* ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕಡ್ಲೆ ಮಿಠಾಯಿ ವಿತರಣೆಗೆ ಚಿಂತನೆ
* ಅಪೌಷ್ಟಿಕತೆ ಹೋಗಲಾಡಿಸಲು ಕಡ್ಲೆ ಮಿಠಾಯಿ
* ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿಕೆ
ರಾಯಚೂರು, (ಮೇ.29): ಕಲ್ಯಾಣ ಕರ್ನಾಟಕ ಭಾಗದ ಅಪೌಷ್ಟಿಕತೆ ಹೆಚ್ಚಾಗಿದೆ. ಅಪೌಷ್ಟಿಕತೆ ಹೋಗಲಾಡಿಸಲು ಸರ್ಕಾರ ಇನ್ನಿಲ್ಲದ ಕಸರತ್ತು ಮಾಡುತ್ತಿದೆ. ಶಾಲೆಯಲ್ಲಿ ನಿತ್ಯ ಹಾಲು, ಮೊಟ್ಟೆ ವಿತರಣೆ ಮಾಡಲಾಗುತ್ತಿದೆ. ಅದರ ಜೊತೆಗೆ ಇದೀಗ ಮಕ್ಕಳಿಗೆ ಕಡ್ಲೆ ಮಿಠಾಯಿ ವಿತರಣೆಗೆ ಚಿಂತನೆ ನಡೆಸಿದೆ.
ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಜವಳಗೇರಾ ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಇಂದು(ಶನಿವಾರ) ಶಾಲಾ ಕಟ್ಟಡದ ಭೂಮಿ ಪೂಜೆ ಹಾಗೂ ಶಾಲಾ ಕೊಠಡಿಗಳ ಉದ್ಘಾಟನೆ ಮಾಡಿದರು.
ಆ ಬಳಿಕ ಮಾತನಾಡಿದ ಸಚಿವ ಬಿ.ಸಿ. ನಾಗೇಶ್, ಕಲ್ಯಾಣ ಕರ್ನಾಟಕ ಭಾಗದ ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚಾಗಿದೆ. ಅಪೌಷ್ಟಿಕತೆ ಹೋಗಲಾಡಿಸಲು ಶಾಲೆಯಲ್ಲಿ ನಿತ್ಯ ಹಾಲು ವಿತರಣೆ ಮಾಡಲಾಗುತ್ತಿದೆ. ಅದರ ಜೊತೆಗೆ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ವೇಳೆಯಲ್ಲಿ ಬಾಳೆಹಣ್ಣು ಮತ್ತು ಮೊಟ್ಟೆ ನೀಡುತ್ತಿದ್ದೇವೆ. ಈ ವರ್ಷದಿಂದ ಕಡ್ಲೆ ಮಿಠಾಯಿ ನೀಡಲು ಸಹ ಚಿಂತನೆ ನಡೆಸಿದ್ದೇವೆ ಎಂದು ಹೇಳಿದರು.
ರಾಯಚೂರು ಜಿಲ್ಲೆಗೆ ಕಾಡುತ್ತಿದೆ ಅಪೌಷ್ಟಿಕತೆ, ಅವಧಿಗೂ ಮುನ್ನವೇ ಶೇ.3ರಷ್ಟು ಗರ್ಭಿಣಿಯರ ಹೆರಿಗೆ
ಗುಣಮಟ್ಟ ಶಿಕ್ಷಣಕ್ಕೆ ಹೆಚ್ಚು ಒತ್ತು
ನಾವು ಗುಣಮಟ್ಟ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತೇವೆ. ಹೀಗಾಗಿ ಈ ವರ್ಷ ಶಾಲೆ ಆರಂಭದಿಂದಲ್ಲೇ ಅತಿಥಿ ಶಿಕ್ಷಕರನ್ನ ನೇಮಕ ಮಾಡಿಕೊಳ್ಳಲಾಗಿದೆ. ರಾಜ್ಯದಲ್ಲಿ 15 ಸಾವಿರ ಶಿಕ್ಷಕರ ನೇಮಕಾತಿ ಪ್ರಗತಿಯಲ್ಲಿದೆ. 87 ತಾಲೂಕಾಗಳನ್ನು ಸ್ಪೆಷಲ್ ಎಜುಕೇಷನ್ ಜೋನ್ ಎಂದು ಗುರುತಿಸಲಾಗಿದೆ. ಈ ವರ್ಷ 15 ದಿನಗಳ ಮುಂಚೆಯೇ ಶಾಲೆಗಳು ಆರಂಭಿಸಿದ್ದೇವೆ. ಇದಕ್ಕೆ ನಮ್ಮ ಎಲ್ಲಾ ಶಿಕ್ಷಕರು ಸಾಥ್ ನೀಡಿದ್ದಾರೆ ಎಂದರು.
ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ ಇರುವುದು ನಿಜ, ಅದನ್ನು ಸರಿಪಡಿಸಲು ನಾವು ಮುಂದಾಗಿದ್ದೇವೆ. ಗುಣಮಟ್ಟ ಶಿಕ್ಷಣ ನೀಡಲು ಶಿಕ್ಷಕರಿಗೆ ವಿಶೇಷ ಟ್ರೈನಿಂಗ್ ನೀಡುವ ಚಿಂತನೆಯಿದೆಯೂ ನಡೆದಿದೆ. ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಶಿಕ್ಷಣ ನೀಡುತ್ತೇವೆ. ಕೇಂದ್ರ ಸರ್ಕಾರ 2020ರಲ್ಲಿ ಹೊಸ ಶಿಕ್ಷಣ ನೀತಿ ತಂದಿದೆ.ರಾಜ್ಯದಲ್ಲಿಯೂ ಈ ವರ್ಷ 1-2ನೇ ತರಗತಿಗೆ ಹೊಸ ಶಿಕ್ಷಣ ನೀತಿ ಜಾರಿಗೆ ಮುಂದಾಗಿದ್ದೇವೆ. ದೇಶದಲ್ಲಿ ಶಿಕ್ಷಣ ವ್ಯವಸ್ಥೆ ಬದಲು ಮಾಡುವ ಪ್ರಯತ್ನ ನಡೆಸಿದ್ದೇವೆ ಎಂದು ತಿಳಿಸಿದರು.
ಮಕ್ಕಳಿಗಾಗಿ ಕಲಿತಾ ಚೇತರಿಕಾ ಕಾರ್ಯಕ್ರಮ
ಕೋವಿಡ್ ನಿಂದಾಗಿ ಕಳೆದ 2-3 ವರ್ಷಗಳಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಭಾರೀ ಹೊಡೆತ ಬಿದ್ದಿತ್ತು. ಮಕ್ಕಳಲ್ಲಿ ಕಲಿಕೆ ಬಗ್ಗೆ ಆಸಕ್ತಿ ಮೂಡಿಸಬೇಕು. ಮಕ್ಕಳ ಕಲಿಕೆಯನ್ನು ಹೆಚ್ಚಿಸಬೇಕು ಎಂಬ ಉದ್ದೇಶದಿಂದ ಶಿಕ್ಷಣ ಇಲಾಖೆ ಕಲಿಕಾ ಚೇತರಿಕೆ ಕಾರ್ಯಕ್ರಮ ಅನುಷ್ಠಾನ ಮಾಡಿದೆ. ಇದಕ್ಕೆ ನಮ್ಮ ಎಲ್ಲಾ ಶಿಕ್ಷಕರು ಸಾಥ್ ನೀಡಿದ್ದಾರೆ ಎಂದು ಶಿಕ್ಷಕರ ಬಗ್ಗೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.
ಮೂವರು ವಿದ್ಯಾರ್ಥಿಗಳಿಗೆ ಸನ್ಮಾನ:
2020-21ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸಿಂಧನೂರು ತಾಲೂಕಿನಲ್ಲಿ ಹೆಚ್ಚು ಅಂಕ ಪಡೆದು ಮೂರು ಜನ ವಿದ್ಯಾರ್ಥಿಗಳಾದ ಬಸವಲೀಲಾ, ಪೂಜೆ ಎಚ್., ಸಮಾನಾ, ಈ ಮೂರು ವಿದ್ಯಾರ್ಥಿಗಳಿಗೆ ಶಿಕ್ಷಣ ಸಚಿವರು ಸನ್ಮಾನಿಸಲಾಯಿತು
ಇನ್ನೂ ಕಾರ್ಯಕ್ರಮದಲ್ಲಿ ರಾಯಚೂರು ಮತ್ತು ಕೊಪ್ಪಳ ಸಂಸದ ಸಂಗಣ್ಣ ಕರಡಿ, ಸಿಂಧನೂರು ಶಾಸಕ ವೆಂಕಟರಾವ್ ನಾಡಗೌಡ,
ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮದ್ವರಾಜ್ ಆಚಾರ್ಯ, ಪಿಕಾಡ್೯ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡ ಬಸವರಾಜ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ವೃಷಬೇಂದ್ರಯ್ಯ ಸ್ವಾಮಿ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಪ್ರಭಾರಿ ಉಪ ನಿರ್ದೇಶಕ ಸೋಮಶೇಖರ, ಸಿಂಧನೂರು ಲೋಕೋಪಯೋಗಿ ಉಪ ವಿಭಾಗದ ಸಹಾಯಕ ಅಭಿಯಂತರರಾದ ಸಿ.ಎಸ್.ಪೊಲೀಸ್ ಪಾಟೀಲ್ ಹಾಗೂ ಶಿಕ್ಷಕರ ಸಂಘದ ಮುಖಂಡರು ಹಾಗೂ ಹತ್ತಾರು ಶಾಲೆಗಳ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.