* ಬೆಳೆ ನಷ್ಟ, ಸಾಲಬಾಧೆ ಆತಂಕ
* ಮುಖ್ಯ ಕಾಲುವೆಗೆ ಬಿದ್ದು ರೈತ ಆತ್ಮಹತ್ಯೆ
* ಯಾದಗಿರಿ ಜಿಲ್ಲೆಯ ಕೆಂಭಾವಿ ಸಮೀಪದ ನಗನೂರಿನಲ್ಲಿ ನಡೆದ ಘಟನೆ
ಯಾದಗಿರಿ(ಜು.23): ಬೆಳೆನಷ್ಟ, ಸಾಲಬಾಧೆ ಸಂಕಷ್ಟದಿಂದ ನೊಂದ ರೈತನೊಬ್ಬ ತುಂಬಿ ಹರಿಯುತ್ತಿದ್ದ ಕಾಲುವೆಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಪಿತೃಶೋಕದ ನಡುವೆಯೂ ಈತನ ಪುತ್ರಿ ಗುರುವಾರ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು ಅಂತ್ಯಸಂಸ್ಕಾರದಲ್ಲಿ ಭಾಗಿಯಾದ ಮನಕಲುಕುವ ಘಟನೆ ವರದಿಯಾಗಿದೆ.
ಜಿಲ್ಲೆಯ ಕೆಂಭಾವಿ ಸಮೀಪದ ನಗನೂರಿನ ರೈತ ನಿರ್ಮಲರೆಡ್ಡಿ(35) ಆತ್ಮಹತ್ಯೆ ಮಾಡಿಕೊಂಡ ರೈತ. ಬುಧವಾರ ಸಂಜೆ ಜೇವರ್ಗಿ ಮುಖ್ಯ ಕಾಲುವೆ ಬಳಿ ಇವರು ನಾಪತ್ತೆಯಾಗಿದ್ದರು. ಐದೆಕರೆ ಜಮೀನಿನಲ್ಲಿ ಹತ್ತಿ ಹಾಗೂ ತೊಗರಿ ಬೆಳೆದಿದ್ದಾದರೂ, ಅತೀವೃಷ್ಟಿಯಿಂದ ಬೆಳೆ ಸರಿಯಾಗಿ ಬಂದಿರಲಿಲ್ಲ. ಇತ್ತ, ಕೃಷಿಗಾಗಿ ಮಾಡಿದ ಸಾಲವೂ ಇವರನ್ನು ಕಾಡತೊಡಗಿತ್ತು ಎಂದು ಕುಟುಂಬದ ಮೂಲಗಳು ತಿಳಿಸಿವೆ.
undefined
ಬುಧವಾರ ಸಂಜೆಯಿಂದ ಮಧ್ಯರಾತ್ರಿವರೆಗೂ ರಕ್ಷಣಾ ಪಡೆಗಳು ಅವರಿಗಾಗಿ ಶೋಧ ನಡೆಸಿದ್ದರಾದರೂ, ಕತ್ತಲಾವರಿಸಿದ್ದರಿಂದ ರಕ್ಷಣಾ ಕಾರ್ಯ ಸ್ಥಗಿತಗೊಳಿಸಲಾಗಿತ್ತು. ಗುರುವಾರ ಬೆಳಿಗ್ಗೆ ಕಾಲುವೆಗೆ ಸಮೀಪದಲ್ಲಿ ನಿರ್ಮಲರೆಡ್ಡಿ ಮೃತದೇಹ ಪತ್ತೆಯಾಗಿದೆ. ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಲು ಬೆರಳಿನಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ಸಾವಳೇಶ್ವರದ ಛಲಗಾರ!
ನಿರ್ಮಲರೆಡ್ಡಿ ಪುತ್ರಿ ದೀಪಿಕಾ ಗುರುವಾರ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಬೇಕಿತ್ತು. ಶಹಾಪುರ ತಾಲೂಕಿನ ಬೇವಿನಾಳದ ಕಿತ್ತೂರು ರಾಣಿ ಚೆನ್ನಮ್ಮ ಶಾಲೆಯ ವಿದ್ಯಾರ್ಥಿನಿ ಈಕೆ. ಆದರೆ, ತಂದೆಯ ಕಣ್ಮರೆ ಇಡೀ ಕುಟುಂಬವನ್ನು ಕಣ್ಣೀರಾಗಿಸಿತ್ತು. ಬುಧವಾರ ರಾತ್ರಿವರೆಗೂ ರಕ್ಷಣಾ ಪಡೆಗಳ ಜೊತೆಗೆ ಹುಡುಕಾಟ ನಡೆಸಿತ್ತು. ಗುರುವಾರ ಬೆಳಿಗ್ಗೆ ನಿರ್ಮಲ ರೆಡ್ಡಿ ದೊರಕಿದಾಗ ಆಕ್ರಂದನ ಮುಗಿಲು ಮುಟ್ಟಿತ್ತು.
ತಂದೆ ಸಾವಿನ ದು:ಖದಲ್ಲಿದ್ದ ಪುತ್ರಿ ದೀಪಿಕಾ ಗುರುವಾರ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗಿದ್ದಾಳೆ. ಪರೀಕ್ಷೆ ತಪ್ಪಿಸಿಕೊಳ್ಳುವ ವಿದ್ಯಾರ್ಥಿಗಳಿಗೆ ಪಿತೃಶೋಕದ ನಡುವೆಯೇ ಪರೀಕ್ಷೆ ಬರೆದು ಮಾದರಿಯಾಗಿದ್ದಾರೆ. ಕೆಂಭಾವಿ ಪಟ್ಟಣದ ವಿದ್ಯಾಲಕ್ಷಿ ಆಂಗ್ಲ ಆಂಗ್ಲ ಮಾಧ್ಯಮದ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿನಿ ಪರೀಕ್ಷೆಗೆ ಹಾಜರಾದಳು.
ತಂದೆಯ ಸಾವಿನ ನೋವಿನಲ್ಲಿದ್ದ ಬಾಲಕಿ ಬರೆಯಲು ಹಿಂದೇಟು ಹಾಕಿದ್ದಳಾದರೂ, ಕುಟುಂಬಸ್ಥರು ಹಾಗೂ ಗ್ರಾಮದವರು ಯ ಮನವೊಲೈಸಿ, ಧೈರ್ಯ ತುಂಬಿದ್ದರು. ಗುರುವಾರ ನಡೆದ 2ನೇ ಹಂತದ ಎಸ್ಸೆಸ್ಸೆಲ್ಸಿ ಮೂರು ವಿಷಯಗಳ ಪರೀಕ್ಷೆಗೆ ಕರೆ ತಂದರು. ಪರೀಕ್ಷಾ ಕೇಂದ್ರದಲ್ಲಿನ ಶಿಕ್ಷಕರು ಬಾಲಕಿಗೆ ಮಾನಸಿಕ ಸ್ಥೈರ್ಯ ತುಂಬಿ ಪರೀಕ್ಷಾ ಕೊಠಡಿಗೆ ಕಳುಹಿಸಿದ್ದಾರೆ. ಪರೀಕ್ಷೆ ಹಾಜರಾದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ದೀಪಿಕಾ (ಬಿಂದು ದೇಶಪಾಂಡೆ) ದುಃಖದ ನಡುವೆಯೂ ಪರೀಕ್ಷೆ ಬರೆದಿದ್ದಾರೆ. ಪರೀಕ್ಷೆ ಬರೆದ ಬಳಿಕ ತನ್ನ ತಂದೆಯ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದಾರೆ.