ದೇಶದ ಎಲ್ಲಾ ನಾಗರಿಕರಿಗೂ ವಿಶಿಷ್ಟ ಗುರುತಿನ ಸಂಖ್ಯೆ ಹೊಂದಿರುವ ಆಧಾರ್ ಕಾರ್ಡಿನ ರೀತಿಯಲ್ಲೇ ದೇಶಾದ್ಯಂತ ಇರುವ ಎಲ್ಲ ವಿದ್ಯಾರ್ಥಿಗಳಿಗೆ 'ಅಪಾರ್ ಐಡಿ' ಹೆಸರಿನ ವಿಶಿಷ್ಟ ಗುರುತಿನ ಸಂಖ್ಯೆ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ನವದೆಹಲಿ: ದೇಶದ ಎಲ್ಲಾ ನಾಗರಿಕರಿಗೂ ವಿಶಿಷ್ಟ ಗುರುತಿನ ಸಂಖ್ಯೆ ಹೊಂದಿರುವ ಆಧಾರ್ ಕಾರ್ಡಿನ ರೀತಿಯಲ್ಲೇ ದೇಶಾದ್ಯಂತ ಇರುವ ಎಲ್ಲ ವಿದ್ಯಾರ್ಥಿಗಳಿಗೆ 'ಅಪಾರ್ ಐಡಿ' ಹೆಸರಿನ ವಿಶಿಷ್ಟ ಗುರುತಿನ ಸಂಖ್ಯೆ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದು 'ಒಂದು ರಾಷ್ಟ್ರ, ಒಂದು ವಿದ್ಯಾರ್ಥಿ ಐಡಿ'ಯಂತೆ ಕಾರ್ಯ ನಿರ್ವಹಿಸಲಿದೆ. ಅಪಾರ್ (ಎಎಪಿಎಆರ್- 'ಸ್ವಯಂಚಾಲಿತ ಶಾಶ್ವತ ಶೈಕ್ಷಣಿಕ ಖಾತೆ ನೋಂದಣಿ') ವಿಶಿಷ್ಟ ಗುರುತು ಸಂಖ್ಯೆ ಯೋಜನೆಯನ್ನು ಕೇಂದ್ರ ಸರ್ಕಾರ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಡಿ ಜಾರಿಗೊಳಿಸಲು ಉದ್ದೇಶಿಸಿದೆ. ಆದರೆ ಈ ಐಡಿಯನ್ನು ವಿದ್ಯಾರ್ಥಿ ಹೊಂದಬೇಕೆಂದರೆ ಪೋಷಕರ ಅನುಮತಿ ಕಡ್ಡಾಯ. ಒಂದು ವೇಳೆ ಈ ಐಡಿ ಬೇಡ ಎನ್ನಿಸಿದರೆ, ಪೋಷಕರು ಐಡಿ ಹಿಂಪಡೆಯಲು ಸರ್ಕಾರವನ್ನು ಕೋರಿ ರದ್ದು ಮಾಡಿಸಿಕೊಳ್ಳಬಹುದು.
ಅಪಾರ್ ಐಡಿ ಎಂದರೇನು?
undefined
ಆಟೋಮ್ಯಾಟಿಕ್ ಪರ್ಮನೆಂಟ್ ಅಕಾಡೆಮಿಕ್ ಅಕೌಂಟ್ ರಿಜಿಸ್ಟ್ರಿ (APPAR) ) ಐಡಿ ಭಾರತದ ಎಲ್ಲ ವಿದ್ಯಾರ್ಥಿಗಳಿಗೆ ಒಂದು ವಿಶಿಷ್ಟ ಗುರುತಿನ ಸಂಖ್ಯೆಯಾಗಿದೆ. ಹಾಗಂತ ಇದು ಆಧಾರ್ ಸಂಖ್ಯೆಗೆ ಪರ್ಯಾಯವಲ್ಲ. ವಿದ್ಯಾರ್ಥಿಯ ಶೈಕ್ಷಣಿಕ ಚಟುವಟಿಕೆಗಷ್ಟೇ ಸೀಮಿತವಾದ ಐಡಿ ಸಂಖ್ಯೆ. ಈ ಗುರುತಿನ ಸಂಖ್ಯೆಯು ಪೂರ್ವ ಪ್ರಾಥಮಿಕದಿಂದ ಉನ್ನತ ಶಿಕ್ಷಣದವರೆಗೆ ಎಲ್ಲಾ ವಿದ್ಯಾರ್ಥಿಗಳಿಗೆ ಇರುತ್ತದೆ. ಅಪಾರ್‌ಐಡಿ ಜೀವಮಾನದ ಗುರುತಿನ ಸಂಖ್ಯೆಯಾಗಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಜೀವನ ಮತ್ತು ಸಾಧನೆಗಳನ್ನು ಟ್ರ್ಯಾಕ್ ಮಾಡುತ್ತದೆ. ಆಧಾರ್ ಸಂಖ್ಯೆಯಲ್ಲಿನ ವಿದ್ಯಾರ್ಥಿಯ ವಿವರವನ್ನೂ ಇದರಲ್ಲಿ ಸಂಯೋಜಿಸಲಾಗುತ್ತದೆ.
ಜತೆಗೆ, ವಿದ್ಯಾರ್ಥಿಯ ರಕ್ತದ ಗುಂಪು, ಎತ್ತರ ಮತ್ತು ತೂಕದ ವಿವರವನ್ನೂ ಇದು ಹೊಂದಿರುತ್ತದೆ. ವಿದ್ಯಾರ್ಥಿ ಆಯಾ ತರಗತಿಗಳಲ್ಲಿ ಪಡೆದ ಅಂಕ, ಆತನ ಪಠ್ಯೇತರ ಚಟುವಟಿಕೆಗಳು, ಕ್ರೀಡೆಗಳಲ್ಲಿ ಆತ ಪಾಲ್ಗೊಂಡ ವಿವರ ಸೇರಿ ಎಲ್ಲ ವಿವರಗಳು ಇದರಲ್ಲಿ ಲಭಿಸುತ್ತವೆ. ವಿದ್ಯಾರ್ಥಿಯು ಬೇರೆ ಶಾಲೆ/ಕಾಲೇಜಿಗೆ ವರ್ಗಾವಣೆಗೊಂಡರೆ ಆತ ವರ್ಗ ಆಗುವ ಶಿಕ್ಷಣ ಸಂಸ್ಥೆಯು, ವಿಶಿಷ್ಟ ಐಡಿ ಬಳಸಿ ಆತನ ಸಮಸ್ತ ಶೈಕ್ಷಣಿಕ ಇತಿಹಾಸ ತಿಳಿಯಬಹುದಾಗಿದೆ.