
ಮುಂಬೈ: ಪರೀಕ್ಷಾ ಕೊಠಡಿಯಲ್ಲಿ ಮೊಬೈಲ್ ಬಳಸಿ ChatGPT ಮೂಲಕ ಉತ್ತರ ಪಡೆಯಲು ಯತ್ನಿಸಿದ್ದ ಎನ್ನುವ ಆರೋಪದ ಮೇಲೆ ಐಐಟಿ ಬಾಂಬೆಯ ದ್ವಿತೀಯ ವರ್ಷದ ವಿದ್ಯಾರ್ಥಿ ಸಿಕ್ಕಿಬಿದ್ದ ಎನ್ನಲಾಗಿದ್ದು, ಇದರ ಬೆನ್ನಲ್ಲೇ ಆತ (IIT Bombay Student) ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಈ ಘಟನೆ ವಿಭಿನ್ನ ರೂಪ ಪಡೆಯುತ್ತಿದೆ. ಕಾಪಿ ಮಾಡಿದ್ದನ್ನು ನೋಡಿ ಈ ಬಗ್ಗೆ ಗಮನಕ್ಕೆ ತಂದಿದ್ದ ಡೀನ್ ತಲೆದಂಡವಾಗಿದೆ. ಅದೇ ಮತ್ತೊಂದೆಡೆ, ಕಾಪಿ ಮಾಡಿ ಸಿಕ್ಕಬಿದ್ದ ಎನ್ನುವ ವಿದ್ಯಾರ್ಥಿಯ ಪೋಷಕರು ಎಸ್ಸಿ-ಎಸ್ಟಿ ಕಾಯ್ದೆ ಅಡಿ ಕೇಸ್ ದಾಖಲು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಇಡೀ ಪ್ರಕರಣ, ವಿಭಿನ್ನ ರೂಪ ಪಡೆದುಕೊಳ್ಳುತ್ತಿದೆ!
ಸಾಹಿಲ್ ವಕೋಡೆ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಸೆಮಿಸ್ಟರ್ ಪರೀಕ್ಷೆ ವೇಳೆ ಸ್ಮಾರ್ಟ್‌ಫೋನ್ ಬಳಕೆ ವಿಷಯಕ್ಕೆ ಸಂಬಂಧಿಸಿದಂತೆ ಮೇಲ್ವಿಚಾರಕ ಪ್ರೊ.ಸೂರ್ಯನಾರಾಯಣ ದೂಲ್ಲಾ ಅವರಿಂದ ಅವಮಾನಿತರಾದ ಕಾರಣಕ್ಕೆ, ವಿದ್ಯಾರ್ಥಿ ಸಾಹಿಲ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರೊ.ಸೂರ್ಯನಾರಾಯಣ ದೂಲ್ಲಾ ಅವರನ್ನು ಅಮಾನತು ಮಾಡಲಾಗಿದೆ. ಐಐಟಿ ಬಾಂಬೆ ನಿರ್ದೇಶಕ ಶಿರೀಷ್ ಕೇದಾರ್ ರಾಜೀನಾಮೆ ನೀಡಲಿದ್ದಾರೆ ಎಂಬ ವರದಿಗಳನ್ನೂ ಸಂಸ್ಥೆ ನಿರಾಕರಿಸಿದೆ. "ಐಐಟಿ ಬಾಂಬೆ ನಿರ್ದೇಶಕರು ರಾಜೀನಾಮೆ ನೀಡಿಲ್ಲ. ಈ ಕುರಿತಾದ ಸುದ್ದಿಯು ಸುಳ್ಳು ಎಂದು ನಾವು ಸ್ಪಷ್ಟವಾಗಿ ಹೇಳುತ್ತೇವೆ ಎಂದಿದೆ.
