ಹಗರಿಗಜಾಪುರ ವಿದ್ಯಾರ್ಥಿಗಳು ಪ್ರೌಢಶಾಲೆಗೆ ಹೋಗುವುದೇ ಹರಸಾಹಸ

By Kannadaprabha News  |  First Published Aug 19, 2022, 12:47 PM IST
  • ಹದಗೆಟ್ಟಸಂಗಮೇಶ್ವರ-ಹಗರಿಗಜಾಪುರ ರಸ್ತೆ
  • 3 ಕಿಮೀ ಪ್ರಯಾಣಕ್ಕೆ ಜನರು, ವಿದ್ಯಾರ್ಥಿಗಳ ಪರದಾಟ
  • ರಸ್ತೆ ಪಕ್ಕದ ಗಿಡಗಂಟಿ ತೆರವುಗೊಳಿಸುವ ಗ್ರಾಮಸ್ಥರು
  • ವಿದ್ಯಾರ್ಥಿಗಳಿಗೆ ಪ್ರೌಢಶಾಲೆಗೆ ಹೋಗುವುದೇ ಹರಸಾಹಸ

ವರದಿ: ಜಿ. ಸೋಮಶೇಖರ

 ಕೊಟ್ಟೂರು (ಆ.19) : ತಾಲೂಕಿನ ಸಂಗಮೇಶ್ವರ ಗ್ರಾಮದಿಂದ ಹಗರಿಗಜಾಪುರಕ್ಕೆ ಹೋಗುವ ರಸ್ತೆ ಪೂರ್ತಿ ಹದಗೆಟ್ಟು ಹೋಗಿದೆ. ಸಂಗಮೇಶ್ವರ ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇರುವ ಗ್ರಾಮವಾದರೂ ಈ ರಸ್ತೆ ಹೊಲಕ್ಕೆ ಹೋಗುವ ರಸ್ತೆಯಂತೆ ಕಾಣುತ್ತದೆ. ರಸ್ತೆ ಅಕ್ಕಪಕ್ಕ ಗಿಡಗಂಟಿಗಳು ಬೆಳೆದು ಸಂಚಾರಕ್ಕೆ ತೊಡಕುಂಟು ಮಾಡುತ್ತಿವೆ. ಈ ರಸ್ತೆಯಲ್ಲಿ ವಾಹನ ಸವಾರಿ ಕಷ್ಟ. ಸೈಕಲ್‌ ಹೊಡೆಯುವುದೂ ಹರಸಾಹಸ. ಕನಿಷ್ಠ ನಡೆದು ಹೋಗುವುದೆಂದರೂ ಅದೂ ಆಗದ ಮಾತು. ಮುಖ್ಯವಾಗಿ ಸಂಗಮೇಶ್ವರ ಗ್ರಾಮದಿಂದ ಮೂರು ಕಿಲೋಮೀಟರ್‌ ದೂರದಲ್ಲಿರುವ ಹಗರಿಗಜಾಪುರದ ಪ್ರೌಢಶಾಲೆಗೆ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ತೆರಳುತ್ತಾರೆ. ಕೆಲವರು ಸೈಕಲ್‌ ಅವಲಂಬಿಸಿದ್ದರೆ ಕೆಲವರು ಕಾಲ್ನಡಿಗೆಯಲ್ಲಿ ತೆರಳುತ್ತಾರೆ. ನಿತ್ಯ ಈ ವಿದ್ಯಾರ್ಥಿಗಳು ಶಾಲೆಗೆ ತೆರಳುವುದು ಹರಸಾಹಸವೇ ಸರಿ.

