
ಚಿಕ್ಕೋಡಿ(ಮೇ.23): ಬೆಳಗಾವಿ ಉಪಚುನಾವಣೆಯಲ್ಲಿ ಕಾರ್ಯನಿರ್ವಹಿಸಿದ್ದ ಮತ್ತೊರ್ವ ಶಿಕ್ಷಕರೊಬ್ಬರು ಕೊರೋನಾಗೆ ಬಲಿಯಾದ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗ್ರಾಮದಲ್ಲಿ ಇಂದು(ಭಾನುವಾರ) ನಡೆದಿದೆ. ರಾಜಶೇಖರ್ ತಳವಾರ(56) ಕೋವಿಡ್‌ಗೆ ಬಲಿಯಾದ ಶಿಕ್ಷಕರಾಗಿದ್ದಾರೆ.
ರಾಜಶೇಖರ್ ತಳವಾರ ಅವರು ಹುಲ್ಲೋಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಬೆಳಗಾವಿ ಉಪಚುನಾವಣೆ ಕರ್ತವ್ಯ ಮುಗಿಸಿ ಮನೆಗೆ ಬಂದ ಮೇಲೆ ರಾಜಶೇಖರ್ ತಳವಾರ ಅವರಿಗೆ ಜ್ವರ ಕಾಣಿಸಿಕೊಂಡಿತ್ತು. ಅಂದಿನಿಂದ ರಾಜಶೇಖರ್ ಹೋಮ್ ಕ್ವಾರಂಟೈನ್ ಆಗಿದ್ದರು ಎಂದು ತಿಳಿದು ಬಂದಿದೆ.
"
ನಂತರ ರಾಜಶೇಖರ್ ತಳವಾರ ಅವರು ಸಂಕೇಶ್ವರ ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಹೆಚ್ಚಿನ ಚಿಕಿತ್ಸೆಗೆ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಆಸ್ಪತ್ರೆಯಲ್ಲೇ ಶಿಕ್ಷಕ ರಾಜಶೇಖರ ಕೊನೆಯುಸಿರೆಳೆದಿದ್ದಾರೆ.
ಕೊರೋನಾದಿಂದ ಮೃತಪಟ್ಟ ಶಿಕ್ಷಕರ ವಿವರ ಕೇಳಿದ ಶಿಕ್ಷಣ ಇಲಾಖೆ
ರಾಜ್ಯದ ಮಸ್ಕಿ, ಬಸವಕಲ್ಯಾಣ ಹಾಗೂ ಬೆಳಗಾವಿ ಉಪಚುನಾವಣೆಯಲ್ಲಿ ಕರ್ತವ್ಯನಿರ್ವಹಿಸಿದ್ದ ರಾಜ್ಯದ 35 ಶಿಕ್ಷಕರು ಮಹಾಮಾರಿ ಕೊರೋನಾಗೆ ಬಲಿಯಾಗಿದ್ದಾರೆ. ಬೆಳಗಾವಿ ಜಿಲ್ಲೆಯೊಂದರಲ್ಲಿಯೇ ಇದುವರೆಗೆ 17 ಜನ ಶಿಕ್ಷಕರು ಕೊರೋನಾದಿಂದ ಸಾವನ್ನಪ್ಪಿದ್ದಾರೆ.