ಹಂಪಿ ಕನ್ನಡ ವಿವಿ: ಯುಜಿಸಿ ಪರವಾನಗಿ ಇಲ್ಲದೇ ಕೋರ್ಸ್‌ ಆರಂಭ..?

Kannadaprabha News   | Asianet News
Published : Sep 30, 2021, 01:06 PM ISTUpdated : Sep 30, 2021, 01:07 PM IST
ಹಂಪಿ ಕನ್ನಡ ವಿವಿ: ಯುಜಿಸಿ ಪರವಾನಗಿ ಇಲ್ಲದೇ ಕೋರ್ಸ್‌ ಆರಂಭ..?

ಸಾರಾಂಶ

*  ಅತಂತ್ರದಲ್ಲಿ ಕನ್ನಡ ವಿವಿಯ ದೂರಶಿಕ್ಷಣ ವಿದ್ಯಾರ್ಥಿಗಳು *  ಯುಜಿಸಿ ಪರವಾನಗಿ ಪಡೆಯಲು ವಿವಿಯಿಂದ ಕಸರತ್ತು *  ವಿದ್ಯಾರ್ಥಿಗಳ ಹಿತ ಕಾಪಾಡಲಿರುವ ಹಂಪಿ ಕನ್ನಡ ವಿವಿ  

ಕೃಷ್ಣ ಎನ್‌. ಲಮಾಣಿ

ಹೊಸಪೇಟೆ(ಸೆ.30): ಹಂಪಿ ಕನ್ನಡ ವಿಶ್ವವಿದ್ಯಾಲಯ(Hampi Kannada University) ದೂರಶಿಕ್ಷಣ ನಿರ್ದೇಶನಾಲಯ ಯುಜಿಸಿಯಿಂದ ಪರವಾನಗಿ ಪಡೆಯದೇ ದೂರಶಿಕ್ಷಣ ಕೋರ್ಸ್‌ಗಳ ತರಗತಿ ಆರಂಭಿಸಿದೆಯೇ ಎನ್ನುವ ಆತಂಕ ವಿದ್ಯಾರ್ಥಿಗಳಲ್ಲಿ ಮನೆ ಮಾಡಿದೆ.

2019-20ನೇ ಸಾಲಿನ 403 ವಿದ್ಯಾರ್ಥಿಗಳು(Students) ಎಂಎ ಚರಿತ್ರೆ, ಇತಿಹಾಸ, ಕನ್ನಡ, ಸಮಾಜಶಾಸ್ತ್ರ, ಪತ್ರಿಕೋದ್ಯಮ ಕೋರ್ಸ್‌ಗಳಲ್ಲಿ ಪ್ರವೇಶ ಪಡೆದಿದ್ದಾರೆ. ಇನ್ನು ಪುರಾತತ್ವ ಮತ್ತು ಪ್ರವಾಸೋದ್ಯಮ, ಪತ್ರಿಕೋದ್ಯಮ, ನಾಟಕಕಲೆಗಳ ಕುರಿತ ಡಿಪ್ಲೊಮಾ ಕೋಸ್‌ಗಳಿಗೂ ಪ್ರವೇಶ ಪಡೆದಿದ್ದಾರೆ. ಈ ಸಂಬಂಧ 10 ದಿನಗಳ ಸಂಪರ್ಕ ತರಗತಿಗಳನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯ ಆರಂಭಿಸಿದೆ. ಈ ವೇಳೆ ವಿದ್ಯಾರ್ಥಿಗಳು ಪ್ರಶ್ನೆ ಮಾಡಿದ್ದಾರೆ. ಆದರೆ, ಸಮಂಜಸ ಉತ್ತರ ದೊರೆಯುತ್ತಿಲ್ಲ ಎಂಬುದು ವಿದ್ಯಾರ್ಥಿಗಳ ಅಳಲಾಗಿದೆ.

ಹಂಪಿ ಕನ್ನಡ ವಿವಿಯ ದೂರ ಶಿಕ್ಷಣ(Distance Education) ನಿರ್ದೇಶನಾಲಯಕ್ಕೆ ದೂರ ಶಿಕ್ಷಣದಲ್ಲಿ ಕೋರ್ಸ್‌ಗಳ ಆರಂಭಿಸಲು ಯುಜಿಸಿ(UGC) ಪರವಾನಗಿ ನೀಡಿಲ್ಲ ಎಂದು ತಿಳಿದು ಬಂದಿದೆ. ಇನ್ನು ಕೆಲ ವಿಭಾಗಗಳಲ್ಲಿ ಕಾಯಂ ಉಪನ್ಯಾಸಕರು ಇಲ್ಲ. ಅತಿಥಿ ಉಪನ್ಯಾಸಕರೇ ಕೋರ್ಸ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡುವಂತಾಗಿದೆ. ಯುಜಿಸಿಯಿಂದ ಪರವಾನಗಿ ಪಡೆದು ಕೋರ್ಸ್‌ಗಳನ್ನು ಆರಂಭಿಸಬೇಕಿತ್ತು. ಕೋರ್ಸ್‌ ಮಾಡಿ ಮುಂದೆ ಮನೆಯಲ್ಲೇ ಕೂರುವ ಸ್ಥಿತಿ ಬಂದಿತು ಎಂಬ ಆತಂಕ ವಿದ್ಯಾರ್ಥಿಗಳಲ್ಲಿ ಮನೆ ಮಾಡಿದೆ.