Tap to resize

Latest Videos

undefined

ಕುಡಿದು ವಿದ್ಯಾರ್ಥಿನಿಯನ್ನು ಎಳೆದಾಡಿ ಲೈಂಗಿಕ ಕಿರುಕುಳ: ಭಯಾನಕ ದೃಶ್ಯ ಸಿಸಿಯಲ್ಲಿ ಸೆರೆ

ಸಂಗಮೇಶ್ವರ ಗ್ರಾಮ(Sangameshwar Village )ದಲ್ಲಿ 250ಕ್ಕೂ ಹೆಚ್ಚು ಮನೆಗಳಿವೆ. ಈ ಗ್ರಾಮದಲ್ಲಿ ಪ್ರಾಥಮಿಕ ಶಾಲೆ ಮಾತ್ರ ಇದೆ. ಪ್ರೌಢಶಾಲೆಗೆ ಹಗರಿಗಜಾಪುರ ಅಥವಾ ಕೊಟ್ಟೂರಿಗೆ ತೆರಳುವುದು ಅನಿವಾರ್ಯ. 15ಕ್ಕೂ ಹೆಚ್ಚು ಬಾಲಕಿಯರೇ ಇಲ್ಲಿಂದ ಹಗರಿಗಜಾಪುರ ಶಾಲೆಗೆ ಹೋಗುತ್ತಾರೆ.

ರಸ್ತೆಯುದ್ದಕ್ಕೂ ಹರಡಿರುವ ಗಿಡ​​-ಗಂಟಿಗಳನ್ನು ಸಂಗಮೇಶ್ವರ ಗ್ರಾಮದಲ್ಲಿನ ಕೆಲವರು ಕಿತ್ತೊಗೆದು ತಮ್ಮ ಮಕ್ಕಳು ಶಾಲೆಗೆ ತೆರಳಲು ಅನುಕೂಲ ಮಾಡಿಕೊಡುತ್ತಾರೆ. ಆದರೆ ಕೆಲವೇ ದಿನಗಳಲ್ಲಿ ಗಿಡ-ಗಂಟಿಗಳು ಚಿಗುರಿಕೊಳ್ಳುತ್ತವೆ. ರಸ್ತೆಯಲ್ಲಿ ಸಂಚರಿಸಲಾಗದ ಸ್ಥಿತಿ ನಿರ್ಮಾಣವಾಗುತ್ತದೆ. ಈ ಬಗ್ಗೆ ಗ್ರಾಪಂ ಆಡಳಿತಕ್ಕೆ ಗ್ರಾಮಸ್ಥರು ಸಾಕಷ್ಟುದೂರು ಸಲ್ಲಿಸಿದರೂ ರಸ್ತೆ ದುರಸ್ತಿಗೊಳಿಸುವ ಯಾವುದೇ ಕಾಮಗಾರಿ ನಡೆಯುತ್ತಿಲ್ಲ. ಗ್ರಾಪಂ ಆಡಳಿತ ಈ ಬಗ್ಗೆ ಆನಾದರಣೆ ತೋರಿದ ಹಿನ್ನೆಲೆಯಲ್ಲಿ ಸಂಗಮೇಶ್ವರ ಗ್ರಾಮದ ಜಗದೀಶ ಕೊಟ್ಟೂರು, ಜೆಸಿಬಿ ಅಜ್ಜಪ್ಪ ಮತ್ತಿತರರು ಗಿಡ-ಗಂಟಿಗಳನ್ನು ಆಗಾಗ ತೆರವು ಮಾಡುತ್ತಿರುತ್ತಾರೆ.

ಮಳೆಗಾಲದಲ್ಲಿ ಈ ರಸ್ತೆ ಅಕ್ಷರಶಃ ಕೆಸರು ಗದ್ದೆಯಂತಾಗುತ್ತದೆ. ಸೈಕಲ್‌ ತುಳಿಯಲೂ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗುತ್ತದೆ. ಈ ರಸ್ತೆ ಬಿಟ್ಟರೆ ಹಗರಿಗಜಾಪುರಕ್ಕೆ ಹೋಗಿ ಬರಲು ಬೇರೆ ಮಾರ್ಗವೇ ಇಲ್ಲ. ಕಷ್ಟಪಟ್ಟು ದಿನನಿತ್ಯ ಆರು ಕಿಮೀ ಸೈಕಲ್‌ ತುಳಿಯುವುದು ಅಥವಾ ನಡೆದು ಹೋದರೆ ಮಾತ್ರ ಪ್ರೌಢಶಿಕ್ಷಣ ಪಡೆಯಲು ಸಾಧ್ಯ.

