
ಬೆಂಗಳೂರು(ಮೇ.31): 2023-24ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿಯಂತೆ ಬುಧವಾರದಿಂದ ರಾಜ್ಯದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಆರಂಭವಾಗಲಿವೆ. ಶಾಲೆಗಳನ್ನು ತಳಿರು ತೋರಣಗಳಿಂದ ಸಿಂಗರಿಸಿ ವಿದ್ಯಾರ್ಥಿಗಳಿಗೆ ಸಹಿ ಹಂಚಿ ಬರಮಾಡಿಕೊಳ್ಳಲು ಶಿಕ್ಷಣ ಇಲಾಖೆ ಸೂಚಿಸಿದೆ.
ಇಲಾಖೆ ಸೂಚನೆಯಂತೆ ಶಾಲಾ ಪ್ರಾರಂಭೋತ್ಸವಕ್ಕೆ ಎಲ್ಲ ಶಾಲೆಗಳಲ್ಲೂ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಳೆದ ಎರಡು ದಿನಗಳ ಕಾಲ ಶಾಲೆಯ ಪ್ರತಿಯೊಂದು ಕೊಠಡಿ, ಶೌಚಾಲಯ, ಕಾಂಪೌಂಡ್, ಆವರಣ ಎಲ್ಲವನ್ನೂ ಕೆಲ ಹಿರಿಯ ವಿದ್ಯಾರ್ಥಿಗಳು ಹಾಗೂ ಸಹಾಯಕರ ಜೊತೆಗೂಡಿ ಶಿಕ್ಷಕರು ಸ್ವಚ್ಛಗೊಳಿಸಿದ್ದಾರೆ.
ನಿನ್ನೆಯೇ ಬಹುತೇಕ ಖಾಸಗಿ ಶಾಲೆ ಶುರು, ನಾಳೆಯಿಂದ ಸರ್ಕಾರಿ ಸ್ಕೂಲ್ ಆರಂಭ
ಪ್ರಾರಂಭೋತ್ಸವ ನಡೆಸಿ ಮೊದಲ ದಿನ ಮಕ್ಕಳನ್ನು ಬರಮಾಡಿಕೊಳ್ಳಬೇಕು. ಅಂದು ಬಿಸಿಯೂಟದಲ್ಲಿ ಸಿಹಿ ವಿತರಿಸಬೇಕು. ಮೊದಲ ದಿನವೇ ಒಂದೆರಡು ಗಂಟೆ ನಂತರ ಶೈಕ್ಷಣಿಕ ತರಗತಿ ಚಟುವಟಿಕೆಗಳನ್ನು ಆರಂಭಿಸಬೇಕು ಎಂದು ಇಲಾಖೆ ಸೂಚಿಸಿದೆ. ಒಂದು ವೇಳೆ ಮಳೆಯಿಂದಾಗಿ ಮಕ್ಕಳು ಶಾಲೆಗೆ ಬರಲು ತೊಂದರೆಯಾಗುತ್ತಿದ್ದರೆ ಅಧಿಕಾರಿಗಳ ಗಮನಕ್ಕೆ ತಂದು ಶಾಲೆಗೆ ರಜೆ ಘೋಷಿಸಬೇಕು ಎಂದು ಸೂಚಿಸಲಾಗಿದೆ.