ಇದಕ್ಕೆ ಐಐಟಿ ಬಾಂಬೆ ಪ್ರತಿಕ್ರಿಯಿಸಿದ್ದು, ಎನರ್ಜಿ ಸೈನ್ಸ್ & ಎಂಜಿನಿಯರಿಂಗ್ (Energy Science and Engineering) ವಿಭಾಗದ ವಿದ್ಯಾರ್ಥಿ ಪರೀಕ್ಷೆ ವೇಳೆ ಮೊಬೈಲ್ ಬಳಸಿ ಪ್ರಶ್ನೆಪತ್ರಿಕೆಯನ್ನ AI ಗೆ ಅಪ್ಲೋಡ್ ಮಾಡಿ ಮಾಡಿ ಉತ್ತರ ಪಡೆಯಲು ಯತ್ನಿಸಿದ್ದ, ಈ ವೇಳೆ ಪ್ರೊಫೆಸರ್ ಕೈಗೆ ಸಿಕ್ಕಿಬಿದ್ದಿದ್ದ. ಬಳಿಕ ಬೋಧಕರು ಹಾಗೂ ವಿಭಾಗದ ಮುಖ್ಯಸ್ಥರು ವಿದ್ಯಾರ್ಥಿಯೊಂದಿಗೆ ಮಾತನಾಡಿ, ಸಲಹೆ ನೀಡಿದ್ದರು. ಯಾವುದೇ ಶಿಸ್ತು ಕ್ರಮ ಕೈಗೊಂಡಿಲ್ಲ, ಈ ಘಟನೆ ನಿನ್ನ ಕರಿಯರ್ ಮೇಲೆ ಅಥವಾ ಶೈಕ್ಷಣಿಕ ಭವಿಷ್ಯದ ಮೇಲೆ ಪರಿಣಾಮ ಕೂಡ ಬೀರೋದಿಲ್ಲ ಎಂಬ ಭರವಸೆಯನ್ನೂ ನೀಡಿದ್ದರು. ಆದರೆ ಘಟನೆಯಿಂದ ಮಾನಸಿಕವಾಗಿ ನೊಂದ ವಿದ್ಯಾರ್ಥಿ ಹಾಸ್ಟೆಲ್ ಕೊಠಡಿಗೆ ತೆರಳಿದ್ದು, ಸಂಜೆ ಕೊಠಡಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ ಎಂದಿದ್ದಾರೆ.
ತಮ್ಮ ಮಗ ತುಂಬಾ ಬುದ್ಧಿವಂತ. ಮೊದಲಿನಿಂದಲೂ ಉತ್ತಮ ಅಂಕ ಪಡೆಯುತ್ತಿದ್ದ. ಆತ ಇಂಥ ಕೆಲಸ ಮಾಡುವುದಿಲ್ಲ. ಆತನಿಗೆ ಜಾತಿ ನಿಂದನೆ ಮಾಡಲಾಗಿದ್ದು, ಇದರಿಂದ ಆತ ಬೇಸತ್ತುಕೊಂಡು ಇಂಥ ಹಾದಿ ತುಳಿದಿದ್ದಾನೆ ಎಂದು ಪೋಷಕರು ದೂರಿದ್ದಾರೆ. ಸಾಹಿಲ್ ತಂದೆ ತಮ್ಮ ಮಗ ಜಾತಿ ಆಧಾರಿತ ತಾರತಮ್ಯಕ್ಕೆ ಬಲಿಯಾಗಿದ್ದಾನೆ ಎಂದು ಹೇಳಿದ್ದಾರೆ. ಕಳೆದ ಮೂರು ತಿಂಗಳಿನಿಂದ, ಐಐಟಿ ಬಾಂಬೆಯ ಅವರ ಪ್ರಾಧ್ಯಾಪಕರು ಮತ್ತು ಅಧಿಕಾರಿಗಳು ಅವರು ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದರೂ ಸಹ ಅವರ ವಿರುದ್ಧ ಜಾತಿ ನಿಂದನೆ ಮಾಡುವ ಮೂಲಕ ಕಿರುಕುಳ ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಸದ್ಯ ಹೇಳಿಕೆಗಳನ್ನು ದಾಖಲಿಸುತ್ತಿರುವ ಪೊಲೀಸರು, ಆಹತ್ಯೆಗೆ ನಿಖರ ಕಾರಣ ಏನೆಂಬುದನ್ನು ಪರಿಶೀಲಿಸುತ್ತಿದ್ದಾರೆ. ಈ ಮಧ್ಯೆ ವಿದ್ಯಾರ್ಥಿ ಸಾವಿಗೆ ನ್ಯಾಯ ಬೇಕೆಂದು ಆಗ್ರಹಿಸಿ, ಐಐಟಿ ವಿದ್ಯಾರ್ಥಿಗಳು ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ.