ಹೊಸಪೇಟೆ: ತಡರಾತ್ರಿ ಠಾಣೆಯಲ್ಲಿದ್ದ ಹಂಪಿ ವಿವಿ ವಿದ್ಯಾರ್ಥಿನಿಯರು?

ಕನ್ನಡ ವಿವಿಯ ದೂರ ಶಿಕ್ಷಣ ನಿರ್ದೇಶನಾಲಯದ ಕುರಿತು ವಿದ್ಯಾರ್ಥಿಗಳು ಕುಲಸಚಿವರಿಗೂ ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ಯಾವುದೇ ಆತಂಕ ಬೇಡ ಎಂದು ವಿವಿ ಹೇಳುತ್ತಿದೆ. ಕೊರೋನಾ, ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಯುಜಿಸಿಗೆ ಸೂಕ್ತ ದಾಖಲೆ ಸಲ್ಲಿಸಲು ಆಗಿಲ್ಲ. ಜತೆಗೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ದೂರಶಿಕ್ಷಣದ ಮಹತ್ವವನ್ನು ಯುಜಿಸಿಗೂ ಮನವರಿಕೆ ಮಾಡಲಾಗಿದೆ. ಹಾಗಾಗಿ ಕನ್ನಡ ವಿಶ್ವವಿದ್ಯಾಲಯ ಯುಜಿಸಿಯಿಂದ ಖಂಡಿತ ಪರವಾನಗಿ ಪಡೆದುಕೊಳ್ಳಲಿದೆ. ವಿದ್ಯಾರ್ಥಿಗಳು ಆತಂಕಪಡುವ ಸ್ಥಿತಿ ಉದ್ಭವವಾಗುವುದಿಲ್ಲ. ಅವರು ಓದಿನ ಕಡೆಗೆ ಗಮನಹರಿಸಲಿ. ಕನ್ನಡ ವಿವಿ ವಿದ್ಯಾರ್ಥಿಗಳ ಹಿತ ಕಾಪಾಡಲಿದೆ ಎಂದು ಕನ್ನಡ ವಿವಿಯ ಆಡಳಿತ ಹೇಳುತ್ತಿದೆ.

ಏತನ್ಮಧ್ಯೆ, ತಮಗೆ ಲಿಖಿತ ಭರವಸೆ ನೀಡಬೇಕು ಎಂದು ವಿದ್ಯಾರ್ಥಿಗಳು ಪಟ್ಟುಹಿಡಿದಿದ್ದಾರೆ. ಆದರೆ, ಲಿಖಿತ ಭರವಸೆ ನೀಡಲಾಗುವುದಿಲ್ಲ. ಖಂಡಿತ ಕನ್ನಡ ವಿವಿ ಯುಜಿಸಿಯಿಂದ ಪರವಾನಗಿ ಪಡೆಯಲಿದೆ ಎಂದು ವಿವಿಯ ಆಡಳಿತ ಹೇಳುತ್ತಿದೆ ಎಂಬುದು ವಿದ್ಯಾರ್ಥಿಗಳ ಅಂಬೋಣವಾಗಿದೆ.

ಕನ್ನಡ ವಿವಿಯ ದೂರಶಿಕ್ಷಣಾಲಯದಲ್ಲಿ 403 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಆದರೆ, ಯುಜಿಸಿಯಿಂದ ಪರವಾನಗಿ ಪಡೆಯದೇ ಕೋರ್ಸ್‌ಗಳನ್ನು ನಡೆಸುತ್ತಿರುವುದು ಸರಿಯಲ್ಲ. ವಿದ್ಯಾರ್ಥಿಗಳ ಭವಿಷ್ಯ ಆತಂಕದಲ್ಲಿದ್ದು, ಕನ್ನಡ ವಿವಿ ಆಡಳಿತ ಮಂಡಳಿ ಸರಿಪಡಿಸಬೇಕು ಎಂದು ಹೊಸಪೇಟೆ ಎಸ್‌ಎಫ್‌ಐ ವಿದ್ಯಾರ್ಥಿ ಸಂಘಟನೆ ಜೆ. ಶಿವಕುಮಾರ ತಿಳಿಸಿದ್ದಾರೆ.  

ಕನ್ನಡ ವಿವಿ ವಿದ್ಯಾರ್ಥಿಗಳ ಹಿತ ಕಾಪಾಡಲಿದೆ. ಯುಜಿಸಿಗೆ ಸೂಕ್ತ ದಾಖಲೆಗಳನ್ನು ಸಲ್ಲಿಸಿ ಪರವಾನಗಿ ಪಡೆದುಕೊಳ್ಳಲಾಗುವುದು. ವಿದ್ಯಾರ್ಥಿಗಳು ಆತಂಕ ಪಡೆಯದೇ ಓದಿನ ಕಡೆಗೆ ಗಮನ ಹರಿಸಲಿ ಎಂದು ಹಂಪಿ ಕನ್ನಡ ವಿವಿ ಕುಲಪತಿ ಡಾ. ಸ.ಚಿ. ರಮೇಶ ಹೇಳಿದ್ದಾರೆ.  
 

PREV
click me!

Recommended Stories

SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ
ಖಾಸಗಿ ಶಾಲೆಗಳಿಗೆ ಸೆಡ್ಡು, ಮುಂದಿನ ವರ್ಷದಿಂದ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆ ಕಾರ್ಯಾರಂಭ