸ್ಸಿನವರಾಗಿದ್ದರು. ತಂದೆಯ ಅಗಲಿಕೆ ಅವರನ್ನು ತುಂಬಾ ಕಂಗೆಡಿಸಿತು ಎಂದು ತಾಯಿ ಹೇಳುತ್ತಾರೆ. ಆದರೆ ಸಮಯದೊಂದಿಗೆ ಅವರು ಚೇತರಿಸಿಕೊಂಡು, ಹಿರಿಯ ಮಗನಾಗಿ ಕುಟುಂಬದ ಜವಾಬ್ದಾರಿಯನ್ನು ಮೌನವಾಗಿ ಹೊತ್ತುಕೊಂಡರು.
ಶೈಕ್ಷಣಿಕವಾಗಿ ಮನ್ವೇಂದ್ರ ಸದಾ ಮೆರೆಯುವ ವಿದ್ಯಾರ್ಥಿಯಾಗಿದ್ದರು. ಉತ್ತಮ ಅಂಕಗಳೊಂದಿಗೆ ಶಾಲಾ ವಿದ್ಯಾಭ್ಯಾಸ ಪೂರ್ಣಗೊಳಿಸಿದ ನಂತರ, ಕುಟುಂಬವು ಸುರಕ್ಷಿತ ಆಯ್ಕೆಯಾಗಿ ಉತ್ತರ ಪ್ರದೇಶ ತಾಂತ್ರಿಕ ಪ್ರವೇಶ ಪರೀಕ್ಷೆ (UPTET) ಬರೆಯಲು ಸಲಹೆ ನೀಡಿತು. ಆದರೆ ಮನ್ವೇಂದ್ರ ಅದನ್ನು ನಿರಾಕರಿಸಿದರು. ಅವರಿಗೆ ಐಐಟಿ ಸೇರಬೇಕು ಎಂಬ ದೃಢ ಗುರಿ ಇತ್ತು ಎಂದು ತಾಯಿ ಹೇಳುತ್ತಾರೆ.
ಗ್ರಾಜುಯೇಟ್ ಆಪ್ಟಿಟ್ಯೂಡ್ ಟೆಸ್ಟ್ ಇನ್ ಎಂಜಿನಿಯರಿಂಗ್ (GATE) ಪರೀಕ್ಷೆಯಲ್ಲಿ 63ನೇ ಅಖಿಲ ಭಾರತ ಶ್ರೇಣಿಯನ್ನು ಪಡೆದ ಅವರು, 2024ರಲ್ಲಿ ಐಐಟಿ ಪಾಟ್ನಾದಿಂದ ಎಲೆಕ್ಟ್ರಾನಿಕ್ಸ್ ಮತ್ತು ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಬಿಟೆಕ್ ಪದವಿ ಪೂರ್ಣಗೊಳಿಸಿದರು. ಪದವಿ ನಂತರ, ಇಂಜಿನಿಯರಿಂಗ್ ಸೇವೆಗಳ ಪರೀಕ್ಷೆಗೆ ತಯಾರಾಗಲು ದೆಹಲಿಗೆ ತೆರಳಿ ಕೋಚಿಂಗ್ ಸಂಸ್ಥೆಗೆ ಸೇರಿದರು. ಪ್ರಿಲಿಮ್ಸ್, ಮುಖ್ಯ ಪರೀಕ್ಷೆ ಮತ್ತು ಸಂದರ್ಶನ ಎಂಬ ಮೂರು ಹಂತಗಳನ್ನು ಒಳಗೊಂಡ ಈ ಪರೀಕ್ಷೆಗೆ ಅಪಾರ ಏಕಾಗ್ರತೆ, ಮಾನಸಿಕ ಸ್ಥೈರ್ಯ ಮತ್ತು ದೈಹಿಕ ಸಹಿಷ್ಣುತೆ ಅಗತ್ಯವಿರುತ್ತದೆ.
ತಮ್ಮ ಮೊದಲ ಪ್ರಯತ್ನದಲ್ಲೇ ಎಲ್ಲಾ ಹಂತಗಳನ್ನು ಯಶಸ್ವಿಯಾಗಿ ತೇರ್ಗಡೆಯಾಗಿ AIR 112 ಸಾಧಿಸಿದ ಮನ್ವೇಂದ್ರ, ಇದೀಗ ರೈಲ್ವೆ, ದೂರಸಂಪರ್ಕ ಮತ್ತು ವಿದ್ಯುತ್ ಸೇರಿದಂತೆ ಕೇಂದ್ರ ಸರ್ಕಾರದ ಗ್ರೂಪ್ ‘ಎ’ ಮತ್ತು ‘ಬಿ’ ತಾಂತ್ರಿಕ ಹುದ್ದೆಗಳಿಗಾಗಿ ಭಾರತೀಯ ಇಂಜಿನಿಯರಿಂಗ್ ಸೇವೆಗಳಿಗೆ ಆಯ್ಕೆಯಾಗಿದ್ದಾರೆ. ಕೆಲವೊಮ್ಮೆ ಎಲ್ಲವೂ ಅತಿಯಾಗಿ ಕಠಿಣವೆನಿಸಿದ ಕ್ಷಣಗಳಿದ್ದವು ಎಂದು ಹೆಮ್ಮೆಯ ತಾಯಿ ಹೇಳುತ್ತಾರೆ. ಆದರೆ ಮನ್ವೇಂದ್ರ ನಾನು ಮಾಡಬಲ್ಲೆ ಎಂಬ ನಂಬಿಕೆಯನ್ನು ಯಾವತ್ತೂ ಕಳೆದುಕೊಳ್ಳಲಿಲ್ಲ. ಮನ್ವೇಂದ್ರ ಸಿಂಗ್ ಅವರ ಜೀವನ ಕಥೆ, ದೈಹಿಕ ಅಸಮರ್ಥತೆ ಎಂದರೆ ಮಿತಿಯಲ್ಲ. ದೃಢ ಸಂಕಲ್ಪವಿದ್ದರೆ ಅದನ್ನು ಮೀರಿ ಸಾಧನೆ ಸಾಧ್ಯ ಎಂಬುದಕ್ಕೆ ಜೀವಂತ ಉದಾಹರಣೆಯಾಗಿದೆ.