ಬೆಂಗಳೂರು (ಜೂ.06): ಪದವಿ ಪೂರ್ವ ಶಿಕ್ಷಣ ಇಲಾಖೆಯು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಈ ಬಾರಿ ಪರೀಕ್ಷೆ ನಡೆಸದೆ ನೀಡಲಿರುವ ಗ್ರೇಡಿಂಗ್ ಮಾದರಿ ಫಲಿತಾಂಶದಲ್ಲಿ ಅಂಕಗಳನ್ನೂ ನೀಡಲು ಮುಂದಾಗಿದೆ.
ಕೋವಿಡ್‌ನಿಂದಾಗಿ ಈಗಾಗಲೇ ದ್ವಿತೀಯ ಪಿಯುಸಿ ಪರೀಕ್ಷೆ ರದ್ದುಪಡಿಸಿರುವ ಇಲಾಖೆಯು, ಆ ಎಲ್ಲಾ ವಿದ್ಯಾರ್ಥಿಗಳಿಗೆ ಅವರವರ ಎಸ್ಸೆಸ್ಸೆಲ್ಸಿ ಮತ್ತು ಪ್ರಥಮ ಪಿಯುಸಿ ಪರೀಕ್ಷೆಯ ಅಂಕಗಳ ಆಧಾರದ ಮೇಲೆ ಒಂದು ವೇಳೆ ಪಿಯು ಪರೀಕ್ಷೆ ನಡೆಸಿದ್ದರೆ ಎಷ್ಟುಅಂಕ ಪಡೆಯುತ್ತಿದ್ದರು ಎಂದು ಅಂದಾಜಿಸಿ ಗ್ರೇಡಿಂಗ್ ಮಾದರಿ ಫಲಿತಾಂಶ ನೀಡುವುದಾಗಿ ಘೋಷಿಸಿತ್ತು. ಈ ಗ್ರೇಡಿಂಗ್ ಫಲಿತಾಂಶದಲ್ಲಿ ಅಂಕಗಳನ್ನೂ ಕೂಡ ನಮೂದಿಸಲಾಗುತ್ತದೆ ಎಂದು ಇಲಾಖಾ ನಿರ್ದೇಶಕರಾದ ಸ್ನೇಹಲ್ ತಿಳಿಸಿದ್ದಾರೆ.
ಸಿಇಟಿ ಅಂಕ ಆಧರಿಸಿ ಮೆಡಿಕಲ್, ಎಂಜಿನೀಯರಿಂಗ್ ಸೀಟ್ ಹಂಚಿಕೆ : ಅಶ್ವಥ್ ನಾರಾಯಣ್ ...
ಈ ಸಂಬಂಧ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಅವರು, ಬಹುತೇಕ ಸಿಬಿಎಸ್‌ಇ ಮಾದರಿಯಲ್ಲೇ ಫಲಿತಾಂಶ ನೀಡಲು ಆಲೋಚಿಸಲಾಗಿದೆ, ಎ, ಎ+, ಬಿ, ಬಿ+, ಸಿ, ಸಿ+ ಮಾದರಿಯ ಗ್ರೇಡಿಂಗ್ ಫಲಿತಾಂಶದ ಜೊತೆಗೆ ವಿದ್ಯಾರ್ಥಿಗೆ ಅಂಕಗಳನ್ನೂ ನೀಡಲಾಗುತ್ತದೆ. ಪ್ರತಿ ವಿಷಯದ ಗ್ರೇಡಿಂಗ್ ಫಲಿತಾಂಶ ಒಟ್ಟು ಗೂಡಿಸಿ ಅದನ್ನು ಅಂಕಗಳಿಗೆ ಅಂದಾಜಿಸಬೇಕಾ ಅಥವಾ ಪ್ರತಿ ವಿಷಯದ ಫಲಿತಾಂಶಕ್ಕೂ ಅಂಕಗಳನ್ನು ನೀಡಿ ನಂತರ ಆ ಅಂಕಗಳನ್ನು ಒಟ್ಟುಗೂಡಿಸಿ ಗ್ರೇಡಿಂಗ್‌ಗೆ ಪರಿವರ್ತಿಸಬೇಕಾ ಎಂಬ ಬಗ್ಗೆ ಪರಿಶೀಲಿಸಲಾಗುತ್ತಿದೆ. ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ತಿಳಿಸಿದ್ದಾರೆ.
ಎಲ್ಲ ಸ್ಪರ್ಧಾತ್ಮಕ ಪರೀಕ್ಷಾ ಮಂಡಳಿಗಳೂ ಪತ್ರ: ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ನೀಟ್, ಜೆಇಇ ಸೇರಿದಂತೆ ಆಯಾ ಸಂಸ್ಥೆಗಳು ನಡೆಸುವ ಪ್ರವೇಶ ಪರೀಕ್ಷೆಗಳ ಫಲಿತಾಂಶವನ್ನು ಮಾತ್ರ ಆಧರಿಸಿ ರ‍್ಯಾಂಕ್ ಪ್ರಕಟಿಸುವಂತೆ ದೇಶದ ಎಲ್ಲಾ ಪರೀಕ್ಷಾ ಮಂಡಳಿಗಳಿಗೂ ಪತ್ರ ಬರೆಯುವುದಾಗಿ ಇದೇ ವೇಳೆ ಸ್ನೇಹಲ್ ತಿಳಿಸಿದ್ದಾರೆ.
ಈಗಾಗಲೇ ರಾಜ್ಯದಲ್ಲಿ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಕೆ-ಸಿಇಟಿ ಫಲಿತಾಂಶವನ್ನು ಮಾತ್ರ ಪರಿಗಣಿಸಿ ರ‍್ಯಾಂಕಿಂಗ್ ಪ್ರಕಟಿಸಲು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರರು ಉನ್ನತ ಶಿಕ್ಷಣ ಇಲಾಖೆಗೆ ಪತ್ರ ಬರೆದಿದ್ದಾರೆ. ಅದೇ ರೀತಿ ಇಲಾಖೆಯಿಂದ ಎಲ್ಲಾ ರಾಷ್ಟ್ರೀಯ ಪ್ರವೇಶ ಪರೀಕ್ಷಾ ಮಂಡಳಿಗಳಿಗೂ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.