ಇಲ್ಲಿಗೆ ಬಂದ ಜನಪ್ರತಿನಿಧಿಗಳು ರಸ್ತೆ ಸರಿಪಡಿಸುವ ಭರವಸೆ ನೀಡುತ್ತಾರೆ, ಗ್ರಾಮದಲ್ಲಿ ಹೈಟೆಕ್‌ ಶಾಲೆ ನಿರ್ಮಿಸುವುದಾಗಿ ಹೇಳುತ್ತಾರೆ. ಆದರೆ ಭರವಸೆ ಈ ವರೆಗೂ ಅನುಷ್ಠಾನಕ್ಕೆ ಬಂದಿಲ್ಲ ಎಂದು ಗ್ರಾಮಸ್ಥರು ಬೇಸರದಿಂದ ನುಡಿಯುತ್ತಾರೆ. ಗ್ರಾಮಕ್ಕೆ ಉತ್ತಮ ರಸ್ತೆ ನಿರ್ಮಿಸಿಕೊಡಬೇಕು ಎಂದು ಆಗ್ರಹಿಸುತ್ತಾರೆ.

ದಲಿತ ವಿದ್ಯಾರ್ಥಿ ಸಾವಿನ ಬೆನ್ನಲ್ಲೇ ಕಾಂಗ್ರೆಸ್ ಸರ್ಕಾರಕ್ಕೆ ಮತ್ತೊಂದು ಶಾಕ್, ಶಾಸಕ ರಾಜೀನಾಮೆ!

ಸಂಗಮೇಶ್ವರದಿಂದ ಹಗರಿಗಜಾಪುರಕ್ಕೆ ತೆರಳುವ ವಿದ್ಯಾರ್ಥಿಗಳಿಗೆ ನಿತ್ಯ ಸಮಸ್ಯೆಯಾಗುತ್ತಿದೆ. ವಿದ್ಯಾರ್ಥಿಗಳ ಈ ಪರಿಸ್ಥಿತಿ ಗಮನಿಸಿ ಜೆಸಿಬಿ ಮೂಲಕ ನಾವೇ ಖುದ್ದಾಗಿ ರಸ್ತೆ ಅಕ್ಕಪಕ್ಕದ ಮುಳ್ಳುಗಿಡಗಳನ್ನು ಕಿತ್ತು ಹಾಕುತ್ತಿದ್ದೇವೆ. ಗ್ರಾಪಂ ಆಡಳಿತ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಬೇಕು.

ಅಜ್ಜಪ್ಪ ಜೆಸಿಬಿ, ಜಗದೀಶ ಸಂಗಮೇಶ್ವರ

ಹಗರಿಗಜಾಪುರ ಪ್ರೌಢಶಾಲೆ(Hagarigajapur High School)ಗೆ ನಿತ್ಯ ಕಷ್ಟಪಟ್ಟು ತೆರಳುತ್ತಿದ್ದೇವೆ. ಸೈಕಲ್‌ ತುಳಿಯುವುದಕ್ಕಿಂತ ಕಾಲ್ನಡಿಗೆಯಲ್ಲಿ ಹೋಗಿ ಬರುವುದೇ ಲೇಸು. ಆದರೆ ಈ ರಸ್ತೆಯಲ್ಲಿ ದಿನನಿತ್ಯ ವಿಷಪೂರಿತ ಜೀವಿಗಳು ಕಾಣಸಿಗುತ್ತವೆ. ರಸ್ತೆ ದುರಸ್ತಿ ಮಾಡುವಂತೆ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಕೇಳಿಕೊಂಡರೂ ಇದುವರೆಗೂ ಯಾರು ಇತ್ತ ಗಮನ ಹರಿಸಿಲ್ಲ.

ಪವಿತ್ರಾ, ನಿಕ್ಷಾ, ಮಧುಸೂದನ, ರಮೇಶ, ಸರಳಾ, ಸಚಿನ್‌, ನಾಗರಾಜ್‌-ಪ್ರೌಢಶಾಲಾ ವಿದ್ಯಾರ್ಥಿಗಳು, ಸಂಗಮೇಶ್ವರ

click me!