ಶಾಲೆ ಆರಂಭವರೆಗೆ ಆನ್‌ಲೈನ್‌ ಕ್ಲಾಸ್‌ಗೆ ಹೈಕೋರ್ಟ್‌ ನಿಶಾನೆ

By Kannadaprabha News  |  First Published Jul 23, 2021, 8:15 AM IST

* ಆನ್‌ಲೈನ್‌ ಶಿಕ್ಷಣ ನಿಷೇಧಿಸಿ ಸರ್ಕಾರ ಹೊರಡಿಸಿದ್ದ ಆದೇಶದ ತಡೆಯಾಜ್ಞೆ ವಿಸ್ತರಣೆ
* ಶಾಲೆ ಪುನಾರಂಭ, ಆನ್‌ಲೈನ್‌ ಶಿಕ್ಷಣ ವಿಚಾರದಲ್ಲಿ ಸರ್ಕಾರ ಸ್ವತಂತ್ರ
* ಆ.2ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್‌ 
 


ಬೆಂಗಳೂರು(ಜು.23): ರಾಜ್ಯದಲ್ಲಿ ಎಲ್‌ಕೆಜಿಯಿಂದ 10ನೇ ತರಗತಿವರೆಗೆ ಆನ್‌ಲೈನ್‌ ಶಿಕ್ಷಣ ನಿಷೇಧಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಹೈಕೋರ್ಟ್‌ ವಿಸ್ತರಿಸಿದೆ. 

ಸರ್ಕಾರದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಹಿರಿಯ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ, ಮಧ್ಯಂತರ ತಡೆಯಾಜ್ಞೆ ಆದೇಶವನ್ನು ವಿಸ್ತರಿಸಿತು. 

Tap to resize

Latest Videos

ರಾಜ್ಯದಲ್ಲಿ ಎಲ್‌ಕೆಜಿಯಿಂದ 10ನೇ ತರಗತಿವರೆಗೆ ಆನ್‌ಲೈನ್‌ ಶಿಕ್ಷಣ ನಿಷೇಧಿಸಿ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ 2020ರ ಜುಲೈ 8ರಂದು ಹೈಕೋರ್ಟ್‌ ನೀಡಿರುವ ಮಧ್ಯಂತರ ತಡೆಯಾಜ್ಞೆ ಇನ್ನೂ ಚಾಲ್ತಿಯಲ್ಲಿದೆ ಎಂದು ಅರ್ಜಿದಾರರ ಹಾಗೂ ಸರ್ಕಾರದ ಪರ ವಕೀಲರು ಮಾಹಿತಿ ನೀಡಿದ್ದಾರೆ. 

ಯಾದಗಿರಿ: ತಂದೆ ಸಾವಿನ ಶೋಕದಲ್ಲೂ SSLC ಪರೀಕ್ಷೆ ಬರೆದ ಪುತ್ರಿ..!

ಸದ್ಯ ಕೋವಿಡ್‌ ಸೋಂಕಿನ ತೀವ್ರತೆ ತಗ್ಗಿದೆ. ಶಾಲೆಗಳನ್ನು ಆರಂಭಿಸುವ ನಿಟ್ಟಿನಲ್ಲಿ ಧನಾತ್ಮಕ ನಿರ್ಧಾರ ಕೈಗೊಳ್ಳುವ ಹಂತದಲ್ಲಿ ಸರ್ಕಾರವಿದೆ. ಆದ್ದರಿಂದ ಸರ್ಕಾರ ಶಾಲೆಗಳನ್ನು ಪುನರಾರಂಭಿಸುವ ನಿರ್ಧಾರ ಕೈಗೊಳ್ಳುವವರೆಗೆ ಅಥವಾ ಆನ್‌ಲೈನ್‌ ತರಗತಿ ಆರಂಭಿಸುವ ಕುರಿತು ನೀತಿ ನಿರ್ಣಯ ರೂಪಿಸುವವರೆಗೆ ಜು.8ರ ಮಧ್ಯಂತರ ತಡೆಯಾಜ್ಞೆ ಆದೇಶವನ್ನು ಮುಂದುವರಿಸುವ ಅಗತ್ಯವಿದೆ ಎಂದು ನ್ಯಾಯಪೀಠ ಆದೇಶದಲ್ಲಿ ಅಭಿಪ್ರಾಯಪಟ್ಟಿತು. ಅಲ್ಲದೆ, ತಜ್ಞರ ಅಭಿಪ್ರಾಯ ಆಧಾರದ ಮೇಲೆ ಮತ್ತು ಕೋವಿಡ್‌ ಪರಿಸ್ಥಿತಿ ಪರಿಗಣಿಸಿ ಶಾಲೆಗಳ ಪುನರ್‌ ಆರಂಭ ಹಾಗೂ ಆನ್‌ಲೈನ್‌ ಶಿಕ್ಷಣ ನಡೆಸುವ ಕುರಿತು ನಿರ್ಧಾರ ಕೈಗೊಳ್ಳಲು ಸರ್ಕಾರ ಸ್ವತಂತ್ರವಾಗಿದೆ ಎಂದು ತಿಳಿಸಿದ ನ್ಯಾಯಪೀಠ ಅರ್ಜಿಗಳನ್ನು ಇತ್ಯರ್ಥಪಡಿಸಿತು.