ಇದರ ನಡುವೆಯೇ, ಮಹಾರಾಷ್ಟ್ರ ಸರ್ಕಾರವು ವಿದ್ಯಾರ್ಥಿ ಸಾಹಿಲ್ ವಕೋಡ್ ಆತ್ಮಹತ್ಯೆ ತನಿಖೆಯನ್ನು ಮುಂಬೈ ಅಪರಾಧ ಶಾಖೆಗೆ ಹಸ್ತಾಂತರಿಸಿದೆ. ಇದೀಗ ಸಂಸ್ಥೆಯು ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ಹೊಸ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಎರಡನೇ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಯ ಆತ್ಮಹತ್ಯೆಯ ಬಗ್ಗೆ ತನ್ನ ಎಲ್ಲಾ ಹೇಳಿಕೆಗಳನ್ನು ಹಿಂತೆಗೆದುಕೊಂಡಿತು ಮತ್ತು ಕ್ಷಮೆಯಾಚಿಸಿದೆ. “ಸಾಹಿಲ್ ಅವರ ದುರದೃಷ್ಟಕರ ಮರಣದ ಸುತ್ತಲಿನ ಸಂದರ್ಭಗಳಿಗೆ ಸಂಬಂಧಿಸಿದಂತೆ ನಮ್ಮ ಹಿಂದಿನ ಹೇಳಿಕೆಗಳಿಗೆ ನಾವು ಕ್ಷಮೆಯಾಚಿಸುತ್ತೇವೆ. ಘಟನೆಗೆ ಕಾರಣವಾದ ವಿವರಗಳು ಮತ್ತು ಸಂದರ್ಭಗಳು ಸೂಕ್ತ ಅಧಿಕಾರಿಗಳ ತನಿಖೆಗೆ ಒಳಪಟ್ಟಿರುತ್ತವೆ” ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದೆ. ನಡೆಯುತ್ತಿರುವ ತನಿಖೆಯ ದೃಷ್ಟಿಯಿಂದ, ಅವರ ಸಾವಿಗೆ ಮುಂಚಿನ ಘಟನೆಗಳಿಗೆ ಸಂಬಂಧಿಸಿದ ಬಗ್ಗೆ ಈಗಲೇ ಯಾವವುದೇ ನಿರ್ಧಾರಕ್ಕೆ ಬರಲಾಗುವುದಿಲ್ಲ ಎಂದಿದೆ.
ವಾಕೋಡ್ ಅವರ ಆತ್ಮಹತ್ಯೆಗೆ ಸಂಬಂಧಿಸಿದಂತೆ ತಮ್ಮ ಹುದ್ದೆಗೆ ರಾಜೀನಾಮೆ ನೀಡುವ ವೈರಲ್ ವೀಡಿಯೊದಲ್ಲಿ ಕಾಣಿಸಿಕೊಂಡಿದ್ದ ಐಐಟಿ ಬಾಂಬೆ ನಿರ್ದೇಶಕ ಶಿರೀಶ್ ಕೆದರೆ ಅವರು ರಾಜೀನಾಮೆ ನೀಡಿಲ್ಲ ಮತ್ತು ಈ ಪ್ರಕರಣದಲ್ಲಿ ನ್ಯಾಯಯುತ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಲಾಗಿದೆ ಎಂದು ಭರವಸೆ ನೀಡಿದ್ದಾರೆ ಎಂದು ಸ್ಪಷ್ಟಪಡಿಸಿದೆ.