
ಬೆಂಗಳೂರು, (ಜುಲೈ,09): 2022-23ನೇ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದಂತೆ ಪದವಿ ಮತ್ತು ಸ್ನಾತಕೋತ್ತರ ಕೋರ್ಸ್‌ಗಳಿಗೆ ಇಡೀ ರಾಜ್ಯಕ್ಕೆ ಅನ್ವಯಿಸುವ ಹಾಗೆ ಏಕರೂಪದ ವೇಳಾಪಟ್ಟಿಯನ್ನು ಇದೇ ಮೊದಲ ಬಾರಿಗೆ ಸಿದ್ಧಪಡಿಸಲಾಗಿದೆ. ರಾಜ್ಯದ ಎಲ್ಲಾ ವಿ.ವಿ.ಗಳು ಮತ್ತು ಕಾಲೇಜುಗಳು ಇದನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಸೂಚಿಸಿದ್ದಾರೆ.
ಈ ಕುರಿತು ಇಂದು( ಶನಿವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಾದ್ಯಂತ ಪದವಿ ತರಗತಿಗಳಿಗೆ ಜು.11ರಿಂದ ಪ್ರವೇಶಾತಿ ಆರಂಭವಾಗಲಿದ್ದು, ಆಗಸ್ಟ್ 17ರಿಂದ 22ರ ನಡುವೆ ತರಗತಿಗಳು ಆರಂಭವಾಗಲಿವೆ. ಹಾಗೆಯೇ ಸ್ನಾತಕೋತ್ತರ ಕೋರ್ಸುಗಳಿಗೆ ಅಕ್ಟೋಬರ್ 15ರಿಂದ ಪ್ರವೇಶ ಪ್ರಕ್ರಿಯೆ ಆರಂಭವಾಗಲಿದ್ದು, ನ.2ರಿಂದ 14ರ ಅವಧಿಯಲ್ಲಿ ತರಗತಿಗಳಿಗೆ ಚಾಲನೆ ನೀಡಲಾಗುತ್ತದೆ ಎಂದರು.
ರಾಜ್ಯದ 541 ಪಿಯು ಕಾಲೇಜಲ್ಲಿ 3 ವರ್ಷದಿಂದ ಒಂದೂ ಅಡ್ಮಿಷನ್ ಇಲ್ಲ!
ರಾಜ್ಯದಲ್ಲಿ ಈ ವರೆಗೆ ಒಂದೊಂದು ವಿಶ್ವವಿದ್ಯಾಲಯಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಶೈಕ್ಷಣಿಕ ವೇಳಾಪಟ್ಟಿ ರೂಪಿಸಿಕೊಳ್ಳುತ್ತಿವೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಗೊಂದಲ ಮತ್ತು ಅನನುಕೂಲವಾಗುತ್ತಿದೆ. ಇದನ್ನು ಗಮನಿಸಿ ಏಕರೂಪದ ವೇಳಾಪಟ್ಟಿಯನ್ನು ತರಲಾಗಿದೆ. ಸೆಮಿಸ್ಟರ್‌ಗಳ ಆರಂಭ, ದಂಡರಹಿತ ಮತ್ತು ದಂಡ ಸಹಿತ ಪ್ರವೇಶಾತಿ ಅವಧಿ, ತರಗತಿಗಳು ಆರಂಭವಾಗುವ ಮತ್ತು ಮುಗಿಯುವ ದಿನ, ಪರೀಕ್ಷೆ ಆರಂಭವಾಗುವ ದಿನ, ಮೌಲ್ಯಮಾಪನ ಆರಂಭ ಮತ್ತು ಫಲಿತಾಂಶ ಪ್ರಕಟಣೆಯ ದಿನ, ರಜೆ ಆರಂಭದ ದಿನಗಳನ್ನೆಲ್ಲ ಸ್ಪಷ್ಟವಾಗಿ ಸೂಚಿಸಲಾಗಿದೆ ಎಂದು ವಿವರಿಸಿದರು.
ಪ್ರಮುಖವಾಗಿ ಪದವಿಯ 6, ಸ್ನಾತಕೋತ್ತರ 4 ಮತ್ತು ವೃತ್ತಿಪರ ಕೋರ್ಸುಗಳ 8 ಸೆಮಿಸ್ಟರ್‌ಗಳನ್ನು ಪರಿಗಣಿಸಲಾಗಿದೆ. ಸೆಮಿಸ್ಟರ್ ಮುಗಿದ ನಂತರದ ರಜೆ ಅವಧಿಯಲ್ಲಿ ಪರೀûಾ ಕರ್ತವ್ಯ ಬಂದರೆ, ಉಪನ್ಯಾಸಕರು ಆ ಕರ್ತವ್ಯಗಳನ್ನು ನಿರ್ವಹಿಸಬೇಕು ಎಂದು ಹೇಳಿದರು.
ಉನ್ನತ ಶಿಕ್ಷಣ ಪರಿಷತ್ ಮುಖ್ಯಸ್ಥರಾದ ಬಿ. ತಿಮ್ಮೇಗೌಡರ ಅಧ್ಯಕ್ಷತೆಯಲ್ಲಿ ಈ ಸಂಬಂಧ ಇದೇ 7ರಂದು ಎಲ್ಲಾ ವಿ.ವಿ.ಗಳ ಕುಲಪತಿಗಳು ಮತ್ತು ಕುಲಸಚಿವರೊಂದಿಗೆ ವರ್ಚುಯಲ್ ಸಭೆ ನಡೆಸಲಾಗಿದೆ ಎಂದು ತಿಳಿಸಿದರು.