ಎಲ್‌ಕೆಜಿಯಿಂದ 5ನೇ ತರಗತಿವರೆಗೆ ಆನ್‌ಲೈನ್‌ ಶಿಕ್ಷಣ ನಿಷೇಧಿಸಿ ಸರ್ಕಾರ 2020ರ ಜೂ.15ರಂದು ಆದೇಶಿಸಿತ್ತು. ಜತೆಗೆ, ಜೂ.27ರಂದು ಮತ್ತೊಂದು ಆದೇಶ ಹೊರಡಿಸಿ ಎಲ್‌ಕೆಜಿ, ಯುಕೆಜಿ ಹಾಗೂ 1ರಿಂದ 10ನೇ ತರಗತಿವರೆಗೆ ಆನ್‌ಲೈನ್‌ ಶಿಕ್ಷಣ ಆರಂಭಿಸಲು ಕೆಲವೊಂದು ನಿಬಂಧನೆ ವಿಧಿಸಿತ್ತು. ಈ ಕ್ರಮ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು.

ಆ ಅರ್ಜಿಗಳನ್ನು 2020ರ ಜು.8ರಂದು ವಿಚಾರಣೆ ನಡೆಸಿದ್ದ ಹೈಕೋರ್ಟ್‌, ಸರ್ಕಾರ ಜೂ.15 ಮತ್ತು 27ರಂದು ಹೊರಡಿಸಿದ್ದ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು. ಹಾಗೆಯೇ, ನ್ಯಾಯಾಲಯದ ಈ ಆದೇಶ ಮುಂದಿಟ್ಟುಕೊಂಡು ಆನ್‌ಲೈನ್‌ ಶಿಕ್ಷಣವನ್ನು ಮಕ್ಕಳಿಗೆ ಕಡ್ಡಾಯಗೊಳಿಸುವಂತಿಲ್ಲ. ಅದಕ್ಕಾಗಿ ಹೆಚ್ಚುವರಿ ಶುಲ್ಕ ಸಂಗ್ರಹಿಸುವಂತಿಲ್ಲ. ಆನ್‌ಲೈನ್‌ ಶಿಕ್ಷಣದ ಸೌಲಭ್ಯ ಪಡೆದುಕೊಳ್ಳಲು ಸಾಧ್ಯವಾಗದ ಮಕ್ಕಳು ನಿರಂತರ ಕಲಿಕೆಯಿಂದ ವಂಚಿತರಾಗದಂತೆ ಶಾಲೆಗಳು ನೋಡಿಕೊಳ್ಳಬೇಕು. ಅಂತಹ ಮಕ್ಕಳಿಗೆ ಶಾಲೆಗಳು ಪುನರಾರಂಭಗೊಂಡ ಬಳಿಕ ವಿಶೇಷ ವ್ಯವಸ್ಥೆ ಕಲ್ಪಿಸಬೇಕು ಎಂದು ಶಾಲೆಗಳಿಗೆ ಷರತ್ತು ವಿಧಿಸಿತ್ತು.

ಶುಲ್ಕ ಕಡಿತ ಅರ್ಜಿ ಆ.2ಕ್ಕೆ ವಿಚಾರಣೆ

ಖಾಸಗಿ ಶಾಲೆಗಳಲ್ಲಿ ಕಳೆದ ಸಾಲಿನ ಬೋಧನಾ ಶುಲ್ಕವನ್ನು ಶೇ.30 ಕಡಿತಗೊಳಿಸಿದ ಸರ್ಕಾರದ ಕ್ರಮ ಪ್ರಶ್ನಿಸಿ ಕರ್ನಾಟಕ ಖಾಸಗಿ ಶಾಲೆಗಳ ಸಮಿತಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಆ.2ಕ್ಕೆ ಹೈಕೋರ್ಟ್‌ ಮುಂದೂಡಿದೆ. ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮೊಗದಂ ಅವರ ನ್ಯಾಯಪೀಠದ ಮುಂದೆ ಗುರುವಾರ ಅರ್ಜಿಗಳ ವಿಚಾರಣೆ ನಿಗದಿಯಾಗಿತ್ತು. ಆದರೆ, ಸಮಯಾವಕಾಶದ ಕೊರತೆಯಿಂದ ಅರ್ಜಿಗಳ ವಿಚಾರಣೆಯನ್ನು ಆ.2ಕ್ಕೆ ಮುಂದೂಡಲಾಯಿತು.
 

click me!